ಯುನಿಕೋಡ್ ಎಂಬ ಜಾಗತಿಕ ಮಾನಕ 'ವಿಶ್ವಭಾಷೆಗಳಿಗೆ ದೊರೆತ ಡಿಜಿಟಲ್ ಸ್ಥಾನಮಾನ'

Update: 2018-06-09 17:43 GMT

ಸ್ಮಾರ್ಟ್‌ಫೋನುಗಳು ಮತ್ತು ಕಂಪ್ಯೂಟರುಗಳಲ್ಲಿ ಭಾಷಾ ಮತ್ತು ಲಿಪಿತಂತ್ರಜ್ಞಾನವು ವಿಶ್ವಮಟ್ಟದಲ್ಲಿ ವಿಸ್ತರಿಸಿದಂತೆಲ್ಲಾ, ಕನ್ನಡ ಭಾಷೆಗೂ ಸಹ ಅದರ ಪ್ರಯೋಜನಗಳೂ ಲಭ್ಯವಾಗುತ್ತಿದೆ. ದಶಕಗಳ ಕಾಲದಿಂದ ಇರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಮಾನಕಗಳನ್ನು ರೂಪಿಸುವುದು ಅನಿವಾರ್ಯವಾಗಿತ್ತು. ಹಿಂದೆ, ಒಂದೇ ಫೈಲ್‌ನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಪಠ್ಯಗಳ ದ್ವಿ-ಭಾಷಾ ಪಠ್ಯಗಳನ್ನು ಬಳಸುವಲ್ಲಿ ಇದ್ದ ಸಮಸ್ಯೆ ಮತ್ತು ಹಲವು ಕನ್ನಡ ತಂತ್ರಾಂಶಗಳ ನಡುವೆಯೇ ಪರಸ್ಪರ ಮಾಹಿತಿ ವಿನಿಮಯದ ಸಮಸ್ಯೆಗಳ ಪರಿಹಾರಕ್ಕಾಗಿ ಮಾನಕಗಳನ್ನು (ಸ್ಟಾಂಡರ್ಡ್) ರೂಪಿಸಲು ಆಲೋಚಿಸಲಾಯಿತು. ನಂತರದಲ್ಲಿ, ಇಂಗ್ಲಿಷ್ ಪಠ್ಯದೊಂದಿಗೆ ಏಕಕಾಲಕ್ಕೆ ಯಾವುದಾದರೊಂದು ಭಾರತೀಯ ಭಾಷೆಯ ಪಠ್ಯವನ್ನು ಬಳಸಲು ಅನುವಾಗುವಂತೆ ಭಾರತೀಯ ಭಾಷೆಗಳ ಏಕರೂಪತೆಗೆ ಇಸ್ಕಿ- ಮಾನಕ (ಇಂಡಿಯನ್ ಸ್ಕ್ರಿಪ್ಟ್‌ಕೋಡ್ ಫಾರ್ ಇನ್‌ಫರ್‌ಮೇಷನ್ ಇಂಟರ್‌ಚೇಂಚ್- ISCII) ರಚಿಸಲಾಯಿತು.ಭಾರತೀಯ ಭಾಷೆಗಳಲ್ಲಿ ಪರಸ್ಪರ ಮಾಹಿತಿ ವಿನಿಮಯ ಮತ್ತು ಒಂದೇ ಭಾರತೀಯ ಭಾಷೆಯ ಎಲ್ಲಾ ತಂತ್ರಾಂಶಗಳಲ್ಲಿ ಏಕರೂಪತೆ ತರುವುದು ಇದರ ಉದ್ದೇಶವಾಗಿತ್ತು. ಈಗ ವಿಶ್ವಭಾಷೆಗಳ ನಡುವೆ ಕನ್ನಡವೂ ಸೇರಿದಂತೆ, ಎಲ್ಲಾ ಭಾರತೀಯ ಭಾಷೆಗಳನ್ನು ಏಕಕಾಲದಲ್ಲಿ ಬಳಸುವ ಕಾಲ ಬಂದಿದೆ. ಒಂದೇ ಫೈಲ್‌ನಲ್ಲಿ ವಿಶ್ವದ ಎಲ್ಲಾ ಭಾಷೆಗಳನ್ನು ಸಂಗ್ರಹಿಸಿ ಬಳಸುವುದು, ಆಯಾ ಭಾಷೆಗಳ ಅಕ್ಷರಾನುಕ್ರಮಣಿಕೆಯಲ್ಲಿಯೇ ವಿಂಗಡಣೆ ಅಂದರೆ, ಸಾರ್ಟಿಂಗ್ ಸಾಧ್ಯವಾಗಿಸುವುದು - ಇವುಗಳು ‘ವಿಶ್ವಮಟ್ಟದಲ್ಲಿ ಭಾಷಾ ಅಕ್ಷರ-ಸಂಕೇತೀಕರಣ’ದ ಗುರಿಯಾಗಿದೆ. ಇಂತಹ ಗುರಿ ಯನ್ನು ಸಾಧಿಸಲು ಅನುವುಮಾಡಿಕೊಟ್ಟಿರುವುದೇ ‘ಯೂನಿಕೋಡ್’ ಅಕ್ಷರಸಂಕೇತೀಕರಣ ವ್ಯವಸ್ಥೆ.

ಈಗ ಯುನಿಕೋಡ್ ವಿಶ್ವಮಟ್ಟದಲ್ಲಿ ಜಾರಿಯಾಗಿದೆ. ಇದರಿಂದಾಗಿ, ಭಾರತೀಯ ಭಾಷೆಗಳು ಮಾತ್ರವಲ್ಲ ಜಗತ್ತಿನ ಎಲ್ಲ ಭಾಷೆಗಳ ಜೊತೆ ಕನ್ನಡವೂ ಹಾಸುಹೊಕ್ಕಾಗಿ ಸೇರಿ ಕೊಂಡಿದೆ. ಜಗತ್ತಿನ ಎಲ್ಲ ಭಾಷೆಗಳ ಎನ್‌ಕೋಡಿಂಗ್‌ಗೆ ಇರುವ ಶಿಷ್ಟತೆ ಅಥವಾ ಮಾನಕವೇ ಈ ‘ಯುನಿಕೋಡ್. ಕಂಪ್ಯೂಟರ್‌ನಲ್ಲಿ ಮತ್ತು ಸ್ಮಾರ್ಟ್‌ಫೋನುಗಳಲ್ಲಿ ಜಗತ್ತಿನ ಎಲ್ಲ ಭಾಷೆಗಳನ್ನು ಗೊಂದಲವಿಲ್ಲದೆ ಬಳಸಲು ಅನು ವಾಗುವಂತೆ ಪ್ರತಿ ಅಕ್ಷರಕ್ಕೂ ಸಂಕೇತ ನೀಡುವ ವ್ಯವಸ್ಥೆಯನ್ನು ‘ಯುನಿಕೋಡ್ ಸಂಕೇತೀಕರಣ ವ್ಯವಸ್ಥೆ’ ಎನ್ನಲಾಗಿದೆ. ಇದರ ವೈಶಿಷ್ಟ್ಯವೆಂದರೆ ಜಗತ್ತಿನ ಎಲ್ಲ ಭಾಷೆಗಳಿಗೂ ಇದರಲ್ಲಿ ಪ್ರತ್ಯೇಕ ಸ್ಥಾನವನ್ನು ನೀಡಲಾಗಿದೆ. ಅಂದರೆ, ಆಸ್ಕಿ- ಮಾನಕದಲ್ಲಿ ಇದ್ದಂತೆ, ಇಂಗ್ಲಿಷ್‌ನ ಜಾಗದಲ್ಲಿ ಕನ್ನಡ ಅಕ್ಷರಗಳನ್ನು ಕೂರಿಸಬೇಕಾಗಿಲ್ಲ. (ಓದಲಾಗದ ‘ವಿಚಿತ್ರಲಿಪಿ’ ಕಾಣಿಸಿಕೊಳ್ಳುವ ಸಮಸ್ಯೆಗೆ ಬೇರೆಭಾಷೆಯ ಸ್ಥಾನದಲ್ಲಿ ಹೀಗೆ ಕನ್ನಡದ ಅಕ್ಷರಗಳನ್ನು ಕೂರಿಸಿರುವುದೇ ಕಾರಣ) ಈಗ ಯುನಿಕೋಡ್‌ನಿಂದಾಗಿ ಕಂಪ್ಯೂಟರ್‌ನಲ್ಲಿ ಮತ್ತು ಸ್ಮಾರ್ಟ್‌ಫೋನುಗಳಲ್ಲಿ ಕನ್ನಡಕ್ಕೆ ತನ್ನದೇ ಸ್ವತಂತ್ರವಾದ ಸ್ಥಾನಮಾನಗಳು ದೊರೆತಿವೆ.

8-ಬಿಟ್‌ಗಳನ್ನು ಬಳಸುವ ಆಸ್ಕಿ ಅಥವಾ ಇಸ್ಕಿ ಸಂಕೇತೀಕರಣ ವಿಧಾನವು 256 (28 = 256) ಅಕ್ಷರಗಳನ್ನು ಮಾತ್ರವೇ ಹೊಂದಿರಬಲ್ಲುದು. ಕನ್ನಡ ಭಾಷೆಯಲ್ಲಿ ಸುಮಾರು 50 ಮೂಲ ಅಕ್ಷರಗಳು ಮತ್ತು 16 ಸ್ವರಚಿಹ್ನೆಗಳಿವೆ. ಇವುಗಳಿಗೆ ಸಂಕೇತೀಕರಣ ವ್ಯವಸ್ಥೆಯನ್ನು ನಿರ್ಮಿಸಿ ಬಳಸುವುದು ಇಸ್ಕಿ-ಮಾನಕದಲ್ಲಿ ಸಾಧ್ಯವಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ಲೋಯರ್ ಕೇಸ್‌ನ 26 ಮತ್ತು ಅಪ್ಪರ್ ಕೇಸ್‌ನ 26 ಅಕ್ಷರಗಳು ಒಟ್ಟಾರೆ 52 ಮೂಲಾಕ್ಷರಗಳು ಮತ್ತು ಬರೆವಣಿಗೆಯ ಚಿಹ್ನೆ, ಅಂಕಿಗಳು, ಇತ್ಯಾದಿಗಳೆಲ್ಲ ಒಟ್ಟು ಸೇರಿದರೂ 256ಕ್ಕಿಂತ ಕಡಿಮೆಯೇ. ಹಾಗಾಗಿ, ಆಸ್ಕಿ-ಮಾನಕದಲ್ಲಿ ದೊರೆಯುವ 256 ಸಂಕೇತಗಳು ಇಂಗ್ಲಿಷ್ ಭಾಷೆಗೆ ಸಾಕಾಗುತ್ತಿತ್ತು. ಅಷ್ಟೇ ಅಲ್ಲದೆ, ಇತರ ಯುರೋಪಿಯನ್ ಭಾಷೆಗಳಿಗೂ ಸಹ ಇದರಲ್ಲಿಯೇ ಅವಕಾಶವನ್ನು ಕಲ್ಪಿಸಲಾಗಿತ್ತು. ಆಸ್ಕಿಯ ಮತ್ತೊಂದು ರೂಪವಾದ ಇಸ್ಕಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುವಾಗ ಇಂಗ್ಲಿಷ್ ಮತ್ತು ಒಂದು ಭಾರತೀಯ ಭಾಷೆಯನ್ನು ಮಾತ್ರ ಬಳಸಬಹುದು. ಅಂದರೆ, ಕನ್ನಡ, ಹಿಂದಿ, ತಮಿಳು, ತೆಲುಗು, ಹೀಗೆ ಹಲವು ಭಾಷೆಗಳನ್ನು ಒಂದೇ ಫೈಲ್‌ನಲ್ಲಿ ಸಂಗ್ರಹಿಸುವುದು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿದ್ದರೆ, ಭಾರತೀಯ ಭಾಷೆಗಳನ್ನೂ ಸೇರಿದಂತೆ, ವಿಶ್ವದ ಎಲ್ಲಾ ಭಾಷೆಗಳನ್ನು ಒಂದೇ ಫೈಲ್‌ನಲ್ಲಿ ಸಂಗ್ರಹಿಸುವ ಸೌಲಭ್ಯವನ್ನು ನೀಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆದವು.

ಜಗತ್ತಿನ ಎಲ್ಲಾ ಭಾಷೆಗಳಿಗೆ ಕಂಪ್ಯೂಟರ್‌ನಲ್ಲಿ ಪ್ರಾತಿನಿಧ್ಯ ಒದಗಿಸುವಲ್ಲಿ ಇದ್ದ ಮೊತ್ತಮೊದಲ ಸಮಸ್ಯೆ ಎಂದರೆ ಅಕ್ಷರಗಳ ಸಂಕೇತೀಕರಣಕ್ಕಾಗಿ ಲಭ್ಯವಿದ್ದ ಸ್ಥಾನಗಳ ಮಿತಿ. ಅದು ಕೇವಲ 256ಕ್ಕೆ ಸೀಮಿತವಾಗಿತ್ತು. 8-ಬಿಟ್‌ಗಳ ಎನ್‌ಕೋಡಿಂಗ್ ವಿಧಾನವನ್ನೇ ಬದಲಿಸಿ 16-ಬಿಟ್‌ಗಳ ಎನ್‌ಕೋಡಿಂಗ್ ವಿಧಾ ನವನ್ನು ಆರಂಭಿಸಿದರೆ, ಆಗ ಸಂಕೇತೀ ಕರಣ ವ್ಯವಸ್ಥೆಯಲ್ಲಿ 65536 (216 = 65536) ಅಕ್ಷರಗಳಿಗೆ ಅವಕಾಶ ಒದಗು ತ್ತದೆ. ಇಷ್ಟು ಸಂಖ್ಯೆಯ ಅವಕಾಶ ಒದಗಿದರೆ, ಅದನ್ನು ಬಳಸಿ, ವಿಶ್ವದ ಎಲ್ಲಾ ಭಾಷೆಗಳ ಅಕ್ಷರಗಳಿಗೂ ಪ್ರಾತಿನಿಧ್ಯವನ್ನು ಒದಗಿಸಬಹುದು ಎಂದು ಆಲೋಚಿಸಿ ಪಠ್ಯದ ಎನ್‌ಕೋಡಿಂಗ್ ವಿಧಾನವನ್ನು 16-ಬಿಟ್‌ಗಳಿಗೆ ಹೆಚ್ಚಿಸಿ ಹೊಸ ತಂತ್ರಜ್ಞಾನವನ್ನೇ ಆರಂಭಿಸಲಾಯಿತು.

ಖ್ಯಾತ ಅಂತರ್‌ರಾಷ್ಟ್ರೀಯ ತಂತ್ರಾಂಶ ತಯಾರಕರು, ಭಾಷಾ ತಜ್ಞರು ಮತ್ತು ವಿವಿಧ ದೇಶಗಳ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಒಂದು ‘ಯುನಿಕೋಡ್ ಕನ್ಸಾರ್ಷಿಯಂ’ ಎಂಬ ಸ್ವಯಂಸೇವಾ ಸಂಘಟನೆಯನ್ನು ರಚಿಸಿಕೊಂಡು, ತಮ್ಮ ತಮ್ಮ ದೇಶಗಳ ಭಾಷೆಗಳಿಗೆ ಯುನಿಕೋಡ್ ಸಂಕೇತಗಳನ್ನು ರೂಪಿಸಿ ಅಳವಡಿಸಿಕೊಂಡಿವೆ. ಅಯಾಯ ಭಾಷೆಗಳಲ್ಲಿ ಈಗಾಗಲೇ ಮೂಲಾಕ್ಷರಗಳಿಗೆ ಲಭ್ಯವಿರುವ ರಾಷ್ಟ್ರೀಯ ಮಾನಕಗಳನ್ನೇ ಆಧರಿಸಿ ಆರಂಭದಲ್ಲಿ ಯುನಿಕೋಡ್‌ನ ಸಂಕೇತಗಳ ಮೊದಲ ಆವೃತ್ತಿಯನ್ನು ಪ್ರಕಟಿಸಲಾಯಿತು. ತದನಂತರದಲ್ಲಿ, ಅವುಗಳ ಕುರಿತು ಚರ್ಚೆ ನಡೆಸಿ, ಲೋಪ-ದೋಷಗಳನ್ನು ಸರಿಪಡಿಸಿ ಹೊಸ ಹೊಸ ಆವೃತ್ತಿಗಳನ್ನು ಪ್ರಕಟಿಸುವ ಮೂಲಕ ಯುನಿಕೋಡ್ ವ್ಯವಸ್ಥೆಗೆ ಅಂತಿಮ ರೂಪವನ್ನು ನೀಡಲಾಗಿದೆ.

8-ಬಿಟ್‌ಗಳ ಎನ್‌ಕೋಡಿಂಗ್ ಬಳಸಿ ಸಿದ್ಧವಾಗಿದ್ದ ಹಳೆಯ ಪಠ್ಯವನ್ನು ಹೊಸ ಎನ್‌ಕೋಡಿಂಗ್‌ಗೆ ಬದಲಿಸಿ ಕೊಳ್ಳಲು ಸಾಧ್ಯವಾಗುವಂತೆ ವರ್ಗಾಯಿಸುವ ವ್ಯವಸ್ಥೆಯೊಂದನ್ನು ಅಳವಡಿಸಿಕೊಳ್ಳಲಾಯಿತು (ಸೇವ್ ಆ್ಯಸ್ ಯುಟಿಎಫ್-8). ಹೊಸ 16-ಬಿಟ್‌ಗಳ ಎನ್‌ಕೋಡಿಂಗ್ ವಿಧಾನದಲ್ಲಿ ಒಂದು ಅಕ್ಷರಕ್ಕೆ ಎರಡು ಬೈಟ್‌ಗಳನ್ನು ಬಳಸಲಾಯಿತು. ಮೊದಲನೆಯ ಬೈಟ್‌ನಲ್ಲಿ ಭಾಷೆಯ ಹೆಸರು, ಅಕ್ಷರವನ್ನು ಪ್ರದರ್ಶಿಸಬೇಕಾದ ಾಂಟ್‌ನ ಹೆಸರು, ಫಾಂಟ್‌ನ ಗುಣಧರ್ಮಗಳು ಇತ್ಯಾದಿ ವಿವರಗಳನ್ನು ದಾಖಲಿಸಿದರೆ, ಎರಡನೆಯ ಬೈಟ್‌ನಲ್ಲಿ ಭಾಷಾ ಅಕ್ಷರದ ಸಂಕೇತವನ್ನು ದಾಖಲಿಸುವ ವ್ಯವಸ್ಥೆಯನ್ನು ಯುನಿಕೋಡ್‌ನಲ್ಲಿ ಮಾಡಲಾಗಿದೆ. ಹೀಗಾಗಿ, ಯುನಿಕೋಡ್ ಎನ್‌ಕೋಡಿಂಗ್ ವ್ಯವಸ್ಥೆಗೆ ‘ಡಬಲ್ ಬೈಟ್ ಎನ್‌ಕೋಡಿಂಗ್ ಸಿಸ್ಟಂ’ ಎಂದೂ ಸಹ ಕರೆಯಲಾಗಿದೆ. 8-ಬಿಟ್‌ಗಳ ಎನ್‌ಕೋಡಿಂಗ್ ವ್ಯವಸ್ಥೆಯಾದ ಆಸ್ಕಿ-ಮಾನಕದಲ್ಲಿನ ಇಂಗ್ಲಿಷ್‌ನ ಮೊದಲಿನ ಅಕ್ಷರಸ್ಥಾನಗಳನ್ನು ಯುನಿಕೋಡ್‌ನಲ್ಲಿ ಹಾಗೆಯೇ ಉಳಿಸಿಕೊಂಡು ಇತರ ಭಾಷೆಗಳ ಅಕ್ಷರಗಳಿಗೆ ಹೆಚ್ಚಿನ ಸ್ಥಾನವನ್ನು ಒದಗಿಸಿರುವುದರಿಂದ, ಈಗ ಕಂಪ್ಯೂಟರ್‌ನಲ್ಲಿ ಮತ್ತು ಸ್ಮಾರ್ಟ್‌ಫೋನುಗಳಲ್ಲಿ ಇಂಗ್ಲಿಷ್‌ನೊಂದಿಗೆ ಇತರೇ ವಿಶ್ವಭಾಷೆಗಳನ್ನು ಸಹ ಬಳಸಲು ಸಾಧ್ಯವಾಗಿದೆ. 16-ಬಿಟ್ ಎನ್‌ಕೋಡಿಂಗ್‌ನಲ್ಲಿ ಹೆಚ್ಚಿದ ಅಕ್ಷರಸ್ಥಾನಾವಕಾಶಗಳಿಂದಾಗಿ, ಲಿಪಿ ಇರುವ ವಿಶ್ವದ ಎಲ್ಲಾ ಭಾಷೆಗಳಿಗೆ ಯುನಿಕೋಡ್ ಸಂಕೇತಗಳು ಲಭ್ಯವಾಗಿವೆ. ಇದರಿಂದಾಗಿ ಆಯಾಯ ಭಾಷೆಗಳಿಗೆ ಪ್ರಾತಿನಿಧ್ಯ ದೊರೆತು, ವಿದ್ಯುನ್ಮಾನ ಉಪಕರಣಗಳಲ್ಲಿ ಭಾಷಾ ಬಳಕೆಯ ಅನುಕೂಲಗಳು ಹೆಚ್ಚಾಗಿವೆ.

ಹಿಂದೆ ಬಳಕೆಯಲ್ಲಿದ್ದ ಟ್ರೂಟೈಪ್ ಫಾಂಟ್ ತಂತ್ರಜ್ಞಾನವು ಈಗ ಹಿನ್ನೆಲೆಗೆ ಸರಿದುಹೋಗಿದೆ. ಅಲ್ಲಿ ಅಕ್ಷರಗಳ ತುಂಡುಗಳ (ಫಾಂಟ್ ಗ್ಲಿಫ್) ಸಂಖ್ಯೆಗೆ ಒಂದು ಮಿತಿ ಇತ್ತು. (ಅಕ್ಷರಗಳ ಸಂಖ್ಯಾಸ್ಥಾನಗಳ ಇಂತಹ ಮಿತಿಯೇ ಕನ್ನಡದ ಅಕ್ಷರಗಳನ್ನು ತುಂಡುತುಂಡು ಮಾಡಿಕೊಂಡು ಬಳಸುವ ಅನಿವಾರ್ಯತೆಗೆ ನಮ್ಮನ್ನು ದೂಡಿತ್ತು) ಈಗ ಓಪನ್‌ಟೈಪ್ ಫಾಂಟ್ ತಂತ್ರಜ್ಞಾನ ಬಳಕೆಯಲ್ಲಿದೆ. ಇಲ್ಲಿ ಅಪರಿಮಿತ ಸಂಖ್ಯೆಯ ಗ್ಲಿಫ್‌ಗಳನ್ನು ಸಿದ್ಧಪಡಿಸಿಕೊಳ್ಳಲು ಸಾಧ್ಯ. ನಿಜಕ್ಕೂ ಈಗ ಅಕ್ಷರಗಳನ್ನು ತುಂಡುಗಳನ್ನಾಗಿ ಮಾಡಿಕೊಂಡು ಬಳಸುವ ಪ್ರಮೇಯವೇ ಇಲ್ಲ. ಅಕ್ಷರಗಳ ತುಂಡುಗಳ ಬದಲಾಗಿ ಪೂಣಾಕ್ಷರಗಳನ್ನೇ ರಚಿಸಿಕೊಂಡು ಬಳಸಬಹುದಾದ ತಂತ್ರಜ್ಞಾನವೇ ಓಪನ್‌ಟೈಪ್ ಾಂಟ್ ತಂತ್ರಜ್ಞಾನ. ಇಲ್ಲಿ ಸಂಖ್ಯಾಮಿತಿ ಇಲ್ಲದಿರುವುದರಿಂದ, ವಿಶ್ವದ ಎಲ್ಲಾ ಭಾಷೆಗಳ ಅಕ್ಷರಗಳನ್ನು ಮೂಡಿಸಲು ಅಗತ್ಯವಿರುವ ಅಕ್ಷರಗಳನ್ನು ಹೊಂದಿರುವ ಒಂದೇ ಫಾಂಟನ್ನು ಸಿದ್ಧಪಡಿಸಲು ಈಗ ಸಾಧ್ಯವಾಗಿದೆ (ಉದಾಹರಣೆಗೆ: ‘‘ಏರಿಯಲ್ ಯೂನಿಕೋಡ್ ಎಂಎಸ್’’ ಹೆಸರಿನ ಓಪನ್‌ಟೈಪ್ ಫಾಂಟು)

ಆಸ್ಕಿ-ಫಾಂಟ್ ಬಳಸಿ ಟೈಪ್ ಮಾಡಲಾದ ಕನ್ನಡ ಪಠ್ಯವನ್ನು ಬದಲಿಸಲು ಡಿಲೀಟ್ ಕೀಲಿಯನ್ನು ಒತ್ತುತ್ತಾಹೋ ದಂತೆಲ್ಲಾ ಅಕ್ಷರತುಂಡುಗಳು ಒಂದೊಂದಾಗಿ ಮಾಯವಾಗುತ್ತವೆ. ಆದರೆ, ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಲಾದ ಪಠ್ಯವನ್ನು ಬದಲಿಸಬೇಕಾದಾಗ ‘ಡಿಲೀಟ್ ಕೀಲಿಯೊತ್ತಿದರೆ ಇಡೀ ಪೂರ್ಣಾಕ್ಷರವೇ ಮಾಯ ವಾಗುವುದನ್ನು ನೀವು ಗಮನಿಸಿರಬಹುದು. ಇದು ತಂತ್ರಜ್ಞಾನದಲ್ಲಿ ಆಗಿರುವ ಧನಾತ್ಮಕ ಬದಲಾವಣೆ. ಇದರಿಂದಾಗಿ ಕನ್ನಡ ಭಾಷಾ ಪಠ್ಯ ಸಂಪಾದನೆಯು (ಟೆಕ್ಸ್ಟ್ ಎಡಿಟಿಂಟ್) ಸುಲಭಗೊಂಡಿದೆ. ಯೂನಿಕೋಡ್ ಮಾನಕದನ್ವಯ ಸಿದ್ಧಪಡಿಸಿದ ತಂತ್ರಾಂಶಗಳಲ್ಲಿ ಕನ್ನಡವೂ ಸೇರಿದಂತೆ ಇಂದು ವಿಶ್ವಭಾಷೆಗಳನ್ನು ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಬಳಸಬಹುದು.

Writer - ಡಾ.ಎ. ಸತ್ಯನಾರಾಯಣ

contributor

Editor - ಡಾ.ಎ. ಸತ್ಯನಾರಾಯಣ

contributor

Similar News