ಕಾಂಗ್ರೆಸ್ ಶಾಸಕನನ್ನು ಸಿಲುಕಿಸಲು ಬೆದರಿಸಿದ ಬಿಜೆಪಿ ಅಭ್ಯರ್ಥಿ: ಮತದಾರರಿಂದ ಪೊಲೀಸರಿಗೆ ದೂರು

Update: 2018-06-12 15:20 GMT

ಬೆಂಗಳೂರು, ಜೂ.12: ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸಿಟ್ಟಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿ ಅಭ್ಯರ್ಥಿ ಪಿ.ಎಂ. ಮುನಿರಾಜಗೌಡ ಪ್ರಯತ್ನಿಸಿದ್ದರು ಎಂದು ಮತದಾರರಿಬ್ಬರು ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಆರ್.ಕುಮಾರ್ (39), ಸಿ.ಆನಂದ್ (49) ಎಂಬುವರು ಪ್ರತ್ಯೇಕ ದೂರು ನೀಡಿದ್ದು, ಬಿಜೆಪಿ ಮುಖಂಡ ಮುನಿರಾಜಗೌಡ, ಸಾವಿರಾರು ಮತದಾರರಿಂದ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದರು. ಆ ಚೀಟಿಗಳೇ ಜಾಲಹಳ್ಳಿಯ ಎಸ್‌ಎಲ್‌ವಿ ಪಾರ್ಕ್‌ವ್ಯೆ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಸಿಕ್ಕಿವೆ. ಮುನಿರತ್ನ ಅವರ ಬೆಂಬಲಿಗರೇ ಆ ಚೀಟಿಗಳನ್ನು ಸಂಗ್ರಹಿಸಿದ್ದರು ಎಂಬುದಾಗಿ ಸುಳ್ಳು ಹೇಳುವಂತೆ ಮುನಿರಾಜಗೌಡ ಜೀವ ಬೆದರಿಕೆ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮುನಿರಾಜಗೌಡ ಇಲ್ಲಿನ ಲಗ್ಗೆರೆಯಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದರು. ಅದೇ ವೇಳೆ ಬಹುಮಾನದ ಹೆಸರಿನಲ್ಲಿ ಮತದಾರರಿಗೆ ಚಿನ್ನ, ಬೆಳ್ಳಿ ಹಾಗೂ ನಗದು ವಿತರಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲ ತಮ್ಮ ಕ್ಷೇತ್ರದವರೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಾವಿರಕ್ಕೂ ಹೆಚ್ಚು ಚುನಾವಣಾ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದರು ಎಂದು ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದ ಮುನಿರಾಜಗೌಡ, ತಾವೆಲ್ಲರೂ ನನಗೆ ಮತ ಹಾಕಿ. ಅದಕ್ಕೆ ಪ್ರತಿಯಾಗಿ ಬೆಲೆಬಾಳುವ ಉಡುಗೊರೆಗಳನ್ನು ಕೊಡುತ್ತೇನೆ. ಜತೆಗೆ, ಮತದಾನದ ದಿನದಂದೇ ಮತಗಟ್ಟೆ ಬಳಿ ನಿಮ್ಮೆಲ್ಲರ ಗುರುತಿನ ಚೀಟಿಗಳನ್ನು ವಾಪಸ್ ಕೊಡುತ್ತೇನೆ ಎಂದಿದ್ದರು. ಇದನ್ನು ವಿರೋಧಿಸಿದ್ದಕ್ಕೆ ಜೀವ ಬೆದರಿಕೆವೊಡ್ಡಿದ್ದರು ಎಂದು ಕುಮಾರ್ ದೂರಿದ್ದಾರೆ.

ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಗುರುತಿನ ಚೀಟಿಗಳು ಪತ್ತೆಯಾದವು. ಆಗ ನಮ್ಮನ್ನು ಸಂಪರ್ಕಿಸಿದ್ದ ಮುನಿರಾಜಗೌಡ, 'ನಿಮ್ಮ ಚೀಟಿಗಳನ್ನು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಕಡೆಯವರು ಸಂಗ್ರಹಿಸಿದ್ದಾರೆಂದು ಪೊಲೀಸರಿಗೆ ಹೇಳಿ. ನನ್ನ ಹೆಸರೇನಾದರೂ ಹೇಳಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ, ಮೌನವಾಗಿದ್ದೆವು ಎಂದು ಕುಮಾರ್ ತಿಳಿಸಿದರು.

ಗುರುತಿನ ಚೀಟಿಗಳನ್ನು ಮುನಿರಾಜಗೌಡ ದುರುಪಯೋಗ ಪಡಿಸಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ಮತದಾರರು, ದೂರು ನೀಡಲು ಠಾಣೆಗೆ ಹೋಗಿದ್ದರು. ಆದರೆ, ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News