ಗೌರಿ ಹತ್ಯೆ ಮಾಡಿದ್ದು ವಾಗ್ಮೋರೆ; ಐದು ರಾಜ್ಯಗಳಲ್ಲಿ ಉಗ್ರ ಸಂಘಟನೆಯ ಹೆಜ್ಜೆಗುರುತು: ಎಸ್ಐಟಿ

Update: 2018-06-15 17:06 GMT

ಬೆಂಗಳೂರು, ಜೂ.15: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಖ್ಯಾತ ಚಿಂತಕಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಆಘಾತಕಾರಿ ಸುದ್ದಿಗಳು ಹೊರಬೀಳುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರನೇ ಹಾಗೂ ಕೊನೆಯ ಆರೋಪಿ ಪರಶುರಾಮ ವಾಗ್ಮೋರೆ ಈ ಕೃತ್ಯ ಎಸಗಿದ್ದಾನೆ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ಬಹಿರಂಗಪಡಿಸಿದೆ.

ಗೌರಿಯವರನ್ನು ಹತ್ಯೆ ಮಾಡಲು ಬಳಸಿದ ಬಂದೂಕನ್ನೇ ವಿಚಾರವಾದಿ ಗೋವಿಂದ ಪನ್ಸಾರೆ ಹಾಗೂ ಎಂ.ಎಂ.ಕಲ್ಬುರ್ಗಿಯವರನ್ನು ಹತ್ಯೆ ಮಾಡಲು ಕೂಡ ಬಳಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

 ಗೌರಿ ಲಂಕೇಶ್‌ರನು ವಾಘ್ಮೋರೆ ಹತ್ಯೆಗೈದಿದ್ದಾನೆ. ವಿಚಾರವಾದಿ ಗೋವಿಂದ್ ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಒಂದೇ ಬಂದೂಕಿನಿಂದ ಹತ್ಯೆ ಮಾಡಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಬಂದೂಕನ್ನು ಇನ್ನೂ ವಶಪಡಿಸಿಕೊಂಡಿಲ್ಲ.

ಬಂದೂಕು ಇನ್ನೂ ಪತ್ತೆಯಾಗದಿದ್ದರೂ, ಬಂದೂಕಿನ ಹ್ಯಾಮರ್ನಲ್ಲಿ ಮತ್ತು ಗುಂಡಿನ ಹಿಂದೆ ಒಂದೇ ಬಗೆಯ ಗುರುತು ಪತ್ತೆಯಾಗಿದೆ ಎನ್ನುವ ನಿರ್ಧಾರಕ್ಕೆ ವಿಧಿವಿಜ್ಞಾನ ಪರೀಕ್ಷೆಯಿಂದ ಬರಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 ಹಿಂದೂ ಬಲಪಂಥೀಯ ಸಂಘಟನೆಯಿಂದ ಬಂದ ಸುಮಾರು 60 ಮಂದಿ, ಗುಂಪು ಕಟ್ಟಿಕೊಂಡು ಐದು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘಟನೆಗೆ ಇನ್ನೂ ಹೆಸರು ನೀಡಿಲ್ಲ. ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದಲ್ಲಿ ಈ ಗುಂಪು ಜಾಲ ಹೊಂದಿದೆ. ಆದರೆ ಉತ್ತರ ಪ್ರದೇಶದ ಜತೆ ನಂಟು ಹೊಂದಿರುವುದು ದೃಢಪಟ್ಟಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಟ್ಟಾ ಹಿಂದುತ್ವವಾದಿ ಸಂಘಟನೆಗಳಾದ ಮಹಾರಾಷ್ಟ್ರದ ಹಿಂದೂ ಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯಿಂದ ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದರೂ, ಈ ಹತ್ಯೆಯ ಹಿಂದೆ ಈ ಸಂಘಟನೆಗಳ ನೇರ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಭಯ ಸಂಘಟನೆಗಳು ಈ ಹತ್ಯೆಯಲ್ಲಿ ತಮ್ಮ ಪಾತ್ರ ಇದೆ ಎಂಬ ವರದಿಗಳನ್ನು ಅಲ್ಲಗಳೆದಿವೆ.

ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಈ ಗ್ಯಾಂಗ್‌ಗೆ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿ ಈ ಜಾಲ ಭೇದಿಸಲಾಗಿದೆ. ಲಂಕೇಶ್ ಹತ್ಯೆಯಲ್ಲಿ ಇನ್ನೂ ಮೂವರು ಶಾಮೀಲಾಗಿರುವ ಸಾಧ್ಯತೆಯಿದೆ ಎಂದು ಅವರು ಬಹಿರಂಗಪಡಿಸಿದರು. ಕಳೆದ ವರ್ಷದ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಬೆಂಗಳೂರಿನ ತಮ್ಮ ನಿವಾಸದ ಬಳಿ ಹತ್ಯೆಯಾಗಿದ್ದರು.

ವಾಗ್ಮೋರೆಯ ಚಹರೆ, ಗೌರಿ ಲಂಕೇಶ್ ಅವರ ಮನೆಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿಯ ಚಹರೆಯನ್ನು ಹೋಲುತ್ತದೆ. ಈ ಗ್ಯಾಂಗ್ ಕೃತ್ಯ ಎಸಗುವ ಮುನ್ನ ಯೋಜನೆ ರೂಪಿಸಿದೆ. ಇಡೀ ಪ್ರಕ್ರಿಯೆಯಲ್ಲಿ ಗುರಿ ಮಾಡಲ್ಪಟ್ಟ ವ್ಯಕಿಯ ದೌರ್ಬಲ್ಯಗಳನ್ನು ಪತ್ತೆ ಮಾಡಲಾಗಿದೆ. ಪ್ರತಿಯೊಬ್ಬರ ಹತ್ಯೆಗೆ ಆರು ತಿಂಗಳಿಂದ ಒಂದು ವರ್ಷದ ಅವಧಿ ಹಿಡಿದಿದೆ ಎಂದು ಅವರು ಹೇಳಿದ್ದಾರೆ.

ಈ ಗ್ಯಾಂಗ್ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಹತ್ಯೆ ಮಾಡುವ ಸಂಚಿನ ಕೊನೆಯ ಹಂತ ತಲುಪಿತ್ತು. ಆ ಸಂದರ್ಭದಲ್ಲಿ ಅವರನ್ನು ಸೆರೆಹಿಡಿದೆವು ಎಂದು ಸ್ಪಷ್ಟಪಡಿಸಿದ್ದಾರೆ. ಭಗವಾನ್ ಹತ್ಯೆ ಸಂಚನ್ನು ಕರ್ನಾಟಕ ಪೊಲೀಸರು ಇತ್ತೀಚೆಗೆ ವಿಫಲಗೊಳಿಸಿದ್ದರು. ವಿಚಾರಣೆಯ ವೇಳೆ, ಈ ಆರೋಪಿಗಳು ಲಂಕೇಶ್ ಅವರ ಹತ್ಯೆಯ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿತ್ತು.

ಹಿಂದೂ ದೇವತೆಗಳ ವಿರುದ್ಧ ತಮ್ಮ ಬರಹಗಳ ಮೂಲಕ ಭಗವಾನ್ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಎಸ್ಐಟಿ ಇತ್ತೀಚೆಗೆ ಶಂಕಿತರ ದಿನಚರಿಯನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ ಹಿಟ್‌ಲಿಸ್ಟ್ ಕೂಡಾ ಸಿಕ್ಕಿದೆ. ಖ್ಯಾತ ಚಿತ್ರನಟ ಮತ್ತು ರಂಗಕರ್ಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಹೆಸರೂ ಕೊನೆಯ ಹಂತದಲ್ಲಿತ್ತು.

ಭಗವಾನ್ ಮತ್ತು ಕಾರ್ನಾಡ್ ಹೊರತುಪಡಿಸಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ವಿಚಾರವಾದಿ ಸಿ.ಎಸ್.ದ್ವಾರಕಾನಾಥ್ ಮತ್ತು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ ಕೂಡಾ ಈ ಪಟ್ಟಿಯಲ್ಲಿದ್ದು. ಹಿಂದೂ ಬಲಪಂಥೀಯ ಚಟುವಟಿಕೆಗಳ ವಿರುದ್ಧ ಇವರೆಲ್ಲರೂ ಧ್ವನಿ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಂ.ಎಂ.ಕಲ್ಬುರ್ಗಿ, ಹಿಂದೂ ಧರ್ಮದ ಮೂಢನಂಬಿಕೆಗಳ ವಿರುದ್ಧ ಬಹಿರಂಗ ಸಮರ ಸಾರಿದ್ದರು. ಇವರು 2015ರ ಆಗಸ್ಟ್‌ನಲ್ಲಿ ಧಾರವಾಡದಲ್ಲಿ ಹತ್ಯೆಗೀಡಾಗಿದ್ದರು. ಅದೇ ವರ್ಷದ ಫೆಬ್ರವರಿಯಲ್ಲಿ ಎಡಪಂಥೀಯ ಚಿಂತಕ, ರಾಜಕಾರಣಿ ಗೋವಿಂದ್ ಪನ್ಸಾರೆ ಅವರು ಕೊಲ್ಲಾಪುರದಲ್ಲಿ ಹತ್ಯೆಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News