ಹಲಸಿನ ಹಣ್ಣಿನ ಈ ಔಷಧೀಯ ಗುಣಗಳು ನಿಮಗೆ ಗೊತ್ತಿರಲಿ

Update: 2018-06-16 11:35 GMT

ಹಲಸಿನ ಹಣ್ಣನ್ನು ಇಷ್ಟ ಪಡದವರು ಯಾರಾದರೂ ಇದ್ದಾರೆಯೇ? ಆದರೆ ಅದರ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇಲ್ಲಿದೆ ಅವುಗಳ ಮಾಹಿತಿ.....

►ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ನಮ್ಮ ಶರೀರದಲ್ಲಿಯ ಇಲೆಕ್ಟ್ರೋಲೈಟ್‌ಗಳ ಜೊತೆಗೆ ದ್ರವಗಳ ಮಟ್ಟವನ್ನು ಕಾಯ್ದುಕೊಳ್ಳಲು ಪೊಟ್ಯಾಷಿಯಂ ಅಗತ್ಯವಾಗಿದೆ. ಹಲಸಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದ್ದು ಸೋಡಿಯಂ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ತನ್ಮೂಲಕ ರಕ್ತದೊತ್ತಡ ಹೆಚ್ಚುವುದನ್ನು ತಡೆಯುತ್ತದೆ.

►ಕ್ಯಾನ್ಸರ್‌ನ್ನು ತಡೆಯುತ್ತದೆ

ಉತ್ಕರ್ಷಕ ಒತ್ತಡಗಳಿಂದಾಗಿ ಶರೀರದಲ್ಲಿ ಉತ್ಪತ್ತಿಯಾಗುವ ಫ್ರೀ ರ್ಯಾಡಿಕಲ್‌ಗಳು ಡಿಎನ್‌ಎಗೆ ಹಾನಿಯನ್ನುಂಟುಮಾಡಿ ಕ್ಯಾನ್ಸರ್ ಕೋಶಗಳು ಉಂಟಾಗಲು ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತವೆ. ಹಲಸಿನ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು,ಫ್ಲಾವನಾಯ್ಡಾಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಹೇರಳವಾಗಿದ್ದು,ಇವು ಇಂತಹ ಉತ್ಕರ್ಷ್ಕಕ ಒತ್ತಡಗಳು ಉಂಟಾಗುವುದನ್ನು ತಡೆಯುತ್ತವೆ ಮತ್ತು ಕ್ಯಾನ್ಸರ್‌ನ್ನು ದೂರವಿರಿಸುತ್ತವೆ.

►ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಹಲಸಿನ ಹಣ್ಣು ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಒಳಗೊಂಡಿದೆ. ಅದರಲ್ಲಿರುವ ಪೊಟ್ಯಾಷಿಯಂ ಮೂತ್ರಪಿಂಡಗಳ ಮೂಲಕ ಕ್ಯಾಲ್ಸಿಯಂ ನಷ್ಟವನ್ನು ತಡೆಯುತ್ತದೆ ಮತ್ತು ವಿಟಾಮಿನ್ ಸಿ ಶರೀರವು ಹೆಚ್ಚಿನ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಮೂಳೆಗಳ ಸಾಂದ್ರತೆಯು ಹೆಚ್ಚಿ ಅವು ಬಲಿಷ್ಠಗೊಳ್ಳುತ್ತವೆ.

►ನರಮಂಡಲಕ್ಕೆ ಒಳ್ಳೆಯದು

 ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣು ಮತ್ತು ಮಾವಿನಹಣ್ಣಿಗಿಂತ ಹೆಚ್ಚು ನಿಯಾಸಿನ್ ಮತ್ತು ಥಿಯಾಮೈನ್ ಇರುತ್ತವೆ. ಕ್ರೀಡಾಟುಗಳಿಗೆ ಅದು ಉತ್ತಮ ಪೌಷ್ಟಿಕ ಆಹಾರವಾಗಿದೆ. ಅದರಲ್ಲಿಯ ಪೋಷಕಾಂಶಗಳು ನರಕೋಶಗಳು ಮತ್ತು ಸ್ನಾಯುಗಳಿಗೆ ಅಗತ್ಯವಾಗಿರುವುದರಿಂದ ಸ್ನಾಯುಗಳು ದುರ್ಬಲಗೊಳ್ಳುವುದನ್ನು,ದೈಹಿಕ ಮತ್ತು ಮಾನಸಿಕ ಸುಸ್ತು ಹಾಗೂಒತ್ತಡಗಳನ್ನು ತಡೆಯುತ್ತದೆ.

►ಮಧುಮೇಹಕ್ಕೆ ಒಳ್ಳೆಯದು

ಮಧುಮೇಹಿಗಳಲ್ಲಿ ಗ್ಲುಕೋಸ್ ಸಹಿಷ್ಣುತೆಯನ್ನು ಹೆಚ್ಚಿಸುವ ತನ್ನ ಸಾಮರ್ಥ್ಯದಿಂದಾಗಿ ಮಧುಮೇಹದ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧಿಗಳಲ್ಲಿ ಹಲಸಿನ ಹಣ್ಣು ಉಪಯೋಗಿಸಲ್ಪಡುತ್ತದೆ.

►ಹೊಟ್ಟೆಹುಣ್ಣುಗಳನ್ನು ಗುಣಪಡಿಸುತ್ತದೆ

ಹಲಸಿನ ಹಣ್ಣು ಹುಣ್ಣು ನಿರೋಧಕ,ನಂಜು ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು,ಇವು ಹೊಟ್ಟೆ ಹುಣ್ಣುಗಳು ಮತ್ತು ಇತರ ಜೀರ್ಣ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತವೆ.

►ಚರ್ಮದಲ್ಲಿನ ಕಲೆಗಳನ್ನು ನಿವಾರಿಸುತ್ತದೆ

ಮೆಲಾನಿನ್ ಉತ್ಪತ್ತಿಯನ್ನು ತಡೆಯುವ ಗುಣಗಳು ಹಲಸಿನ ಹಣ್ಣಿನಲ್ಲಿನಲ್ಲಿವೆ ಮತ್ತು ಇದರಿಂದಾಗಿ ಚರ್ಮದ ಕಲೆಗಳನ್ನು ಮತ್ತು ಚರ್ಮವು ಕಪ್ಪಾಗುವುದನ್ನು ನಿವಾರಿಸುವುದರಲ್ಲಿ ನೆರವಾಗುತ್ತದೆ. ಹಲಸಿನ ಬೀಜಗಳನ್ನು ನುಣ್ಣಗೆ ಅರೆದು ಲೇಪಿಸಿಕೊಳ್ಳುವ ಮೂಲಕ ಹೊಳೆಯುವ ಚರ್ಮವನ್ನು ಪಡೆಯಬಹುದು. ಹಲಸಿನ ಹಣ್ಣಿನಲ್ಲಿನಲ್ಲಿರುವ ಉತ್ಕರ್ಷಣ ನಿರೋಧಕ ಗುಣದಿಂದಾಗಿ ವಯಸ್ಸಾಗುವುದು ಸಹ ನಿಧಾನಗೊಳ್ಳುತ್ತದೆ.

►ಶೀತ ಮತ್ತು ಸೋಂಕುಗಳನ್ನು ತಡೆಯುತ್ತದೆ

ಹಲಸಿನ ಹಣ್ಣಿನಲ್ಲಿರುವ ವಿಟಾಮಿನ್ ಸಿ ಶೀತ ಮತ್ತು ಸಣ್ಣಪುಟ್ಟ ಸೋಂಕುಗಳನ್ನು ತಡೆಯುತ್ತದೆ. ಅದರಲ್ಲಿಯ ಉತ್ಕರ್ಷಣ ನಿರೋಧಕಗಳು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.

►ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಏರುಪೇರುಗಳು ಶರೀರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಹಲಸಿನ ಹಣ್ಣಿನಲ್ಲಿರುವ ಮ್ಯಾಂಗನೀಸ್ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಆರೋಗ್ಯಕರ ಮಟ್ಟದಲ್ಲಿ ಕಾಯ್ದಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

►ರಕ್ತಹೀನತೆಯನ್ನು ತಡೆಯುತ್ತದೆ

ಹಲಸಿನ ಹಣ್ಣು ಕಬ್ಬಿಣವನ್ನು ಹೀರಿಕೊಳ್ಳುವ ರಕ್ತದ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅನೀಮಿಯಾ ಅಥವಾ ರಕ್ತಹೀನತೆಯನ್ನು ತಡೆಯುತ್ತದೆ. ಜೊತೆಗೆ ರಕ್ತದ ಉತ್ಪಾದನೆಗೆ ಅಗತ್ಯವಾಗಿರುವ ಮ್ಯಾಗ್ನೀಷಿಯಂ,ಮ್ಯಾಂಗನೀಸ್, ಫಾಲೇಟ್, ತಾಮ್ರ, ಪ್ಯಾಂಟೊಥೆನಿಕ್ ಆ್ಯಸಿಡ್,ವಿಟಾಮಿನ್ ಬಿ6,ನಿಯಾಸಿನ್,ಎ,ಸಿ,ಇ ಮತ್ತು ಕೆ ವಿಟಾಮಿನ್‌ಗಳನ್ನು ಅದು ಒಳಗೊಂಡಿದೆ.

►ಹೃದ್ರೋಗಗಳ ಅಪಾಯಗಳನ್ನು ತಗ್ಗಿಸುತ್ತದೆ

ಹಲಸಿನ ಹಣ್ಣಿನಲ್ಲಿರುವ ವಿಟಾಮಿನ್ ಬಿ6 ಹೊಮೊಸಿಸ್ಟೀನ್ ಮಟ್ಟವನ್ನು ತಗ್ಗಿಸುವ ಮೂಲಕ ಅಂತಃಸ್ತರ ಕೋಶಗಳಿಗೆ ಉಂಟಾಗುವ ಹಾನಿಯಿಂದಾಗುವ ರಕ್ತನಾಳಗಳ ಉರಿಯೂತವನ್ನು ತಡೆಯುತ್ತದೆ. ಹೊಮೊಸಿಸ್ಟೀನ್‌ನ ಅಧಿಕ ಮಟ್ಟವು ಹೃದಯರೋಗಗಳೊಂದಿಗೆ ಗುರುತಿಸಿಕೊಂಡಿದೆ.

►ಆರೋಗ್ಯಕರ ಥೈರಾಯ್ಡ

ಥೈರಾಯ್ಡನಲ್ಲಿ ಹಾರ್ಮೋನ್‌ಗಳ ಉತ್ಪಾದನೆ ಮತ್ತು ಹೀರುವಿಕೆಗೆ ಅಗತ್ಯವಾದ ತಾಮ್ರವು ಹಲಸಿನ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ಅದರಲ್ಲಿಯ ಹಲವಾರು ಕಿರು ಪೋಷಕಾಂಶಗಳು ಶರೀರದಲ್ಲಿಯ ಚಯಾಪಚಯ ಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

►ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣುಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ವಿಟಾಮಿನ್ ಎ ಮುಖ್ಯವಾಗಿದೆ. ಉತ್ಕರ್ಷಣ ನಿರೋಧಕವಾಗಿರುವ ಅದು ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುವ ಮೂಲಕ ಕಣ್ಣುಗಳನ್ನು ರಕ್ಷಿಸುತ್ತದೆ. ಹಲಸಿನ ಹಣ್ಣಿನಲ್ಲಿ ವಿಟಾಮಿನ್ ಎ ಸಮೃದ್ಧವಾಗಿದೆ.

►ಕರುಳಿನ ಚಲನವಲನನ್ನು ಕ್ರಮಬದ್ಧಗೊಳಿಸುತ್ತದೆ.

ಹಲಸಿನ ಹಣ್ಣಿನಲ್ಲಿ ಸಮೃದ್ಧವಾಗಿರುವ ನಾರು ಕರುಳಿನ ಚಲನವಲನಗಳನ್ನು ಕ್ರಮಬದ್ಧಗೊಳಿಸಲು ಮತ್ತು ಕ್ಯಾಲರಿಗಳನ್ನು ದಹಿಸಲು ನೆರವಾಗುತ್ತದೆ. ಅದು ಮಲಬದ್ಧತೆಯನ್ನು ಮತ್ತು ಇತರ ಯಾವುದೇ ಜೀರ್ಣ ಸಮಸ್ಯೆಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News