ಆಹಾರದ ಕುರಿತು ಹತ್ತು ಮಿಥ್ಯೆಗಳ ಹಿಂದಿನ ಸತ್ಯಗಳಿಲ್ಲಿವೆ

Update: 2018-06-13 12:45 GMT

ನಾವು ದಿನನಿತ್ಯ ಸೇವಿಸುವ ಆಹಾರದ ಕುರಿತು ಹಲವಾರು ತಪ್ಪುನಂಬಿಕೆಗಳು ಹೆಚ್ಚಿನವರಲ್ಲಿ ಮನೆಮಾಡಿಕೊಂಡಿವೆ. ಇಂತಹ ಹತ್ತು ಮಿಥ್ಯೆಗಳ ಹಿಂದಿನ ಸತ್ಯಗಳ ಮಾಹಿತಿ ಇಲ್ಲಿದೆ.

1) ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇರುವುದರಿಂದ ಅದನ್ನು ತಿನ್ನಬಾರದು

ಮೊಟ್ಟೆಗಳಲ್ಲಿರುವ ಕೊಲೆಸ್ಟ್ರಾಲ್‌ನಿಂದಾಗಿ ಅದು ಕೆಟ್ಟದ್ದು ಎಂಬ ಕಳಂಕವನ್ನು ಹೊತ್ತುಕೊಂಡಿದೆ. ಆದರೆ ನಮ್ಮ ಶರೀರದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ಮೊಟ್ಟೆಯ ಪಾತ್ರ ಏನೂ ಇಲ್ಲ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ವಾಸ್ತವದಲ್ಲಿ ನಮ್ಮ ಶರೀರಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳು ಮೊಟ್ಟೆಗಳಲ್ಲಿ ಸಮೃದ್ಧವಾಗಿವೆ.

2) ಕಾರ್ಬೊಹೈಡ್ರೇಟ್‌ಗಳು ಕಡಿಮೆಯಿದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು

ಆರೋಗ್ಯಕರ ಕಾರ್ಬೊಹೈಡ್ರೇಟ್‌ಗಳು,ಉದಾಹರಣೆಗೆ ಇಡಿಯ ಧಾನ್ಯದಂತಹ ಆಹಾರಗಳು ನಮ್ಮ ಶರೀರದ ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿವೆ. ಆಗಾಗ್ಗೆ ಇಡಿಯ ಧಾನ್ಯವನ್ನು ಸೇವಿಸುವವರಲ್ಲಿ ಹೃದ್ರೋಗಗಳ ಅಪಾಯ ಶೇ.20ರಿಂದ ಶೇ.30ರಷ್ಟು ಕಡಿಮೆಯಿರುತ್ತದೆ ಎನ್ನುವುದನ್ನು ಅಧ್ಯಯನಗಳು ಸಾಬೀತುಗೊಳಿಸಿವೆ. ಇಡಿಯ ಧಾನ್ಯಗಳು ಕಾರ್ಬೊಹೈಡ್ರೇಟ್, ಪ್ರೋಟಿನ್, ನಾರು,ಬಿ ವಿಟಾಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದ್ದು,ಇವು ಟೈಪ್ 2 ಮಧುಮೇಹ,ಕ್ಯಾನ್ಸರ್ ಮತ್ತು ಬೊಜ್ಜಿನ ಅಪಾಯವನ್ನು ತಗ್ಗಿಸುವಲ್ಲಿ ನೆರವಾಗುತ್ತವೆ.

3) ಕಂದುಬಣ್ಣದ ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದು

ಕಂದುಬಣ್ಣದ ಬ್ರೆಡ್ ಬಿಳಿಯ ಬ್ರೆಡ್‌ಗಿಂತ ಹೆಚ್ಚು ಆರೋಗ್ಯಕರ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇದು ನಿಜವಲ್ಲ. ಬಿಳಿಯ ಬ್ರೆಡ್ ತಯಾರಿಕೆಯಲ್ಲಿ ಬಳಸುವ ಕಚ್ಚಾ ಪದಾರ್ಥಗಳನ್ನೇ ಕಂದುಬಣ್ಣದ ಬ್ರೆಡ್ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಕೇವಲ ಬಣ್ಣವನ್ನು ಹೆಚ್ಚುವರಿಯಾಗಿ ಬಳಸಲಾಗುತ್ತದೆ. ಕೆಲವು ಬ್ರಾಂಡ್‌ಗಳಲ್ಲಿ ಬ್ರೆಡ್‌ಗೆ ಕಡು ಕಂದುಬಣ್ಣ ಬರುವಂತಾಗಲು ಕೆರಾಮಲ್ ಅಥವಾ ಸುಟ್ಟ ಸಕ್ಕರೆಯನ್ನು ಸೇರಿಸಲಾಗುತ್ತದೆ. ಇಡಿಯ ಗೋದಿಯ ಅಥವಾ ಇಡಿಯ ಧಾನ್ಯದಿಂದ ಮಾಡಿದ ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಲಿ.

4) ಬಹುಧಾನ್ಯಗಳ ಬಿಸ್ಕಿಟ್‌ಗಳು ಆರೋಗ್ಯಕರ

ಬಹುಧಾನ್ಯಗಳ ಬಿಸ್ಕಿಟ್‌ಗಳ ಕುರಿತು ಧಂಡಿಯಾಗಿ ಬರುತ್ತಿರುವ ಜಾಹೀರಾತುಗಳಿಂದಾಗಿ ಅವು ಆರೋಗ್ಯಕರ ಎಂದು ಜನರು ನಂಬುವಂತಾಗಿದೆ. ಆದರೆ ಈ ಬಿಸ್ಕಿಟ್‌ಗಳನ್ನು ಸಕ್ಕರೆ ಮತ್ತು ಕೊಬ್ಬನ್ನು ಸೇರಿಸಿ ಗರಿಗರಿಯಾಗಿ ಮಾಡಿರುವುದರಿಂದ ಇವು ನಿಜಕ್ಕೂ ಆರೋಗ್ಯಕ್ಕೆ ಕೆಡುಕನ್ನುಂಟು ಮಾಡುತ್ತವೆ.

5) ಕೊಬ್ಬುಮುಕ್ತ ಆಹಾರ ಒಳ್ಳೆಯದು

 ತಯಾರಕರು ಸಂಸ್ಕರಿತ ಮತ್ತು ಪ್ಯಾಕೇಜ್ಡ್ ಆಹಾರಗಳಿಂದ ಕೊಬ್ಬನ್ನು ಬೇರ್ಪಡಿಸುವಾಗ ಅದರ ಬದಲು ಸಕ್ಕರೆಯಂತಹ ಅಷ್ಟೇನೂ ಆರೋಗ್ಯಕರವಲ್ಲದ ಸಕ್ಕರೆಯಂತಹ ಘಟಕಗಳನ್ನು ಸೇರಿಸುತ್ತಾರೆ. ಕೊಬ್ಬುಮುಕ್ತ ಆಹಾರಗಳಲ್ಲಿ ಸಕ್ಕರೆ,ಉಪ್ಪು ಮತ್ತು ಕೊಬ್ಬಿನ ಅನುಪಾತ ಸದಾ ಇದ್ದೇ ಇರುತ್ತದೆ. ಬಾದಾಮ,ಅಕ್ರೋಟಿನಂತಹ ಆರೋಗ್ಯಕರ ಕೊಬ್ಬಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

6) ಮಸಾಲೆಭರಿತ ಆಹಾರಗಳು ಅಲ್ಸರ್‌ಗೆ ಕಾರಣವಾಗುತ್ತವೆ

ಮಸಾಲೆ ಅಲ್ಸರ್‌ಗಳನ್ನುಂಟು ಮಾಡುವುದಿಲ್ಲ. ಹೊಟ್ಟೆಯ ಅಲ್ಸರ್ ಅಥವಾ ಇತರ ಯಾವುದೇ ಅಲ್ಸರ್‌ಗಳಿಗೆ ಹೆಲಿಕೊಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ. ಅತಿಯಾದ ಮಸಾಲೆಭರಿತ ಆಹಾರಗಳನ್ನು ಸೇವಿಸಿದಾಗ ಕರುಳಿನಲ್ಲಿ ಕೆರಳುವಿಕೆ ಉಂಟಾಗುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ಅಲ್ಸರ್‌ನ ಲಕ್ಷಣ ಎಂದು ಜನರು ತಪ್ಪಾಗಿ ಭಾವಿಸುತ್ತಾರೆ.

7) ತಣ್ಣಗಿನ ಹಾಲು ಕುಡಿಯುವುದರಿಂದ ಮೂಗು ಕಟ್ಟುತ್ತದೆ

ಡೈರಿ ಉತ್ಪನ್ನಗಳು ಶೀತವನ್ನು ಹೆಚ್ಚಿಸುವುದಿಲ್ಲ. ನೀವು ಸಾಮಾನ್ಯ ಶೀತದಿಂದ ಪೀಡಿತರಾಗಿದ್ದರೆ ಬೆಚ್ಚಗಿನ ಹಾಲನ್ನು ಸೇವಿಸಬಹುದು. ಇದು ಎದೆಯಲ್ಲಿ ಕಟ್ಟಿದ ಕಫ,ಸಿಂಬಳ ಸುರಿಯುವಿಕೆ ಮತ್ತು ಕೆಮ್ಮಿನಿಂದ ಉಪಶಮನ ಪಡೆಯಲು ನೆರವಾಗುತ್ತದೆ.

8) ಎನರ್ಜಿ ಬಾರ್‌ಗಳು ಶಕ್ತಿಯನ್ನು ನೀಡುತ್ತವೆ

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿರುವವರು ಆಗಾಗ್ಗೆ ಎನರ್ಜಿ ಬಾರ್ ತಿನ್ನುತ್ತಿರುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಅವರು ಭಾವಿಸಿರುತ್ತಾರೆ. ಆದರೆ ಇದು ತಪ್ಪು. ಅವುಗಳ ಲೇಬಲ್‌ಗಳನ್ನು ನೀವು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವು ಅಧಿಕ ಪ್ರಮಾಣದಲ್ಲಿ ಸಕ್ಕರೆ,ಪರ್ಯಾಪ್ತ ಕೊಬ್ಬುಗಳು ಮತ್ತು ಕ್ಯಾಲರಿಗಳನ್ನು ಒಳಗೊಂಡಿವೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ನೀವು ತಿನ್ನುತ್ತಿರುವ ಎನರ್ಜಿ ಬಾರ್ ತುಂಬ ರುಚಿಯಾಗಿದ್ದರೆ ಒಂದು ಬಾರ್‌ನಲ್ಲಿ ನೀವು ಕನಿಷ್ಠ 10 ಗ್ರಾಂ ಸಕ್ಕರೆಯನ್ನು ಸೇವಿಸಿರುವ ಸಾಧ್ಯತೆಯಿರುತ್ತದೆ.

9) ಸಿದ್ಧ ಆಹಾರಗಳು ಆರೋಗ್ಯಕರ

ಸಿದ್ಧ ಆಹಾರಗಳು ಹಸಿವನ್ನು ಇಂಗಿಸಿಕೊಳ್ಳಲು ಸುಲಭದ ಮಾರ್ಗ ಎನ್ನುವುದು ನಿಜ. ಅದನ್ನು ತಯಾರಿಸಿಕೊಳ್ಳುವುದು ಸುಲಭ,ಸಮಯವನ್ನು ಉಳಿಸುತ್ತದೆ ಮತ್ತು ರುಚಿಯಾಗಿರುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಜನರು ಸಿದ್ಧ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಈ ಸಿದ್ಧ ಆಹಾರಗಳಲ್ಲಿ ಪೋಷಕಾಂಶಗಳ ಕೊರತೆಯಿರುತ್ತದೆ ಮತ್ತು ಕೊಬ್ಬು ಹಾಗೂ ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತವೆ. ಓರ್ವ ವ್ಯಕ್ತಿಯ ದೈನಂದಿನ ಸೋಡಿಯಂ ಅಗತ್ಯ 1,500 ಮಿ.ಗ್ರಾಂ ಆಗಿದೆ. ಆದರೆ ಸಿದ್ಧ ಆಹಾರಗಳನ್ನು,ಉದಾಹರಣೆಗೆ ಸಿದ್ಧ ಉಪ್ಪಿಟ್ಟನ್ನು ಸೇವಿಸಿದಾಗ 1,300 ಮಿ.ಗ್ರಾಂ ಸೋಡಿಯಂ ಒಂದೇ ಏಟಿಗೆ ನಮ್ಮ ಶರೀರವನ್ನು ಸೇರಿಕೊಳ್ಳುತ್ತದೆ.

10) ಕಡಿಮೆ ಕ್ಯಾಲರಿಗಳಿಗಾಗಿ ಬೆಣ್ಣೆಯ ಬದಲು ಮಾರ್ಜರಿನ್ ಒಳ್ಳೆಯದು

 ಬೆಣ್ಣೆ ಮತ್ತು ಮಾರ್ಜರಿನ್‌ಗಳಲ್ಲಿ ಅಷ್ಟೇ ಪ್ರಮಾಣದಲ್ಲಿ ಕ್ಯಾಲರಿಗಳಿರುತ್ತವೆ. ಆದರೆ ಮಾರ್ಜರಿನ್ ವನಸ್ಪತಿ ತೈಲಗಳಿಂದ ತಯಾರಾಗಿರುತ್ತದೆ. ಕೆಲವು ಮಾರ್ಜರಿನ್‌ಗಳು ಹೃದಯಕ್ಕೆ ಹಾನಿಯನ್ನುಂಟು ಮಾಡುವ ಟ್ರಾನ್ಸ್ ಫ್ಯಾಟ್‌ಗಳನ್ನು ಒಳಗೊಂಡಿರುತ್ತವೆ. ಸೀಮಿತ ಪ್ರಮಾಣದಲ್ಲಿ ಬೆಣ್ಣೆಯ ಸೇವನೆ ಒಳ್ಳೆಯದು. ಅದು ಕೊಬ್ಬನ್ನು ಕರಗಿಸುವ ವಿಟಾಮಿನ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿರುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News