ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಿ: ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಜೂ.12: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಸಾಯಿ ಖಾನೆಗಳ ವಿರುದ್ಧ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ನ್ಯಾಯಾಲಯದ ಆದೇಶದ ಹೊರತಾಗಿಯೂ ಅಕ್ರಮ ಕಸಾಯಿ ಖಾನೆಗಳು, ಅಕ್ರಮ ಜಾನುವಾರು ಸಾಗಣೆ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿ ಗೋಗ್ಯಾನ್ ಫೌಂಡೇಶನ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ನ್ಯಾಯಪೀಠ, ಜೂ. 29ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ, ಅಕ್ರಮ ಕಸಾಯಿಖಾನೆಗಳನ್ನು ನಿಯಂತ್ರಿಸುವ ಹಾಗೂ ಗೋವುಗಳ ರಕ್ಷಣೆ ಕುರಿತ ನಿಯಮಗಳು ಜಾರಿಯಲ್ಲಿದ್ದರೂ ಸಹ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಸರಕಾರದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಗೋವಧೆ ತಡೆಗೆಂದು ಬಿಬಿಎಂಪಿ 2015ರಲ್ಲಿ ರಚಿಸಿರುವ ತಪಾಸಣಾ ದಳ ಇದುವರೆಗೆ ಎಲ್ಲೆಲ್ಲಿ ಕಾರ್ಯಾಚರಣೆ ನಡೆಸಿದೆ. ಎಷ್ಟು ಪ್ರಕರಣಗಳನ್ನು ದಾಖಲಿಸಿದೆ ಎಂಬುದರ ಬಗ್ಗೆ ವರದಿ ಸಲ್ಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿತು.
ನಗರದಲ್ಲಿ ಎಷ್ಟು ಕಸಾಯಿ ಖಾನೆಗಳು ಹಾಗೂ ಮಾಂಸ ಮಾರಾಟ ಅಂಗಡಿಗಳಿವೆ. ಈ ಪೈಕಿ ಎಷ್ಟು ಪರವಾನಗಿ ಹೊಂದಿವೆ, ಎಷ್ಟು ಪರವಾನಗಿ ಹೊಂದಿಲ್ಲ. ನಿಯಮ ಉಲ್ಲಂಸಿರುವವರ ವಿರುದ್ಧ ಎಷ್ಟು ಪ್ರಕರಣ ದಾಖಲಿಸಲಾಗಿದೆ. ತಪ್ಪಿತಸ್ಥರಿಂದ ಎಷ್ಟು ದಂಡ ವಸೂಲು ಮಾಡಲಾಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ವರದಿಯಲ್ಲಿ ಒದಗಿಸುವಂತೆ ನ್ಯಾಯಪೀಠ ನಿರ್ದೇಶಿಸಿತು.
ಇದೇ ವೇಳೆ, ಅಕ್ರಮ ಗೋ ಸಾಗಾಣೆಗೆ ಸಂಬಂಧಿಸಿದಂತೆ ನಗರದಲ್ಲಿ ಪೊಲೀಸರು 2015ರಿಂದ ಇಲ್ಲಿಯವರೆಗೆ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಷ್ಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ದಂಡ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೂ ನಿರ್ದೇಶನ ನೀಡಿದ ಪೀಠ, ಅರ್ಜಿ ವಿಚಾರಣೆ ಮುಂದೂಡಿತು.