ಆರೋಪಿಗಳಿಗೆ ಕಿರುಕುಳ ಆರೋಪ: ಕಾಟನ್‌ಪೇಟೆ ಪೊಲೀಸರಿಗೆ ಹೈಕೋರ್ಟ್ ತುರ್ತು ನೋಟಿಸ್

Update: 2018-06-12 14:55 GMT

ಬೆಂಗಳೂರು, ಜೂ.12: ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹತ್ಯೆ ನಡೆಸಲು ಯತ್ನಿಸಿದ ಪ್ರಕರಣ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಬಂಧಿಸಿರುವ ನಾಲ್ವರು ಆರೋಪಿಗಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆಯ ಸಂಬಂಧ ಕಾಟನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮೂರ್ತಿ, ಕಾಟನ್‌ಪೇಟೆ ಪೊಲೀಸ್ ತನಿಖಾಧಿಕಾರಿ ಕುಮಾರಸ್ವಾಮಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಪೊಲೀಸರು ದೈಹಿಕ, ಮಾನಸಿಕ ಕಿರುಕುಳ ನೀಡುವುದನ್ನು ತಡೆ ಕೋರಿ ಸುಜಿತ್ ಕುಮಾರ್, ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಮನೋಹರ್ ಯಡವೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, ಮೂರ್ತಿ, ಕುಮಾರಸ್ವಾಮಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ಸರಕಾರಕ್ಕೆ, ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಕಿರುಕುಳ ನೀಡದಂತೆ ನಿರ್ದೇಶನ ನೀಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲ ಅಮೃತೇಶ್, ಪ್ರೊ.ಕೆ.ಎಸ್.ಭಗವಾನ್ ಹತ್ಯೆ ನಡೆಸಲು ಯತ್ನಿಸಿದ ಪ್ರಕರಣ, ಗೌರಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಿರುವ ನಾಲ್ವರು ಆರೋಪಿಗಳಿಗೆ ಕಾಟನ್‌ಪೇಟೆ ಪೊಲೀಸರು ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ಹೀಗಾಗಿ, ಇಂತಹ ಕ್ರಮಕ್ಕೆ ಮುಂದಾಗದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಕಾಟನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮೂರ್ತಿ, ಕಾಟನ್‌ಪೇಟೆ ಪೊಲೀಸ್ ತನಿಖಾಧಿಕಾರಿ ಕುಮಾರಸ್ವಾಮಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ. ಹಾಗೂ ಸರಕಾರಕ್ಕೆ ಆರೋಪಿಗಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡದಂತೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News