ಬೆಂಗಳೂರು: ಭಡ್ತಿ ಮೀಸಲಾತಿ ಸಂರಕ್ಷಣೆಗೆ ಆಗ್ರಹಿಸಿ ಪರಿಶಿಷ್ಟ ನೌಕರರ ಬೃಹತ್ ರ್ಯಾಲಿ
ಬೆಂಗಳೂರು, ಜೂ. 15: ಭಡ್ತಿ ಮೀಸಲಾತಿ ಸಂರಕ್ಷಣೆ ಹಾಗೂ ಹಿಂಭಡ್ತಿ ಮತ್ತು ಭಡ್ತಿ ಸಿಗದೆ ಅನ್ಯಾಯಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ(ಎಸ್ಟಿ) ನೌಕರರ ಹಿತರಕ್ಷಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು.
ಶುಕ್ರವಾರ ಇಲ್ಲಿನ ಸಂಗೊಳ್ಳಿರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ ಕೋಡೆ ವೃತ್ತ, ಆನಂದರಾವ್ ವೃತ್ತದ ಮೂಲಕ ಶೇಷಾದ್ರಿ ರಸ್ತೆಯಲ್ಲಿ ಸ್ವಾತಂತ್ರ ಉದ್ಯಾನವನದ ವರೆಗೆ ಸಾವಿರಾರು ಎಸ್ಸಿ-ಎಸ್ಟಿ ನೌಕರರು, ವಿವಿಧ ಸಂಘಟನೆಗಳ ಮುಖಂಡರು ಆಕರ್ಷಕ ರ್ಯಾಲಿ ನಡೆಸಿದರು.
ಆ ಬಳಿಕ ಇಲ್ಲಿನ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಸಿದ ಎಸ್ಸಿ-ಎಸ್ಟಿ ನೌಕರರು, ಭಡ್ತಿ ಮೀಸಲಾತಿ ರಕ್ಷಣೆಗಾಗಿ ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಬೇಕು. ಎಸ್ಸಿ-ಎಸ್ಟಿ ನೌಕರರ ಹಿಂಭಡ್ತಿ-ಜೇಷ್ಟತಾ ಪಟ್ಟಿಯಲ್ಲಿ ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು. ಜೇಷ್ಟತಾ ಪಟ್ಟಿ ತಯಾರಿಸುವ ನೆಪದಲ್ಲಿ ಅನ್ಯಾಯವೆಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದರು.
ಸರಕಾರದ ಪರವಾಗಿ ಸ್ಥಳಕ್ಕೆ ಧಾವಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಎಸ್ಸಿ-ಎಸ್ಟಿ ನೌಕರರ ಮನವಿ ಪತ್ರವನ್ನು ಸ್ವೀಕರಿಸಿದರು. ‘ಭಡ್ತಿ ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ನೌಕರರಿಗೆ ಆಗಿರುವ ಅನ್ಯಾಯ ಬಗ್ಗೆ ಗೊತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಗಮನಕ್ಕೆ ತಂದು ನೌಕರರ ಹಿತರಕ್ಷಣೆ ಮಾಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ, ನೌಕರರಿಗೆ ಭರವಸೆ ನೀಡಿದರು.
ರ್ಯಾಲಿಯಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿ, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಮೋಹನ್ ರಾಜ್, ವೆಂಕಟಸ್ವಾಮಿ, ಚನ್ನಕೃಷ್ಣಪ್ಪ, ಮಾರುತಿ ಮಾನ್ಪಡೆ ಸೇರಿ ಇನ್ನಿತರರು ಪಾಲ್ಗೊಂಡಿದ್ದರು. ನೇತೃತ್ವವನ್ನು ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್, ಡಾ.ವಿಜಯಕುಮಾರ್, ಆರ್.ಮೋಹನ್, ಬಾಲಕೃಷ್ಣಪ್ಪ ಸೇರಿದಂತೆ ಪದಾಧಿಕಾರಿಗಳು ವಹಿಸಿದ್ದರು.