×
Ad

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಶುಲ್ಕ ವಸೂಲಿ ಬಗ್ಗೆ ಮಾಹಿತಿ ನೀಡಲು ಡಿಡಿಪಿಐಗೆ ಹೈಕೋರ್ಟ್ ಆದೇಶ

Update: 2018-06-13 22:06 IST

ಬೆಂಗಳೂರು, ಜೂ.13: ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿವೆ. ಹೀಗಾಗಿ, ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆ ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲು ಚಿಕ್ಕಬಳ್ಳಾಪುರ ಡಿಡಿಪಿಐಗೆ ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಎನ್.ರಾಘವೇಂದ್ರ ಸೇರಿ ಐವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಮುಂದಿನ ವಿಚಾರಣೆ ವೇಳೆ ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲು ಚಿಕ್ಕಬಳ್ಳಾಪುರ ಡಿಡಿಪಿಐಗೆ ಹೈಕೋರ್ಟ್ ಆದೇಶಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ಎನ್.ಭಟ್ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರಕಾರ ಶುಲ್ಕವನ್ನು ನಿಗದಿಪಡಿಸಿ ಆದೇಶಿಸಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗಧಿಪಡಿಸಿದ ಶುಲ್ಕಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿವೆ. ಅಲ್ಲದೆ, ಶಾಲಾ ಬೋರ್ಡಿನ ಮೇಲೆ ಶುಲ್ಕ ಪಡೆಯುವ ಬಗ್ಗೆ ಯಾವುದೆ ಫಲಕವನ್ನು ಹಾಕಿರುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿದ್ದು, ಇದರಿಂದ, ಬಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಆರ್ಥಿಕ ತೊಂದರೆಯಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಮುಂದಿನ ವಿಚಾರಣೆ ವೇಳೆ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಬಗ್ಗೆ ಸೂಕ್ತ ಮಾಹಿತಿ ನೀಡಬೇಕೆಂದು ಆದೇಶಿಸಿ, ವಿಚಾರಣೆಯನ್ನು ಜು.4ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News