×
Ad

ಆರ್‌ಯುಎಸ್‌ಎ ಅನುದಾನದಲ್ಲಿ ರಾಜ್ಯಕ್ಕೆ ಸಿಂಹಪಾಲು

Update: 2018-06-12 21:30 IST

ಬೆಂಗಳೂರು, ಜೂ.12: ಪ್ರಸಕ್ತ ವರ್ಷದ ಆರ್‌ಯುಎಸ್‌ಎ ಅನುದಾನ ಹಂಚಿಕೆಯಲ್ಲಿ ಕರ್ನಾಟಕ ಸಿಂಹಪಾಲು ಪಡೆದುಕೊಂಡಿದ್ದು, ದೇಶದಲ್ಲಿಯೇ ಅತಿ ಹೆಚ್ಚಿನ ಅನುದಾನ ಕರ್ನಾಟಕಕ್ಕೆ ಮಂಜೂರಾಗಿದೆ ಎಂದು ತಿಳಿದುಬಂದಿದೆ.

ದಿಲ್ಲಿಯಲ್ಲಿ ಇತ್ತೀಚಿಗೆ ನಡೆದ ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳ ಸಭೆಯಲ್ಲಿ ಕರ್ನಾಟಕಕ್ಕೆ 467 ಕೋಟಿ ರೂಪಾಯಿ ಬಿಡುಗಡೆಯ ಘೋಷಣೆ ಮಾಡಲಾಗಿದೆ. ರಾಜ್ಯ ಸರಕಾರ ನಡೆಸುತ್ತಿರುವ ವಿಶ್ವವಿದ್ಯಾಲಯ ಮಾತ್ರವಲ್ಲದೆ, ಸರಕಾರ ಮತ್ತು ಸ್ವಾಯತ್ತ ಕಾಲೇಜುಗಳಿಗೂ ಈ ಬಾರಿ ಆರ್‌ಯುಎಸ್‌ಎ ನಿಧಿಯಲ್ಲಿ ಹಂಚಿಕೆ ಮಾಡಲಾಗಿದೆ.

ಸಂಶೋಧನೆ ಮತ್ತು ಅನ್ವೇಷಣೆಗಾಗಿ ಮೈಸೂರು ವಿವಿಗೆ 50 ಕೋಟಿ, ಬೆಂಗಳೂರು ವಿವಿಗೆ 20 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿನ 113 ಕ್ಕೂ ಅಧಿಕ ಪದವಿ ಕಾಲೇಜುಗಳಿಗೆ ತಲಾ 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ಮೂಲಸೌಕರ್ಯ ಅಭಿವೃದ್ದಿ, ದುರಸ್ತಿ ಕೆಲಸ, ಪ್ರಾಯೋಗಾಲಯ ಸೌಕರ್ಯ ಮತ್ತು ವಿವಿ ಆವರಣದಲ್ಲಿ ಉತ್ತಮ ನೆಟ್ ವರ್ಕಿಂಗ್ ಸೌಲಭ್ಯಕ್ಕಾಗಿ ಈ ಹಣ ಹಂಚಿಕೆಯಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಯುಎಸ್‌ಎ ನಿಧಿಯಡಿ ಅನುದಾನ ಪಡೆಯಲು ವಿಶ್ವವಿದ್ಯಾಲಯಗಳು ನ್ಯಾಕ್‌ನಿಂದ 2.5 ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ ಎಂಬ ಮಾರ್ಗಸೂತ್ರ ರೂಪಿಸಲಾಗಿದೆ. ಅದರಂತೆ ಮೈಸೂರು ವಿಶ್ವ ವಿದ್ಯಾಲಯ ನ್ಯಾಕ್‌ನಿಂದ 3.47 ರಷ್ಟು ಅಂಕ ಪಡೆದಿದ್ದು, 100 ಕೋಟಿ ಅನುದಾನದಿಂದ ವಂಚಿತವಾಗಿದೆ. ಇದನ್ನು ಪಡೆಯಲು 3.51 ಅಂಕಗಳ ಅಗತ್ಯವಿದೆ.

ನ್ಯಾಕ್‌ನಿಂದ ಮಾನ್ಯತೆ ಪಡೆಯದ ಕೆಲ ವಿಶ್ವವಿದ್ಯಾಲಯಗಳು ಅನುದಾನ ಪಡೆಯಲು ಅರ್ಹರಿಲ್ಲ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ರಾಣಿ ಚೆನ್ನಮ್ಮ ವಿವಿ ಮತ್ತಿತರ ವಿಶ್ವವಿದ್ಯಾಲಯಗಳಿಗೆ ಇದು ಅನ್ವಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News