ರಾತ್ರಿ ಒಮ್ಮೆ ಹಗಲಾಗಲಿ ಎಂದು ಆಸೆಪಟ್ಟಿದ್ದು ಎಷ್ಟೋ?

Update: 2018-06-15 13:46 GMT

ಬಾಲ್ಯದ ಪೆರ್ನಾಳ್‌ನ ಸಂಭ್ರಮ ಒಂದೇ... ಎರಡೇ... ಅಂದಿನ ಆ ಖುಷಿಯನ್ನು ವಿವರಿಸಲು ಸಾಧ್ಯವಿಲ್ಲ. ನಮ್ಮದು ಆರ್ಥಿಕವಾಗಿ ಮಧ್ಯಮ ವರ್ಗದ ಕುಟುಂಬ. ನಮಗೆ ಸ್ವತಃ ಬಡತನದ ಅರಿವು ಆಗದಿದ್ದರೂ ಕೂಡ ಅಕ್ಕಪಕ್ಕದ ಜನರ ಬಡತನ ಅರಿವಿಗೆ ಬಂದಿತ್ತು. ನಾವು ಪೆರ್ನಾಳ್‌ನಂದು ಖುಷಿಪಡುವಾಗ ಬಡವರೂ ಖುಷಿ ಪಡಲಿ ಎಂದು ಆಸೆಪಡುತ್ತಿದ್ದೆವು.

ಹೊಸ ಅಂಗಿ ಹೊಲಿದು ಮನೆಗೆ ತಂದ ಬಳಿಕ ಅದನ್ನೊಮ್ಮೆ ಹಾಕಿ ನೋಡಿ ಸಂಭ್ರಮಿಸದೆ ನಿದ್ದೆ ಇಲ್ಲ. ಹಾಗಾಗಿ ಪೆರ್ನಾಳ್‌ನ ಮುಂಚಿನ ರಾತ್ರಿ ಒಮ್ಮೆ ಹಗಲಾಗಲಿ ಎಂದು ಆಸೆಪಟ್ಟಿದ್ದು ಎಷ್ಟೋ? ಆದರೆ, ಆ ರಾತ್ರಿ ಅಷ್ಟು ಬೇಗ ಹಗಲಾಗಬೇಕಲ್ಲ... ಹಾಗಾಗಿ ನಮಗೆ ಅಂದು ನಿದ್ದೆಯೇ ಇಲ್ಲ.

ಕಾಲ ಬದಲಾಗಿದೆ. ಇಂದು ಪೆರ್ನಾಳ್‌ನ ಖುಷಿ ಸಂಭ್ರಮ ಇಲ್ಲವೇ ಇಲ್ಲ. ಹಿಂದೆ ಶ್ರೀಮಂತ, ಬಡವ, ಮಧ್ಯಮ ವರ್ಗದ ವ್ಯಕ್ತಿಯೇ ಆಗಿರಲಿ, ಪೆರ್ನಾಳ್‌ನ ಬಟ್ಟೆಬರೆ ಖರೀದಿಯಲ್ಲೊಂದು ಶಿಸ್ತು ಇರುತ್ತಿತ್ತು. ಆದರೆ ಇಂದು ಅದಿಲ್ಲವೇ ಇಲ್ಲ. ಇಂದು ಪೆರ್ನಾಳ್‌ನಂದೂ ಕೂಡಾ ಬಟ್ಟೆಬರೆ ಖರೀದಿಸಲು ಹೋಗುವವರಿರುತ್ತಾರೆ.

ಹಿಂದೆ ಪೆರ್ನಾಳ್ ಅನ್ನು ಸ್ವಾಗತಿಸುವ ಪರಿಪಾಠ ವಿತ್ತು. ಆದರೆ ಈಗ ಅದಿಲ್ಲ... ಎಲ್ಲವೂ ಯಾಂತ್ರಿಕ ಜೀವನದಲ್ಲೇ ಕಾಲ ಸವೆದು ಹೋಗುತ್ತದೆ. ಹಿಂದೆ ಬಡತನ ಇತ್ತು. ಕೊಡುವವರು ಕಡಿಮೆ ಇದ್ದರು. ಈಗ ಬಡತನ ಭಾಗಶಃ ದೂರವಾಗಿದೆ. ಕೊಡುವವರೂ ಧಾರಾಳ ಇದ್ದಾರೆ. ಆದರೆ ಕೊಟ್ಟಷ್ಟು ಸಾಲದು. ತಾನು ಏನನ್ನೂ ಪಡೆಯಲು ಅನರ್ಹ ಎಂದು ಗೊತ್ತಿದ್ದೂ ಕೂಡಾ ‘ಬೇಕು... ಬೇಕು..’ ಎಂದು ಆಶಿಸುವವರೇ ಹೆಚ್ಚು. ಇಂದು ಪೆರ್ನಾಳ್ ಆಚರಣೆಯ ಶೈಲಿ ಬದಲಾಗಿದೆ. ಆದರೆ, ಮನಸ್ಸು ಬದಲಾಗಿಲ್ಲ. ಆಚರಣೆಯೊಂದಿಗೆ ಮನಸ್ಸೂ ಬದಲಾದರೆ ಪೆರ್ನಾಳ್‌ನ ಸಂಭ್ರಮಕ್ಕೆ ಪಾರವೇ ಇಲ್ಲ, ಅಲ್ಲವೇ?

 ಮುಹಮ್ಮದ್ ಕುಂಜತ್ತಬೈಲ್

ಉಪಮೇಯರ್, ಮಹಾನಗರ ಪಾಲಿಕೆ ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News