ಜಯನಗರ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ತೇಜೋವಧೆಗೆ ಫೋಟೊ ತಿರುಚಿದ ಕಿಡಿಗೇಡಿಗಳು

Update: 2018-06-09 08:46 GMT

ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಜೂನ್ 11ರಂದು ನಡೆಯಲಿದ್ದು, ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾ ರೆಡ್ಡಿಯವರ ಪುತ್ರಿ ಸೌಮ್ಯಾ ರೆಡ್ಡಿ ಅವರ ತೇಜೋವಧೆಗೆ ಕಿಡಿಗೇಡಿಗಳು ತಿರುಚಿದ ಫೋಟೊವೊಂದನ್ನು ಬಳಸುತ್ತಿರುವುದು ಪತ್ತೆಯಾಗಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸೌಮ್ಯಾ ರೆಡ್ಡಿಯವರ ಊಟದ ಟೇಬಲ್‍ನಲ್ಲಿ ಇಟ್ಟಿರುವ ಪ್ಲೇಟ್‍ನಲ್ಲಿ ಮಾಂಸಾಹಾರಿ ತಿನಿಸುಗಳು ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಿದೆ. ಸ್ವಯಂಘೋಷಿತ ಸಸ್ಯಾಹಾರಿ ಎನಿಸಿಕೊಂಡ ಸೌಮ್ಯಾ ‘ಸುಳ್ಳುಗಾರ್ತಿ’ ಹಾಗೂ ‘ಕಪಟಿ’ ಎಂದು ಬಿಂಬಿಸುವುದು ಕಿಡಿಗೇಡಿಗಳ ಉದ್ದೇಶವಾಗಿದೆ.

ಜಯನಗರ ವೆಲ್‍ಫೇರ್ ಅಸೋಸಿಯೇಶನ್ ಎಂಬ ಪೇಜ್‍ನಲ್ಲಿ ಈ ಫೋಟೊ ಪೋಸ್ಟ್ ಮಾಡಲಾಗಿದೆ. ಇತರ ಫೋಟೊಗಳಲ್ಲೂ ರೆಡ್ಡಿಯವರನ್ನು ಟಾರ್ಗೆಟ್ ಮಾಡಲಾಗಿದೆ. ಬಿಜೆಪಿ ಹಾಗೂ ಎಎಪಿ ಅಭ್ಯರ್ಥಿಗಳು ಪ್ರಚಾರದಿಂದಾಗಿ ತೂಕ ಕಳೆದುಕೊಳ್ಳುತ್ತಿದ್ದರೆ, ರೆಡ್ಡಿ ದಿನದಿಂದ ದಿನಕ್ಕೆ ದಡೂತಿಯಾಗಿ ಬೆಳೆಯುತ್ತಿದ್ದಾರೆ ಎಂದು ಅವಮಾನಿಸಲಾಗಿದೆ.

ಈ ಬಗ್ಗೆ altnews.in ಸೌಮ್ಯಾ ರೆಡ್ಡಿಯವರನ್ನು ಸಂಪರ್ಕಿಸಿದ್ದು, ಇವುಗಳು ತಿರುಚಿದ ಫೋಟೊಗಳು ಎಂದವರು ಸ್ಪಷ್ಟಪಡಿಸಿದ್ದಾರೆ.  "ನಾನು ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ ಹಾಗೂ ಚುನಾವಣೆ ಜೂನ್ 11ರಂದು ನಡೆಯಲಿದೆ. ಕಳೆದ ಹದಿನೈದು ವರ್ಷಗಳಿಂದ ನಾನು ಸಾಮಾಜಿಕ ಕಾರ್ಯಕರ್ತೆ. ಈಗ ಚುನಾವಣಾ ಕಣಕ್ಕೆ ಧುಮುಕಲು ನಿರ್ಧರಿಸಿದ್ದೇನೆ. ಈ ಮೂಲಕ ಜನರಿಗೆ ಸೇವೆ ಮಾಡಲು ವ್ಯವಸ್ಥೆಯೊಳಗೆ ಸೇರಿಕೊಳ್ಳಬೇಕು ಎಂಬ ಬಯಕೆ ನನ್ನದು. ನಾನು ಪ್ರಾಣಿಗಳ ಮತ್ತು ಪರಿಸರಾತ್ಮಕ ಹಕ್ಕುಗಳ ಬಗ್ಗೆ ನನ್ನ ಹೋರಾಟಗಳನ್ನು ಆರಂಭಿಸಿದ್ದೆ. ಬಹುತೇಕ ಮಂದಿಗೆ ನಾನು ಹನ್ನೆರಡನೇ ವಯಸ್ಸಿನಿಂದಲೂ ಸಸ್ಯಾಹಾರಿ ಎನ್ನುವುದು ಗೊತ್ತು. ಪ್ಲಾಸ್ಟಿಕ್ ನಿಷೇಧದ ಹಿಂದೆ ಇರುವವರಲ್ಲಿ ನಾನೂ ಒಬ್ಬಳು. ವಿರೋಧಿಗಳು ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದು, ಫೋಟೊಶಾಪ್‍ನಲ್ಲಿ ತಿದ್ದಿದ ಫೋಟೊ ಪ್ರಕಟಿಸುವ ಮೂಲಕ ವೈಯಕ್ತಿಕ ದಾಳಿ ಮಾಡುವ ಹಂತಕ್ಕೆ ಬಂದಿದ್ದಾರೆ. ನಾನು ಏನು ಬೋಧಿಸುತ್ತೇನೆಯೋ ಅದನ್ನು ಪಾಲಿಸುವುದಿಲ್ಲ ಎಂದು ಬಿಂಬಿಸುವುದು ಅವರ ಉದ್ದೇಶ. ಆಹಾರದ ಆಯ್ಕೆ ವೈಯಕ್ತಿಕ ಎನ್ನುವುದು ನನ್ನ ನಂಬಿಕೆ. ನಾನು ಸಸ್ಯಾಹಾರಿಯಾಗಿದ್ದರೂ, ಜನ ಏನು ಬಯಸುತ್ತಾರೋ ಅದನ್ನು ತಿನ್ನುವ ಹಕ್ಕು ಅವರಿಗೆ ಇದೆ ಎನ್ನುವುದು ನನ್ನ ಅಭಿಪ್ರಾಯ. ಅದು ವೈಯಕ್ತಿಕ ಆಯ್ಕೆ ಹಾಗೂ ಯಾರೂ ಆ ವಿಚಾರದಲ್ಲಿ ಬಲವಂತ ಮಾಡಬಾರದು" ಎಂದವರು ಹೇಳಿದ್ದಾರೆ.

ವಾಸ್ತವವಾಗಿ ಮೂಲ ಚಿತ್ರಗಳನ್ನು ರೆಡ್ಡಿ altnews.inಗೆ ಕಳುಹಿಸಿಕೊಟ್ಟಿದ್ದಾರೆ. ಈ ಚಿತ್ರಗಳಲ್ಲಿ ಪ್ಲೇಟ್‍ನಲ್ಲಿ ಏನೂ ಇಲ್ಲ. ಊಟದ ಟೇಬಲ್‍ನಲ್ಲಿ ಇವರ ಎದುರು ಖಾಲಿ ಪ್ಲೇಟ್ ಇಡಲಾಗಿದೆ. ಆದರೆ ಕಿಡಿಗೇಡಿಗಳು ಫೋಟೊಶಾಪ್ ಮೂಲಕ ಖಾಲಿ ತಟ್ಟೆಯಲ್ಲಿ ಮಾಂಸಾಹಾರದ ತಿನಿಸನ್ನು ಇಟ್ಟಿದ್ದಾರೆ.

ಈ ಬಗ್ಗೆ altnews.in ಮಾಂಸಾಹಾರಿ ಖಾದ್ಯ ಇರುವ ಚಿತ್ರವನ್ನು ಕ್ರಾಪ್ ಮಾಡಿತು. ಗೂಗಲ್‍ನ ರಿವರ್ಸ್ ಇಮೇಜ್ ಸರ್ಚ್ ಆಯ್ಕೆಯನ್ನು ಬಳಸಿ ನೋಡಿತ್ತು. ಇದು ಬಟರ್ ಚಿಕನ್‍ನ ಪ್ರಚಾರದ ಸಾಮಾನ್ಯ ಚಿತ್ರವಾಗಿದ್ದು, ಇದನ್ನು ಹಲವಾರು ರೆಸ್ಟೋರೆಂಟ್‍ಗಳು ದೀರ್ಘಕಾಲದಿಂದಲೂ ಬಳಸುತ್ತಿರುವುದು ಪತ್ತೆಯಾಯಿತು.

ಇಂಥ ಸುಳ್ಳು ಸುದ್ದಿಗಳು ಸಾಮಾನ್ಯವಾಗಿ ಊಹಿಸಲು ಸಾಧ್ಯವಿರುವ, ಗಮನಿಸಬಹುದಾದ ವಿಧಾನವನ್ನು ಅನುಸರಿಸುತ್ತವೆ. ಜಯನಗರ ಕ್ಷೇತ್ರದ ಉಪಚುನಾವಣೆಗೆ ಕೆಲವೇ ದಿನಗಳು ಇರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬಳಸಿದ ಸುದ್ದಿ ಅಥವಾ ಫೋಟೊ ತಿರುಚುವ ತಂತ್ರವನ್ನು ಕಿಡಿಗೇಡಿಗಳು ಬಳಸಿದ್ದಾರೆ.

ಕೃಪೆ: Altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News