×
Ad

ಆಗ್ನೇಯ ಶಿಕ್ಷಕರ ಕ್ಷೇತ್ರ: ಗೆಲುವಿನತ್ತ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ದಾಪುಗಾಲು

Update: 2018-06-12 22:29 IST

ಬೆಂಗಳೂರು, ಜೂ. 12: ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವು ಬಹುತೇಕ ಖಚಿತವಾಗಿದೆ.

ನಗರದ ಚಾಲಕ್ಯ ವೃತ್ತದಲ್ಲಿರುವ ಆರ್.ಸಿ ಕಾಲೇಜಿನಲ್ಲಿ ಆಗ್ನೇಯ ಶಿಕ್ಷಕರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ನಡೆದ ಮತದಾನದ ಮತಗಳ ಎಣಿಕೆ ನಡೆಯುತ್ತಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಹುತೇಕ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಸಾಗಿದ್ದು, ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು 1490 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಮೊದಲ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ ಗೆಲುವಿಗೆ ಅಗತ್ಯವಾದ ಮತಗಳು ಯಾರಿಗೂ ಬಾರದ ಪರಿಣಾಮ ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ಕಾರ್ಯ ನಡೆಯುತ್ತಿದ್ದು ಬಿಜೆಪಿ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದೆ.

ನಾರಾಯಣಸ್ವಾಮಿ ಗೆಲುವು ಖಚಿತವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂದೆ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮತ ಎಣಿಕೆ ಕೇಂದ್ರದ ಬಳಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿನ ನನ್ನ ಗೆಲುವು ಶಿಕ್ಷಕ ಸಮುದಾಯದ ಗೆಲುವಾಗಿದೆ. 2 ಸಾವಿರ ಮತಗಳ ಅಂತರದಿಂದ ಗೆಲುವು ಸಿಕ್ಕಿದೆ. ನನಗೆ ಟಿಕೆಟ್ ನೀಡಿ ಗೆಲುವಿಗೆ ಸಹಕಾರ ನೀಡಿದ ಪಕ್ಷದ ನಾಯಕರು, ನನ್ನ ಪರ ಕೆಲಸ ಮಾಡಿದ ಐದು ಜಿಲ್ಲೆಗಳ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಪಕ್ಷದ ಗೆಲುವಾಗಿದೆ. ನನಗೆ ಮತ ನೀಡಿದ ಎಲ್ಲ ಶಿಕ್ಷಕ ಸಮೂಹಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News