ಮಳೆ ಹಾನಿ: ಪರಿಹಾರ ನಿಧಿ ಬಳಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

Update: 2018-06-14 16:50 GMT

ಬೆಂಗಳೂರು, ಜೂ. 14: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಸುಮಾರು 38 ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದದಲ್ಲಿ ಅಧಿಕಾರಿಗಳೊಂದಿಗೆ ಮಳೆ ಪರಿಸ್ಥಿತಿ, ಕೃಷಿ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಜದಲ್ಲಿ 105 ಮಂದಿ ಸಾವನಪ್ಪಿದ್ದಾರೆ. 606 ಜಾನುವಾರುಗಳು ಮರಣ ಹೊಂದಿದ್ದು, 2,814 ಮನೆಗಳು ಹಾನಿಗೊಳಗಾಗಿದ್ದು, ಮೃತಪಟ್ಟ ವ್ಯಕ್ತಿಗಳು, ಜಾನುವಾರುಗಳು ಹಾಗೂ ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ತಲಾ 5 ಕೋಟಿ ರೂ.ಹಣವಿದ್ದು, ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ 186 ಕೋಟಿ ರೂ.ಹಣವಿದೆ. ಸದ್ಯಕ್ಕೆ ಕೇಂದ್ರ ಸರಕಾರದಿಂದ ಹಣ ಪಡೆಯುವ ಅಗತ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸುವುದಿಲ್ಲ ಎಂದರು.

ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ 205 ಟಿಎಂಸಿ ನೀರು ತುಂಬಿದೆ. ಸುಮಾರು 38 ಕೋಟಿ ರೂ.ಮೌಲ್ಯದ ಸೇತುವೆಗಳು, ರಸ್ತೆಗಳು ಸೇರಿ ಆಸ್ತಿಪಾಸ್ತಿ ಹಾನಿಗೊಳಗಾಗಿದೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.

ಅಮಾನತ್ತು: ಆರ್‌ಟಿಇ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದು, ಬಿಇಒ, ಡಿಡಿಪಿಐಗಳು ದಾರಿ ತಪ್ಪಿದ್ದಾರೆ. ಕೆಲವು ಅಧಿಕಾರಿಗಳ ಬಗ್ಗೆ ಪದೇ ಪದೇ ದೂರು ಬರುತ್ತಿದೆ. ಈ ರೀತಿ ದೂರು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಿಭಾಗದ ಡಿಡಿಪಿಐಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ಎಚ್ಚೆತ್ತುಕೊಳ್ಳದೆ ಉಡಾಫೆ ಧೋರಣೆ ಅನುಸರಿಸಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದರು.

ಖಾಸಗಿ ಶಾಲೆಗಳಿಗೆ ಸ್ಪರ್ಧಾತ್ಮಕವಾಗಿ ಸರಕಾರಿ ಶಾಲೆಗಳ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದ ಅವರು, ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸರಕಾರಿ ಶಾಲೆಗಳನ್ನು ಸುಧಾರಿಸಿ ವಿದ್ಯಾರ್ಥಿಗಳನ್ನು ಸೆಳೆಯಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಿದೆ. ಎಲ್‌ಕೆಜಿ, ಯುಕೆಜಿ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲೇ ಆರಂಭಿಸಿ, ಇಂಗ್ಲಿಷ್‌ನ್ನು ಪ್ರಾಥಮಿಕ ಹಂತದಿಂದ ಕಲಿಸುವ ಕ್ರಮವನ್ನು ಕೈಗೊಳ್ಳಲಾಗುತ್ತಿದೆ’
-ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News