ಈದುಲ್ ಫಿತ್ರ್ : ರಾಜ್ಯದ ಜನತೆಗೆ ಮುಖ್ಯಮಂತ್ರಿ ಶುಭಾಶಯ

Update: 2018-06-15 14:46 GMT

ಬೆಂಗಳೂರು, ಜೂ. 15: ಈದುಲ್ ಫಿತ್ರ್ ಹಬ್ಬದ ಸುಸಂದರ್ಭದಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.

ಒಂದು ತಿಂಗಳ ಉಪವಾಸ ವೃತದ ಮೂಲಕ ಮನಃಶುದ್ಧಿ ಹಾಗೂ ದೇಹ ಶುದ್ಧಿಗೆ ಪೂರಕವಾಗುವ ರಮಝಾನ್‌ನ ಆಚರಣೆಗಳು ವಿಶಿಷ್ಠ ಮತ್ತು ಭಿನ್ನ. ಉಪವಾಸದ ಅಂತ್ಯದಲ್ಲಿ ಆಚರಿಸುವ ಈದುಲ್ ಫಿತ್ರ್ ಹಬ್ಬದಲ್ಲಿ ಉಳ್ಳವರು ಇಲ್ಲದವರಿಗೆ ಆಹಾರ-ವಸ್ತ್ರ ಕೊಡುಗೆಗಳನ್ನು ಕೊಟ್ಟು ಸಂಭ್ರಮಿಸುವುದು ಹಬ್ಬದ ವಿಶೇಷತೆಗಳಲ್ಲಿ ವಿಶೇಷತೆ. ದಾನದ ಈ ಸಂಪ್ರದಾಯವು ತಾನೂ ಬದುಕುವುದರ ಜೊತೆಗೆ ಮತ್ತೊಬ್ಬರನ್ನೂ ಬದುಕಲು ಬಿಡಬೇಕು ಎಂಬುದನ್ನು ಅಭಿವ್ಯಕ್ತಿಸುವ ಶ್ರೇಷ್ಟ ಸಂದೇಶವನ್ನು ಸಾರುತ್ತದೆ. ಒಂದೆಡೆ ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತಿ ಕಂದರ ಸೃಷ್ಟಿಸುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಧರ್ಮ-ಧರ್ಮಗಳ ನಡುವೆ ಸೌಹಾರ್ದ ಕ್ಕೆ ಕಾರಣರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಲಿದೆ. ಇಂತಹ ಸಂದರ್ಭದಲ್ಲಿ, ರಮಝಾನ್ ಹಬ್ಬವು ಎಲ್ಲೆಡೆ ಎಲ್ಲರಲ್ಲೂ ಸೋದರತೆ ಮತ್ತು ಸೌಹಾರ್ದತೆ ಮೂಡಿಸಲು ಪ್ರೇರಣೆ ಹಾಗೂ ಸ್ಫೂರ್ತಿ ನೀಡಲಿ ಎಂಬುದೇ ನನ್ನ ಮನದಾಳದ ಹಾರೈಕೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News