ಜನಬಳಕೆಯ ವಿಶ್ಲೇಷಣೆ

Update: 2018-06-17 05:23 GMT

ಡಿಜಿಟಲ್ ಕನ್ನಡವು ಬಳಕೆಯಲ್ಲಿರುವುದು ವಿಶೇಷವಾಗಿ ಎರಡೇ ವಿದ್ಯುನ್ಮಾನ ಉಪಕರಣಗಳಲ್ಲಿ ಒಂದು ‘ಕಂಪ್ಯೂಟರ್‌ಟಗಳು ಮತ್ತೊಂದು ಇತ್ತೀಚಿನ ‘ಸ್ಮಾರ್ಟ್‌ಫೋನ್‌ಗಳು. ಕಂಪ್ಯೂಟರ್ ಬಳಸಿ ಮಾಡಬಹುದಾದ ಬಹುತೇಕ ಕೆಲಸಗಳನ್ನು ಮಾಡಲು ಸ್ಮಾರ್ಟ್‌ಫೋನುಗಳು ಇಂದು ಜನರ ಅಂಗೈಯಲ್ಲಿ ಬಂದುಕುಳಿತಿವೆ. ಸ್ಮಾರ್ಟ್‌ಫೋನುಗಳು ಬರುವ ಮುನ್ನ ಕಂಪ್ಯೂಟರುಗಳೇ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಅವಿಭಾಜ್ಯ ಅಂಗವಾಗಿದ್ದವು. ಕಂಪ್ಯೂಟರಿನಲ್ಲಿ ಕನ್ನಡ ಬಳಕೆಗಾಗಿ ಕಾಲಕ್ರಮೇಣ ಹಲವು ಎನ್‌ಕೋಡಿಂಗ್ ವ್ಯವಸ್ಥೆಗಳು, ಹಲವಾರು ಕೀಲಿಮಣೆ ವಿನ್ಯಾಸಗಳು ಬಳಕೆಗೆ ಬಂದವು. ಇವುಗಳಲ್ಲಿ ಏಕರೂಪತೆಯಿಲ್ಲದ ಕಾರಣ, ಮಾಹಿತಿ ವಿನಿಮಯದ ಸಮಸ್ಯೆ ಉಂಟಾಯಿತು. ಇದರ ಪರಿಹಾರಕ್ಕಾಗಿ ಕನ್ನಡ ಪಠ್ಯದ ಎನ್‌ಕೋಡಿಂಗ್‌ನಲ್ಲಿ ಮತ್ತು ಕೀಲಿಮಣೆ ವಿನ್ಯಾಸದಲ್ಲಿ ಏಕರೂಪತೆಯನ್ನು ತರುವ ಅಗತ್ಯವಿತ್ತು. ಎರಡು ದಶಕಗಳ ಹಿಂದೆಯೇ, ಕನ್ನಡಕ್ಕೆ ಪ್ರಾದೇಶಿಕ ಶಿಷ್ಟತೆಗಳನ್ನು ರೂಪಿಸಿ, ಅದರ ಅನುಸಾರವೇ ಕನ್ನಡ ತಂತ್ರಾಂಶಗಳನ್ನು ತಯಾರಿಸಬೇಕೆಂದು ತಂತ್ರಾಂಶ ತಯಾರಕರಿಗೆ ಕರ್ನಾಟಕ ಸರಕಾರವು ತಾಕೀತು ಮಾಡಿತು. ಬಳಕೆಯಲ್ಲಿನ ಗೊಂದಲಗಳನ್ನು ನಿವಾರಿಸಲು ಮತ್ತು ಮಾಹಿತಿ ವಿನಿಮಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕನ್ನಡಕ್ಕೆ ‘‘ಏಕರೂಪ-ಎನ್‌ಕೋಡಿಂಗ್-ವ್ಯವಸ್ಥೆ’’ ಮತ್ತು ‘‘ಏಕರೂಪ-ಕೀಲಿಮಣೆ-ವಿನ್ಯಾಸ’’ ವನ್ನು ಘೋಷಿಸಲಾಗಿದೆ. ಎನ್‌ಕೋಡಿಂಗ್ ವ್ಯವಸ್ಥೆಯು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬದಲಾದ ಕಾರಣ ಈಗ ಯೂನಿಕೋಡ್ ಎನ್‌ಕೋಡಿಂಗ್ ವ್ಯವಸ್ಥೆಯು ಕನ್ನಡದ ಮತ್ತು ಕರ್ನಾಟಕ ಸರಕಾರದ ಶಿಷ್ಟತೆಯಾಗಿ ಘೋಷಣೆಯಾಗಿದೆ.

2000ರಲ್ಲಿ ಹೊರಡಿಸಲಾದ ಸರಕಾರದ ಆದೇಶದ ಅನುಸಾರವಾಗಿ ಕನ್ನಡ ಲಿಪಿತಂತ್ರಾಂಶವನ್ನು ತಯಾರಿಸುವ ಎಲ್ಲ ಕಂಪೆನಿಗಳು ತಮ್ಮ ಫಾಂಟ್‌ಗಳಲ್ಲಿನ ಕನ್ನಡ ಅಕ್ಷರಗಳ ಗ್ಲಿಫ್-ಕೋಡ್‌ಗಳನ್ನು ಸೂಕ್ತವಾಗಿ ಬದಲಾಯಿಸಿ, ಕನ್ನಡ ಗಣಕ ಪರಿಷತ್ತಿನ ಪ್ರಮಾಣೀಕರಣವನ್ನು ಪಡೆದವು. ಪ್ರಪ್ರಥಮ ಬಾರಿಗೆ ಏಕರೂಪದ ಗ್ಲಿಫ್ ಸಂಕೇತಗಳನ್ನು ‘ಬರಹ’ದ ಫಾಂಟ್‌ಗಳಲ್ಲಿ ಅಳವಡಿಸಲಾಯಿತು. ನಂತರದಲ್ಲಿ ಸಿದ್ಧವಾದ ಕರ್ನಾಟಕ ಸರಕಾರದ ಮಾನಕ ತಂತ್ರಾಂಶವಾದ ‘ನುಡಿ’ಯನ್ನು ಶಿಷ್ಟತೆಯ ಅನುಸಾರವೇ ಸಿದ್ಧಪಡಿಸಲಾಯಿತು. ‘ಕುವೆಂಪು ಕನ್ನಡ ತಂತ್ರಾಂಶವೂ ಸಹ ಇದೇ ಗ್ಲಿಫ್-ಕೋಡ್‌ಗಳನ್ನೇ ಅಳವಡಿಸಿಕೊಂಡಿದೆ. ಹೀಗಾಗಿ, ಈಗ ಈ ಎಲ್ಲಾ ಉಚಿತ ತಂತ್ರಾಂಶಗಳ ಪಠ್ಯಮಾಹಿತಿಗಳು ಪರಸ್ಪರ ಾಂಟ್‌ಗಳಲ್ಲಿ ತೆರೆದುಕೊಳ್ಳುತ್ತವೆ ಮತ್ತು ಮಾಹಿತಿ ವಿನಿಮಯದ ಸಮಸ್ಯೆಯು ಅಷ್ಟರಮಟ್ಟಿಗೆ ಬಗೆಹರಿದಿದೆ. ನುಡಿ-ಬರಹ-ಕುವೆಂಪು ತಂತ್ರಾಂಶಗಳ ಫಾಂಟುಗಳ ಬದಲಾಗಿ ಹಳೆಯ ಮತ್ತು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದ ಇತರ ಖಾಸಗಿ ತಂತ್ರಾಂಶ ತಯಾರಕರ ಫಾಂಟುಗಳಲ್ಲಿ ಸಿದ್ಧಗೊಂಡ ಕನ್ನಡ ಪಠ್ಯವನ್ನು ತೆರೆದು ಓದಲು, ಬದಲಾಯಿಸಲು ಅವೇ ಹಳೆಯ ತಂತ್ರಾಂಶಗಳನ್ನೇ ಅವಲಂಬಿಸಬೇಕಾಗಿದೆ. ನುಡಿ-ಬರಹ-ಕುವೆಂಪು ತಂತ್ರಾಂಶಗಳ ಫಾಂಟುಗಳಿಗೆ ಪರಿವರ್ತಿಸಿಕೊಳ್ಳಲು ‘ಫಾಂಟ್ ಕನ್‌ವರ್ಟರ್’ಗಳು ಲಭ್ಯವಿವೆ. ಕನ್ನಡ ಕಂಪ್ಯೂಟರ್ ಬಳಕೆಯ ಜನವರ್ಗಗಳು ನಿಜಕ್ಕೂ ಕನ್ನಡ ತಂತ್ರಾಂಶಗಳನ್ನು ಹೇಗೆಲ್ಲಾ ಬಳಸುತ್ತಿದ್ದಾರೆ ಎಂಬುದನ್ನು ತಿಳಿಯಲು ಡಿಜಿಟಲ್ ಕನ್ನಡದ ಜನಬಳಕೆಯ ವಿಶ್ಲೇಷಣೆಗೆ ಮೊರೆಹೋಗಬೇಕು. ಬಳಕೆಯ ಸಂಖ್ಯಾಬಲವನ್ನು ಆಧರಿಸಿ ಕಂಪ್ಯೂಟರುಗಳನ್ನು ಬಳಸುವ ಜನವರ್ಗಗಳನ್ನು ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಂಗಡಿಸಿಕೊಂಡು ಡಿಜಿಟಲ್ ಕನ್ನಡದ ಜನಬಳಕೆಯ ವಿಶ್ಲೇಷಣೆಯನ್ನು ಮಾಡಬಹುದು. ಮೊದಲನೆಯದು, ಮುದ್ರಣ ಕ್ಷೇತ್ರದ ಡಿ.ಟಿ.ಪಿ. ಬಳಕೆಯ ಜನವರ್ಗ. ಎರಡನೆಯದು, ಸರಕಾರಿ ಮತ್ತು ಸಾರ್ವಜನಿಕ ಕಚೇರಿ ಬಳಕೆಯ ಜನವರ್ಗ ಮತ್ತು ಮೂರನೆಯದು, ಅಂತರ್ಜಾಲದಲ್ಲಿ ಕನ್ನಡ ಬಳಕೆಯ ಜನವರ್ಗ.

ಮುದ್ರಣ ಕ್ಷೇತ್ರದ ಜನವರ್ಗ ಇಂದು ಕಂಪ್ಯೂಟರಿನಲ್ಲಿ ಕನ್ನಡವನ್ನು ಹೇಗೆಲ್ಲಾ ಬಳಸುತ್ತಿದೆ ಎಂಬುದನ್ನು ನೋಡೋಣ. ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಯು ದೊಡ್ಡಪ್ರಮಾಣದಲ್ಲಿ ಆರಂಭಗೊಂಡಿದ್ದೇ ಮುದ್ರಣ ಕ್ಷೇತ್ರದಲ್ಲಿ. ಡಿ.ಟಿ.ಪಿ.ಯಂತಹ (ಡೆಸ್ಕ್‌ಟಾಪ್ ಪಬ್ಲಿಷಿಂಗ್) ಮುದ್ರಣ-ಪೂರ್ವ (ಪ್ರೀ-ಪ್ರೆಸ್) ಕೆಲಸ ಕಾರ್ಯಗಳಿಗಾಗಿ ಇಂದಿಗೂ ಸಹ ಕಂಪ್ಯೂಟರ್‌ನ್ನು ಒಂದು ಆಧುನಿಕ ಟೈಪಿಂಗ್ ಯಂತ್ರದಂತೆಯೇ ಬಳಸಲಾಗುತ್ತಿದೆ. ಕನ್ನಡದಲ್ಲಿ ಕಂಪ್ಯೂಟರ್ ಡಿ.ಟಿ.ಪಿ. ಆರಂಭಗೊಳ್ಳುವ ಮುನ್ನ ಫೋಟೊ ಕಂಪೋಸಿಂಗ್ ಯಂತ್ರಗಳಲ್ಲಿ ಕನ್ನಡವನ್ನು ಅಳವಡಿಸಲಾಗಿತ್ತು. ಕಂಪ್ಯೂಟರಿನಲ್ಲಿ ಇಂಗ್ಲಿಷ್‌ಗಾಗಿ ಆವಿಷ್ಕರಿಸಲಾದ ಲಿಪಿತಂತ್ರಜ್ಞಾನದ ಪ್ರಯೋಜನಗಳನ್ನು ಕಾಲಕಾಲಕ್ಕೆ ಕನ್ನಡಕ್ಕೂ ಸಹ ಅಳವಡಿಸಿಕೊಳ್ಳಲಾಗಿದೆ. ಹಲವಾರು ದಶಕಗಳಿಂದ ಕನ್ನಡದ ‘ಫಾಂಟು’ಗಳು ಮುದ್ರಣ ಮಾಧ್ಯಮದಲ್ಲಿ ತಮ್ಮ ಪಾರಮ್ಯವನ್ನು ಮೆರೆಯುತ್ತಿವೆ. ದೊಡ್ಡಗಾತ್ರದಲ್ಲಿ ಶೀರ್ಷಿಕೆಗಳ ಮುದ್ರಣಕ್ಕಾಗಿ ಪ್ರತ್ಯೇಕ ‘ಟೈಟಲ್ ಫಾಂಟು’ಗಳನ್ನು ತಯಾರಿಸಿಕೊಂಡು ಬಳಸಲಾಗುತ್ತಿದೆ. ಸುದ್ದಿಶೀರ್ಷಿಕೆಗಳು ಅನಗತ್ಯವಾಗಿ ಹೆಚ್ಚಿನ ಸ್ಥಳಾವಕಾಶ ತೆಗೆದುಕೊಳ್ಳದಂತೆ ಮತ್ತು ಅವು ಆಕರ್ಷಕವಾಗಿ ಕಾಣಲು ಟೈಟಲ್ ಫಾಂಟುಗಳಲ್ಲಿ ಒತ್ತಕ್ಷರಗಳನ್ನು ಚಿಕ್ಕದಾಗಿ ರೂಪಿಸಲಾಗಿರುತ್ತದೆ. ದೊಡ್ಡ ಪತ್ರಿಕಾಲಯಗಳು ಮತ್ತು ಪುಸ್ತಕ ಪ್ರಕಾಶನ ಸಂಸ್ಥೆಗಳು ತಮ್ಮದೇ ಪ್ರತ್ಯೇಕ ಕನ್ನಡ ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿಕೊಂಡು ಬಳಸುವುದು ಸಾಮಾನ್ಯವಾಗಿದೆ. ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಪಠ್ಯವನ್ನು ಮುದ್ರಿಸುವ ಉದ್ದೇಶದ, ‘ಬುಕ್-ಫಾಂಟ್’ ಎಂದು ಕರೆಯಲಾಗುವ, ಮಾರುಕಟ್ಟೆಯಲ್ಲಿ ದೊರೆಯುವ ಕನ್ನಡದ ಫಾಂಟುಗಳು ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಜನಪ್ರಿಯವಾಗಿವೆ. ಆದರೆ, ಡಿ.ಟಿ.ಪಿ.ಗಾಗಿ ಅನಿವಾರ್ಯವಾಗಿ ಅಂತರ್‌ರಾಷ್ಟ್ರೀಯ ತಂತ್ರಾಂಶ ತಯಾರಕರ ಅಪ್ಲಿಕೇಷನ್ ಸಾಫ್ಟ್‌ವೇರ್‌ನ್ನು ಬಳಸಬೇಕಾಗಿರುವುದರಿಂದ ಅವುಗಳನ್ನು ಕನ್ನಡ ಬಳಕೆಗೆ ಎಷ್ಟರ ಮಟ್ಟಿನ ಅನುಕೂಲಗಳಿವೆಯೋ ಅಷ್ಟಕ್ಕೇ ಕನ್ನಡದ ಬಳಕೆಯು ಸೀಮಿತವಾಗಿದೆ. ಇಂದಿಗೂ ಕೋರಲ್‌ಡ್ರಾ, ಇನ್‌ಡಿಸೈನ್, ಕ್ವಾರ್ಕ್ -ಎಕ್ಸ್‌ಪ್ರೆಸ್ ಮುಂತಾದ ಡಿ.ಟಿ.ಪಿ. ತಂತ್ರಾಂಶಗಳಲ್ಲಿ ಕನ್ನಡದ ಯೂನಿಕೋಡ್ ಫಾಂಟ್ ಬಳಕೆಗೆ ಸಮರ್ಥವಾದ ಬಳಕೆಯ ಬೆಂಬಲವು ದೊರೆತಿಲ್ಲ. ಕನ್ನಡದ ಮುದ್ರಣ ಕ್ಷೇತ್ರವು ಕನ್ನಡದ ಅಕ್ಷರಗಳ ತುಂಡುಗಳನ್ನು ಜೋಡಿಸಿಕೊಂಡು ಮುದ್ರಿಸುವ ಹಳೆಯ ಆಸ್ಕಿ-ಎನ್‌ಕೋಡಿಂಗ್ ಇರುವ ಲಿಪಿತಂತ್ರಾಂಶಗಳನ್ನೇ ಬಳಸುವ ಅನಿವಾರ್ಯತೆಯಲ್ಲಿದೆ. ಇನ್ನು ಕಚೇರಿ ಜನವರ್ಗದ ಡಿಜಿಟಲ್ ಕನ್ನಡ ಬಳಕೆ ಹೇಗಿದೆ? ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕಂಪ್ಯೂಟರ್ ಬಳಕೆ ಆರಂಭಗೊಂಡಾಗ ಡಿ.ಟಿ.ಪಿ.ಗಾಗಿ ಬಳಕೆಯಲ್ಲಿದ್ದ ಫಾಂಟ್ ತಂತ್ರಾಂಶಗಳನ್ನೇ ಬಹುತೇಕ ವರ್ಷಗಳ ಕಾಲ ಉಪಯೋಗಿಸಲಾಗುತ್ತಿತ್ತು. ಕನ್ನಡದ ಬಳಕೆಗಾಗಿ ಉಚಿತ ಕನ್ನಡ ಲಿಪಿತಂತ್ರಾಂಶಗಳು ಆವಿಷ್ಕಾರಗೊಂಡ ನಂತರ, ಕಚೇರಿಗಳಲ್ಲಿ ಅವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಉಚಿತ ಲಿಪಿತಂತ್ರಾಂಶಗಳಲ್ಲಿ ಸದ್ಯ ಲಭ್ಯವಿರುವ ಸೀಮಿತ ಸೌಲಭ್ಯಗಳನ್ನಷ್ಟೇ ಬಳಸಿ ಕಚೇರಿ-ಕಂಪ್ಯೂಟರ್ ಬಳಕೆ ಮುಂದುವರಿದಿದೆ. ಹಳೆಯ ಆಸ್ಕಿ-ಫಾಂಟುಗಳನ್ನು ಬಿಟ್ಟು ಹೊಸ ಯೂನಿಕೋಡ್ ಫಾಂಟುಗಳ ಬಳಕೆಯತ್ತ ಕಚೇರಿಗಳು ಹೆಚ್ಚಿನ ಉತ್ಸುಕತೆಯನ್ನು ತೋರುತ್ತಿಲ್ಲ. ಕಚೇರಿಗಳ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಅಳವಡಿಸಬೇಕಾದ ಅನಿವಾರ್ಯತೆ ಇದ್ದಲ್ಲಿ ಮಾತ್ರವೇ ಯೂನಿಕೋಡ್ ಕನ್ನಡ ಪಠ್ಯವನ್ನು ಟೈಪ್‌ಮಾಡಲಾಗುತ್ತಿದೆ. ಆಸ್ಕಿ-ಫಾಂಟುಗಳಲ್ಲಿ ಟೈಪ್‌ಆಗಿ ಮುದ್ರಣಗೊಂಡ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಅಳವಡಿಸಲು ಸಾಫ್ಟ್‌ಕಾಪಿಗಳಿಂದ ಪಠ್ಯವನ್ನು ಹೊರತೆಗೆದು ಅದನ್ನು ಯೂನಿಕೋಡ್ ಫಾಂಟ್‌ಗೆ ಪರಿವರ್ತಿಸಿ ಬಳಸಲಾಗುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಹಳೆಯ ಪಠ್ಯವನ್ನು ಪಿ.ಡಿ.ಎಫ್. ಕಡತಗಳನ್ನಾಗಿಸಿ ಅವುಗಳನ್ನು ಅಂತರ್ಜಾಲದಲ್ಲಿ ಯಥಾವತ್ತು ಹಾಕಲಾಗುತ್ತಿದೆ. ಇಂತಹ ಹಳೆಯ ಎನ್‌ಕೋಡಿಂಗ್ ಕನ್ನಡ ಪಠ್ಯವನ್ನು ಇಂದಿನ ಸರ್ಚ್ ಇಂಜಿನ್‌ಗಳು ಹುಡುಕಿಕೊಡುವುದಿಲ್ಲ. ಹೀಗಾಗಿ, ಕನ್ನಡದ ಮಾಹಿತಿಗಳು ಅಂತರ್ಜಾಲದಲ್ಲಿ ಇದ್ದರೂ ಸಹ ಅವುಗಳು ಹಳೆಯ ಎನ್‌ಕೋಡಿಂಗ್ ಫಾಂಟುಗಳಾದ್ದರಿಂದ ಅಂತಹ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಹುಡುಕಿ ತೆಗೆಯುವುದು ಕಷ್ಟ. ಕನ್ನಡ ಪಠ್ಯವು ಯೂನಿಕೋಡ್ ಫಾಂಟಿನಲ್ಲಿದ್ದರೆ ಅದನ್ನು ಅಂತರ್ಜಾಲದಲ್ಲಿ ಹುಡುಕುವುದು ಸುಲಭ.

ಅಂತರ್ಜಾಲ ಜನವರ್ಗದ ಕನ್ನಡ ಬಳಕೆಯು ಆಧುನಿಕ ರೀತಿಯಲ್ಲಿದೆ. ಹಳೆಯ ಎನ್‌ಕೋಡಿಂಗ್ ಫಾಂಟುಗಳ ಸಹವಾಸವೇ ಇಲ್ಲದೆ, ಅಂತರ್ಜಾಲದಲ್ಲಿ ಕನ್ನಡದ ಮಾಹಿತಿಯನ್ನು ಅಳವಡಿಸಲೆಂದೇ ನೇರವಾಗಿ ಯೂನಿಕೋಡ್ ಫಾಂಟುಗಳಲ್ಲೇ ಕನ್ನಡ ಪಠ್ಯವನ್ನು ಇಂದು ಟೈಪ್‌ಮಾಡಲಾಗುತ್ತಿದೆ. ಕನ್ನಡದ ಯೂನಿಕೋಡ್ ಬೆಂಬಲ ಇರುವ ತಂತ್ರಾಂಶಗಳ ಬಳಕೆಯು ಅಂತರ್ಜಾಲದಲ್ಲಿ ಅನಿವಾರ್ಯ. ಕನ್ನಡದ ಸಾವಿರಾರು ಬ್ಲಾಗ್‌ಗಳು, ಇ-ಮೇಯ್ಲಾ ಮತ್ತು ಚಾಟಿಂಗ್ ಜಾಲತಾಣಗಳು ಹಾಗೂ ನ್ಯೂಸ್-ಪೋರ್ಟಲ್‌ಗಳು ಮತ್ತು ಕನ್ನಡ ಪತ್ರಿಕೆಗಳ ವೆಬ್-ಎಡಿಷನ್‌ಗಳು ಅಂತರ್ಜಾಲದಲ್ಲಿ ಸಕ್ರಿಯವಾಗಿರಲು ಯೂನಿಕೋಡ್ ಕನ್ನಡ ಪಠ್ಯದ ಕೊಡುಗೆ ಅಪಾರ. ಮುದ್ರಣ ಕ್ಷೇತ್ರದಲ್ಲಿ ಇರುವಂತೆ ಅಂತರ್ಜಾಲದಲ್ಲಿ ಕನ್ನಡದ ಲಿಪಿಸೌಂದರ್ಯಕ್ಕೆ ಹೆಚ್ಚಿನ ಮಹತ್ವವಿಲ್ಲ. ಬದಲಾಗಿ, ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನ ಪರದೆಯ ಮೇಲೆ ಕನ್ನಡದ ಪಠ್ಯವು ಸ್ಪುಟವಾಗಿ ಪ್ರದರ್ಶನಗೊಂಡರೆ ಸಾಕು ಎಂಬ ಅಭಿಪ್ರಾಯವಿದೆ. ಪರದೆಯ ಮೇಲೆ ಸ್ಪಷ್ಟವಾಗಿ ಪ್ರದರ್ಶನಗೊಳ್ಳಲು ತೆಳುಗೆರೆಯುಳ್ಳ (ಥಿನ್ ಫಾಂಟ್) ಯೂನಿಕೋಡ್ ಫಾಂಟುಗಳನ್ನು ರೂಪಿಸಲಾಗಿದೆ. ಇದರಿಂದಾಗಿ ಪಠ್ಯವು ಚಿಕ್ಕಗಾತ್ರದಲ್ಲಿದ್ದರೂ ಕನ್ನಡದ ಒತ್ತಕ್ಷರಗಳು ಪರದೆಯ ಮೇಲೆ ಸ್ಪುಟವಾಗಿ ಕಾಣುತ್ತವೆ.

ಸ್ಮಾರ್ಟ್‌ಫೋನುಗಳು ಮತ್ತು ಕಂಪ್ಯೂಟರುಗಳಲ್ಲಿ ಕನ್ನಡ ಪಠ್ಯವನ್ನು ಆಧುನಿಕ ರೀತಿಯಲ್ಲಿ ಬಳಸಲು ಯೂನಿಕೋಡ್ ಬೆಂಬಲಿತ ತಂತ್ರಾಂಶಗಳನ್ನೇ ಬಳಸುವುದು ಸೂಕ್ತ. ಹಳೆಯ ಪಠ್ಯವನ್ನು ಯೂನಿಕೋಡ್ ಪಠ್ಯವನ್ನಾಗಿ ಪರಿವರ್ತಿಸಲು ಪರಿ ವರ್ತಕಗಳನ್ನು ಬಳಸಬಹುದು. ಕರ್ನಾಟಕ ರಾಜ್ಯ ಸರಕಾರವು ಸಾರ್ವಜನಿಕರ ಬಳಕೆಗಾಗಿ ಬಿಡುಗಡೆ ಮಾಡಿರುವ ಕನ್ನಡ ತಂತ್ರಾಂಶ ಪರಿಕರಗಳಲ್ಲಿ ಆಸ್ಕಿಯಿಂದ ಯೂನಿಕೋಡ್‌ಗೆ ಪಠ್ಯ ಪರಿವರ್ತನೆಗಾಗಿ ಪರಿವರ್ತಕವನ್ನು ನೀಡಲಾಗಿದೆ. ‘ನುಡಿ’ ಮತ್ತು ‘ಬರಹ’ ತಂತ್ರಾಂಶಗಳಲ್ಲಿಯೂ ಇಂತಹ ಪರಿವರ್ತಕಗಳು ಲಭ್ಯ.

Writer - ಡಾ.ಎ. ಸತ್ಯನಾರಾಯಣ

contributor

Editor - ಡಾ.ಎ. ಸತ್ಯನಾರಾಯಣ

contributor

Similar News