ಈ ವಿಶಿಷ್ಟ ಇಫ್ತಾರ್ ಕೂಟದ ಬಗ್ಗೆ ನೀವು ಓದಲೇಬೇಕು

Update: 2018-06-10 04:30 GMT

ಹೊಸದಿಲ್ಲಿ, ಜೂ.10: ಕಳೆದ ರವಿವಾರ ದಿಲ್ಲಿಯ ಮಹಿಳೆಯರ ಗುಂಪೊಂದು ತಮ್ಮ ಮನೆಯನ್ನು ಅಂತರ್ ಧರ್ಮೀಯ ಅತಿಥಿಗಳ ಇಫ್ತಾರ್‌ಗಾಗಿ ತೆರೆಯಿತು. ಅತಿಥಿಗಳಲ್ಲಿ ಬಹುತೇಕ ಮಂದಿ ಇದುವರೆಗೂ ಇಫ್ತಾರ್‌ನಲ್ಲಿ ಭಾಗವಹಿಸಿದವರಲ್ಲ. ಇವರೆಲ್ಲರನ್ನೂ ಮೊಗ್ರಾ ಹೂವು ಹಾಗೂ ಇತ್ತಾರ್‌ನೊಂದಿಗೆ ಸ್ವಾಗತಿಸಲಾಯಿತು. ಬಳಿಕ ಖರ್ಜೂರ, ನಿಂಬೆ- ಸೌತೆಕಾಯಿ ರೂಹ್ ಅಫ್ಜಾ ಮತ್ತು ಕೀಮಾ ಸಮೋಸಾದೊಂದಿಗೆ ಉಪಚರಿಸಲಾಯಿತು. ಆದರೆ ಇದು ಕೇವಲ ಇಫ್ತಾರ್ ಕೂಟ ಆಗಿರಲಿಲ್ಲ!

ರಮಝಾನ್ ಮಹತ್ವದ ಬಗ್ಗೆ ಕಿರು ಉಪನ್ಯಾಸ ನೀಡಿ, ಅತಿಥಿಗಳು ತಮ್ಮ ಜೀವನದಲ್ಲಿ 'ಇತರ' ಸಮುದಾಯದ ಬಗ್ಗೆ ಏನು ಕೇಳಿದ್ದಾರೆ ಎಂಬ ಟಿಪ್ಪಣಿ ಬರೆಯುವಂತೆ ಕೋರಲಾಯಿತು. ಈ ಬಗ್ಗೆ ಸ್ವಾರಸ್ಯಕರ ಸಂವಾದ ನಡೆಯಿತು. ತಲೆಮಾರುಗಳಿಂದ ಬೆಳೆದುಬಂದ ಪೂರ್ವಾಗ್ರಹ ರಾತ್ರೋರಾತ್ರಿ ಮಾಯವಾಗದು. ಆದರೆ ಈ ವಿನೂತನ ಪ್ರಯತ್ನ ಅಂತರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಹೆಜ್ಜೆ ಎಂದು ಅತಿಥೇಯರಲ್ಲಿ ಒಬ್ಬರಾದ ಸಾಹಿತಿ ನಾಝಿಯಾ ಎರೂಮ್ ಹೇಳುತ್ತಾರೆ.

"ರೋಝಾ ಎಂದರೇನು ಎಂಬ ಪ್ರಶ್ನೆಗೆ ನಾವು ಉತ್ತರಗಳನ್ನು ಪಡೆದೆವು. ಇದು ಕೇವಲ ಹಗಲಿನ ಉಪವಾಸ ಮಾತ್ರವಲ್ಲ; ಇಚ್ಛಾಶಕ್ತಿ, ಸ್ವಯಂನಿಯಂತ್ರಣ ಹಾಗೂ ಇತರರ ಬಗೆಗಿನ ಕ್ರಿಯೆಗಳ ನಿಯಂತ್ರಣ ಕೂಡಾ ಹೌದು'' ಎಂದು ವಿದ್ಯಾರ್ಥಿನಿ ಹಾಗೂ ಅತಿಥಿ ತಾನ್ಯಾ ಕತ್ರುಗೋಡ್ ಉತ್ತರಿಸಿದ್ದಾರೆ

ಇಂಥ ವಿಶಿಷ್ಟ ಇಫ್ತಾರ್ ಕಳೆದ ವರ್ಷ ಆರಂಭವಾಗಿದೆ. ಆಗ ಎರೂಮ್, "ಮದರಿಂಗ್ ಎ ಮುಸ್ಲಿಂ" ಎಂಬ ಪುಸ್ತಕ ಬರೆಯುತ್ತಿದ್ದರು. ಕೇವಲ ಶೇಕಡ 33ರಷ್ಟು ಹಿಂದೂಗಳು ಮಾತ್ರ ಮುಸ್ಲಿಮರನ್ನು ಆತ್ಮೀಯ ಸ್ನೇಹಿತ ಎಂದು ಪರಿಗಣಿಸುತ್ತಾರೆ ಎಂಬ ಅಂಶ ಸಿಎಸ್‌ಡಿಎಸ್ ಅಧ್ಯಯನದಿಂದ ತಿಳಿದುಬಂದ ಬಳಿಕ ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದರು. ಇದುವರೆಗೂ ಇಫ್ತಾರ್‌ನಲ್ಲಿ ಪಾಲ್ಗೊಳ್ಳದವರನ್ನು ಫೇಸ್‌ಬುಕ್ ಪೋಸ್ಟ್‌ ಮೂಲಕ ಆಹ್ವಾನಿಸಿದಾಗ, ಅದ್ಭುತ ಸ್ಪಂದನೆ ಸಿಕ್ಕಿತ್ತು. 12 ಮಂದಿ ಇದನ್ನು ಆಯೋಜಿಸಲು ನೆರವಾಗಿದ್ದರು. ಬಹುತೇಕ ಎಲ್ಲರೂ ಅಪರಿಚಿತರು.

"ಇದರ ಹಿಂದಿನ ಯೋಚನೆ ನಮ್ಮ ಮನೆಗಳನ್ನು ಅತಿಥಿಗಳಿಗಾಗಿ ತೆರೆಯುವುದು ಹಾಗೂ ಸಾಂಪ್ರದಾಯಿಕ ಖಾದ್ಯಗಳನ್ನು ವಿಶೇಷ ಪ್ರೀತಿಯಿಂದ ಬಡಿಸುವುದು" ಎಂದು ಎರೂಮ್ ಹೇಳುತ್ತಾರೆ. 90ಕ್ಕೂ ಹೆಚ್ಚು ಮಂದಿ ಮೊದಲ ವರ್ಷ ಭಾಗವಹಿಸಿದ್ದರು. ಇದರಿಂದ ಉತ್ತೇಜಿತರಾಗಿ ಮುಂಬೈ, ಗುವಾಹತಿ, ಭೋಪಾಲ್, ಪುಣೆ ಮತ್ತು ಹೈದ್ರಾಬಾದ್‌ಗಳಲ್ಲೂ ಇಂಥ ಕೂಟ ಈ ವರ್ಷ ಆಯೋಜಿಸಲಾಗಿದೆ.

ದೆಹಲಿಯ ನಿವಾಸಿ ಯಶ್ಪಾಲ್ ಸಕ್ಸೇನಾ ಇಫ್ತಾರ್ ಆಯೋಜಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಇವರ ಮಗ ಅಂಕಿತ್ ಕಳೆದ ವರ್ಷ ಮುಸ್ಲಿಂ ಪ್ರಿಯತಮೆಯಿಂದ ಹತ್ಯೆಯಾಗಿದ್ದಾನೆ ಎಂದು ಆಪಾದಿಸಲಾಗಿತ್ತು. ಸಕ್ಸೇನಾ ಹಾಗೂ ಎರೂಮ್ ಅವರಂಥ ಜನಸಾಮಾನ್ಯರು ಇಂಥ ಇಫ್ತಾರ್ ಏರ್ಪಡಿಸುತ್ತಿರುವುದು ಸಾಮರಸ್ಯದ ಪ್ರತೀಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News