ಘಟನೆಗಳು ನನ್ನ ಬದ್ಧತೆಯನ್ನು ಗಟ್ಟಿಗೊಳಿಸಿದವು - ಡಾ. ಎಚ್.ಆರ್.ಸ್ವಾಮಿ

Update: 2018-06-10 11:09 GMT

ಆಧುನಿಕ ಕರ್ನಾಟಕದಲ್ಲಿ ಜನಸಾಮಾನ್ಯರ ಜೊತೆ ನಿಂತು ವೈಚಾರಿಕತೆ, ಪರಿಸರ, ಸಾಹಿತ್ಯ, ರಂಗಭೂಮಿ ಹೀಗೆ ಹಲವು ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿರುವ ಅರಸೀಕೆರೆಯ ಡಾ. ಎಚ್.ಆರ್. ಸ್ವಾಮಿಯವರೊಂದಿಗೆ ಒಂದು ಸಂದರ್ಶನ ನಡೆಸಲಾಗಿದೆ. ಬದುಕಿನ ಹಲವು ವಿಭಿನ್ನ ಸ್ತರಗಳನ್ನು ಕಂಡು ಬಂದಿರುವ ಸ್ವಾಮಿಯವರು ಓರ್ವ ಶಿಕ್ಷಕ ಮಾತ್ರವಲ್ಲದೆ ಈಗಲೂ ಓರ್ವ ಸಾಮಾಜಿಕ ಚಿಕಿತ್ಸಕನಂತೆಯೇ ಸಕ್ರಿಯರಾಗಿದ್ದಾರೆ.

ಕೊರಚರಿಗೆ ತಮ್ಮದೇ ಆದ ಒಂದು ಭಾಷೆ ಇದೆ. ನಮ್ಮದು ಲಿಪಿಯಿಲ್ಲದ ಭಾಷೆ. ದ್ರಾವಿಡ ಭಾಷೆಗಳ ಎಲ್ಲ ಶಬ್ದಗಳೂ ನಮ್ಮ ಭಾಷೆಯಲ್ಲಿ ಬಳಕೆಯಲ್ಲಿವೆ. ನಿಮಗೆ ಆಶ್ಚರ್ಯವಾಗಬಹುದು; ಕೊರಚರ ಭಾಷೆಯಲ್ಲಿ ‘ಊಟ’ ಎನ್ನುವುದಕ್ಕೆ ಶಬ್ದವೇ ಇಲ್ಲ! ‘ಶ್ರೀಮಂತ’ ಎನ್ನುವುದಕ್ಕೆ ಶಬ್ದವಿಲ್ಲ! ಕೊರಚ ಸಮುದಾಯಕ್ಕೆ ಇವು ಅಪರಿಚಿತ ಶಬ್ದಗಳು.

 ಮಮತಾ ಅರಸಿಕೆರೆ: ಅಲೆಮಾರಿ ‘ಕೊರಚ’ ಜನಾಂಗದಿಂದ ಬಂದವರು ನೀವು. ಅಲ್ಲಿನ ನಿಮ್ಮ ಅನುಭವಗಳೇನು? ಸಾಹಿತ್ಯ- ಸಂಶೋಧನೆ-ಜನಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಯಾವುದು?

- ಎಚ್.ಆರ್.ಸ್ವಾಮಿ: ನಮ್ಮದು ‘ಕಳ್ಳ’ ಎನ್ನುವ ಹಣೆಪಟ್ಟಿಯನ್ನು ಅಂಟಿಸಿಕೊಂಡು ಜೀವಿಸುತ್ತಿದ್ದ ಸಮುದಾಯ. ಅಪರಾಧಿ ಗಳಲ್ಲದಿದ್ದರೂ ಅಪರಾಧಿ ಗಳೆಂಬ ಹಣೆಪಟ್ಟಿ ಹೊತ್ತು ಅಪಮಾನಕ್ಕೊಳಗಾಗಿ ಬದುಕುತ್ತಿದ್ದವರು ‘ಕೊರಚ’ರು. ನಮ್ಮ ಜಾತಿಯ ಹೆಸರನ್ನೇ ಬೈಗುಳವನ್ನಾಗಿ ಈ ಸಮಾಜ ಮಾಡಿಕೊಂಡಿದೆ. ಆಗ ಚಿಕ್ಕಜಾಜೂರಿನಿಂದ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ರೈಲ್ವೆ ಮಾರ್ಗ ಹಾಕುವ ಸನ್ನಿವೇಶದಲ್ಲಿ ಕೂಲಿ ಅರಸುತ್ತಾ ಆಂಧ್ರದಿಂದ ಅಲೆಮಾರಿಗಳಾಗಿ ಚಿಕ್ಕಜಾಜೂರಿಗೆ ಬಂದು ಗುಡಾರಗಳನ್ನು ಹಾಕಿಕೊಂಡು ನೆಲೆಸಿದವರು ನಮ್ಮ ಮುತ್ತಜ್ಜ, ಅವರ ಹೆಸರು ಕುಮಾರಪ್ಪ.

ಹೀಗೆ ವಲಸೆ ಬಂದು ರೈಲ್ವೆ ಹಳಿಗಳ ಪಕ್ಕ ಗುಡಿಸಲು ಹಾಕಿ ಕೊಳ್ಳುತ್ತಿದ್ದರು. ರೈಲ್ವೆ ಸ್ಲೀಪರ್‌ಗಳೇ ನಮ್ಮ ಗುಡಿಸಿಲಿನ ಗೋಡೆಗಳು. ಮೆದೆಹುಲ್ಲೇ ಚಾವಣಿ. ಒಂದು ಸಲ ರೈಲ್ವೆ ಇಂಜಿನ್‌ನಿಂದ ಕಿಡಿ ಹಾರಿ ನಮ್ಮ ಗುಡಿಸಿಲೇ ಉರಿದು ಬೂದಿಯಾಯಿತು. ಆಗ ನಾನಿನ್ನೂ ಮೊಲೆಗೂಸು. ಅಂದಿನ ರುದ್ರ ಘಟನೆಯನ್ನು ನನ್ನ ತಾಯಿ ಈಗಲೂ ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ. ಇದಾದ ನಂತರ ಆ ಗ್ರಾಮದಲ್ಲಿದ್ದ ಕಾಂಗ್ರೆಸ್ ಸಿದ್ದಪ್ಪ ಎನ್ನುವವರು ನಮಗೆ ಗುಡಿಸಲು ಹಾಕಿಕೊಳ್ಳಲು ಸ್ಥಳ ನೀಡಿದರು. ನಾವು ವಾಸವಿದ್ದ ಗುಡಿಸಲಿನ ಉತ್ತರಕ್ಕೆ ಮಾದರಹಟ್ಟಿ. ಪಶ್ಚಿಮಕ್ಕೆ ವಡ್ಡರಹಟ್ಟಿ, ದಕ್ಷಿಣಕ್ಕೆ ಸೇಂದಿ ಅಂಗಡಿ. ಅದಕ್ಕೆ ಹೊಂದಿಕೊಂಡಂತೆ ಮಿಡ್ಲು ಸ್ಕೂಲ್ ಇತ್ತು. ಪೂರ್ವಕ್ಕೆ ಊರಿನ ಮಲಗುಂಡಿ. ಇಲ್ಲಿಯೇ ನಮ್ಮ ಮಾದಿಗರು ದನ ಕಾಯಲು ಜಾಗ ಮಾಡಿಕೊಂಡಿದ್ದರು. ಹಂದಿ ಸಾಕುವುದು, ಕತ್ತಾಳೆ ನಾರಿನಲ್ಲಿ ಹಗ್ಗ, ಸಿಂಬೆ, ಬಾಯಿಕುಕ್ಕೆ, ಮಿಣೆ ಇವುಗಳನ್ನು ಮಾಡಿ ಮುದ್ದೆಗಾಗಿ ಊರಿನವರೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಗುಡಿಸಿಲಿನಲ್ಲೇ ಕದ್ದು ಮುಚ್ಚಿ ಕಳ್ಳಭಟ್ಟಿ ತಯಾರಿಸಿ ಕುಡಿಯೋರು.

ನಮ್ಮದು ಅವಿಭಕ್ತ ಕುಟುಂಬ. ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ ನನ್ನ ತಂದೆ ಎಲ್ಲಾ ಒಟ್ಟಿಗೆ ಒಂದೇ ಗುಡಿಸಿಲಿನಲ್ಲಿ ವಾಸವಿದ್ದರು. ನಮ್ಮ ಹಟ್ಟಿಯಲ್ಲಿ ಯಾವಾಗಲೂ ವ್ಯಾಜ್ಯ, ಪಂಚಾಯತ್‌ಗಳು, ಕಳ್ಳತನದ ಆರೋಪದ ಮೇಲೆ ಪೋಲಿಸರ ಪ್ರವೇಶ ನಿರಂತರವಾಗಿ ಇದ್ದೇ ಇರುತ್ತಿತ್ತು. ನನ್ನ ಅಜ್ಜ ನಿರೀಶ್ವರವಾದಿ, ಯಾವ ದೇವರಿಗೂ ಕೈಮುಗಿಯುತ್ತಿರಲಿಲ್ಲ. ಆದರೆ ಸೂರ್ಯನೊಬ್ಬನಿಗೆ ಮಾತ್ರ ಕೈಮುಗಿದು ತನ್ನ ಕಾಯಕ ಆರಂಭಿಸುತ್ತಿದ್ದ. ಇಡೀ ಕುಟುಂಬದಲ್ಲಿ ನನ್ನ ತಂದೆ ಒಬ್ಬರೇ ಅಲ್ಪಸ್ವಲ್ಪ ವಿದ್ಯಾವಂತರು. ಇವರನ್ನು ‘ಓದರಣ್ಣ’ ಎಂದು ಎಲ್ಲರೂ ಆಗ ಕರೆಯೋರು.

ಇಂತಹ ಪರಿಸರದಲ್ಲಿ ನಾನು ಹುಟ್ಟಿಬೆಳೆದೆ. ನಾನು ಓದುವ ಹೊತ್ತಿಗೆ ಚಿಕ್ಕಜಾಜೂರಿನಲ್ಲಿ ಹೈಸ್ಕೂಲ್ ಪ್ರಾರಂಭವಾಗಿತ್ತು. ನನ್ನ ತಂದೆ ಆಗ ರೈಲ್ವೆ ಇಲಾಖೆಯಲ್ಲಿ ‘ವಾಟರ್ ಬಾಯ್’ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಮುಂದೆ ‘ರೈಲ್ವೆ ಗಾರ್ಡ್’ ಆಗಿ ನೇಮಕವಾದರು. ಬಾಬು ಜಗಜೀವನರಾಂ ಅವರ ಕಾರಣದಿಂದಾಗಿ ನನಗೆ ಈ ಕೆಲಸ ದೊರೆಯಿತು ಎಂದು ಈಗಲೂ ಹೇಳುತ್ತಿರುತ್ತಾರೆ. ಅಲ್ಲಿಂದೀಚೆಗೆ ನಮ್ಮ ತಂದೆ ಅರಸೀಕೆರೆಗೆ ಬಂದು ನೆಲೆಸಿದರು. ಅರಸೀಕೆರೆಗೆ ಬಂದದ್ದರಿಂದ ನಾನು ಪ್ರಮುಖವಾಗಿ ಕಳೆದುಕೊಂಡದ್ದು ರಕ್ತದಲ್ಲಿ ಬೆರೆತುಹೋಗಿದ್ದ ನನ್ನ ತಾಯ್ನುಡಿಯನ್ನು. ಕನ್ನಡ ಭಾಷೆ ಹಂತ ಹಂತವಾಗಿ ತಾಯ್ನುಡಿಯನ್ನು ನನ್ನಿಂದ ದೂರ ಮಾಡಿತು.

ನನ್ನ ಮುಂದಿನ ಪದವಿ ಓದಿಗಾಗಿ ಬೆಂಗಳೂರಿಗೆ ಬಂದೆ. ಅಲ್ಲಿನ ರೈಲ್ವೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಪದವಿ ಮುಗಿಸಿದೆ. ಅಲ್ಲಿಂದ ಕನ್ನಡ ಎಂಎ ಓದಲು ಜ್ಞಾನಭಾರತಿಗೆ ಸೇರಿದೆ. ಜ್ಞಾನಭಾರತಿಯ ಕನ್ನಡ ವಿಭಾಗ ನನ್ನ ಆಲೋಚನೆಯ ದಿಕ್ಕನ್ನೇ ಬದಲಿಸಿತು. ಜ್ಞಾನಭಾರತಿಯಲ್ಲೂ ನಮ್ಮ ಹೋರಾಟ ಮುಂದುವರಿಯಿತು. ಅಲ್ಲಿಯವರೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದ ‘ಮೂರನೆ ದರ್ಜೆ’ಯನ್ನು ನಿಷೇಧಿಸಲು ಹೋರಾಟ ಮಾಡಿದೆವು.

‘ಕೊರಚ’ರು ಒಂದು ‘ಹಿಂದುಳಿದ ಜನಾಂಗ’ ಎಂದು ಹೇಳಲಾಗುತ್ತಿದೆ. ನೀವು ಬುಡಕಟ್ಟು ಎನ್ನುತ್ತೀರಿ. ಹಾಗಾದರೆ ಹಿಂದುಳಿದ ವರ್ಗಕ್ಕೂ, ಬುಡಕಟ್ಟಿಗೂ ಇರುವ ವ್ಯತ್ಯಾಸವೇನು?

- ಒಂದು ಅವೈಜ್ಞಾನಿಕ ಸಮೀಕ್ಷೆಯಿಂದಾಗಿ ಕೊರಚ ಜನಾಂಗ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿದೆ. ಆದರೆ ಈ ಜನಾಂಗವನ್ನು ಸಾಂಸ್ಕೃತಿಕ ಹಿನ್ನೆಲೆಯಿಂದ ಅಧ್ಯಯನ ಮಾಡಿದರೆ, ಇದು ಬುಡಕಟ್ಟಿಗೆ ಸೇರುವ ಎಲ್ಲ ಲಕ್ಷಣಗಳೂ ಇವೆ. ಕೊರಚರಿಗೆ ತಮ್ಮದೇ ಆದ ಒಂದು ಭಾಷೆ ಇದೆ. ನಮ್ಮದು ಲಿಪಿಯಿಲ್ಲದ ಭಾಷೆ. ದ್ರಾವಿಡ ಭಾಷೆಗಳ ಎಲ್ಲ ಶಬ್ದಗಳೂ ನಮ್ಮ ಭಾಷೆಯಲ್ಲಿ ಬಳಕೆಯಲ್ಲಿವೆ. ನಿಮಗೆ ಆಶ್ಚರ್ಯವಾಗಬಹುದು; ಕೊರಚರ ಭಾಷೆಯಲ್ಲಿ ‘ಊಟ’ ಎನ್ನುವುದಕ್ಕೆ ಶಬ್ದವೇ ಇಲ್ಲ! ‘ಶ್ರೀಮಂತ’ ಎನ್ನುವುದಕ್ಕೆ ಶಬ್ದವಿಲ್ಲ! ಕೊರಚ ಸಮುದಾಯಕ್ಕೆ ಇವು ಅಪರಿಚಿತ ಶಬ್ದಗಳು. ಇವುಗಳ ಹಿಂದೆ ಒಂದು ದೊಡ್ಡ ಸಾಮಾಜಿಕ ಸತ್ಯವೇ ಅಡಗಿದೆ. ಇದೀಗ ಕನ್ನಡ ಭಾಷೆಯ ಪ್ರಭುತ್ವದಲ್ಲಿ ನನ್ನ ಕೊರಚ ಭಾಷೆ ಜಗತ್ತಿನ ಭಾಷಾ ಸಮುಚ್ಚಯದಿಂದ ನಶಿಸಿಹೋಗುತ್ತಿದೆ. ನಮ್ಮ ಜನ ಕೀಳರಿಮೆಯಿಂದಾಗಿ ನಮ್ಮ ಭಾಷೆಯ ಬಳಕೆಯನ್ನು ಸಡಿಲಗೊಳಿಸಿಕೊಂಡಿದ್ದಾರೆ. ಒಂದು ಸಲ ನನ್ನ ಪ್ರೀತಿಯ ಕೊರಚರ ಭಾಷೆಯಲ್ಲಿಯೇ ವೇದಿಕೆಯೊಂದರಲ್ಲಿ ಮಾತನಾಡಿದೆ. ಈ ಮೂಲಕ ಕೊರಚರ ಭಾಷೆ ಮೊದಲ ಬಾರಿಗೆ ಪ್ರತಿಷ್ಠಿತ ವೇದಿಕೆಯಲ್ಲಿ ತನ್ನನ್ನು ತೆರೆದುಕೊಂಡಿತು. ಹಾಗೆಯೇ ನನ್ನ ಭಾಷೆ ನನ್ನ ತಲೆಮಾರಿನೊಂದಿಗೇ ಕೊನೆಯುಸಿರು ಬಿಡುತ್ತಿರುವುದೂ ಕೂಡ ದುಃಖದ ಸಂಗತಿಯಾಗಿದೆ. ಇಂದಿಗೂ ನನ್ನ ಭಾಷೆ ಉಳಿದಿದ್ದರೆ ಅದಕ್ಕೆ ಕಾರಣ ಬೀದಿಬದಿಯಲ್ಲಿ ಪೊರಕೆ ಮಾರುವವರು, ಕಣಿ ಹೇಳುವವರು, ಹಂದಿ ಸಾಕಾಣೇ ಮಾಡುವವರು, ಮನೆ ಮನೆ ತಿರುಗಿ ಕೂದಲು ಸಂಗ್ರಹಿಸುವವರು. ನಾನು ಇವರೊಂದಿಗೆ ನನ್ನ ಭಾಷೆಯಲ್ಲೇ ಮಾತನಾಡುತ್ತೇನೆ. ಒಂದು ಭಾಷೆಯ ಅಳಿವು ಎಂದರೆ, ಅದು ಒಂದು ಸಮುದಾಯದ ಸಾಂಸ್ಕೃತಿಕ ನೆನಪುಗಳ ಅಳಿವು ಎಂದೇ ಅರ್ಥ. ಇದೀಗ ನಾನು ಕೊರಚ ಜನಾಂಗದ ಭಾಷಾ ಕೋಶವನ್ನು ಸಿದ್ಧಪಡಿಸಲು ಅಣಿಮಾಡಿಕೊಂಡಿದ್ದೆನೆ. ಇದನ್ನೆಲ್ಲಾ ನನ್ನ ಕೊರಚ ಜನಾಂಗ ಒಂದು ಅಧ್ಯಯನ ಎನ್ನುವ ಸಂಶೋಧನಾ ಪ್ರಬಂಧದಲ್ಲಿ ವಿವರವಾಗಿ ಚರ್ಚಿಸಿದ್ದೇನೆ. ಆದರೂ ಕೊರಚರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಹೇಳಿರುವುದು ವಿಷಾದನೀಯ ಸಂಗತಿ. ತಾಯಿ ನೆಲ ಎನ್ನುವುದೇ ಇಲ್ಲದ ಕೊರಚರು ರಾಜಕೀಯ, ಸಾಮಾಜಿಕ ಹಾಗೂ ಶಿಕ್ಷಣ ಹಾಗೂ ಉದ್ಯೋಗದ ಎಲ್ಲ ಅವಕಾಶಗಳಿಂದ ವಂಚಿತರಾಗಿದ್ದಾರೆ. ಜೊತೆಗೆ ‘ಕಳ್ಳರು’ ಎನ್ನುವ ಹಣೆಪಟ್ಟಿಯನ್ನು ಹೊತ್ತೇ ಇಂದಿಗೂ ಕನಿಷ್ಠಮಟ್ಟದ ಜೀವನ ಸಾಗಿಸುತ್ತಿದ್ದಾರೆ. ಅವರು ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಸಣ್ಣಪುಟ್ಟ ಕಳ್ಳತನಗಳಿಗಾಗಿ ಅವರನ್ನು ಜೀವಂತ ಸುಟ್ಟ ಘಟನೆಗಳೂ ಇವೆ. ನಿಮಗೆ ತಿಳಿದಿರಲಿ; ಕೊರಚರು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಬೇಕಾದರೂ ಆ ಹಳ್ಳಿಯ ಮುಖ್ಯಸ್ಥರ ಅನುಮತಿ ಪಡೆದು ಹೋಗಬೇಕಾಗಿತು,್ತ ಇದನ್ನು ನಮ್ಮ ಅಜ್ಜಿ ‘ಪ್ಯಾಸ್‌ಪೆಟ್’ ಎಂದು ಹೇಳುತ್ತಿತ್ತು. ಹೀಗಾಗಿ ಇಡೀ ಕೊರಚ ಸಮುದಾಯ ಕೀಳರಿಮೆಯಿಂದ ಮುದುಡಿಹೋಗಿದೆ. ಅಸ್ಪಶ್ಯತೆಯ ಆಚರಣೆ ಎಷ್ಟು ಭೀಕರವಾದದ್ದೋ ಹಾಗೆಯೇ ಕೊರಚರ ಬಗೆಗೆ ಸಮಾಜದ ಈ ವರ್ತನೆಯೂ ಕೂಡ ಅಷ್ಟೇ ಭೀಕರವಾದದ್ದು.

ಜನವಿಜ್ಞಾನ, ಸಾಕ್ಷರತೆ, ಮೂಢನಂಬಿಕೆ ವಿರೋಧಿ ಆಂದೋಲನಗಳಲ್ಲಿ ಸುಮಾರು ಮೂರು ದಶಕಗಳಿಂದ ಭಾಗವಹಿಸಿದವರು ನೀವು. ಅಲ್ಲಿ ನಿಮಗಾದ ಅನುಭವಗಳಾವು?

- ಸಾಹಿತ್ಯದ ಆಶಯವೇ ಜನಾಂದೋಲನದ ಆಶಯವಾಗಿರುವುದರಿಂದ, ನಾನು ಜನಪರ ಹೋರಾಟದ ಸಂಘಟನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ಜನತೆಗಾಗಿ ಮೀಡಿಯದ ಸಾಹಿತ್ಯ ಅಂತಿಮವಾಗಿ ‘ಕಲೆಗಾಗಿ ಕಲೆ’ ಎನ್ನುವ ಕೂಪಕ್ಕೆ ಬೀಳುತ್ತದೆ. ನಾನು ದಲಿತ, ರೈತ ಮತ್ತು ಜನವಿಜ್ಞಾನ ಚಳವಳಿಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡ ವನು. ಈ ಹೋರಾಟಗಳಲ್ಲಿ ನನ್ನ ಮನಕಲಕಿದ ಕೆಲವು ಘಟನೆಗಳು ನೆನಪಾಗುತ್ತಿವೆ:

ಮೊದಲನೆಯದು: ಅರಸೀಕೆರೆ ತಾಲೂಕಿನ ಬಂದೂರಿನ ವೆಂಕಟಾ ಬೋವಿ ಕೊಲೆ ಪ್ರಕರಣ. ಈ ಕೊಲೆಯನ್ನು ವಿರೋಧಿಸಿ ಬಂದೂರಿನಿಂದ ಅರಸೀಕೆರೆಯವರೆಗೆ ಸುಮಾರು 30 ಕಿಮೀವರೆಗೆ ಜಾಥಾ ಸಂಘಟಿಸಿದ್ದೆವು. ಆದರೂ ಕೊಲೆಯಾದ ವೆಂಕಟಾ ಬೋವಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಾಗಲಿಲ್ಲ. ಈ ವೈಫಲ್ಯವೇ ಜಿಲ್ಲೆಯಲ್ಲಿ ವಿಜ್ಞಾನ ಚಳವಳಿ ಹುಟ್ಟಲು ಕಾರಣವಾಯಿತು. ‘ಕರ್ನಾಟಕ ವಿಜ್ಞಾನ ಪರಿಷತ್ತಿ’ನ ಶಾಖೆಯನ್ನು ಅರಸೀಕೆರೆಯಲ್ಲಿ ತೆರೆದು ಕಾರ್ಯೋನ್ಮುಖರಾದೆವು. ನಂತರ ಇದು ‘ಜ್ಞಾನ ವಿಜ್ಞಾನ ಜಾಥಾ’ಕ್ಕೆ ಬುನಾದಿಯಾಯಿತು. ತುಮಕೂರಿನ ಸಿ. ಯತಿರಾಜು ಅವರ ಮಾರ್ಗದರ್ಶನದಲ್ಲಿ ಜ.ಹೋ. ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ 45 ದಿನಗಳ ಅವಧಿಯಲ್ಲಿ ಹಾಸನ ಜಿಲ್ಲೆಯ 188 ಹಳ್ಳಿಗಳಲ್ಲಿ ಜಾಥಾ ನಡೆಸಿದೆವು.

ಈ ವಿಜ್ಞಾನ ಜಾಥಾ ನಡೆಯುತ್ತಿದ್ದ ನಡುವೆಯೇ ನಮ್ಮ ಮನಕಲಕುವ ಇನ್ನೊಂದು ದಾರುಣ ಘಟನೆ ನಡೆದುಹೋಯಿತು. ಚನ್ನರಾಯಪಟ್ಟಣದ ಹಳ್ಳಿಯೊಂದರಲ್ಲಿ ಹಾವು ಕಚ್ಚಿದ ಬಾಲಕನಿಗೆ ನಾವು ಪ್ರಥಮ ಚಿಕಿತ್ಸೆಯನ್ನು ನೀಡುತ್ತೇವೆಂದು ಗೋಗರೆ ದರೂ ಹಳ್ಳಿಯವರು ಒಪ್ಪದೆ, ಯಾವುದೋ ‘ಮಂತ್ರ’ದ ನೀರಿನಿಂದ ಅವನನ್ನು ಬದುಕಿಸುತ್ತೇವೆಂದು ಹೋದರು. ಮಂತ್ರದ ನೀರನ್ನು ಕುಡಿಸಿದರೂ ಆ ಹುಡುಗ ಬದುಕುಳಿಯಲಿಲ್ಲ. ನಮ್ಮ ಕಣ್ಣ ಮುಂದೆಯೇ ಹುಡುಗ ಶವವಾದ.

 ಕರ್ನಾಟಕದ ರೈತ ಹೋರಾಟ ಹೊರದೇಶಗಳಲ್ಲೂ ಕೇಳಿ ಬಂದಾಗ ನೀವೂ ಅದರಲ್ಲಿ ಭಾಗಿಯಾದ ಬಗ್ಗೆ ಹೇಳಿ?

  - ನಾನು ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರೊಂದಿಗೆ ಒಂದು ತಿಂಗಳುವಿದೇಶ ಪ್ರವಾಸ ಮಾಡುವಾಗ ಡಬ್ಲ್ಯೂಟಿಒ, ಮಾನ್ಸೆಂಟೊ, ಬಾಯರ್ಸ್‌, ಕೆಂಟಕಿ ಚಿಕನ್ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳ ಮುಂದೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದೆವು. ಅದರಲ್ಲಿ ಮುಖ್ಯವಾಗಿ ‘ನಗುವ ಚಳವಳಿ’ಯನ್ನು ಹೊಸದಾಗಿ ನಂಜುಂಡಸ್ವಾಮಿ ಅವರು ಪರಿಚಯಿಸಿದರು. ಹೀಗೆ ವಿದೇಶದಲ್ಲಿಯೂ ಕೂಡ ಯುವಶಕ್ತಿಯನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಸಿದ್ದು ನಂಜುಂಡಸ್ವಾಮಿ. ಇಂತಹ ಘಟನೆಗಳು ನನ್ನ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಇದರಿಂದಾಗಿ ಚಳವಳಿಗಳಲ್ಲಿ ಇನ್ನಷ್ಟು ತೀವ್ರವಾಗಿ ತೊಡಗಿಸಿಕೊಂಡೆ.

 ಪರಿಸರ ಕುರಿತ ಜಾಗೃತಿಯಲ್ಲಿ ನೀವು ಹಮ್ಮಿಕೊಂಡಿದ್ದ ಕಾರ್ಯಚಟುವಟಿಕೆಗಳೇನು?

- ಮೂಲತಃ ನಾನೊಬ್ಬ ಸಾಹಿತ್ಯ, ಕಲೆ, ರಂಗಭೂಮಿಯ ನಿಷ್ಠಾವಂತ ವಿದ್ಯಾರ್ಥಿ. ಹೀಗಾಗಿ ಕುವೆಂಪು, ತೇಜಸ್ವಿ, ಕಾರಂತರನ್ನು ಕುರಿತ ಓದಿನಲ್ಲಿ ನಾನು ಕಂಡ ಪರಿಸರದ ಚಿತ್ರಗಳು, ಜೊತೆಗೆ ನಮ್ಮ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಆಶಯವೂ ಕೂಡ ನನ್ನನ್ನು ಆ ಕ್ಷೇತ್ರಕ್ಕೆ ಸೆಳೆಯಿತು.

ನಾನು ವಿಜ್ಞಾನ ಪರಿಷತ್ತಿನ ಸಕ್ರಿಯ ಕಾರ್ಯಕರ್ತನಾಗಿದ್ದರಿಂದ ಸಹಜವಾಗಿಯೇ ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಜನತೆಗಾಗಿ ಪರಿಸರ ಕುರಿತು ಉಪನ್ಯಾಸ, ಪರಿಸರ ಅಧ್ಯಯನ ಶಿಬಿರ, ಚಾರಣ, ಚಿತ್ರಕಲೆ ವಿಶೇಷವಾಗಿ ನಮ್ಮ ಸುತ್ತಲಿನ ಮರಗಿಡಗಳನ್ನು ಗುರುತಿಸುವುದು ಇಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದೆವು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಮುತ್ತೋಡಿ ಭದ್ರಾ ಅರಣ್ಯ, ಮುಳ್ಳಯ್ಯನಗಿರಿ, ಸಂಪಾಜೆ, ಬಿಸಿಲೆ ಅರಣ್ಯ, ನರಸಿಂಹ ಸ್ವಾಮಿ ಪರ್ವತ, ಆಗುಂಬೆ ಹೀಗೆ ಅರಣ್ಯ ಪ್ರದೇಶಗಳಿಗೆ ಕರೆದೊಯ್ಯತ್ತಿದ್ದೆ. ಅಲ್ಲಿ ಪಕ್ಷಿ ವೀಕ್ಷಣೆ, ಕಾಡಿನ ಪರಿಚಯ, ಗಿಡಗಳನ್ನು ಎಂಬೋಸ್ ಮಾಡುವ ಕಲೆ ಇವುಗಳನ್ನು ತಿಳಿಸುತ್ತಲೇ ನಾನೂ ಕೂಡ ಕಲಿಯತೊಡಗಿದೆ. ಅರಸೀಕೆರೆಯ ನಾಗಪುರಿ ಅರಣ್ಯ ಪ್ರದೇಶದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ಯ ಅಂಗವಾಗಿ ವಿದ್ಯಾರ್ಥಿಗಳಿಂದ ಬೀಜಪ್ರಸರಣ ಮಾಡಿಸಿದೆವು. ಇಂದಿಗೂ ಅದೊಂದು ದಾಖಲೆಯಾಗಿ ಉಳಿದಿದೆ.

ಈ ಅವಧಿಯಲ್ಲಿ ನಾನು ಬೆಳೆಸಿದ ಆಕರ್ಷಕ ವನಗಳೆಂದರೆ, ಬಾಳೇನಹಳ್ಳಿ ಕಾಲೇಜಿನ ಆವರಣದಲ್ಲಿ ‘ಕನಕ ಶ್ರೀ’ ಸಸ್ಯವನ ಹಾಗೂ ನಾಗತಿಹಳ್ಳಿಯಲ್ಲಿ ‘ಸಿರಿಗೆರೆ ಶಿವಕುಮಾರ ಸ್ವಾಮಿ ಸಸ್ಯವನ’. ಈ ನನ್ನ ಕಾರ್ಯಚಟುವಟಿಕೆಗಳ ಶಿಖರಪ್ರಾಯ ಎಂದರೆ, 1996ರಲ್ಲಿ ಸಾಲುಮರದ ತಿಮ್ಮಕ್ಕನವರನ್ನು ಅರಸೀಕೆರೆಗೆ ಕರೆಸಿ ಅವರನ್ನು ಗೌರವಿಸಿದ್ದು. ಈ ಹೆಮ್ಮೆ ನನ್ನಲ್ಲಿ ಈಗಲೂ ಹಸಿರಾಗಿದೆ. ಹಾಗೆಯೇ ‘ಜಲಗಾಂಧಿ’ ಎಂದೇ ಭಾರತದಲ್ಲಿ ಹೆಸರಾಗಿರುವ ರಾಜಾಸ್ಥಾನದ ರಾಜೇಂದ್ರಸಿಂಗ್ ಅವರು ಅರಸೀಕೆರೆಗೆ ಬಂದಿದ್ದಾಗ ಅವರು ನೆಟ್ಟ ಒಂದು ಸಸಿ ಇಂದು ಹೆಮ್ಮರವಾಗಿ ಬೆಳೆದು ನಮ್ಮ ಊರಿನ ಮನಸ್ಸನ್ನು ಪರಿಶುದ್ಧ ವಾಗಿಟ್ಟಿದೆ.

 ನೀವು ಕಳೆದ ಮುವತ್ತು ವರ್ಷಗಳಿಂದ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ವಿದ್ಯಾರ್ಥಿಗಳೊಂದಿಗಿನ ನಿಮ್ಮ ಸ್ಮರಣೀಯ ಅನುಭವಗಳೇನು?

- ನಾನು ಪಾಠ ಹೇಳುತ್ತಾ, ಅವರಿಂದಲೂ ಕಲಿತವನು. ವಿದ್ಯಾರ್ಥಿಗಳ ಕಷ್ಟ- ಸುಖಗಳನ್ನೂ ವಿಚಾರಿಸಿಕೊಂಡು, ಸಾಧ್ಯವಾದರೆ ಅವರ ಪೋಷಕರನ್ನೂ ಭೇಟಿ ಮಾಡುವ ಪ್ರವೃತ್ತಿಯನ್ನು ಇಂದಿಗೂ ಮುಂದುವರಿಸಿದ್ದೇನೆ. ನಾನು ನನ್ನ 31 ವರ್ಷದ ಸೇವಾ ಅವಧಿಯನ್ನು ಬಹುಪಾಲು ಗ್ರಾಮೀಣ ಭಾಗಗಳಲ್ಲೇ ಕಳೆದಿದ್ದೇನೆ. ಈಗಲೂ ನಾನು ಕಾರ್ಯನಿರ್ವಹಿಸುತ್ತಿರುವುದು ಅರಸೀಕೆರೆಗೆ ಸಮೀಪದ ಬಾಳೇನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ. ನಾನು ನಡೆಸುತ್ತಿರುವ ‘ಪವಾಡ ರಹಸ್ಯ ಬಯಲು’ ಕಾರ್ಯಕ್ರಮಕ್ಕೆ ಸಹಾಯಕರ ನ್ನಾಗಿ ನನ್ನ ವಿದ್ಯಾರ್ಥಿ ಮಿತ್ರರನ್ನೇ ಕರೆದುಕೊಂಡು ಹೋಗುತ್ತೇನೆ. ಈ ಮೂಲಕ ಅವರಲ್ಲೂ ಮೂಢನಂಬಿಕೆ ವಿರೋಧಿ ಭಾವನೆ, ಸಾಮಾಜಿಕ ಬದ್ಧತೆ ಆಳವಾಗಿ ಬೇರೂ ರುತ್ತದೆ ಎಂಬ ನಂಬಿಕೆ ನನಗಿದೆ. ಹಾಗೆಯೆ ರಂಗಭೂಮಿ ಚಟುವಟಿಕೆಗಳಲ್ಲಿ ಸಂಪೂ ರ್ಣವಾಗಿ ನನ್ನ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ನೆರವಾಗಿದ್ದೇನೆ. ವಿದ್ಯಾರ್ಥಿಗ ಳೊಂದಿಗೆ ಹಾಗೂ ನನ್ನ ಸಹೊದ್ಯೋಗಿ ಮಿತ್ರರೊಂದಿಗೆ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉಲ್ಲಾಸದ ಕ್ಷಣಗಳೇ ಇಂದಿಗೂ ನನಗೆ ಚೈತನ್ಯ ನೀಡುತ್ತಿವೆ.

ಸಾಮಾಜಿಕ ಹೋರಾಟದ ನಡುವೆಯೂ ನೀವು ರಂಗಭೂಮಿಯಲ್ಲಿ ಆಸಕ್ತಿಯನ್ನು ಹೇಗೆ ಬೆಳೆಸಿಕೊಂಡಿರಿ?

- ನಾನು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನನ್ನ ಹಟ್ಟಿಯೇ ನನಗೆ ಮೂಲ ಪ್ರೇರಣೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಮ್ಮ ಹಟ್ಟಿಯಲ್ಲಿ ಕುಡಿದ ಮತ್ತಿನಲ್ಲಿ ನನ್ನ ಮಾವ ನನಗೆ ಲಂಗ, ಜಾಕೀಟು ತೊಡಿಸಿ ಮನೆ ಮನೆಗಳ ಮುಂದೆ ಕರೆದುಕೊಂಡು ಹೋಗಿ ಡ್ಯಾನ್ಸ್ ಮಾಡಿಸಿ ಅವರಿಂದ ಹಣವನ್ನು ವಸೂಲು ಮಾಡುತ್ತಿದ್ದ. ನಾನೂ ಚೆನ್ನಾಗಿಯೇ ನೃತ್ಯ ಮಾಡುತ್ತಿದ್ದೆ ಎನಿಸುತ್ತದೆ, ನನ್ನ ನೃತ್ಯ ನೋಡಿದವರೆಲ್ಲಾ ಹಣ ಕೊಡುತ್ತಿದ್ದರು. ಇಲ್ಲಿಂದಲೇ ನನ್ನ ರಂಗಭೂಮಿಯ ಪಯಣ ಆರಂಭವಾಯಿತು ಎನ್ನಬಹುದು!

ನಾನು ಪ್ರೌಢಶಾಲೆಯಲ್ಲಿದ್ದಾಗ ಸ್ಪರ್ಧೆಯೊಂದರಲ್ಲಿ ಉರಿಮಾರಮ್ಮನ ವೇಷ ಧರಿಸಿ ಎಲ್ಲರ ಮೆಚ್ಚುಗೆ ಗಳಿಸಿದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿನೀಡುವ ಕೆನರಾ ಬ್ಯಾಂಕಿನವರ ಒಂದು ಯೋಜನೆಯಲ್ಲಿ ನಾನು ಆಯ್ಕೆಯಾಗಿ, ತರಬೇ ತಿಗೆಂದು 15 ದಿನಗಳ ಕಾಲ ಬೆಂಗಳೂರಿನಲ್ಲಿದ್ದೆ. ನಾನು ಬೆಂಗಳೂರನ್ನು ನೋಡಿದ್ದು ಅದೇ ಮೊದಲು. ನಮಗೆ ಅಲ್ಲಿನ ನ್ಯಾಶನಲ್ ಕಾಲೇಜಿನಲ್ಲಿ ಉಳಿದುಕೊಳ್ಳಲು ಏರ್ಪಾಟು ಮಾಡಿದ್ದರು. ಅಲ್ಲಿಯೇ ಮೊದಲ ಬಾರಿಗೆ ಡಾ. ಎಚ್ ನರಸಿಂಹಯ್ಯ ನವರನ್ನು ನಾನು ನೋಡಿದ್ದು. ನಂತರ ‘ಪ್ರತಿಮಾ ನಾಟಕ ರಂಗ’ದ ಎಲ್ ಕೃಷ್ಣಪ್ಪ ನವರು ಸಂಘಟಿಸಿದ, ಗೋಪಾಲಕೃಷ್ಣ ನಾಯರಿ ನಿರ್ದೇಶನದಲ್ಲಿ 45 ದಿನಗಳ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡೆ. ಈ ಅನುಭವಗಳು ನನಗೆ ರಂಗಭೂಮಿಯ ಬಗ್ಗೆ, ಸಂಘಟನೆಯ ಬಗ್ಗೆ ಅರಿವು ಮೂಡಿಸಿದವು.

ನಾನು ಅರಸೀಕೆರೆಯಲ್ಲಿ ನನ್ನ ವೃತ್ತಿಜೀವನವನ್ನು ಆರಂಭಿಸಿದಾಗ, ಗೆಳೆಯರಾದ ಸಂಗಯ್ಯ, ಸೋಮಣ್ಣ, ಶ್ರೀನಿವಾಸ ನಟೇಕರ್, ಎನ್ .ಡಿ. ರಾಮಸ್ವಾಮಿ, ಎಚ್ ಆರ್ ಕುಮಾರಸ್ವಾಮಿ ಇವರೊಂದಿಗೆ ರಂಗಚಟುವಟಿಕೆಯನ್ನು ಅರಸೀಕೆರೆಯಲ್ಲಿ ಆರಂಭಿಸಿದೆವು. ‘ಕತ್ತಲ ದಾರಿ ದೂರ’, ‘ಒಂದು ಪಯಣದ ಕಥೆ’ ನಾಟಕಗಳನ್ನು ಇಲ್ಲಿ ಅಭಿನಯಿಸಿದೆವು. ಜೊತೆಗೆ ಹೆಗ್ಗೋಡಿನ ‘ನೀನಾಸಂ’ ತಂಡದವರನ್ನು ಕರೆಸಿ ಅವರಿಂದ ಅನೇಕ ನಾಟಕಗಳನ್ನು ಪ್ರದರ್ಶಿಸಿದೆವು.

ನಂತರ ‘ಬೀದಿ ನಾಟಕ’ಗಳೆಡೆಗೆ ನನ್ನ ಆಸಕ್ತಿ ತಿರುಗಿತು. ನಮ್ಮ ಎಲ್ಲ ಜಾಥಾಗಳಲ್ಲಿ ಬೀದಿ ನಾಟಕಗಳ ಮೂಲಕ ಸಾಕ್ಷರತೆ, ಪರಿಸರ ಜಾಗೃತಿ, ಮೂಢನಂಬಿಕೆ ವಿರೋಧಿ ವಿಚಾರಗಳು, ಕೋಮು ಸೌಹಾರ್ದದ ಮಹತ್ವ, ಆರೋಗ್ಯದ ಬಗೆಗೆ ಜಾಗೃತಿ ಮೂಡಿಸುವಂತಹ ನಾಟಕಗಳನ್ನು ಪ್ರದರ್ಶಿಸಿದೆವು. ಈ ಸಂದರ್ಭದಲ್ಲಿ ಹುಟ್ಟಿಕೊಂಡ ಅನೇಕ ಕಲಾವಿದರು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಉದಾಹರಣೆಗೆ: ಗ್ಯಾರಂಟಿ ರಾಮಣ್ಣ, ಯೋಗಾನಂದ್, ಸಣ್ಣೇಗೌಡ, ಶಾಡ್ರಾಕ್, ಅಪ್ಪಾಜಿಗೌಡ ಹಾಗೂ ಇಡೀ ದೊಡ್ಡಬೀಕನಹಳ್ಳಿಯ ಕಲಾವಿದರು, ಇನ್ನೂ ಅನೇಕ ಜನ ನಿರ್ದೇಶಕರು, ಸಂಘಟಕರು, ಗಾಯಕರು ಸೃಷ್ಟಿಯಾದರು. ಇದೆಲ್ಲ ನನಗೆ ಸಂತೋಷ ಕೊಟ್ಟಿದೆ.

ನಮ್ಮ ಜಾಥಾ ಕಾರ್ಯಕ್ರಮಕ್ಕೆ ಬ್ಯಾನರ್ ಬರೆದುಕೊಟ್ಟವರು ಅಂತರ್‌ರಾಷ್ಟ್ರೀಯ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು. ಇಂದು ಇವರನ್ನೆಲ್ಲಾ ನೆನೆಯುವಾಗ ನನ್ನ ಕಣ್ಣುಗಳು ತೇವಗೊಳ್ಳುತ್ತವೆ.

Writer - ಸಂದರ್ಶನ: ಮಮತಾ ಅರಸೀಕೆರೆ

contributor

Editor - ಸಂದರ್ಶನ: ಮಮತಾ ಅರಸೀಕೆರೆ

contributor

Similar News