×
Ad

ಭೀಕರ ಚಳಿಗೆ ಉತ್ತರ ಭಾರತ ತತ್ತರ : ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತ

Update: 2025-12-22 07:25 IST

PC | timesofindia

ಹೊಸದಿಲ್ಲಿ: ಶೀತಗಾಳಿಯ ಹೊಡೆತಕ್ಕೆ ಇಡೀ ಉತ್ತರ ಭಾರತ ನಲುಗಿದೆ. ತುತ್ತತುದಿಯ ಜಮ್ಮು ಕಾಶ್ಮೀರ, ಲಡಾಕ್ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ಬಯಲು ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 24 ರಿಂದ 48 ಗಂಟೆ ಅವಧಿಯಲ್ಲಿ ಉತ್ತರ ಭಾರತದಲ್ಲಿ ಹಿಮಪಾತ, ದಟ್ಟ ಮಂಜು ಮತ್ತು ಮಳೆ ಮುಂದುವರಿಯಲಿದೆ. ಆದ್ದರಿಂದ ಚಳಿಯ ಹೊಡೆತ ಮುಂದುವರಿಯುವ ಸಾಧ್ಯತೆ ಇದೆ. ಜಮ್ಮು ಕಾಶ್ಮೀರದ ಎಲ್ಲೆಡೆ ವ್ಯಾಪಕ ಹಿಮಪಾತವಾಗುತ್ತಿದ್ದು, ಗುಲ್‍ಮಾರ್ಗ್‍ನಲ್ಲಿ ಎರಡು ಇಂಚು ದಪ್ಪಕ್ಕೆ ಮಂಜಿನ ಪದರ ನಿರ್ಮಾಣವಾಗಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗುವ ಏಕೈಕ ಪ್ರದೇಶದಲ್ಲಿ ಇದೀಗ ಉಷ್ಣಾಂಶ ಮೈನಸ್‌ 1.5 ಡಿಗ್ರಿ ಸೆಲ್ಷಿಯಸ್‍ಗೆ ಇಳಿದಿದೆ. ಸೂನಾಮಾರ್ಗ್‍ನಲ್ಲಿ ಮುಂಜಾನೆ ಆರಂಭವಾದ ಹಿಮಪಾತ ಮಧ್ಯಾಹ್ನದವರೆಗೂ ಮುಂದುವರಿದಿದೆ.

ವ್ಯಾಪಕ ಹಿಮಪಾತದ ಹೊರತಾಗಿಯೂ ಶ್ರೀನಗರದಲ್ಲಿ ಈ ಋತುವಿನ ಅತ್ಯಂತ ಬೆಚ್ಚಗಿನ ರಾತ್ರಿ ದಾಖಲಾಗಿದ್ದು, ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಷಿಯಸ್ ಇತ್ತು. ಇದು ವಾಡಿಕೆಯ ತಾಪಮಾನಕ್ಕಿಂತ ಆರು ಡಿಗ್ರಿ ಅಧಿಕ. ಪ್ರತಿಕೂಲ ಹವಾಮಾನದ ಸ್ಥಿತಿಯಿಂದಾಗಿ 11 ವಿಮಾನಗಳು ಶ್ರೀನಗರ ವಿಮಾನ ನಿಲ್ದಾಣದಿಂದ ಸಂಚಾರ ರದ್ದುಪಡಿಸಿವೆ.

ಹಿಮಾಚಲ ಪ್ರದೇಶದ ಲಹಲ್-ಸ್ಪಿತಿ ಮತ್ತು ಚಂಬಾಜಿಲ್ಲೆಗಳಲ್ಲಿ ಭಾರಿ ಶೀತಗಾಳಿಯ ಪರಿಸ್ಥಿತಿ ಇದೆ. ಶಿಂಕು ಲಾಮ ರೋಹ್ಟಗ್ ಪಾಸ್ ಮತ್ತು ಪಂಗ್ಲಿ ಕಣಿವೆಯಲ್ಲಿ ಹಿಮಪಾತವಾಗುತ್ತಿದೆ.

ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ಬಯಲು ಸೀಮೆಯಲ್ಲಿ ದಟ್ಟ ಮಂಜು ಮುಸುಕಿದೆ. ಹರ್ಯಾಣದ ನರ್ಲೂಲ್‍ನಲ್ಲಿ ಕನಿಷ್ಠ ತಾಪಮಾನ 5.2 ಡಿಗ್ರಿಗೆ ಕುಸಿದಿದೆ. ಪಂಜಾಬ್‍ನ ಗುರುದಾಸಪುರದಲ್ಲಿ 6.8 ಡಿಗ್ರಿ ತಾಪಮಾನ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News