10 ವರ್ಷ ಪ್ರಾಯ ತುಂಬುವವರೆಗೂ ಹೊಸ ಬಟ್ಟೆ ಧರಿಸಿದ ನೆನಪಿಲ್ಲ

Update: 2018-06-15 12:59 GMT

ನಾವು ನಮ್ಮ ತಂದೆ-ತಾಯಿಗೆ ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಸಹಿತ ಒಟ್ಟು 6 ಮಂದಿ ಮಕ್ಕಳು. ಕಿತ್ತು ತಿನ್ನುವ ಬಡತನ ನಮ್ಮದು. ಅಪ್ಪ ದೋಣಿ ಹುಟ್ಟು ಹಾಕಲು ಹೋಗುತ್ತಿದ್ದರೆ, ಉಮ್ಮ ಗದ್ದೆಯ ಕೆಲಸಕ್ಕೆ ಹೋಗುತ್ತಿದ್ದರು. ಮನೆ ಅಂತ ಹೇಳಿಕೊಳ್ಳುವ ವಿಷೇಶ ಏನೂ ಇರಲಿಲ್ಲ. ನಾಲ್ಕು ಕಂಬ ಊರಿ ಸುತ್ತ ಹೆಣೆದ ಮಡಲು ಕಟ್ಟಿದ ಸೋಗೆ ಮಾಡಿನ ಮನೆ ಅದು. ರಮಝಾನ್‌ನ 1 ತಿಂಗಳು ಮಾತ್ರ ಅಲ್ಲ, ವರ್ಷವಿಡೀ ನಮಗೆ ಉಪವಾಸ ಎಂದರೆ ತಪ್ಪಾಗಲಾರದು. ಅನ್ನಕ್ಕಿಂತ ಹಲಸು ತಿಂದು ಜೀವಿಸಿದ್ದೇ ಹೆಚ್ಚು. ಆದರೆ, ರಮಝಾನ್ ಸಂದರ್ಭದಲ್ಲಿ ಅನ್ನ ಬೇಯಿಸಿ ತಿನ್ನುತ್ತಿದ್ದೆವು. ನನಗೆ 10 ವರ್ಷ ಪ್ರಾಯ ಆಗುವವರೆಗೆ ಪೆರ್ನಾಳ್‌ಗೆ ಹೊಸ ಬಟ್ಟೆ ಧರಿಸಿದ ನೆನಪಿಲ್ಲ. ತಂದೆ-ತಾಯಿಯ ದುಡಿಮೆಯಿಂದ ಮಕ್ಕಳಿಗೆ ಏಕಕಾಲಕ್ಕೆ ಬಟ್ಟೆಬರೆ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಅಕ್ಕಪಕ್ಕದವರು ಹೊಸ ಅಂಗಿ-ಮುಂಡು ಧರಿಸಿ ಮಸೀದಿಗೆ ಹೋಗುವಾಗ ನಾವು ಆಸೆ ಕಣ್ಣಿನಿಂದ ನೋಡುತ್ತಿದ್ದೆವು.  ನಾನೂ ಹೀಗೆ ಹೊಸ ಬಟ್ಟೆ ಯಾವಾಗ ಧರಿಸುವುದು ಎಂದು ಮನಸ್ಸಲ್ಲೇ ಕೇಳಿ ದು:ಖಿಸುತ್ತಿದ್ದೆ.

ನಾನು ದುಡಿಯಲು ಆರಂಭಿಸಿದ ಬಳಿಕ ಹೊಸ ಬಟ್ಟೆ ಧರಿಸುವ ಭಾಗ್ಯ ಸಿಕ್ಕಿತು. ಅದೂ ಕಡಿಮೆ ಬೆಲೆಗೆ ಖರೀಸಿದ ಬಟ್ಟೆ. ಆವಾಗ ಅರ್ಧತೋಳಿನ ಅಂಗಿ ಮತ್ತು ಮುಂಡು (ಲುಂಗಿ). ಅದರ ಹೊರತು ಬೇರೆ ಹೊಸತೇನೂ ಇರಲಿಲ್ಲ. ನಾನು ಸಣ್ಣವನಿರುವಾಗ ಹರೇಕಳ ಗ್ರಾಮದ ಪಂಜಿಮಾಡಿಯಲ್ಲಿದ್ದೆ. 1974ರ ನೆರೆ ಹಾವಳಿಯ ಬಳಿಕ ನ್ಯೂಪಡ್ಪುಗೆ ನಮ್ಮ ಮನೆ ಸ್ಥಳಾಂತರಗೊಂಡಿತು. ಆವಾಗ ಗ್ರಾಮದಲ್ಲಿ ಮೂರೋ-ನಾಲ್ಕೋ ಮಂದಿ ಟೈಲರ್‌ಗಳಿದ್ದರು. ಹೊಸ ಬಟ್ಟೆ ಖರೀದಿಸಿದರೂ ರಮಝಾನ್‌ನಲ್ಲಿ ಅದನ್ನು ತಕ್ಷಣ ಹೊಲಿದು ಕೊಡುತ್ತಿರಲಿಲ್ಲ. ಹಾಗಾಗಿ ಒಂದು ವಾರ ಟೈಲರ್‌ಗಳ ಬಳಿ ಹೋಗಿ ಬರುತ್ತಿದ್ದೆ. ಕೆಲವೊಮ್ಮೆ ‘ಪೆರ್ನಾಳ್’ನ ಮುಂಚಿನ ದಿನದ ರಾತ್ರಿ ಹೊಸ ಅಂಗಿ ಸಿಕ್ಕರೆ, ಇನ್ನು ಕೆಲವೊಮ್ಮೆ ‘ಪೆರ್ನಾಳ್’ನ ದಿನ ಮುಂಜಾನೆ ಅಂಗಿ ಸಿಗುತ್ತಿತ್ತು. ಆ ಬಟ್ಟೆ ಧರಿಸಿ ಮಸೀದಿಗೆ ಹೋಗುವ ಖುಷಿಯೇ ಬೇರೆ. ಇನ್ನು ‘ಪೆರ್ನಾಳ್’ನಂದು ಆವಾಗ ಈಗಿನಂತೆ ಬಿರಿಯಾನಿ, ‘ನೈಚೋರು’ ಇರಲಿಲ್ಲ. ಬಸಳೆಯ ಸಾರು ಮತ್ತು ದೋಸೆ. ಅದೇ ನಮ್ಮ ‘ಪೆರ್ನಾಳ್’ನ ವಿಶೇಷ ಆಹಾರ. ಅಂದಹಾಗೆ, ‘ಪೆರ್ನಾಳ್’ನಂದೂ ನಮಗೆ ಹೊಟ್ಟೆ ತುಂಬಾ ತಿಂದು ಗೊತ್ತೇ ಇರಲಿಲ್ಲ. ಹಾಗಾಗಿಯೋ ಏನೋ, ನನಗೆ ಈಗಲೂ ಹಸಿವು ಎಂಬುದು ಇಲ್ಲ.

ಹರೇಕಳ ಹಾಜಬ್ಬ, (ಅಕ್ಷರ ಸಂತ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News