ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌

Update: 2018-06-15 15:28 GMT

ಬೆಂಗಳೂರು, ಜೂ. 15: ನೂತನ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಏಕಾಏಕಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದರು. ಅಲ್ಲದೆ, ಅದೇ ಆಸ್ಪತ್ರೆಯಲ್ಲೆ ತಮ್ಮ ಬಿಪಿ ಪರೀಕ್ಷೆ ಮಾಡಿಸಿಕೊಂಡರು.

ಸಚಿವರ ದಿಢೀರ್ ಆಗಮಿಸಿರುವುದನ್ನು ಕಂಡು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಕಸಿವಿಸಿಗೊಂಡರು. ಮೊದಲು ವೈದ್ಯರು ಅವರನ್ನು ಬರಮಾಡಿಕೊಳ್ಳಲು ಯತ್ನಿಸಿದರಾದರೂ ಅದಕ್ಕೆ ಶಿವಕುಮಾರ್ ಒಪ್ಪದೆ ನೇರವಾಗಿ ರೋಗಿಗಳ ಬಳಿ ತೆರಳಿ ಅವರನ್ನು ವಿಚಾರಿಸಿದರು. ‘ನೀವು ಎಷ್ಟು ದಿನದಿಂದ ಆಸ್ಪತ್ರೆಗೆ ದಾಖಲಾಗಿದ್ದೀರಿ. ನಿಮಗಿರುವ ರೋಗವಾದರೂ ಏನು? ವೈದ್ಯರು ದಿನಕ್ಕೆ ಎಷ್ಟು ಬಾರಿ ಚಿಕಿತ್ಸೆ ಕೊಡುತ್ತಾರೆ. ಯಾವ ಸಮಯಕ್ಕೆ ಬರುತ್ತಾರೆ, ನಿಮ್ಮಿಂದೇನಾದರೂ ಹಣ ಪಡೆಯುತ್ತಾರೋ, ಔಷಧಿಯನ್ನು ಇಲ್ಲೇ ಕೊಡುತ್ತಾರೋ ಅಥವಾ ಹೊರಗಡೆ ತೆಗೆದುಕೊಳ್ಳುವಂತೆ ಬರೆದುಕೊಡುತ್ತಾರೋ, ಯಾರಾದರೂ ನಿಮಗೆ ಹಣ ನೀಡುವಂತೆ ಒತ್ತಡ ಹಾಕುತ್ತಾರೆಯೇ’ ಎಂದು ಪ್ರಶ್ನಿಸಿದರು.

ಈ ವೇಳೆ ಆಸ್ಪತ್ರೆಯ ವೈದ್ಯರೊಬ್ಬರು ಮಧ್ಯಪ್ರವೇಶಿಸಿ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಸ್ಪಷ್ಟಣೆ ನೀಡಲು ಮುಂದಾದ ಹಿನ್ನೆಲೆಯಲ್ಲಿ ‘ನಾನು ರೋಗಿಗಳನ್ನು ಕೇಳುತ್ತಿದ್ದೇನೆ. ಮಧ್ಯ ನೀವೇಕೆ ತಲೆ ಹಾಕುತ್ತಿದ್ದೀರಿ’ ಎಂದು ಶಿವಕುಮಾರ್ ಗದರಿದ ಪ್ರಸಂಗವೂ ನಡೆಯಿತು.

ಆ ಬಳಿಕ ಆಸ್ಪತ್ರೆಯ ಸ್ವಚ್ಛತೆ, ಅಡುಗೆ ಕೋಣೆ, ಪ್ರಯೋಗಾಲಯ ಸೇರಿದಂತೆ ಮತ್ತಿತರ ಕಡೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಸರಕಾರಿ ಆಸ್ಪತ್ರೆಗೆ ಬರುವವರು ಬಡವರು. ಅವರಿಗೆ ತೊಂದರೆ ಕೊಡಬೇಡಿ. ನಿಮ್ಮನ್ನು ರೋಗಿಗಳು ದೇವರು ಎಂದು ಭಾವಿಸುತ್ತಾರೆ. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಎಂದು ಸೂಚಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News