ನೂತನ ಉಪಕುಲಪತಿಗಳ ನೇಮಕ

Update: 2018-06-13 16:45 GMT

ಬೆಂಗಳೂರು, ಜೂ.13: ದೀರ್ಘ ಕಾಲದ ನಿರೀಕ್ಷೆ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾ ನಿಲಯಗಳಿಗೆ ಕೊನೆಗೂ ನೂತನ ಉಪಕುಲಪತಿಗಳ ನೇಮಕ ಮಾಡಲಾಗಿದೆ.

ವಿಶ್ವವಿದ್ಯಾನಿಲಯಗಳ ಕುಲಪತಿಯಾದ ರಾಜ್ಯಪಾಲ ವಜುಭಾಯಿ ವಾಲಾ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ವಿಶ್ವವಿದ್ಯಾನಿಲಯದ ಮಾಜಿ ಪ್ರಾಂಶುಪಾಲ ಕೆ.ಆರ್.ವೇಣುಗೋಪಾಲ್‌ರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನಾಗಿ ಹಾಗೂ ಪ್ರಸ್ತುತ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ರಾಗಿರುವ ಡಾ.ಸಚ್ಚಿದಾನಂದರನ್ನು ಆರ್‌ಜಿಎಚ್‌ಎಚ್‌ಎಸ್‌ನ ಉಪಕುಲಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರೊಫೆಸರ್ ಈಶ್ವರ ಭಟ್ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಗಳಾಗಿ ನೇಮಕವಾಗಿದ್ದಾರೆ.

ಡಾ. ಬಿ. ತಿಮ್ಮೇಗೌಡ ಅವರ ಅವಧಿ ಫೆ.6, 2017ರಂದು ಕೊನೆಗೊಂಡ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯವು ಒಂದೂವರೆ ವರ್ಷಗಳ ಕಾಲ ಐದು ತಾತ್ಕಾಲಿಕ ಉಪಕುಲಪತಿಗಳನ್ನು ಕಂಡಿದೆ. ಇನ್ನುಳಿದಂತೆ ಆರ್‌ಜಿಎಚ್‌ಎಚ್‌ಎಸ್ ಜು.14, 2017ರಿಂದಲೂ ಇಲ್ಲಿನ ಉಪಕುಲಪತಿಗಳ ಹುದ್ದೆ ಖಾಲಿ ಉಳಿದಿತ್ತು. ಡಾ. ಕೆ.ಎಸ್.ರವೀಂದ್ರನಾಥ್ ಸೇವಾವಧಿ ಪೂರ್ಣಗೊಂಡ ಬಳಿಕ ಯಾವುದೇ ಉಪಕುಲಪತಿಗಳ ನೇಮಕವಾಗಿರಲಿಲ್ಲ. ಬದಲಿಗೆ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿರುವ ಡಾ.ಎಂ. ಕೆ.ರಮೇಶ್‌ರನ್ನು ತಾತ್ಕಾಲಿಕ ವಿಸಿಯಾಗಿ ನೇಮಕ ಮಾಡಲಾಗಿತ್ತು.

ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಗಳಾಗಿ ವೇಣುಗೋಪಾಲ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದ ಗುಣಮಟ್ಟದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ ಮತ್ತು ಇದಾಗಲೇ ಬೆಂಗಳೂರು ವಿಶ್ವವಿದ್ಯಾನಿಲಯದೊಡನೆ ಸೇರಿ ಕಾರ್ಯಾಚರಿಸುತ್ತಿರುವ ಇನ್ನೆರಡು ವಿವಿಗಳ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News