ಈ ಐದು ಬ್ಯಾಂಕಿಂಗ್, ಹಣಕಾಸು ವಹಿವಾಟುಗಳ ಮೇಲೆ ನೀವೀಗ ಜಿಎಸ್‌ಟಿಯನ್ನು ತೆರಲೇಬೇಕು

Update: 2018-06-10 11:34 GMT

ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತಿರುವ ಉಚಿತ ಸೇವೆಗಳು ಪೂರ್ವಾನ್ವಯವಾಗಿ ಜಿಎಸ್‌ಟಿ ವ್ಯಾಪ್ತಿಗೊಳಪಡಲಿವೆ ಎಂಬ ಇತ್ತೀಚಿನ ಊಹಾಪೋಹಗಳಿಂದಾಗಿ ಉಂಟಾಗಿದ್ದ ಜೇಬಿಗೆ ಇನ್ನಷ್ಟು ಕತ್ತರಿ ಬೀಳುತ್ತದೆಯೇನೋ ಎಂಬ ಆತಂಕ ದೂರವಾಗಿದೆ. ಈ ಉಚಿತ ಸೇವೆಗಳನ್ನು ಜಿಎಸ್‌ಟಿ ವ್ಯಾಪ್ತಿಗೊಳಪಡಿಸುವುದಿಲ್ಲ ಎಂದು ಸರಕಾರವು ಸ್ಪಷ್ಟನೆ ನೀಡಿದೆ. ಆದರೆ ಎನ್ನಾರೈಗಳಿಂದ ವಿಮಾ ಪಾಲಿಸಿಗಳ ಖರೀದಿ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಾಕಿ ಬಿಲ್‌ಗಳ ವಿಳಂಬ ಮರುಪಾವತಿಯಂತಹ ವಹಿವಾಟುಗಳಿಗೆ ಜಿಎಸ್‌ಟಿ ಅನ್ವಯವಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

►ಕ್ರೆಡಿಟ್ ಕಾರ್ಡ್

ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಮರುಪಾವತಿಸಲು ವಿಳಂಬಿಸಿದರೆ ಬ್ಯಾಂಕು ಅದರ ಮೇಲೆ ಶುಲ್ಕ ಅಥವಾ ದಂಡವನ್ನು ವಿಧಿಸುತ್ತದೆ. ಈಗ ಈ ದಂಡಗಳ ಮೇಲೂ ನೀವು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.

►ಎನ್ನಾರೈಗಳಿಂದ ವಿಮೆ ಖರೀದಿ

 ಅನಿವಾಸಿ ಭಾರತೀಯರು ಖರೀದಿಸುವ ಜೀವವಿಮೆ ಪಾಲಿಸಿಗಳಿಗೆ ಪ್ರೀಮಿಯಂ ಅನ್ನು ನಾನ್-ರೆಸಿಡೆಂಟ್ ಎಕ್ಸ್‌ಟರ್ನಲ್ ಅಕೌಂಟ್‌ನ ಮೂಲಕ ಸ್ವೀಕರಿಸಲಾಗುತ್ತದೆ ಮತ್ತು ಹಣ ಪಾವತಿಯು ಪರಿವರ್ತನೀಯ ವಿದೇಶಿ ವಿನಿಮಯದ ಬದಲು ಭಾರತೀಯ ರೂಪಾಯಿಗಳಲ್ಲಿ ಆಗುವುದರಿಂದ ಇದಕ್ಕೆ ಜಿಎಸ್‌ಟಿ ಅನ್ವಯವಾಗುತ್ತದೆ.

►ಮ್ಯೂಚ್ಯುವಲ್ ಫಂಡ್‌ಗಳ ಎಕ್ಸಿಟ್ ಲೋಡ್

ಮ್ಯೂಚ್ಯುವಲ್ ಫಂಡ್‌ಗಳು ಹೂಡಿಕೆದಾರರು ತಮ್ಮ ಯೋಜನೆಯನ್ನು ಸೇರುವಾಗ ಅಥವಾ ಬಿಡುವಾಗ ಶುಲ್ಕವನ್ನು ವಿಧಿಸುತ್ತವೆ. ಇದಕ್ಕೆ ‘ಲೋಡ್’ಎನ್ನಲಾಗುತ್ತದೆ. ಹೂಡಿಕೆದಾರರು ಯೋಜನೆಯಿಂದ ಹೊರಬರುವಾಗ ವಿಧಿಸುವ ಇಂತಹ ಶುಲ್ಕಕ್ಕೆ ‘ಎಕ್ಸಿಟ್ ಲೋಡ್’ಎನ್ನಲಾಗುತ್ತದೆ. ಈಗ ಎಕ್ಸಿಟ್ ಲೋಡ್‌ನ ಮೇಲೆ ಜಿಎಸ್‌ಟಿ ಅನ್ವಯವಾಗುತ್ತದೆ.

►ಸಾಲದ ಕಂತುಗಳನ್ನು ತುಂಬುವಲ್ಲಿ ವಿಳಂಬ

ಗ್ರಾಹಕರು ತಮ್ಮ ಸಾಲದ ಕಂತುಗಳನ್ನು ತುಂಬುವಲ್ಲಿ ವಿಳಂಬವನ್ನು ಮಾಡಿದರೆ ಬ್ಯಾಂಕುಗಳು ಹೆಚ್ಚುವರಿ ಬಡ್ಡಿಯನ್ನು ವಿಧಿಸುತ್ತವೆ. ಗ್ರಾಹಕರು ಈಗ ಇಂತಹ ಹೆಚ್ಚುವರಿ ಬಡ್ಡಿಯ ಮೆಲೆ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.

►ಮರುಸ್ವಾಧೀನ ಆಸ್ತಿಯ ಮಾರಾಟ

ಸಾಲ ಮರುಪಾವತಿ ಮಾಡದ ಕಾರಣ ಗ್ರಾಹಕರ ಆಸ್ತಿಗಳನ್ನು ಮರುಸ್ವಾಧೀನ ಪಡಿಸಿಕೊಳ್ಳುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅವುಗಳನ್ನು ಮಾರಾಟ ಮಾಡಿದಾಗ ಅದು ಪೂರೈಕೆ ವ್ಯಾಪ್ತಿಯಲ್ಲಿರುವದರಿಂದ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News