ಬಾಂಗ್ಲಾದೇಶದಲ್ಲಿ ಭೋರ್ಗರೆಯುವ ನದಿಗಳಲ್ಲಿ ಹೊಟ್ಟೆಪಾಡಿಗಾಗಿ ಮೀನುಗಾರಿಕೆ ನಡೆಸುತ್ತಿರುವ ರೊಹಿಂಗ್ಯಾ ನಿರಾಶ್ರಿತರು

Update: 2018-06-16 13:00 GMT

ಮ್ಯಾನ್ಮಾರ್‌ನಲ್ಲಿಯ ಮತೀಯ ಹಿಂಸಾಚಾರಗಳಿಂದ ಜೀವವುಳಿಸಿಕೊಳ್ಳಲು ಅಲ್ಲಿಂದ ಪರಾರಿಯಾಗಿ ಬಾಂಗ್ಲಾದೇಶವನ್ನು ಸೇರಿಕೊಂಡಿರುವ ರೊಹಿಂಗ್ಯಾ ನಿರಾಶ್ರಿತರು ಇಲ್ಲಿಯ ಶಿಬಿರಗಳಲ್ಲಿ ಅಸಹನೀಯ ಬದುಕು ದೂಡುತ್ತಿದ್ದಾರೆ. ಈ ಪೈಕಿ ಕೆಲವರು ಜೀವನೋಪಾಯಕ್ಕಾಗಿ ಜೀವದ ಹಂಗನ್ನೂ ತೊರೆದು ಭೋರ್ಗರೆಯುತ್ತಿರುವ ನದಿಗಳಿಗೆ ಇಳಿದು ಮೀನುಗಾರಿಕೆ ನಡೆಸುತ್ತಿದ್ದಾರೆ, ತನ್ಮೂಲಕ ಅಲ್ಪ ದಿನಗೂಲಿಯನ್ನು ಗಳಿಸುತ್ತಿದ್ದಾರೆ ಮತ್ತು ಕೆಲವೊಮ್ಮೆ ತಾವು ಹಿಡಿದ ಮೀನುಗಳಲ್ಲಿ ತಮ್ಮ ಕುಟುಂಬಕ್ಕಾಗಿ ಒಂದು ಪಾಲು ಅವರಿಗೆ ದೊರೆಯುತ್ತಿದೆ.

ನಿರಾಶ್ರಿತರ ಶಿಬಿರಗಳು

ವಿಶ್ವದ ಅತ್ಯಂತ ಉದ್ದನೆಯ ಬೀಚಿನಲ್ಲಿ ಮೀನುಗಾರರ ಬಡಾವಣೆಯ ಬಳಿಯಿರುವ ಶಮ್ಲಾಪುರ ನಿರಾಶ್ರಿತರ ಶಿಬಿರವು ಸುಮಾರು 10,000 ರೊಹಿಂಗ್ಯಾ ನಿರಾಶ್ರಿತರಿಗೆ ಮನೆಯಾಗಿದೆ.

 ಮ್ಯಾನ್ಮಾರ್‌ನ ರಾಖಿನೆ ರಾಜ್ಯದಿಂದ ಪರಾರಿಯಾಗಿ ಇಲ್ಲಿ ಸೇರಿ ಜೀವಗಳನ್ನು ಉಳಿಸಿಕೊಂಡಿದ್ದೇವೆ,ಹೀಗಾಗಿ ಇಲ್ಲಿ ನಮಗೇನು ದೊರೆಯುತ್ತಿದೆಯೋ ಅದರಲ್ಲಿಯೇ ತೃಪ್ತರಾಗಿದ್ದೇವೆ ಎನ್ನುತ್ತಾನೆ 20ರ ಹರೆಯದ ಮುಹಮ್ಮದ್ ಯೂಸುಫ್. ಮೀನುಗಾರನಾಗಿ ದುಡಿಯುತ್ತಿರುವ ಈತ ಪ್ರತಿ ಐದು ದಿನಗಳ ಕೆಲಸಕ್ಕೆ ಸುಮಾರು 160 ರೂ.ಗಳಿಂದ 240 ರೂ.ವರೆಗೆ ಗಳಿಸುತ್ತಾನೆ.

ಶಿಬಿರದಲ್ಲಿಯ ಬದುಕು

ರಾಖಿನೆಯಲ್ಲಿ ಎರಡು ತಿಂಗಳುಗಳ ಕಾಲ ದಿಗ್ಬಂಧನದಲ್ಲಿದ್ದ ಯೂಸುಫ್ ಮತ್ತು ಆತನ ಪತ್ನಿ ಸೊಬೊರಾ ಖಾತುನ್ ಅಲ್ಲಿಂದ ಹೇಗೋ ಪಾರಾಗಿ ಬಾಂಗ್ಲಾದೇಶವನ್ನು ಸೇರಿಕೊಂಡಿದ್ದರು. ಹಾಗೆ ಹುಟ್ಟೂರನ್ನು ತೊರೆಯುವಾಗ ಖಾತುನ್ ಒಂಭತ್ತು ತಿಂಗಳುಗಳ ತುಂಬು ಗರ್ಭಿಣಿಯಾಗಿದ್ದಳು. ನದಿ ದಾಟುವಾಗ ದಂಪತಿಯ ಮೂರರ ಹರೆಯದ ಪುತ್ರ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಬಾಂಗ್ಲಾ ತಲುಪಿದ ಬಳಿಕ ಖಾತುನ್ ಪುತ್ರಿ ರುಕಿಯಾಗೆ ಜನ್ಮ ನೀಡಿದ್ದಳು.

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಸಂದರ್ಭ ಸುಮಾರು ಏಳು ಲಕ್ಷ ರೊಹಿಂಗ್ಯಾಗಳು ಪರಾರಿಯಾಗಿದ್ದು,ಬಾಂಗ್ಲಾದೇಶದ ದಕ್ಷಿಣದ ಜಿಲ್ಲೆಯಾದ ಕಾಕ್ಸ್ ಬಜಾರ್‌ನ ಆಸುಪಾಸಿನಲ್ಲಿರುವ ತಾತ್ಕಾಲಿಕ ಶಿಬಿರಗಳಲ್ಲಿ ವಾಸವಾಗಿದ್ದಾರೆ.

ಕೆಲಸಕ್ಕಾಗಿ ಹುಡುಕಾಟ

ಕಾನೂನಿನಂತೆ ನಿರಾಶ್ರಿತರು ದುಡಿಯುವಂತಿಲ್ಲ. ಆದರೂ ಕೆಲವರು ಮೀನುಗಾರಿಕೆ ದೋಣಿಗಳಲ್ಲಿ ಕೆಲಸಗಳನ್ನು ಹುಡುಕಿಕೊಂಡಿದ್ದಾರೆ. ಇಂಥದೇ ದೋಣಿಗಳಲ್ಲಿ ಈ ಜನರು ಮ್ಯಾನ್ಮಾರ್‌ನಿಂದ ಇಲ್ಲಿಗೆ ಪರಾರಿಯಾಗಿ ಜೀವಗಳನ್ನು ಉಳಿಸಿಕೊಂಡಿದ್ದರು.

ಶಿಬಿರದಲ್ಲಿಯ ಇತರರು ಮೀನುಗಾರಿಕೆ ದೋಣಿಗಳಿಗೆ ಅಗತ್ಯವಾದ ಮಂಜುಗಡ್ಡೆಗಳನ್ನು ಒಡೆಯುವ ಕೆಲಸದಲ್ಲಿ,ಬಲೆ ಮತ್ತು ದೋಣಿ ದುರಸ್ತಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅವರ ದುಡಿಮೆ ಕಾನೂನುಬದ್ಧವಲ್ಲ. ಹಂಗಾಮಿನಲ್ಲಿ ಆಗಾಗ್ಗೆ ಇಂತಹ ಕೆಲಸಗಳು ಅವರಿಗೆ ದೊರೆಯುತ್ತಿವೆ ಮತ್ತು ಅಲ್ಪಗಳಿಕೆಯಲ್ಲೇ ಈ ಜನರು ಸಂತೃಪ್ತರಾಗಿದ್ದಾರೆ.

ಕೆಲವು ರೊಹಿಂಗ್ಯಾ ಮಹಿಳೆಯರು ಸಮೀಪದ ನಝೀರಾತೇಕ್ ನಲ್ಲಿರುವ ಯಾರ್ಡ್‌ನಲ್ಲಿ ಮೀನು ಒಣಗಿಸುವ ಕೆಲಸಗಳನ್ನು ಹುಡುಕಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ 100ರಿಂದ 200 ಟಾಕಾ(100 ಟಾಕಾ ಎಂದರೆ 82 ಭಾರತೀಯ ರೂ.) ಕೂಲಿ ದೊರೆಯುತ್ತಿದೆ.

ಮುಖಕ್ಕೆ ಖಡ್ಗವನ್ನು ಹಿಡಿದಿದ್ದರು

‘ಅವರು ನನ್ನ ಮುಖಕ್ಕೆ ಖಡ್ಗವನ್ನು ಹಿಡಿದಿದ್ದರು’ ರಾಖಿನೆಯಲ್ಲಿನ ಹಿಂಸಾಚಾರದಿಂದ ತಪ್ಪಿಸಿಕೊಂಡು ಪರಾರಿಯಾಗಿ ಜೀವ ಉಳಿಸಿಕೊಂಡ 30 ರ ಹರೆಯದ ಹಸೀನಾ ಬೇಗಂ ಹೇಳಿದ್ದು ಹೀಗೆ.

 ನಾನು ಪ್ರಜ್ಞೆಯನ್ನು ಕಳೆದುಕೊಂಡು ನೆಲದಲ್ಲಿ ಬಿದ್ದಿದ್ದೆ. ನೆರೆಕರೆಯವರು ನನ್ನನ್ನೆತ್ತಿ ದೋಣಿಗೆ ಸಾಗಿಸಿದ್ದರು ಮತ್ತು ನದಿಯನ್ನು ದಾಟಿ ನಾವು ಬಾಂಗ್ಲಾದೇಶವನ್ನು ಪ್ರವೇಶಿಸಿದ್ದೆವು ಎಂದು ಹೇಳಿದ ಹಸೀನಾ ತನ್ನ ಒಂದು ಕಣ್ಣಿನ ದೃಷ್ಟಿಯನು ಕಳೆದುಕೊಂಡಿದ್ದಾಳೆ. ಆ ಘೋರ ನೆನಪುಗಳು ಆಕೆಯಲ್ಲಿ ಇನ್ನೂ ಹಸಿರಾಗಿವೆ.

ಕುತುಪಲಂಗ್ ನಿರಾಶ್ರಿತರ ಶಿಬಿರದಿಂದ ಪರಾರಿಯಾಗಿ ಮೀನು ಒಣಗಿಸುವ ಕೆಲಸಕ್ಕೆ ಸೇರಿಕೊಂಡಿರುವ ಹಸೀನಾ,ನಮ್ಮ ಪಾಲಿಗೆ ಇದು ಸ್ವಲ್ಪ ಉತ್ತಮ ಬದುಕು. ಮೀನು ಒಣಗಿಸುವ ಕೆಲಸ ಮಾಡಿಕೊಂಡು ನಾಲ್ಕು ಕಾಸು ಗಳಿಸಲು ನನಗೆ ಸಾಧ್ಯವಾಗುತ್ತಿದೆ ಎಂದು ಹೇಳಿದಳು.

200 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಮೀನು ಒಣಗಿಸುವ ಯಾರ್ಡ್‌ಗಳಲ್ಲಿ ಪ್ರತಿ ವರ್ಷದ ಹಂಗಾಮಿನಲ್ಲಿ ಸುಮಾರು 100 ಟನ್ ಮೀನುಗಳನ್ನು ಒಣಗಿಸಲಾಗುತ್ತಿದೆ.

ಮಕ್ಕಳೂ ದುಡಿಯುತ್ತಾರೆ

ಮಕ್ಕಳು ನಸುಕಿನಲ್ಲಿ ದೋಣಿಗಳನ್ನು ತಳ್ಳುವ ಜೊತೆಗೆ ಮೀನುಗಾರಿಕೆಯಲ್ಲೂ ಪಾಲ್ಗೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಸಣ್ಣ ಚೀಲದಲ್ಲಿ ಕೆಲವು ಮೀನುಗಳು ದೊರೆಯುತ್ತವೆ. ಇವುಗಳನ್ನು ಬೀಚ್ ಪಕ್ಕದಲ್ಲಿಯ ವ್ಯಾಪಾರಿಗಳಿಗೆ ನೀಡಿ ಅವರಿಂದ ತಮ್ಮ ಕುಟುಂಬಕ್ಕೆ ಅಗತ್ಯವಾಗಿರುವ ಸಣ್ಣಪುಟ್ಟ ವಸ್ತುಗಳನ್ನು ಪಡೆದುಕೊಳ್ಳುತ್ತಾರೆ.

ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳನ್ನು ವಿಭಜಿಸಿರುವ ತೆಕ್ನಾಫ್ ನದಿಯ ಅಂಚಿನಲ್ಲಿರುವ ಉಪ್ಪು ತಯಾರಿಕೆ ಕೇಂದ್ರದಲ್ಲಿ ದುಡಿಯುತ್ತಿರುವ ಹಕೀಂ ಅಲಿ(45) ಉಪ್ಪಿನ ಚೀಲಗಳನ್ನು ಹೊರುತ್ತಾನೆ. ಪ್ರತಿ ಚೀಲಕ್ಕೆ ಆತನಿಗೆ ಸುಮಾರು ಎಂಟು ರೂ.ಕೂಲಿ ದೊರೆಯುತ್ತದೆ. ಮ್ಯಾನ್ಮಾರ್‌ನ ಬುಥಿಡಾಂಗ್ ನಿವಾಸಿಯಾಗಿದ್ದ ಹಕೀಂ ಎಂಟು ತಿಂಗಳ ಹಿಂದೆ ಅಲ್ಲಿಂದ ಪರಾರಿಯಾಗಿದ್ದ. ಹಿಂಸಾಕೋರರು ಆತನ ಓರ್ವ ಸೋದರನನ್ನು ಕೊಂದು ಹಾಕಿದ್ದರೆ,ಇನ್ನೋರ್ವ ಸೋದರನನ್ನು ಸೇನೆಯು ಜೈಲಿಗೆ ತಳ್ಳಿತ್ತು. ಅವರ ಮನೆ ಮತ್ತು ಭತ್ತದ ಗದ್ದೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗಿತ್ತು.

ಮ್ಯಾನ್ಮಾರ್‌ನಲ್ಲಿ ನಮಗೆ ನ್ಯಾಯ ಮತ್ತು ಚಲನವಲನ ಸ್ವಾತಂತ್ರವನ್ನು ನಾವು ಬಯಸುತ್ತಿದ್ದೇವೆ. ಮ್ಯಾನ್ಮಾರ್ ಸರಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸಿದ ದಿನವೇ ನಾವು ಅಲ್ಲಿಗೆ ಮರಳುತ್ತೇವೆ ಎನ್ನುತ್ತಾನೆ ಹಕೀಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News