ಬ್ರೆಝಿಲ್‌ಗೆ 16 ವರ್ಷಗಳ ವಿಶ್ವಕಪ್ ಕನಸು ಈಡೇರಿಸಿಕೊಳ್ಳುವ ತವಕ

Update: 2018-06-09 18:28 GMT

ಮಾಸ್ಕೊ, ಜೂ.9: ವಿಶ್ವಕಪ್ ಎತ್ತಿ ಹಿಡಿಯುವ ಅದಮ್ಯ ಬಯಕೆ ಹೊಂದಿರುವ ತಂಡಗಳ ಪೈಕಿ ಬ್ರೆಝಿಲ್ ಮುಂಚೂಣಿಯಲ್ಲಿದೆ. ಬ್ರೆಝಿಲ್ ವಿಶ್ವಕಪ್‌ನ್ನು ಜಯಿಸದೇ 16 ವರ್ಷ ಕಳೆದಿದೆ. 2014ರಲ್ಲಿ ತವರು ನೆಲದಲ್ಲಿ ನಡೆದ ವಿಶ್ವಕಪ್‌ನಲ್ಲಿ ಜರ್ಮನಿ ವಿರುದ್ಧ ಸೆಮಿ ಫೈನಲ್‌ನಲ್ಲಿ 1-7 ಅಂತರದಿಂದ ಸೋಲನುಭವಿಸಿದ್ದ ಬ್ರೆಝಿಲ್ ಈ ಸೋಲಿನಿಂದ ಕುಗ್ಗದೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ.

  ಬ್ರೆಝಿಲ್ ಈ ವರ್ಷದ ವಿಶ್ವಕಪ್‌ನಲ್ಲಿ ‘ಇ’ ಗುಂಪಿನಲ್ಲಿ ಸರ್ಬಿಯ, ಸ್ವಿಟ್ಝರ್ಲೆಂಡ್ ಹಾಗೂ ಕೋಸ್ಟರಿಕ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡ ಸಾಕಷ್ಟು ಬಲಿಷ್ಠವಾಗಿದೆ. ನೇಮರ್, ಫರ್ಮಿನ್ಹೊ ಹಾಗೂ ಗ್ಯಾಬ್ರಿಯೆಲ್ ಜೀಸಸ್ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ವಿಶ್ವಕಪ್ ಅರ್ಹತಾ ಸುತ್ತಿನ 18 ಪಂದ್ಯಗಳಲ್ಲಿ 41 ಗೋಲುಗಳನ್ನು ಬಾರಿಸಿರುವ ಬ್ರೆಝಿಲ್ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಉರುಗ್ವೆಗಿಂತ 10 ಅಂಕ ಮುಂದಿತ್ತು. ಲ್ಯಾಟಿನ್ ಅಮೆರಿಕನ್‌ನ ದೈತ್ಯ ತಂಡ ಬ್ರೆಝಿಲ್ 2018ರ ವಿಶ್ವಕಪ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿತ್ತು. ಬ್ರೆಝಿಲ್ ಎಲ್ಲ ಆವೃತ್ತಿಯ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. 1958, 1962, 1970, 1994 ಹಾಗೂ 2002ರಲ್ಲಿ ಚಾಂಪಿಯನ್ ಆಗಿತ್ತು.

‘ಇ’ ಗುಂಪಿನಲ್ಲಿರುವ ಕೋಸ್ಟ್ಟರಿಕ ತಂಡ ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಇಟಲಿ ಹಾಗೂ ಉರುಗ್ವೆ ತಂಡವನ್ನು ಮಣಿಸಿ ಗಮನ ಸೆಳೆದಿತ್ತು. ಈ ಬಾರಿ ಗೋಲ್‌ಕೀಪರ್ ಕೀಲೊರ್ ನವಾಸ್‌ರನ್ನು ಹೆಚ್ಚು ಅವಲಂಭಿಸಿದೆ.

4 ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಕೋಸ್ಟರಿಕ 2014ರಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದು ಶ್ರೇಷ್ಠ ಸಾಧನೆಯಾಗಿದೆ.

ಸರ್ಬಿಯ ತಂಡದ ಮೇಲೆ ಭಾರೀ ಒತ್ತಡವಿದ್ದು, ಸರ್ಬಿಯ ‘ಇ’ ಗುಂಪಿನಲ್ಲಿರುವ ಕೆಳ ರ್ಯಾಂಕಿನ ತಂಡವಾಗಿದೆ. ಈ ವರೆಗೆ 11 ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿರುವ ಸರ್ಬಿಯ 1930 ಹಾಗೂ 1962ರ ವಿಶ್ವಕಪ್‌ನಲ್ಲಿ ಯುಗೊಸ್ಲೋವಿಯದ ಭಾಗವಾಗಿ ಸೆಮಿ ಫೈನಲ್‌ಗೆ ತಲುಪಿತ್ತು. ಸ್ವಿಟ್ಝರ್ಲೆಂಡ್ ತಂಡ ಪ್ರಸ್ತುತ ಫಿಫಾ ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದ್ದರೂ ವಿಶ್ವಕಪ್‌ನಲ್ಲಿ ಅವಕಾಶ ಕ್ಷೀಣವಾ ಗಿದೆ. ಪ್ಲೇ-ಆಫ್‌ನಲ್ಲಿ ಉತ್ತರ ಐರ್ಲೆಂಡ್ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ಸ್ವಿಟ್ಝರ್ಲೆಂಡ್ ತಂಡದಲ್ಲಿ ಉತ್ತಮ ಸ್ಟ್ರೈಕರ್‌ಗಳ ಕೊರತೆಯಿದೆ.

ಸ್ವಿಟ್ಝರ್ಲೆಂಡ್ ತಂಡ 10 ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದು 1934, 1938, 1954ರಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News