ಗೌರಿ ಲಂಕೇಶ್ ಗೆ 'ಡಾ.ಎನ್.ಎಂ.ಮುಹಮ್ಮದ್ ಅಲಿ ದತ್ತಿ ಪ್ರಶಸ್ತಿ'

Update: 2018-06-15 13:04 GMT

ಬೆಂಗಳೂರು, ಜೂ. 15: ಸಾಮಾಜಿಕ ಕಳಕಳಿ ಮತ್ತು ಕೋಮು ಸೌಹಾರ್ದತೆಗೆ ಬದ್ಧವಾಗಿ ಕ್ರಿಯಾಶೀಲವಾಗಿದ್ದ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಕೊಲೆಗೀಡಾದ ಗೌರಿ ಲಂಕೇಶ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಿ, ಗೌರವ ಸಲ್ಲಿಸಲು ಕೇರಳ ಗೆಜೆಟೆಡ್ ಅಧಿಕಾರಿಗಳ ಸಂಘ (ಕೆಜಿಒಅ) ನಿರ್ಧರಿಸಿದೆ. 

ಇತ್ತೀಚೆಗೆ ಅದರ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸಭೆಯು ತಿರುವನಂತಪುರದಲ್ಲಿ ಸೇರಿತ್ತು.

ಈ ಪ್ರಶಸ್ತಿಯನ್ನು 'ಡಾ.ಎನ್.ಎಂ.ಮುಹಮ್ಮದ್ ಅಲಿ ದತ್ತಿ ಪ್ರಶಸ್ತಿ' ಹೆಸರಿನಲ್ಲಿ ಸಂಘವು ನೀಡಲಿದೆ. ಡಾ. ಮುಹಮದ್ ಅಲಿ ಅವರು ಕೇರಳದ ಸರ್ಕಾರಿ ನೌಕರರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮಾತ್ರವಲ್ಲ, ಮುಖ್ಯವಾಗಿ ಅವರು ಗೆಜೆಟೆಡ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘ ಕಾಲ ನಾಯಕತ್ವ ಕೊಟ್ಟವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು ಸದಾ ಜನಪರವಾಗಿದ್ದವರು. ಹೀಗಾಗಿಯೇ ಅವರು ಅತ್ಯಂತ ಜನಪ್ರಿಯ ವೈದ್ಯರೂ ಆಗಿದ್ದರು. ಸಾಮಾಜಿಕ ಕಳಕಳಿಯುಳ್ಳ ಅವರು ಕೋಮು ಸೌಹಾರ್ದತೆಗಾಗಿ ಶ್ರಮಿಸಿದವರು.

ಅವರ ಮತ್ತೊಂದು ವಿಶೇಷತೆಯೆಂದರೆ ಹಲವಾರು ಮನೋ ವೈಜ್ಞಾನಿಕ, ವೈಚಾರಿಕ ವಿಶ್ಲೇಷಣೆಯುಳ್ಳ ಹಲವು ಪುಸ್ತಕಗಳನ್ನು ಹಾಗೂ ಕಾದಂಬರಿಯನ್ನೂ ಬರೆದಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿ ಸಂಘವು 2016 ರಿಂದ ಪ್ರಶಸ್ತಿಯನ್ನು ನೀಡುತ್ತಿದೆ.

ಈ ಪ್ರಶಸ್ತಿಯು 50,000 ರೂ. ಮತ್ತು ಒಂದು ಫಲಕವನ್ನು ಒಳಗೊಂಡಿದೆ. ಮೊದಲು ವೈದ್ಯಕೀಯ ಕ್ಷೇತ್ರ, ಕಳೆದ ವರ್ಷ ಕಾರ್ಮಿಕ ಸಂಘಟನೆ ಮುಖಂಡರಿಗೆ ಪ್ರಶಸ್ತಿಯನ್ನು ನೀಡಿದೆ. ಈ ಬಾರಿ ಸಾಮಾಜಿಕ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಬೇಕೆಂದು ಸಮಿತಿಯು ನಿರ್ಧರಿಸಿತ್ತು.

ಈ ಪ್ರಶಸ್ತಿ ಪ್ರಧಾನ ಸಮಾರಂಭವು  ಜೂನ್ 22 ರಂದು ಮಧ್ಯಾಹ್ನ 3 ಗಂಟೆಗೆ ತಿರುವನಂತಪುರದ ವಿಜೆಟಿ ಹಾಲ್ ನಲ್ಲಿ ಜರುಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News