ನಲಪಾಡ್ ಜಾಮೀನು ಅರ್ಜಿ ವಿಚಾರಣೆ: ಜೂ.14ಕ್ಕೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಜೂ.13: ಉದ್ಯಮಿ ಪುತ್ರ ವಿದ್ವತ್ ಮೇಲೆ ನಗರದ ಫರ್ಜಿ ಕೆಫೆಯಲ್ಲಿ ಮುಹಮ್ಮದ್ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ಮೇಲಿನ ತೀರ್ಪನ್ನು ಹೈಕೋರ್ಟ್ ಗುರುವಾರಕ್ಕೆ (ಜೂ.14) ಕಾಯ್ದಿರಿಸಿದೆ.
ಈ ಕುರಿತಂತೆ ಮುಹಮ್ಮದ್ ನಲಪಾಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಆದೇಶದ ಉಕ್ತಲೇಖನವನ್ನು ಗುರುವಾರ (ಜೂ.14) ನ್ಯಾಯಾಲಯದ ತೆರೆದ ಕಲಾಪದಲ್ಲಿಯೇ ನೀಡುವುದಾಗಿ ನ್ಯಾಯಪೀಠ ತಿಳಿಸಿತು.
ಮುಹಮ್ಮದ್ ನಲಪಾಡ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಾರಾಕಾಸ್ತ್ರಗಳು ಬಳಕೆಯಾಗಿದೆ ಎಂಬುದು ದೋಷಾರೋಪ ಪಟ್ಟಿಯಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಇದೊಂದು ಕೊಲೆಯತ್ನ ಪ್ರಕರಣವಲ್ಲ. ಕೊಲೆ ಮಾಡುವ ಉದ್ದೇಶವಿರಲಿಲ್ಲ. ಮಾರಕಾಸ್ತ್ರಗಳೊಂದಿಗೆ ಮುಹಮ್ಮದ್ ನಲಪಾಡ್ ಹಾಗೂ ಬೆಂಬಲಿಗರು ಕೆಫೆಗೆ ಬಂದಿಲ್ಲ. ದಿಢೀರ್ ನಡೆದ ಗಲಾಟೆಯಷ್ಟೆ. ಮೊಹಮ್ಮದ್ ನಲಪಾಡ್ ಕೇವಲ ವಿದ್ವತ್ ಕೆನ್ನೆಗೆ ಎರಡು ಬಾರಿ ಹೊಡೆದಿದ್ದು, ಹೊಟ್ಟೆಗೆ ಒಮ್ಮೆ ಒದ್ದಿದ್ದಾನೆ. ಗ್ಲಾಸ್ ಬಾಟಲ್ ಮತ್ತು ಐಸ್ ಬಕೆಟ್‌ನಿಂದ ವಿದ್ವತ್‌ಗೆ ಹೊಡೆಯಲಾಗಿದೆ. ಇವು ಅಪಾಯಕಾರಿ ಮಾರಕಾಸ್ತ್ರಗಳಲ್ಲ. ಪ್ರಾಸಿಕ್ಯೂಷನ್ ಇದನ್ನೇ ಅಪಾಯಕಾರಿ ಮಾರಕಾಸ್ತ್ರ ಎಂಬುದಾಗಿ ಬಿಂಬಿಸಿದವು ಎಂದು ವಿವರಿಸಿದರು.
ಇದಕ್ಕೆ ಆಕ್ಷೇಪಿಸಿದ ಪ್ರಾಸಿಕ್ಯೂಷನ್ ಪರ ವಿಶೇಷ ಸರಕಾರಿ ಅಭಿಯೋಜಕ ಶ್ಯಾಮ್ ಸುಂದರ್, ಮುಹಮ್ಮದ್ ನಲಪಾಡ್ ಹಲವು ಬಾರಿ ವಿದ್ವತ್‌ಗೆ ಹೊಡೆದಿದ್ದಾರೆ. ಫರ್ಜಿ ಕೆಫೆಯೊಳಗೆ, ಯುಬಿ ಸಿಟಿ ಎಸ್ಕಲೇಟರ್ ಸೇರಿ ಒಟ್ಟು ಮೂರು ಕಡೆ ಹಲ್ಲೆ ನಡೆಸಲಾಗಿದೆ. ನಟ ಅಂಬರೀಷ್ ಪುತ್ರ ಹಾಗೂ ಸಂಸದ ಪಿ.ಸಿ.ಮೋಹನ್ ಪುತ್ರ ಮಧ್ಯಪ್ರವೇಶಿಸಿ ಮನವಿ ಮಾಡಿದರೂ ವಿದ್ವತ್ ಮೇಲಿನ ಹಲ್ಲೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಷ್ಟೆ ಅಲ್ಲದೆ, ವಿದ್ವತ್ ರಕ್ತದ ಮಡುವಿನೊಂದಿಗೆ ಮಲ್ಯ ಆಸ್ಪತ್ರೆಗೆ ದಾಖಲಾಗಿ, ದಯನೀಯ ಪರಿಸ್ಥಿತಿಯಲ್ಲಿ ಇದ್ದಾಗಲೂ, ದ್ವೇಷದಿಂದ ಅಲ್ಲಿಗೂ ತೆರಳಿ ಆಕ್ರಮಣ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ತೀರ್ಪನ್ನು ಜೂ.14ಕ್ಕೆ ಕಾಯ್ದಿರಿಸಿತು.