ಶ್ರೀಲಂಕಾ ವಿರುದ್ಧ ವೆಸ್ಟ್ ಇಂಡೀಸ್‌ಗೆ ಭರ್ಜರಿ ಜಯ

Update: 2018-06-11 18:38 GMT

ಪೋರ್ಟ್ ಆಫ್ ಸ್ಪೇನ್, ಜೂ.11: ಮೊದಲ ಟೆಸ್ಟ್ ನ ಕೊನೆಯ ದಿನವಾದ ಸೋಮವಾರ ಆತಿಥೇಯ ವೆಸ್ಟ್‌ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ 226 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

 ಗೆಲ್ಲಲು 453 ರನ್ ಗುರಿ ಪಡೆದಿದ್ದ ಶ್ರೀಲಂಕಾ ತಂಡ ಲಂಚ್ ವಿರಾಮದ ಬಳಿಕ ಕೇವಲ 226 ರನ್‌ಗೆ ಆಲೌಟಾಯಿತು. 10 ವರ್ಷಗಳ ಬಳಿಕ ಮೊದಲ ಬಾರಿ ವೆಸ್ಟ್‌ಇಂಡೀಸ್ ವಿರುದ್ಧ ಹೀನಾಯ ಸೋಲು ಕಂಡಿತು. ಆಫ್-ಸ್ಪಿನ್ ಆಲ್‌ರೌಂಡರ್ ರೊಸ್ಟನ್ ಚೇಸ್ ಅಂತಿಮ ದಿನದಾಟದಲ್ಲಿ ಶ್ರೀಲಂಕಾಕ್ಕೆ ಸವಾಲಾದರು. ಲಂಚ್ ವಿರಾಮಕ್ಕೆ ಮೊದಲು ದಿನೇಶ್ ಚಾಂಡಿಮಾಲ್ ವಿಕೆಟ್ ಉರುಳಿಸಿದ ಚೇಸ್ ಶ್ರೀಲಂಕಾದ ಪ್ರತಿರೋಧಕ್ಕೆ ತಡೆಯೊಡ್ಡಿದರು. ಆ ಬಳಿಕ ಲಂಕಾದ ಇನ್ನೂ 3 ವಿಕೆಟ್‌ಗಳನ್ನು ಉರುಳಿಸಿದರು. 8.2 ಓವರ್‌ಗಳಲ್ಲಿ 15 ರನ್‌ಗೆ ಒಟ್ಟು 4 ವಿಕೆಟ್ ಕಬಳಿಸಿದರು. ಐದನೇ ದಿನವಾದ ಸೋಮವಾರ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 176 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಕುಶಾಲ್ ಮೆಂಡಿಸ್ ಔಟಾಗದೆ 94 ರನ್‌ನಿಂದ ಆಟ ಮುಂದುವರಿಸಿದರು. ದಿನದಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಮೆಂಡಿಸ್ ಐದನೇ ಟೆಸ್ಟ್ ಶತಕ ದಾಖಲಿಸಿದರು.

ಆದರೆ, ಮೆಂಡಿಸ್ 102 ರನ್(210 ಎಸೆತ, 10 ಬೌಂಡರಿ, 2 ಸಿಕ್ಸರ್) ಗಳಿಸಿ ವೇಗದ ಬೌಲರ್ ಶಾನೊನ್ ಗ್ಯಾಬ್ರಿಯೆಲ್‌ಗೆ ವಿಕೆಟ್ ಒಪ್ಪಿಸಿದರು. ಮೆಂಡಿಸ್ ಔಟಾಗುವುದರೊಂದಿಗೆ ಪಂದ್ಯವನ್ನು ಡ್ರಾಗೊಳಿಸುವ ಲಂಕಾದ ಲೆಕ್ಕಾಚಾರ ತಲೆಕೆಳಗಾಯಿತು.

5 ಎಸೆತಗಳ ಅಂತರದಲ್ಲಿ ಚಾಂಡಿಮಾಲ್ ಹಾಗೂ ನಿರೊಶನ್ ಡಿಕ್ವೆಲ್ಲಾ ವಿಕೆಟ್‌ನ್ನು ಪಡೆದ ಚೇಸ್ ಶ್ರೀಲಂಕಾಕ್ಕೆ ಆಘಾತ ನೀಡಿದರು. ಚಾಂಡಿಮಾಲ್ ಶನಿವಾರ 15 ರನ್ ಗಳಿಸಿದ್ದಾಗ ಅನಾರೋಗ್ಯ ಕಾಡಿತು. ಸೋಮವಾರ ಮೆಂಡಿಸ್ ಔಟಾದ ಬಳಿಕ ಕ್ರೀಸ್‌ಗೆ ಇಳಿದ ಚಾಂಡಿಮಾಲ್ ಕೇವಲ 27 ರನ್ ಗಳಿಸಿ ಚೇಸ್‌ಗೆ ವಿಕೆಟ್ ಒಪ್ಪಿಸಿದರು. ವಿಂಡೀಸ್ ಪರ ಚೇಸ್(4-15) ಯಶಸ್ವಿ ಬೌಲರ್ ಎನಿಸಿಕೊಂಡರು. ಬಿಶೂ(3-48) ಹಾಗೂ ಗ್ಯಾಬ್ರಿಯಲ್(2-52) ಐದು ವಿಕೆಟ್ ಹಂಚಿಕೊಂಡರು.

 ಶತಕ(ಔಟಾಗದೆ 125) ಸಿಡಿಸಿ ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 414 ರನ್ ಗಳಿಸಲು ನೆರವಾಗಿದ್ದ ಶೇನ್ ಡೌರಿಚ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್

►ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್: 414/8 ಡಿಕ್ಲೇರ್

►ವೆಸ್ಟ್‌ಇಂಡೀಸ್ ಎರಡನೇ ಇನಿಂಗ್ಸ್: 223/7 ಡಿಕ್ಲೇರ್

►ಶ್ರೀಲಂಕಾ ಮೊದಲ ಇನಿಂಗ್ಸ್: 185/10

►ಶ್ರೀಲಂಕಾ ಎರಡನೇ ಇನಿಂಗ್ಸ್: 226 ರನ್‌ಗೆ ಆಲೌಟ್

(ಕುಶಾಲ್ ಮೆಂಡಿಸ್ 102, ಮ್ಯಾಥ್ಯೂಸ್ 31, ಚಾಂಡಿಮಾಲ್ 27, ಡಿಕ್ವೆಲ್ಲಾ 19, ಚೇಸ್ 4-15, ಬಿಶೂ 3-48, ಗ್ಯಾಬ್ರಿಯಲ್ 2-52)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News