ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ಸಿದ್ಧತೆಗೆ ಸಮಿತಿ ರಚನೆ: ಸಿದ್ದರಾಮಯ್ಯ

Update: 2018-06-14 16:21 GMT

ಬೆಂಗಳೂರು, ಜೂ.14: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಬಗ್ಗೆ ಕರಡು ಸಿದ್ಧಪಡಿಸಲು ಎರಡು ಪಕ್ಷಗಳ ಐವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿಯ ಮೊದಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮೂವರು ಹಾಗೂ ಜೆಡಿಎಸ್ ಪಕ್ಷದಿಂದ ಇಬ್ಬರು ಸದಸ್ಯರು ಈ ಸಮಿತಿಯಲ್ಲಿ ಇರಲಿದ್ದಾರೆ ಎಂದರು.

ಮೊದಲ ತೀರ್ಮಾನ : 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷಗಳವರೆಗೆ ಸರಕಾರ ಏನು ಮಾಡಲಿದೆ ಎಂಬ ಪ್ರಣಾಳಿಕೆಯನ್ನು ಜನತೆಯ ಮುಂದಿಟ್ಟಿತ್ತು. ಅದೇ ರೀತಿ ಜೆಡಿಎಸ್‌ನವರು ಪ್ರಣಾಳಿಕೆಯನ್ನು ಇಟ್ಟಿದ್ದರು. ಇದು ಸಮ್ಮಿಶ್ರ ಸರಕಾರವಾಗಿರು ವುದರಿಂದ ಎರಡು ಪ್ರಣಾಳಿಕೆಗಳನ್ನು ಜಾರಿಗೊಳಿಸುವುದು ಕಷ್ಟದ ಕೆಲಸ ಎಂದು ಎಂದು ಅವರು ಹೇಳಿದರು.

ಆದುದರಿಂದ, ಈ ಸಮಿತಿಯು ಎರಡು ಪಕ್ಷಗಳ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಸಮಗ್ರವಾಗಿ ಚರ್ಚಿಸಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡನ್ನು 10 ದಿನಗಳ ಒಳಗೆ ಸಿದ್ಧಪಡಿಸಲು ಸೂಚಿಸಲಾಗಿದೆ. ಆನಂತರ, ಕರಡು ಸಮನ್ವಯ ಸಮಿತಿ ಎದುರು ಮಂಡಿಸಿ, ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಎರಡನೆ ತೀರ್ಮಾನ: ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ತಂದಂತಹ ಜನಪ್ರಿಯ ಕಾರ್ಯಕ್ರಮಗಳು, ಬಜೆಟ್‌ನಲ್ಲಿ ಮಾಡಿರುವ ಘೋಷಣೆಗಳು (ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಸೇರಿದಂತೆ) ಎಲ್ಲವೂ ಮುಂದುವರೆಯುತ್ತವೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಅಂತಿಮವಾದ ಬಳಿಕ ಸಮ್ಮಿಶ್ರ ಸರಕಾರವು ಹೊಸ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮುಂದುವರೆಯಲಿದೆ ಎಂದು ಅವರು ಹೇಳಿದರು.

ಮೂರನೆ ತೀರ್ಮಾನ: ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ಒಂದು ವಾರದಲ್ಲಿ ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕೂತು ಚರ್ಚೆ ಮಾಡಲಿದ್ದಾರೆ. ಆದ್ಯತೆ ಮೇರೆಗೆ 30 ನಿಗಮ, ಮಂಡಳಿಗಳಿಗೆ ಒಪ್ಪಂದದ ಪ್ರಕಾರ ನೇಮಕಾತಿ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಅತೃಪ್ತರ ಬಗ್ಗೆ ಸಭೆಯಲ್ಲಿ ಯಾವುದೇ ರೀತಿಯ ಚರ್ಚೆಯಾಗಿಲ್ಲ. ನಿಗಮ, ಮಂಡಳಿಗಳ ನೇಮಕಾತಿಯಾದ ನಂತರ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರವು ಆಡಳಿತಾತ್ಮಕವಾದದ್ದು, ಈ ಸಂಬಂಧ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಾಸಕರು ನಾಳೆ ಸಭೆ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದ ಸಿದ್ದರಾಮಯ್ಯ, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರ ಜೊತೆ ಪ್ರತಿದಿನ ಚರ್ಚೆ ಮಾಡುತ್ತಿದ್ದೇವೆ ಎಂದರು. ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಮನ್ವಯ ಸಮಿತಿಯ ಸಂಚಾಲಕ ಹಾಗೂ ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ದಾನೀಶ್ ಅಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News