ಹೈಕಮಾಂಡ್ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಜೂ.14: ಸಂಪುಟ ವಿಸ್ತರಣೆ ಕುರಿತು ನಾನು ಹಾಗೂ ಮುಖ್ಯಮಂತ್ರಿ ಚರ್ಚಿಸಿ, ಹೈಕಮಾಂಡ್ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಗುರುವಾರ ನಗರದಲ್ಲಿರುವ ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಂ.ಬಿ.ಪಾಟೀಲ್ ಯಾವ ಉದ್ದೇಶಕ್ಕಾಗಿ ಶಾಸಕರೊಂದಿಗೆ ನಾಳೆ ಸಭೆ ಮಾಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ ಎಂದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಅಧಿಕಾರಿಗಳ ವರ್ಗಾವಣೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಹಳೆಯ ಕಡತ, ಹಿಂದಿನ ಸರಕಾರದಲ್ಲೇ ಕೈಗೊಂಡ ತೀರ್ಮಾನ. ಅದು ಈಗ ಜಾರಿಯಾಗಿದೆ. ಈ ವಿಚಾರದಲ್ಲಿ ಯಾವುದೆ ಗೊಂದಲಗಳಿಲ್ಲ ಎಂದರು.
ರೈತರ ಸಾಲ ಮನ್ನಾ ವಿಚಾರದ ಕುರಿತು ನಾನು ಹಾಗೂ ಮುಖ್ಯಮಂತ್ರಿ ರೈತರ ಸಭೆಯಲ್ಲಿ ಭರವಸೆ ನೀಡಿದ್ದೇವೆ. ಸಾವಿರಾರು ಕೋಟಿ ರೂ.ಗಳ ವಿಚಾರ ಇದಾಗಿರುವುದರಿಂದ, ಹಣಕಾಸು ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುವುದು ನಮ್ಮ ಬದ್ಧತೆ ಎಂದು ಅವರು ಹೇಳಿದರು.
ಹಿಂದಿನ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಬಜೆಟ್‌ನಲ್ಲಿ ಘೋಷಿಸಿರುವಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಸೇರಿದಂತೆ ಎಲ್ಲ ಯೋಜನೆಗಳು ಮುಂದುವರೆಯಲಿವೆ. ಪೊಲೀಸರ ವೇತನ ಹಾಗೂ ಭತ್ತೆ ಹೆಚ್ಚಳ ವಿಚಾರದ ಕುರಿತು 6ನೇ ವೇತನ ಆಯೋಗದ ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಿದ್ದು, ಅದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕಾತಿ ಕುರಿತು ಬಹಳ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪರಮೇಶ್ವರ್ ಹೇಳಿದರು.