ನನ್ನ ತೋಟದ ಮಾವಿನ ಹಣ್ಣುಗಳನ್ನು ತಿಂದವರಿಗೆ ಗಂಡು ಮಕ್ಕಳಾಗಿವೆ!

Update: 2018-06-12 08:25 GMT

ಮುಂಬೈ, ಜೂ.12: ತನ್ನ ತೋಟಗಳಲ್ಲಿ ಬೆಳೆಯುವ ಮಾವಿನ ಹಣ್ಣುಗಳನ್ನು ತಿಂದ ಸಂತಾನಹೀನ ದಂಪತಿಗೆ ಮಕ್ಕಳಾಗಿವೆ ಎಂದು ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಸಂಭಾಜಿ ಭಿಡೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.

“ಗಂಡು ಮಕ್ಕಳನ್ನು ಪಡೆಯಬೇಕೆಂಬ ಹಂಬಲವಿರುವವರು ನನ್ನ ಮಾವಿನ ತೋಪಿನಲ್ಲಿ ಬೆಳೆಯುವ ಹಣ್ಣುಗಳನ್ನು ತಿಂದರೆ ಗಂಡು ಮಕ್ಕಳನ್ನು ಪಡೆಯುತ್ತಾರೆ. ನಾನು ಈ ರಹಸ್ಯವನ್ನು ನನ್ನ ತಾಯಿ ಹೊರತಾಗಿ ಬೇರೆ ಯಾರ ಜತೆಯೂ ಹಂಚಿಕೊಂಡಿರಲಿಲ್ಲ. ಈ ಮಾವಿನ ಮರಗಳನ್ನು ನನ್ನ ತೋಟದಲ್ಲಿ ನೆಟ್ಟಿದ್ದೇನೆ. ಇಲ್ಲಿಯ ತನಕ 180 ಮಕ್ಕಳಿಲ್ಲದ ದಂಪತಿ ಈ ಹಣ್ಣನ್ನು ನನ್ನಿಂದ ಪಡೆದು ತಿಂದಿದ್ದು ಅವರಲ್ಲಿ 150 ಮಂದಿಗೆ ಮಕ್ಕಳಾಗಿವೆ'' ಎಂದು ಭಿಡೆ ಹೇಳಿದ್ದಾರೆ.

ತಮ್ಮ ಮಾವಿನ ಹಣ್ಣುಗಳು ಸಂತಾನಹೀನತೆಯನ್ನು ಹೋಗಲಾಡಿಸುತ್ತದೆ ಎಂದು ಭಿಡೆ ಅವರ ಹೇಳಿಕೆಯನ್ನು  ಸಾಮಾಜಿಕ ಕಾರ್ಯಕರ್ತರು ವಿರೋಧಿಸಿದ್ದಾರೆ.  ಇಂತಹ ಅಂಧಶ್ರದ್ಧೆಗಳನ್ನು ಹರಡುತ್ತಿರುವ ಭಿಡೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಖ್ಯಾತ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಆಭಾ ಸಿಂಗ್ ಹೇಳಿದ್ದಾರೆ. ``ಮಾವಿನ ಹಣ್ಣುಗಳು ಜನಪ್ರಿಯವಾದ ಹಣ್ಣಾಗಿರುವುದರಿಂದ ಅವರು ಹೇಳಿದ್ದು ನಿಜವೇ ಆಗಿದ್ದರೆ  ಇಷ್ಟೊತ್ತಿಗಾಗಲೇ ದೇಶದಲ್ಲಿ ಜನಸಂಖ್ಯಾ ಸ್ಫೋಟವಾಗುತ್ತಿತ್ತು. ಗಂಭೀರವಾಗಿ ಹೇಳುವುದಾದರೆ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನೆ ಕಾಯಿದೆಯಂತೆ ಈ ರೀತಿಯಾಗಿ ಜನರನ್ನು ತಪ್ಪು ದಾರಿಗೆಳೆಯುವುದು ಒಂದು ಅಪರಾಧವಾಗಿದೆ,'' ಎಂದರು.

ಶಾಸಕ ಜಿತೇಂದ್ರ ಅಹ್ವದ್ ಕೂಡ  ಭಿಡೆಯನ್ನು ಟೀಕಿಸಿದ್ದು  ``ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ತಾನೊಬ್ಬ ಅಣುಭೌತಶಾಸ್ತ್ರ ಪದವೀಧರ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ ಇಂತಹ ನಗೆಪಾಟಲಿಗೀಡಾಗಬಹುದಾದ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕ್ರಮಕ್ಕೂ ನಾನು ಆಗ್ರಹಿಸುವುದಿಲ್ಲ. ಇದಕ್ಕಿಂತಲೂ ಗಂಭೀರವಾದ ಪ್ರಕರಣದಲ್ಲಿ ಸರಕಾರ ಅವರನ್ನು ರಕ್ಷಿಸುತ್ತಿರುವುದರಿಂದ ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳದು ಎಂದು ನನಗೆ ತಿಳಿದಿದೆ,'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News