ಪೆರ್ನಾಳ್‌ನ ನಮಾಝ್ ತಪ್ಪಿದಾಗ ಎದೆ ಢವ ಢವ...

Update: 2018-06-15 14:50 GMT

ನಮಗೆ ಆ ಸಂದರ್ಭ ಆರ್ಥಿಕ ಬಡತನವಿತ್ತು. ಆದರೂ ಅಪ್ಪ ಪೆರ್ನಾಳ್ ಸಹಿತ ಮದುವೆ, ಮುಂಜಿ ಮತ್ತಿತರ ಸಂಭ್ರಮದ ದಿನಗಳಂದು ನಮಗೆ ಹೇಗಾದರೂ ಹೊಸ ಬಟ್ಟೆಬರೆ ತಂದು ಕೊಡುತ್ತಿದ್ದರು. ಅಪ್ಪ ತೀರಿ ಹೋಗಿ ಸುಮಾರು 10 ವರ್ಷಗಳಾದವು. ನನಗೆ ಆಗ 10 ವರ್ಷ ಪ್ರಾಯ. ಅಪ್ಪನಿಲ್ಲದ ಮನೆ ಖಾಲಿ ಖಾಲಿ... ‘ಇದ್ದತ್’ ಮುಗಿದ ಬಳಿಕ ಉಮ್ಮ ಹೊರಗೆ ಹೋಗಿ ದುಡಿಯುವುದು ಅನಿವಾರ್ಯವಾಯಿತು. ನನಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಮತ್ತು ಇಬ್ಬರು ತಂಗಿಯರು. ಹೀಗೆ ಆರು ಮಕ್ಕಳನ್ನು ಸಾಕುವ ಹೊಣೆ ಉಮ್ಮನದ್ದಾಗಿತ್ತು. ಕುಟುಂಬದ ಸದಸ್ಯರಲ್ಲದೆ ಅಕ್ಕಪಕ್ಕದವರು ಕೊಡುತ್ತಿದ್ದ ಫಿತ್ರ್ ಝಕಾತ್‌ನ ಅಕ್ಕಿಯನ್ನು ಕಾಣುವಾಗ ಮನದ ಮೂಲೆಯಲ್ಲೊಂದು ಖುಷಿ.

ಉಮ್ಮ, ದೊಡ್ಡಪ್ಪ, ಚಿಕ್ಕಪ್ಪರ ಅಣತಿಯಂತೆ ಯತೀಂ ಹುಡುಗನಾದ ನಾನು ದರ್ಸ್ ಕಲಿಯಲು ಮಂಜನಾಡಿಗೆ ತೆರಳಿದೆ. ಅಲ್ಲಿ ಸಿಗುವ ಹೊಸ ಬಟ್ಟೆ ಬರೆಯನ್ನು ಸ್ವೀಕರಿಸಿದಾಗ ಅಪ್ಪ ತಂದು ಕೊಡುತ್ತಿದ್ದ ಅಂಗಿ-ಪ್ಯಾಂಟ್‌ಗಳು ನೆನಪಿಗೆ ಬರುತ್ತಿತ್ತು. ಹೊಸ ಬಟ್ಟೆಯ ಆ ಸುವಾಸನೆಯಂತೂ ಪೆರ್ನಾಳ್‌ನ ಸಂಜೆಯವರೆಗೂ ಮೂಗಿಗೆ ಬಡಿಯುತ್ತಿತ್ತು. ‘ಉಸ್ತಾದ್’ರಂತೆ ಬಿಳಿ ಅಂಗಿ, ಲುಂಗಿ, ತಲೆಗೆ ಮುಂಡಾಸು ಕಟ್ಟಿ ಮನೆಗೆ ಹೋಗುವಾಗ ಎಲ್ಲಿಲ್ಲದ ಖುಷಿ.

ನಾನು ಪ್ರತೀ ಪೆರ್ನಾಳ್‌ಗೆ ಊರಿನ ಮಸೀದಿಗೆ ಹೋಗುತ್ತಿದ್ದೆ. ಎರಡ್ಮೂರು ವರ್ಷಗಳ ಹಿಂದಿನ ನೆನಪು. ನಮ್ಮ ಮಸೀದಿಯಲ್ಲಿ ಪೆರ್ನಾಳ್ ನಮಾಝ್‌ನ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ನನಗೆ ಅದರ ಅರಿವು ಇರಲಿಲ್ಲ. ನಾನು ಎಂದಿನ ಸಮಯಕ್ಕೆ ಮಸೀದಿಗೆ ಹೋದಾಗ ಪೆರ್ನಾಳ್ ನಮಾಝ್ ಮುಗಿದು ಖುತ್ಬಾ ಆಗುತ್ತಿತ್ತು. ನನ್ನಂತೆ ಸಮಯದ ಬದಲಾವಣೆ ಗೊತ್ತಿಲ್ಲದ ಸುಮಾರು 30-40 ಮಂದಿಯೂ ನಮಾಝ್ ತಪ್ಪಿದ್ದರಿಂದ ಪರಿತಪಿಸುತ್ತಿದ್ದರು. ನನ್ನನ್ನು ಕಂಡೊಡನೆ ‘ನೀನೇ ಇಮಾಮ್ ನಿಲ್ಲು’ ಎಂದು ಒತ್ತಾಯಿಸಿದರು. ನನಗೋ ಎದೆ ಢವ... ಢವ... ಊರಿನವರಿಗೆ ಹೇಗೆ ಇಮಾಮ್ ನಿಲ್ಲಲಿ, ತಪ್ಪಿದರೆ... ಎಂಬ ಅಳುಕು. ಆದರೆ ಹಿಂದೇಟು ಹಾಕುವಂತಿರಲಿಲ್ಲ. ಉಪಾಯವಿಲ್ಲದೆ, ನಮಾಝ್‌ಗೆ ನೇತೃತ್ವ ನೀಡಿದೆ. ನಮಾಝ್ ಪೂರೈಸಿದಾಗ ಧನ್ಯತಾ ಭಾವ. ಒಟ್ಟಿನಲ್ಲಿ ಪ್ರತೀ ಪೆರ್ನಾಳ್ ಹೊಸ ಅನುಭವವನ್ನೇ ನೀಡುತ್ತಿದೆ.

ನೌಫಲ್ ಅರಸ್ತಾನ,

(ದಅ್ವಾ ಕಾಲೇಜು ವಿದ್ಯಾರ್ಥಿ, ಅಲ್ ಮದೀನ ಮಂಜನಾಡಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News