​ಬೆಂಗಳೂರು: ವಿಶ್ವ ಪಿತಾ ದಿನದ ಅಂಗವಾಗಿ ಜೂ.16ರಂದು ಜಾಗೃತಿ ಕಾರ್ಯಕ್ರಮ

Update: 2018-06-12 13:19 GMT

ಬೆಂಗಳೂರು, ಜೂ.12: ತಂದೆ ಮತ್ತು ಮಗುವಿನ ಬಾಂಧವ್ಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಪಿತಾ ದಿನದ ಅಂಗವಾಗಿ ಕ್ರಿಸ್ಪ್ ಸಂಸ್ಥೆ ವತಿಯಿಂದ ಜೂ.16 ರಂದು ಪುರಭವನದ ಎದುರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಸ್ಪ್‌ನ ಅಧ್ಯಕ್ಷ ಕುಮಾರ್ ವಿ ಜಾಗೀರ್ದಾರ್, 21 ನೆ ಶತಮಾನದಲ್ಲಿಯೂ ಹಿಂದಿನ ಕಾಲದ ಕೌಟುಂಬಿಕ ಕಾನೂನುಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ವಿಚ್ಛೇಧನ ಪ್ರಕರಣಗಳು ದಾಖಲಾಗುತ್ತಿದ್ದು, ಅದರಲ್ಲಿ ಶೇಕಡ ಅರ್ಧದಷ್ಟು ಜನರು ಬೇರೆ ಬೇರೆಯಾಗುತ್ತಿದ್ದಾರೆ. ಈ ಮೂಲಕ ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದ್ದಾರೆ ಎಂದರು.

ತಂದೆ-ತಾಯಿಯಿಂದ ಬೇರ್ಪಟ್ಟ ಮಕ್ಕಳಲ್ಲಿ ಶೇ.5 ರಷ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶೇ.9 ರಷ್ಟು ಮಕ್ಕಳು ಹೈಸ್ಕೂಲ್‌ಗೆ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಶೇ.14 ರಷ್ಟು ಅತ್ಯಾಚಾರಿಗಳಾಗಿ ಮಾರ್ಪಾಡಾಗುತ್ತಿದ್ದಾರೆ. ಶೇ.20 ರಷ್ಟು ಮಕ್ಕಳು ಜೈಲು ವಾಸ ಹಾಗೂ ಮಾದಕ ಪದಾರ್ಥಗಳಿಗೆ ಬಲಿಯಾಗುತ್ತಿದ್ದಾರೆ. ಶೇ.32 ರಷ್ಟು ಮಕ್ಕಳು ಮನೆಯಿಂದ ಓಡಿಹೋಗುತ್ತಿದ್ದಾರೆ ಎಂದು ಸಮೀಕ್ಷೆಗಳು ಬಹಿರಂಗ ಮಾಡಿದೆ ಎಂದು ಅವರು ತಿಳಿಸಿದರು.

ಹೆಂಡತಿಯರು ತಮ್ಮ ಗಂಡನಿಂದ ಮಾಶಾಸನ ಪಡೆಯಲು ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ತಂದೆಯನ್ನು ಸಮಾಜ ಹಣ ತಯಾರಿಸುವ ಯಂತ್ರವನ್ನಾಗಿ ಕಾಣುತ್ತಿದೆ. ತಂದೆಯರು ಮಕ್ಕಳನ್ನು ಸಂದರ್ಶಿಸಿದರೆ ಅವರ ಮೇಲೆ ಕೊಲೆಯತ್ನ, ವರದಕ್ಷಿಣೆ, ಲೈಂಗಿಕ ದೌರ್ಜನ್ಯ ಹಾಗೂ ಮತ್ತಿತರೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಅವರು ದೂರಿದರು.

ಬೇಡಿಕೆಗಳು: ಮಹಿಳಾ ಮತ್ತು ಮಕ್ಕಳ ಸಚಿವಾಲಯವನ್ನು ಇಬ್ಭಾಗ ಮಾಡಿ, ಮಕ್ಕಳಿಗೆ ಪ್ರತ್ಯೇಕ ಸಚಿವಾಲಯ ಮಾಡಬೇಕು. ಕಾನೂನು ಇಲಾಖೆಯ ವರದಿಯಂತೆ ತಂದೆ-ತಾಯಿ ಇಬ್ಬರಿಗೂ ಸಮಾನ ಪೋಷಣೆ ಹಕ್ಕು ನೀಡಬೇಕು. ಸುಳ್ಳು ದೂರು ದಾಖಲಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಖ್ಯವಾದ ಎಲ್ಲ ಪತ್ರ ವ್ಯವಹಾರದಲ್ಲಿ ಎರಡೂ ಪೋಷಕರ ಒಳಗೊಳ್ಳುವಿಕೆ ಕಡ್ಡಾಯ ಮಾಡಬೇಕು. ಮಕ್ಕಳಿಗೆ ಅಜ್ಜ ಅಜ್ಜಿಯಂದಿರೊಂದಿಗೆ ಭೇಟಿ ಮಾಡುವಂತೆ ಅವಕಾಶ ಕಲ್ಪಿಸಲು ಕಾನೂನು ರಚಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News