​ಒಂದು ವರ್ಷ ನನ್ನನ್ನು ಮುಟ್ಟಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-06-15 14:52 GMT

ಬೆಂಗಳೂರು, ಜೂ. 15: ‘ಒಂದು ವರ್ಷದ ಅವಧಿಗೆ ನನ್ನನ್ನು ಮುಟ್ಟಲು ಸಾಧ್ಯವೇ ಇಲ್ಲ’ ಎಂದು ವಿರೋಧಿಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸುಭದ್ರ ಮತ್ತು ಸುಸ್ತಿರ ಆಡಳಿತಕ್ಕೆ ನಮ್ಮ ಆದ್ಯತೆ ಎಂದು ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಲೆಕ್ಕಪರಿಶೋಧಕರ ಸಂಘದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇನ್ನೂ ಎಷ್ಟು ದಿನ ಇರುತ್ತದೆ ಎಂದು ಮಾತನಾಡುತ್ತಿದ್ದಾರೆ. ಏನೇ ಆದರೂ ಮೈತ್ರಿಕೂಟ ಸರಕಾರಕ್ಕೆ ಧಕ್ಕೆಯಾಗದಂತೆ ಆಡಳಿತ ನಡೆಸುತ್ತೇವೆ ಎಂದು ಹೇಳಿದರು.

ಲೋಕಸಭೆ ಚುನಾವಣೆವರೆಗೂ ಈ ಮೈತ್ರಿಕೂಟ ಸರಕಾರವನ್ನು ಯಾರೊಬ್ಬರು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ನಮ್ಮ ಮುಖ್ಯ ಉದ್ದೇಶ. ಸಮ್ಮಿಶ್ರ ಸರಕಾರ ನಡೆಸುವುದು ಅಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಪ್ರಕೃತಿ ತನ್ನ ಪರವಾಗಿದೆ. ಇನ್ನು ಒಂದು ವರ್ಷ ಯಾರೂ ನನ್ನನ್ನು ಮುಟ್ಟಲೂ ಸಾಧ್ಯವಿಲ್ಲ. ಜನಪರ ಆಡಳಿತ ನೀಡುವತ್ತ ಗಮನಹರಿಸಿದ್ದೇನೆ. ರೈತರ ಸಾಲ ಮನ್ನಾ ಮಾಡಲು ಬದ್ಧನಾಗಿದ್ದೇನೆ ಎಂದ ಅವರು, ರಾಜ್ಯದ ಜನತೆ ಉತ್ತಮ ಆಡಳಿತ ನೀಡುವುದು ನಮ್ಮ ಗುರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News