ಶಾಕ್ ನೀಡುವ ವಿದ್ಯುತ್ ಬಿಲ್!

Update: 2018-06-17 05:11 GMT

ಭಾಗ-47

ವಿದ್ಯುಚ್ಛಕ್ತಿ ಮಂಡಳಿಯಿಂದ ಜನಸಾಮಾನ್ಯರು ಪಡುವ ತೊಂದರೆಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನನ್ನ ಅನುಭ ವವನ್ನೇ ವಿವರಿಸಿದ್ದೇನೆ. ಹೊಸ ಫ್ಲಾಟ್ ನಿರ್ಮಾಣದ ವೇಳೆ ವಿದ್ಯುಚ್ಛಕ್ತಿ ಸಂಪರ್ಕ ನೀಡಲಾಗುತ್ತದೆ. ಆದರೆ ಹಿಂದೆಲ್ಲಾ, ಸಂಪರ್ಕ ನೀಡಲು ಟ್ರಾನ್ಸ್ ಫಾರ್ಮರ್ ಇಲ್ಲ ಎಂಬ ನೆಪವೊಡ್ಡಲಾಗುತ್ತಿತ್ತು. ಬಳಿಕ ನಮ್ಮ ಹಣದಿಂದಲೇ ಟ್ರಾನ್ಸ್ ಫಾರ್ಮರ್ ಹಾಕಿಸಿ ಅದನ್ನು ವಿದ್ಯುತ್ ಮಂಡಳಿಯ ಆಸ್ತಿಯ ನ್ನಾಗಿಸಲಾಗುತ್ತಿತ್ತು. ಕೆಲವೊಮ್ಮೆ ಶಾಕ್ ನೀಡುವ ಬಿಲ್‌ಗಳನ್ನೂ ನೀಡಿ ಗ್ರಾಹಕರಿಗೆ ಆಘಾತ ನೀಡುವುದುಂಟು. ಈ ಬಗ್ಗೆಯೂ ನಾವು ಹೋರಾಟ ನಡೆಸಿದ್ದೇವೆ. ಮತ್ತೊಂದು ಸಾಮಾನ್ಯ ಸಂಗತಿ ಎಂದರೆ, ಮೀಟರ್ ಹಾಳಾದಾಗ ಅದನ್ನು ಬದಲಾಯಿಸ ಬೇಕು. ಆದರೆ ಆ ಸಂದರ್ಭ ಅವರು ಮೀಟರ್ ಇಲ್ಲ ಎನ್ನುವ ಉತ್ತರ ನೀಡುತ್ತಾರೆ. ಆಗ ಬಳಕೆದಾರರು ಹಾಗಿದ್ದಲ್ಲಿ ಸದ್ಯ ನೀವು ನೇರ ಸಂಪರ್ಕ ನೀಡಿ ಎಂದು ಹೇಳುತ್ತಾರೆ. ಲೈನ್‌ಮ್ಯಾನ್ ನೇರ ಸಂಪರ್ಕ ನೀಡಿ ಹೋಗುತ್ತಾನೆ. ನೇರ ಸಂಪರ್ಕ ನೀಡಿದಾಗ ಬಳಕೆದಾರರಿಗೆ ಮೀಟರ್ ಇಲ್ಲವೆಂದು ತಮಗೆ ಬೇಕಾಬಿಟ್ಟಿಯಾಗಿ ವಿದ್ಯುತ್ ಉಪಯೋಗಿಸುತ್ತಾರೆ. ಕೆಲ ಸಮಯದ ಬಳಿಕ ಮೀಟರ್ ಹಾಕಲಾಗುತ್ತದೆ. ಆಗ ಅಷ್ಟು ಸಮಯದಿಂದ ವಿದ್ಯುತ್ ಬೇಕಾಬಿಟ್ಟಿಯಾಗಿ ಅಭ್ಯಾಸವಾಗಿ ಹೋಗಿರುವ ಬಳಕೆದಾರರು ಅದೇ ರೀತಿಯಲ್ಲಿ ಬಳಕೆಯನ್ನು ಮುಂದುವರಿಸುತ್ತಾರೆ. ಆಗ ವಿದ್ಯುಚ್ಛಕ್ತಿಮಂಡಳಿಯಿಂದ ಬಿಲ್ ನೀಡುವವರು ಸರಾಸರಿ ನೋಡಿ ಹಿಂದೆ ಎಷ್ಟು ಕಟ್ಟಲಾಗಿದೆ ಎಂದು ನೋಡಿ ಅದರ ವ್ಯತ್ಯಾಸಕ್ಕೆ ಬಿಲ್ ನೀಡುತ್ತಾರೆ. ಈ ವಿದ್ಯುತ್ ಬಿಲ್ ನೋಡಿದ ಗ್ರಾಹಕನಿಗೆ ಶಾಕ್ ಖಂಡಿತ ಆಗುತ್ತಿತ್ತು! ಇದು ಹಿಂದೆಲ್ಲಾ ಸಾಮಾನ್ಯವಾಗಿ ನಡೆಯುತ್ತಿತ್ತು. ಈಗ ಸದ್ಯ ಅಂತಹ ಪರಿಸ್ಥಿತಿ ಇಲ್ಲ. ಹಿಂದೆಲ್ಲಾ ಇಂತಹ ಸಾಕಷ್ಟು ದೂರುಗಳು ನಮಗೆ ಬರುತ್ತಿತ್ತು. ಆಗ ನಾನು ಗ್ರಾಹಕರನ್ನು ಪ್ರಶ್ನಿಸುತ್ತಿದ್ದೆ. ‘ಮೀಟರ್ ಇಲ್ಲವಲ್ಲ, ಹಾಗಾಗಿ ನಾವು ಬಳಕೆ ಮಾಡಿದೆವು. ಅದು ಅಭ್ಯಾಸವಾಗಿ ಮೀಟರ್ ಹಾಕಿದ ಬಳಿಕವೂ ಅದೇ ರೀತಿ ಬಳಸಿದೆವು. ಇದರಿಂದ ತೊಂದರೆಯಾಗಿದೆ. ಅದನ್ನು ಸರಿ ಮಾಡಿಸಿಕೊಡಿ ಎಂದು ಮನವಿ ಮಾಡುವ ಕಾಲವಿತ್ತು. ಪ್ರಸ್ತುತ ವಿದ್ಯುತ್ ಸಂಪರ್ಕ, ಪೂರೈಕೆ ಬಹುತೇಕ ಸರಿಯಾಗಿರುವ ಹಿನ್ನೆಲೆಯಲ್ಲಿ ಜನರಿಗೂ ಇದೆಲ್ಲಾ ಮರೆತು ಹೋಗಿದೆ. ಕರ್ನಾಟಕ ವಿದ್ಯುತ್ ಪೂರೈಕೆ ಮಂಡಳಿಯಲ್ಲಿ ಹಲವಾರು ನಿಯಮಗಳಿವೆ. ಇಂತಿಷ್ಟು ವೋಲ್ಟೇಜ್, ಫ್ಯೂಸ್, ಟ್ರಾನ್ಸ್ ಫಾರ್ಮರ್, ಮೀಟರ್ ಕೆಟ್ಟಲ್ಲಿ ಅದನ್ನು ರಿಪೇರಿ ಅಥವಾ ಬದ ಲಾಯಿಸಲು ಇಂತಿಷ್ಟು ಸಮಯ ಮಿತಿ ಎಲ್ಲಾ ಇರುವುದರಿಂದ ಈ ಎಲ್ಲಾ ಸಮಸ್ಯೆಗಳು ಬಹುತೇಕ ಇಲ್ಲವಾಗಿವೆ.

ಇನ್ನೊಂದು ಭ್ರಷ್ಟತೆಯ ಕೂಪವಾಗಿರುವುದು ಸೇಲ್ಸ್ ಟ್ಯಾಕ್ಸ್ ಇಲಾಖೆ!

ನಾನು ಸಣ್ಣ ಕೈಗಾರಿಕೋದ್ಯಮವನ್ನು ಆರಂಭಿಸುವಾಗ ನಾವು ಮೂವರು ಶಿಕ್ಷಿತರು ಪರವಾನಿಗೆಗೆ ಅರ್ಜಿ ಸಲ್ಲಿಸಿದಾಗ ಇಲಾಖೆಯ ಅಧಿಕಾರಿಯೊಬ್ಬರು ಜೇಮ್ಸ್ ವಾಲ್ಡರ್, 1976 ಆಗಿರಬೇಕು. ತುಂಬಾ ಒಳ್ಳೆಯ ಅಧಿಕಾರಿ. ಯುವಕರಿಗೆ ಉದ್ದಿಮೆ ಆರಂಭಿಸಲು ಪ್ರೋತ್ಸಾಹ ನೀಡುತ್ತಿದ್ದ ವ್ಯಕ್ತಿಯಾತ. ಉದ್ದಿಮೆಗೆ ಮುಂದಾಗುವ ಯುವಕರಿಗೆ ಯಾವುದೇ ರೀತಿಯಲ್ಲಿ ಭ್ರಮನಿರಸನವಾಗಬಾರದು, ಅದಕ್ಕಾಗಿ ಏನಿದ್ದರೂ ನಾನು ಸಹಕಾರ ನೀಡುತ್ತೇನೆ ಎಂಬ ರೀತಿಯಲ್ಲಿ ಮಾತನಾಡಿ ನಮಗೆ ಪರವಾನಿಗೆ ಮಾಡಿಕೊಟ್ಟಿದ್ದರು. ಆ ಸಂದರ್ಭ ಒಬ್ಬ ಜೆಇ ಆ ಇಲಾಖೆಯಲ್ಲಿದ್ದರು. ಅವರೆಷ್ಟು ಪ್ರಾಮಾಣಿಕರೆಂದರೆ, ನಾವೇನಾದರೂ ಅವರು ನಮ್ಮ ಕಚೇರಿಗೆ ಬಂದಾಗ ಎಳ ನೀರು ಕೊಟ್ಟರೂ ಕುಡಿಯುತ್ತಿರಲಿಲ್ಲ. ನಮ್ಮ ಕಚೇರಿ ಆಗ ಕುದ್ರೋಳಿಯಲ್ಲಿತ್ತು. ನಮಗೆ ಪರವಾನಿಗೆ ದೊರಕಿದ ಬಳಿಕ ಎರಡು ವರ್ಷಗಳಲ್ಲಿ ಸೇಲ್ಸ್ ಟ್ಯಾಕ್ಸ್ ಅಸೆಸ್‌ಮೆಂಟ್ ಮಾಡಲಿತ್ತು. ಆಗ ನಾವು ನಮ್ಮೆಲ್ಲಾ ಲೆಡ್ಜರ್ ಪುಸ್ತಕಗಳನ್ನು ಕೊಂಡು ಹೋಗಬೇಕಿತ್ತು. ಆಗ ನಿರೀಕ್ಷಕರಿದ್ದವರು, ಒಂದು ಬುಕ್ ಅಸೆಸ್‌ಮೆಂಟ್‌ಗೆ 200 ರೂ. ಕೊಡಬೇಕು ಎಂದು ಬೇಡಿಕೆ ಇಟ್ಟರು. ಕೊಡದಿದ್ದಲ್ಲಿ ನಾನು ಅದನ್ನು ಮಾಡುವುದಿಲ್ಲ ಎಂದು ನೇರವಾಗಿ ನಮ್ಮ ಅಕೌಂಟೆಂಟ್ ಬಳಿ ಹೇಳಿ ಬಿಟ್ಟಿದ್ದ. ಅದಕ್ಕೆ ನಾನು ಅವನಿಗೆ 100 ರೂ. ಕೊಡುವುದಿಲ್ಲ. 50 ರೂ. ಕೊಡುತ್ತೇನೆ. ಆದರೆ ಅದಕ್ಕವನು ನೆಹರೂ ಮೈದಾನದಲ್ಲಿ ಟವಲ್ ಹಾಕಿ ಕೂರಬೇಕು ಎಂದು ನಮ್ಮ ಅಕೌಂಟೆಂಟ್ ಬಳಿ ಹೇಳಿದೆ. ಅವನದನ್ನು ಆ ನಿರೀಕ್ಷಕನಲ್ಲಿ ಹೇಳಿದನೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ಅಸೆಸ್‌ಮೆಂಟ್‌ಗೆ ಹಲವಾರು ರೀತಿಯ ತಕರಾರು ಮಾಡಿ ಆ ಸಮಯದಲ್ಲಿ ಅಂದರೆ 1978-79ರ ಅವಧಿಯಲ್ಲಿ ನಮಗೆ 15,000 ರೂ.ನಷ್ಟು ಹಣ ಪಾವತಿಸಬೇಕಾಗಿ ಬಂದಿತ್ತು. ಈ ಬಗ್ಗೆ ನಾವು ಮೇಲ್ಮನವಿ ನೀಡಲು ಮುಂದಾದೆವು. ನಮ್ಮದು ‘ಬಿ.ಎನ್. ಲ್ಯಾಬೊರೇಟರೀಸ್’ ರಾಸಾಯನಿಕಗಳ ಪೂರೈಕೆ ಮಾಡುವ ಉದ್ದಿಮೆ. ಮೇಲ್ಮನವಿ ಸಲ್ಲಿಸಿದಾಗ ಇಲಾಖೆಯ ಮೇಲಧಿಕಾರಿ ಆಯುಕ್ತರು, ‘ಇವರು ಅದೆಷ್ಟು ಪ್ರಾಮಾಣಿಕರೆಂದರೆ, 2 ರೂ. ಬಾಟಲ್ ನೀಡಿದಾಗಲೂ ಅದರ ಮೇಲೆ ಸೇಲ್ಸ್ ಟ್ಯಾಕ್ಸ್ ಚಾರ್ಜ್ ಮಾಡಿ ಕಟ್ಟಿರುವಾಗ ಇವನ ಮೇಲೆ ಒಮಿಶನ್ಸ್ ಆ್ಯಂಡ್ ಸಪ್ರೆಶನ್ಸ್ ಹೇಗೆ ಚಾರ್ಜ್ ಹಾಕುತ್ತಾರೆ. ಉತ್ಪಾದನಾ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ ಎಂದು ಹೇಳಲಾಗಿದೆ. ಅದೊಂದು ಸಣ್ಣ ಉದ್ಯಮ ವಾಗಿರುವಾಗ ಅದನ್ನೆಲ್ಲಾ ಇಡಲು ಸಾಧ್ಯವಾಗುವುದಿಲ್ಲ’ ಎಂಬ ಉತ್ತರ ನೀಡಿದ್ದರು. ಆದ ಕಾರಣ ನಮ್ಮ ಮೇಲ್ಮನವಿ ಪುರಸ್ಕರಿಸಲ್ಪಟ್ಟಿತು. ಇದಾದ ಬಳಿಕ ನಮಗೆ ಸೇಲ್ಸ್ ಟ್ಯಾಕ್ಸ್ ಇಲಾಖೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ. ಇದಾಗಿ ಸುಮಾರು 20 ವರ್ಷ ಗಳ ಹಿಂದೆ ನನ್ನ ಅಕೌಂಟೆಂಟ್ ರಜೆಯಲ್ಲಿದ್ದರು. ಆಗ ಅಸೆಸ್‌ಮೆಂಟ್‌ಗೆ ಸೇಲ್ಸ್‌ಟ್ಯಾಕ್ಸ್ ಇಲಾಖೆಯಿಂದ ಅಧಿಕಾರಿಯಿಂದ ಕರೆ ಬಂದಿತ್ತು. ನಾವು ಎಲ್ಲಾ ಬಿಲ್‌ಗಳನ್ನು ತೋರಿಸಬೇಕು. ಅದನ್ನೆಲ್ಲಾ ನಾನೇ ಆತನಲ್ಲಿಗೆ ಕೊಂಡೊಯ್ದು ತೋರಿಸಿದೆ. ಆಗ ಆತ, ಬೇರೆಯವರೆಲ್ಲಾ, 5 ಕೋಟಿ ವ್ಯವಹಾರವಿದ್ದರೆ, ಅದನ್ನು ಲಕ್ಷಗಳಲ್ಲಿ ತೋರಿಸುತ್ತಾರೆ. ನೀವು ಇದ್ದದ್ದಷ್ಟನ್ನೇ ತೋರಿಸಿದ್ದೀರಲ್ಲಾ ಎಂದು ಪ್ರಶ್ನಿಸಿದರು. ನಿಮ್ಮದು ಹುದ್ದೆ ಏನು ಎಂದು ನಾನೂ ಆತನನ್ನು ಪ್ರಶ್ನಿಸಿದೆ. ಅದೇನು ನಿಮಗೆ ಗೊತ್ತಿಲ್ಲವೇ? ಎಸಿಟಿಒ ನಾನು ಎಂದರಾತ. ಹೌದು, ನಾನು ಡೀಲರ್, ನೀವು ಅಧಿಕಾರಿ, ನೀವು ಅಸೆಸ್‌ಮೆಂಟ್‌ಗೆ ನನ್ನನ್ನು ಕರೆದಿರುವಿರಿ. ಹಾಗಿದ್ದರೆ, ಅದನ್ನು ಮಾಡಿ ಅದು ಬಿಟ್ಟು ನಿಮ್ಮ ಸಲಹೆ ನನಗೆ ಬೇಡ ಎಂದೆ. ಆತನ ನಿರೀಕ್ಷೆ, ನಾನು ನನ್ನ ವ್ಯವಹಾರವನ್ನು ಕಡಿಮೆ ತೋರಿಸುವುದಕ್ಕಾಗಿ ಆತನಿಗೆ ಏನಾದರೂ ಹಣ ಕೊಡಬಹುದೆಂಬುದಾಗಿತ್ತು. ಆದರೆ ನಾನು ಈವರೆಗೂ ಆ ಕಾರ್ಯ ಮಾಡಿಲ್ಲ ಎಂದು ಹೆಮ್ಮೆಯಿಂದಲೇ ಹೇಳುತ್ತೇನೆ. ಬಳಿಕ ಎಲ್ಲಾ ಬಿಲ್ ಎಲ್ಲಾ ನಂಬರ್ ತೋರಿಸಿದಾಗ, ಅದನ್ನು ನೋಡಿ ನಮ್ಮನ್ನು ಕಳುಹಿಸಿದ. ಇದಾಗಿ ಮೂರು ವರ್ಷಗಳ ಕಾಲ ಅಸೆಸ್‌ಮೆಂಟ್‌ಗೆ ಕರೆದಿರಲಿಲ್ಲ. ಮೂರನೆ ವರ್ಷ ಕರೆದಾಗ, ನಾವು ಮಾರಾಟ ಮಾಡುತ್ತಿದ್ದ ಡಿಸ್ಟಿಲ್ಲರಿ ವಾಟರ್‌ಗೆ ಅದಕ್ಕೆ ಹಿಂದೆ ತೆರಿಗೆ ಇದ್ದಿರಲಿಲ್ಲ. ಆ ಮೂರು ವರ್ಷಗಳ ಅವಧಿಯಲ್ಲಿ ತೆರಿಗೆ ಹಾಕಲಾಗಿತ್ತು. ನಮಗದು ವಿಚಾರ ತಿಳಿದಿರಲಿಲ್ಲ. ನಾವು ಶೂನ್ಯ ಟ್ಯಾಕ್ಸ್‌ನಡಿ ಅದನ್ನು ಮಾರಾಟ ಮಾಡುತ್ತಿದ್ದೆವು. ಅದನ್ನು ಹಿಡಿದುಕೊಂಡು ನೀವು ಇಷ್ಟು ವರ್ಷಗಳಿಂದ ಡಿಸ್ಟಿಲ್ಲರಿ ವಾಟರ್‌ಗೆ ತೆರಿಗೆ ಪಾವತಿಸಿಲ್ಲ ಎಂದು ತೋರಿಸಿದ. ಆಗ ಅದಕ್ಕೆ ಶೇ. 12.5 ತೆರಿಗೆ ಹಾಕಲಾಗಿತ್ತು. ಹಾಗಾಗಿ ಮೂರು ವರ್ಷಗಳ ಅವಧಿಯ 30,000 ತೆರಿಗೆ ಅದರ ದುಪ್ಪಟ್ಟು ದಂಡ ಮತ್ತು ಬಡ್ಡಿ. ಅದೆಲ್ಲವನ್ನೂ ಕಟ್ಟುವಂತೆ ನಮಗೆ ಬುದ್ಧಿಕಲಿಸಲು ನೋಟಿಸ್ ಜಾರಿಗೊಳಿಸಲಾಯಿತು. ಆಗ ನಾವು ಅಸಲು, ದಂಡ, ಬಡ್ಡಿ ಎಲ್ಲವನ್ನೂ ಕಟ್ಟಿದ ಬಳಿಕವೇ ಮೇಲ್ಮನವಿ ಸಲ್ಲಿಸಬೇಕಾಗಿತ್ತು. ಅದಕ್ಕಾಗಿ ನಾವು ಅದೆನ್ನೆಲ್ಲಾ ಕಟ್ಟಿ ಮೇಲ್ಮನವಿಗೆ ಹೋದೆವು. ಇದೆಲ್ಲಾ ನೈಜ ಅಂಶ. ಅವರೇನೂ ಹೆಚ್ಚಿನದ್ದನ್ನು ಹಾಕಿಲ್ಲ. ಆದರೆ ನಿಮಗದು ತೆರಿಗೆಯುಕ್ತ ವಸ್ತು ಎಂದು ತಿಳಿದಿಲ್ಲದ ಕಾರಣ, ನೀವು ತೆರಿಗೆ ಸಂಗ್ರಹಿಸಿಲ್ಲ. ಅದಕ್ಕಾಗಿ ಕೇವಲ ತೆರಿಗೆಯನ್ನಷ್ಟೇ ಸಂಗ್ರಹಿಸಬಹುದು. ಅದಕ್ಕಾಗಿ ದಂಡ ಮತ್ತು ಬಡ್ಡಿಯನ್ನು ಪಾವತಿಸುವ ಅಗತ್ಯವಿಲ್ಲ ಎಂಬ ತೀರ್ಪು ಬಂತು. ಸುಮಾರು 60,000ಕ್ಕೂ ಅಧಿಕ ಹಣ ಕಟ್ಟಲಾಗಿತ್ತು. ಈ ತೀರ್ಪಿನಿಂದ ನಾವು ಕೇವಲ ಅರ್ಧದಷ್ಟು ಮಾತ್ರವೇ ಕಟ್ಟಬೇಕಾಗಿತ್ತು. ಆದರೆ ನಾವು ಅದಾಗಲೇ ಕಟ್ಟಿರುವುದರಿಂದ ಒಮ್ಮೆ ಕಟ್ಟಿದ ಹಣವನ್ನು ಹಿಂದಕ್ಕೆ ಪಾವತಿಸುವ ಜಾಯಮಾನ ಸರಕಾರಿ ಕಚೇರಿಗಳಲ್ಲಿ ಇಲ್ಲ. ಹಾಗಾಗಿ ಅದನ್ನು ವಾಪಸ್ ಕೊಡಲು ಆಗುವುದಿಲ್ಲ. ಅದನ್ನು ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳಿ ಎಂದ. ಹಾಗಾಗಿ ಮುಂದೆ ಸುಮಾರು ಒಂದು ವರ್ಷ ನಾವು ತೆರಿಗೆ ಕಟ್ಟುವುದು ಉಳಿಯಿತು.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News