ಶತಮಾನದ ಸಂಭ್ರಮದಲ್ಲಿ ಪಕ್ಷಿ ವಲಸೆ ಕಾಯ್ದೆ -1918

Update: 2018-06-17 06:04 GMT

ಆಧುನಿಕತೆಯ ಧಾವಂತದಲ್ಲಿದ್ದ ಕೆಲ ಪಾಶ್ಚಿಮಾತ್ಯ ದೇಶಗಳು ಇದಕ್ಕಿಂತಲೂ ಹಿಂದೆ ಸಣ್ಣ ಪ್ರಮಾಣದಲ್ಲಿ ಕೆಲವು ಕಾಯ್ದೆಗಳನ್ನು ಪರಿಚಯಿಸಿಕೊಂಡಿದ್ದರೂ ಅದಕ್ಕೆ ಅಷ್ಟು ಮಹತ್ವ ಬಂದಿರಲಿಲ್ಲ. ಈ ಕಾಯ್ದೆಗೂ 1916ರಲ್ಲಿಯೇ ಅಡಿಗಲ್ಲು ಬಿದ್ದರೂ ಅದು ಅನುಷ್ಠಾನಗೊಳ್ಳಲು ಎರಡು ವರ್ಷಗಳೇ ಹಿಡಿಯಿತು. 16ನೇ ಆಗಸ್ಟ್ 1916 ರಂದು ಜಾರಿಗೆ ಬಂದ ಈ ಕಾಯ್ದೆ ಹಲವು ಬದಲಾವಣೆ ಮತ್ತು ಬಿಗಿ ಕಾನೂನುಗಳಿಂದಾಗಿ 1918ರಲ್ಲಿ ಮತ್ತಷ್ಟು ಬಲಗೊಂಡು ಹೊಸರೂಪ ಪಡೆಯಿತು.

ಮಾನವ ತಾನು ನಾಗರಿಕನಾಗಿ ಬೆಳೆದಾಗಿನಿಂದ ತನಗೊಂದು ರೀತಿ-ನೀತಿ, ಶಿಸ್ತು-ಸಂಯಮ, ಆಚಾರ-ವಿಚಾರ, ಧರ್ಮ-ಕರ್ಮ, ನಿಯಮ-ನಿಬಂಧನೆ, ಕಾನೂನು-ಕಟ್ಟಳೆಗಳು, ಧರ್ಮಶಾಸ್ತ್ರಗಳು, ಸಂವಿಧಾನಗಳು ಇತ್ಯಾದಿ ಇತ್ಯಾದಿಯಾಗಿ ಏನೇನೆಲ್ಲ ರೂಪಿಸಿಕೊಂಡು ರೂಢಿಸಿಕೊಂಡು ಬದುಕುವುದನ್ನು ಆರಂಭಿಸಿದ. ಬರಬರುತ್ತ ಮತ್ತೆ ಇವೆಲ್ಲವನ್ನೂ ಗಾಳಿಗೆ ತೂರುತ್ತ ತನಗಿಂತ ಶ್ರೇಷ್ಟರಿಲ್ಲ ಎನ್ನುವ ಅಹಮಿಕೆಯಲ್ಲಿ ಮೊೆಯುತ್ತ ಈ ಜಗತ್ತಿನ ಅತ್ಯಂತ ಅನಾಗರಿಕ ಜೀವಿಯಾಗಿ ಮಾರ್ಪಾಡಾಗಿದ್ದಾನೆೆ. ಭೂಮಿಯ ಮೇಲಿರುವುದಕ್ಕೆಲ್ಲ ತಾನೇ ಯಜಮಾನ, ಇಲ್ಲಿರುವುದೆಲ್ಲ ನಿಸರ್ಗವು ನನ್ನ ಅಗತ್ಯಕ್ಕೆ ಸೃಷ್ಟಿಸಿರುವುದೆಂಬ ಅಹಂಕಾರದಲ್ಲಿ ಈ ಜಗತ್ತಿನ ಲಕ್ಷಾಂತರ ಜೀವ ಸಂಕುಲಕ್ಕೆ ಕಂಟಕಪ್ರಾಯರೂ ಆಗಿದ್ದಾನೆೆ. ಈ ವಸುಂಧರೆಯನ್ನು ಇನ್ನಿಲ್ಲದಂತೆ ಧ್ವಂಸ ಮಾಡುವ ಹೊತ್ತಿಗೆ ಎಚ್ಚೆತ್ತ ಮನುಜ ತಾನು ವಾಸವಾಗಿರುವ ಈ ಧರೆಯನ್ನು ಉಳಿಸಿಕೊಳ್ಳದಿದ್ದರೆ ತಮಗೂ ಉಳಿಗಾಲವಿಲ್ಲವೆಂದರಿತ ನಂತರ ಇತರೆ ಜೀವಕೋಟಿಗೆ ತಾವು ಮಾಡಿರುವ ಹಾನಿಯ ಬಗ್ಗೆ ಯೋಚಿಸತೊಡಗಿದ್ದಾರೆ. ತಮ್ಮ ಸುತ್ತಲಿನ ಪರಿಸರ ಪ್ರಕೃತಿ, ಸಹಜೀವಿಗಳು, ಕಡಲ ಒಡಲಿನೊಳಗೆ ಅಗೋಚರವಾಗಿರುವ ಬೃಹತ್ ಜಗತ್ತಿನ ಕುರಿತು ಚಿಂತಿಸಲು ಪ್ರಾರಂಭಿಸಿದ್ದಾನೆ. ಸಾವಿರಾರು ವರ್ಷಗಳಿಂದ ತನಗೆ ಇಷ್ಟ ಬಂದಂತೆ ಬದುಕಿದ ಮನುಷ್ಯ ಈಗ ಇತರ ಜೀವಿಗಳ ಕುರಿತು ಕಾನೂನು ರೂಪಿಸಿ ಅಳಿದುಹೋದ ಸಹಸ್ರಾರು ಪ್ರಭೇದಗಳ ಕುರಿತು ಮರುಗಿ ಅಳಿದುಳಿದ ಒಂದಷ್ಟು ಜೀವಗಳ ರಕ್ಷಣೆಗೆ ಮುಂದಾಗಿದ್ದಾನೆ. ಹೀಗೆ ರೂಪಿಸಿದ ಕೆಲವು ಕಾಯ್ದೆ ಕಾನೂನುಗಳಲ್ಲಿ ಒಂದಕ್ಕೆ ಇದೀಗ ಶತಮಾನದ ಸ್ಪರ್ಶವಾಗುತ್ತಿದೆ. ಅದೇ ಪಕ್ಷಿ ವಲಸೆ ಒಪ್ಪಂದ ಕಾಯ್ದೆ 1918.

ಆಧುನಿಕತೆಯ ಧಾವಂತದಲ್ಲಿದ್ದ ಕೆಲ ಪಾಶ್ಚಿಮಾತ್ಯ ದೇಶಗಳು ಇದಕ್ಕಿಂತಲೂ ಹಿಂದೆ ಸಣ್ಣ ಪ್ರಮಾಣದಲ್ಲಿ ಕೆಲವು ಕಾಯ್ದೆಗಳನ್ನು ಪರಿಚಯಿಸಿಕೊಂಡಿದ್ದರೂ ಅದಕ್ಕೆ ಅಷ್ಟು ಮಹತ್ವ ಬಂದಿರಲಿಲ್ಲ. ಈ ಕಾಯ್ದೆಗೂ 1916ರಲ್ಲಿಯೇ ಅಡಿಗಲ್ಲು ಬಿದ್ದರೂ ಅದು ಅನುಷ್ಠಾನ ಗೊಳ್ಳಲು ಎರಡು ವರ್ಷಗಳೇ ಹಿಡಿಯಿತು. 16ನೇ ಆಗಸ್ಟ್ 1916 ರಂದು ಜಾರಿಗೆ ಬಂದ ಈ ಕಾಯ್ದೆ ಹಲವು ಬದಲಾವಣೆ ಮತ್ತು ಬಿಗಿ ಕಾನೂನು ಗಳಿಂದಾಗಿ 1918 ರಲ್ಲಿ ಮತ್ತಷ್ಟು ಬಲಗೊಂಡು ಹೊಸರೂಪ ಪಡೆಯಿತು. ಇದಕ್ಕೂ ಹಿಂದೆ 1913ರಲ್ಲಿ ವೀಕ್ಸ್ -ಮ್ಯಾಕ್‌ಲೀನ್ ಕಾಯ್ದೆಯ ಹೆಸರಿನಲ್ಲಿ ಇದು ಚಾಲ್ತಿಯಲ್ಲಿದ್ದರೂ ಅದು ಜಾಳುಜಾಳಾಗಿತ್ತು. 1918 ರಲ್ಲಿ ಆರಂಭಗೊಂಡ ಈ ಪಕ್ಷಿ ವಲಸೆ ಕಾಯ್ದೆ ಮೂಲತಃ ಅಮೆರಿಕ ಮತ್ತು ಬ್ರಿಟನ್ (ಕೆನಡಕ್ಕಾಗಿ ಬ್ರಿಟನ್ ಪ್ರತಿನಿಧಿಸಿದ್ದು) ನಡುವೆ ನಡೆದ ಒಪ್ಪಂದವಾಗಿತ್ತು. ಅಮೆರಿಕ ಮತ್ತು ಕೆನಡಾ ನಡುವೆ ದೊಡ್ಡ ಪ್ರಮಾಣದ ಪಕ್ಷಿ ವಲಸೆ ನಡೆಯುತ್ತಿತ್ತು. ಆದರೆ ಉಭಯ ದೇಶಗಳಲ್ಲಿ ಈ ಪಕ್ಷಿಗಳ ಮಾರಣಹೋಮ (ಬೇಟೆ, ಆಹಾರ, ವ್ಯಾಪಾರ, ಸಾಕಣೆ) ಅವ್ಯಾಹತವಾಗಿ ಸಾಗುತ್ತಿತ್ತು. ಇದರಿಂದಾಗಿ ಹಲವಾರು ಪ್ರಭೇದ ಗಳು ನಾಮಾವಶೇಷವಾಗಿ ಪಕ್ಷಿ ಸಂಕುಲದ ಉಳಿವಿಗಾಗಿ ಕಾನೂನು ರೂಪಿಸುವ ಅಗತ್ಯ ಎದುರಾಯಿತು. ಮುಂದೆ ಇದೇ ಕಾಯ್ದೆಯನ್ನು ಯು.ಎಸ್.ನೊಂದಿಗೆ ನಾಲ್ಕು ದೇಶಗಳು ಒಪ್ಪಂದ ಮಾಡಿಕೊಂಡವು. ಮೆಕ್ಸಿಕೋ (1936), ಜಪಾನ್ (1972), ಸೋವಿಯತ್ ಯೂನಿಯನ್ (1976) ನಂತಹ ರಾಷ್ಟ್ರಗಳು ಅಮೆರಿಕ ಮತ್ತು ಕೆನಡಾದೊಂದಿಗೆ ಸೇರಿ ಹಲವು ಜಾಗತಿಕ ಸಮ್ಮೇ ಳನಗಳನ್ನು ಆಯೋಜಿಸಿ ಅಂತರ್‌ರಾಷ್ಟ್ರೀಯ ಒಡಂಬಡಿಕೆಗಳನ್ನು ಮಾಡಿಕೊಂಡವು. ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ವನ್ಯ ಮತ್ತು ಸಾಗರ ಜೀವಿ ಕಾಯ್ದೆಗಳಿಗೂ ಮಾದರಿಯಾಗಿ ನಿಂತಿದೆ ಈ ಕಾಯ್ದೆ.

1918ರ ಈ ಕಾಯ್ದೆಯು ಹಲವಾರು ವಲಸಿತ ಪಕ್ಷಿಗಳ ಪಟ್ಟಿ ಮಾಡಿಕೊಂಡು ಅವುಗಳ ವಲಸೆ ಸಂದರ್ಭದಲ್ಲಿ ಉಭಯ ದೇಶಗಳು ತಮ್ಮ ತಮ್ಮ ದೇಶದಲ್ಲಿ ಈ ಪಕ್ಷಿಗಳ ಬೇಟೆಯಾಗಲಿ, ಮಾರಾಟವಾಗಲಿ, ಬಂಧಿಸುವುದಾಗಲಿ, ಅವುಗಳ ಸುಂದರ ರೆಕ್ಕೆ ಪುಕ್ಕಗಳಿಗಾಗಿ ಕೊಲ್ಲುವುದಾಗಲಿ, ಅವುಗಳ ಆಕರ್ಷಕ ಗೂಡುಗಳನ್ನು ಮತ್ತು ಪಕ್ಷಿಗಳನ್ನು ತಮ್ಮ ಕೊಠಡಿಗಳಲ್ಲಿ ಆಲಂಕಾರಿಕ ವಸ್ತುಗಳನ್ನಾಗಿ ಬಳಸುವುದನ್ನಾಗಲಿ ಮಾಡಬಾರದೆಂಬ ಕಟ್ಟಾಜ್ಞೆಯನ್ನು ಜನಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಒಪ್ಪಂದ ಮಾಡಿಕೊಂಡವು. ಇವುಗಳನ್ನು ಸಂರಕ್ಷಿಸುವುದು ಸರಕಾರಗಳ ಕರ್ತವ್ಯವೆಂದು ಘೋಷಿಸಿಕೊಂಡವು. ಈ ಕಾಯ್ದೆಗೂ ಮುಂದೆ ಕೆಲವು ಅಡಚಣೆಗಳುಂಟಾಯಿತು. ಏಕೆಂದರೆ, ಅಮೆರಿಕದ ಮೂಲನಿವಾಸಿಗಳಾದ ರೆಡ್ ಇಂಡಿಯನ್ ಬುಡಕಟ್ಟುಗಳು ಬಾಲ್ಡ್ ಈಗಲ್, ಗೋಲ್ಡನ್ ಈಗಲ್‌ನಂತಹ ಪಕ್ಷಿಗಳ ರೆಕ್ಕೆ ಪುಕ್ಕಗಳನ್ನು ತಮ್ಮ ಧಾರ್ಮಿಕ ಆಚರಣೆಯ ಅತೀಮುಖ್ಯ ಪರಿಕರಗಳನ್ನಾಗಿ ಬಳಸುತ್ತಿದ್ದರು. ಕೆಲವೊಮ್ಮೆ ವೈಜ್ಞಾನಿಕ ಸಂಶೋಧನೆಗಳಿಗಾಗಿ ಪಟ್ಟಿ ಯಲ್ಲಿದ್ದ ಕೆಲವು ಪಕ್ಷಿಗಳ ಮೊಟ್ಟೆಗಳು ಮತ್ತು ಅವುಗಳ ಗೂಡುಗಳ ವಿನ್ಯಾಸಗಳು ಅಗತ್ಯವೆಂದು ಪರಿಗಣಿಸಿ ಈ ಕಾನೂನನ್ನು ಕೊಂಚ ಸಡಿಲಿಸಲಾಯಿತು. ಭಾರತದಂತಹ ದೇಶಕ್ಕೂ ಇಂತಹ ಕಾಯ್ದೆಯ ಅಗತ್ಯ ಬಹಳವಿದ್ದುದನ್ನು ಮನಗಂಡ ಖ್ಯಾತ ಭರತನಾಟ್ಯ ಕಲಾವಿದೆ ರುಕ್ಮಿಣಿದೇವಿ ಆರುಂಡೇಲ್ ನಂಥವರು ಪಾರ್ಲಿಮೆಂಟ್‌ನಲ್ಲಿ ಈ ಕುರಿತು ಧ್ವನಿಯೆತ್ತಿ ಈ ಕಾಯ್ದೆಯ ಅನಿವಾರ್ಯತೆಯನ್ನು ಎತ್ತಿಹಿಡಿದರು. ಭಾರತದಲ್ಲೂ ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳು ರೂಪುಗೊಂಡವು. ಪರಿಣಾಮವಾಗಿ ವನ್ಯ ಮೃಗಗಳ ಸಂರಕ್ಷಣೆಗೆ ಸುಲಭ ಮಾರ್ಗ ಒದಗಿತು.

ಮೂಲತಃ ಲೂಯಿ ಮಾರ್ಷಲ್ ಎಂಬವನು ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಹೊಣೆಗಾರಿಕೆಯೂ ಸರಕಾರಗಳ ಕರ್ತವ್ಯವೆಂದು ವಾದಿಸಿ ಈ ಪಕ್ಷಿವಲಸೆ ಒಪ್ಪಂದ ಕಾಯ್ದೆ 1918 ಕ್ಕೆ ಮುನ್ನುಡಿ ಬರೆದವನು. ಇದನ್ನು ಪರಿಗಣಿಸಿ ಸರಕಾರಗಳು ಕೇವಲ ನಾಗರಿಕರ ಆಡಳಿತವಷ್ಟೇ ಅಲ್ಲದೆ ಸಕಲ ಜೀವರಾಶಿಯ ಸಂರಕ್ಷಣೆಯ ಜವಾಬ್ದಾರಿಯೂ ಹೊರಬೇಕು ಎಂಬ ವಾದ ಒಪ್ಪಿ ಒಮ್ಮತಕ್ಕೆ ಬರಬೇಕು ಎಂಬ ಮಾತಿಗೆ ಪುಷ್ಟಿ ದೊರೆಯಿತು.

ನೂರಾರು ಪ್ರಭೇದ ಪಕ್ಷಿಗಳು ಪ್ರತಿವರ್ಷ ಭರತಖಂಡ ದುದ್ದಕ್ಕೂ ವಲಸೆ ಬಂದು ನಾಲ್ಕೈದು ತಿಂಗಳ ಕಾಲ ನೆಲೆಸುತ್ತಿವೆ. ತಮ್ಮ ಮೂಲಸ್ಥಾನದ ಬದಲಾದ ಹವಾಮಾನಕ್ಕನುಗುಣವಾಗಿ ಅವು ಬೆಚ್ಚನೆಯ ನೆಲೆ ಅರಸಿ ಖಂಡಾಂತರ ಪಯಣ ಆರಂಭಿಸುತ್ತವೆ. ಸಹಸ್ರಾರು ಪಕ್ಷಿಗಳು ಸಾವಿರಾರು ಮೈಲು ಸಾಗರಗಳನ್ನು ದಾಟಿ ನಿರ್ದಿಷ್ಟ ಮಾರ್ಗವಾಗಿ ನಿರ್ದಿಷ್ಟ ಗುರಿಯೆಡೆಗೆ ಹಾರಿಬರುವ ಪರಿ ವಿಜ್ಞಾನಿಗಳಿಗೂ ಸೋಜಿಗದ ವಿಷಯ. ವಲಸೆ ಸಮಯದಲ್ಲಿನ ಇವುಗಳ ಆಹಾರ ಕ್ರಮ, ಭೌಗೋಳಿಕ ಜ್ಞಾನ, ರೆಕ್ಕೆಯಲ್ಲಿನ ಬಲ, ಗುರಿ ಸೇರುವ ಛಲ, ನಮ್ಮ ಹೆಬ್ಬೆಟ್ಟಿನ ಗಾತ್ರದ ತಮ್ಮ ಮಿದುಳಿನಲ್ಲಿರುವ ಜ್ಞಾನಕೋಶ ನಮ್ಮ ಅರಿವಿಗೆ ಇನ್ನೂ ಬರದ ಕೌತುಕವಾಗಿದೆ. ಆಧುನಿಕ ತಂತ್ರಜ್ಞಾನದ ಮೊರೆಹೋಗಿ ವಿಜ್ಞಾನಿಗಳು ವಲಸೆ ಹಕ್ಕಿಗಳನ್ನು ಅಧ್ಯಯನ ಮಾಡಿದರೂ ನಿರೀಕ್ಷಿತ ಉತ್ತರ ದೊರೆತಿಲ್ಲ. ವಲಸಿತ ಪ್ರದೇಶ ತಲುಪಿ ಸಂಗಾತಿಗಳ ಜೊತೆ ಸಂಗಮಿಸಿ ಮೊಟ್ಟೆಯಿಟ್ಟು ಮರಿಮಾಡಿ ಅವುಗಳಿಗೆ ಹಾರಾಡುವ ತರಬೇತಿ ನೀಡಿ ಮಕ್ಕಳು ಮರಿಗಳೊಂದಿಗೆ ಮತ್ತೆ ವಾಪಸ್ಸಾಗುವ ಚಾಣಾಕ್ಷತೆ ಇತರ ಜೀವಿಗಳಿಗೆ ಸವಾಲೇ ಸರಿ. ಇಂತಹ ವಿಸ್ಮಯಕಾರಿ ನಡೆಯ ಈ ಜಾಗತಿಕ ವಿದ್ಯಮಾನವನ್ನು ಸಂರಕ್ಷಿಸುವ ಮತ್ತು ಅದಕ್ಕೆ ಯಾವುದೇ ರೀತಿಯ ಕುಂದು ಉಂಟಾಗದಂತೆ ನೋಡಿಕೊಳ್ಳುವ ಹೊಣೆ ಸರಕಾರಗಳದ್ದಷ್ಟೇ ಅಲ್ಲದೆ ಸಕಲ ಚರಾಚರ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವ ನಮ್ಮೆಲ್ಲರದ್ದೂ ಹೌದು.

ಪಕ್ಷಿ ವಲಸೆ ಕುರಿತ ದಾಖಲೆಗಳು ಪ್ರಾಚೀನ ಗ್ರೀಕ್ ಬರಹಗಾರ ರಾದ ಹೋಮರ್, ಹೆರಡೋಟಸ್, ಅರಿಸ್ಟಾಟಲ್ ಮತ್ತು ಹೀಸಿಯಡ್‌ರವರ ಪ್ರಕಾರ ಮೂರು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಬೈಬಲ್ ಕೂಡ ಇದನ್ನು ದಾಖಲಿಸುತ್ತದೆ. ಅರಿಸ್ಟಾಟಲ್ ಸಹ ಕೊಕ್ಕರೆಗಳು ಸೈಥಿಯಾದ ಸ್ಟೆಪಿಸ್‌ನಿಂದ ನೈಲ್ ನದಿಯ ತಲೆಯವರೆಗೆ ಪಯಣಿಸುವ ಕುರಿತು ದಾಖಲಿಸಿದ್ದಾನೆ. ಪ್ರಾಣಿಗಳು ಆಹಾರ ಅರಸುತ್ತ ವಲಸೆ ಹೊರಟರೆ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ವಲಸೆ ಹೋಗುವ ದಾಖಲೆ ಪುರಾತನ ಕಾಲದಿಂದಲೂ ಮಾನವನಿಗೆ ತಿಳಿದಿದೆ.

ವನ್ಯಜೀವಿ ಛಾಯಾಗ್ರಹಣವೆಂಬುದು ಇತ್ತೀಚೆಗೆ ಒಂದು ಪ್ಯಾಷನ್ ಆಗುವ ಬದಲಿಗೆ ಫ್ಯಾಷನ್ ಆಗಿಬಿಟ್ಟಿದೆ. ಪಕ್ಷಿಗಳ ಛಾಯಾಗ್ರಹಣ ಮಾಡುವವರು ಮೊದಲು ಕೆಲವು ನಿಯಮಗಳನ್ನು ಕಲಿಯಬೇಕಿದೆ. ಪಕ್ಷಿಗಳ ಚಲನವಲನ ಗ್ರಹಿಸಿ ಅವುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಚಿತ್ರ ತೆಗೆಯಬೇಕೆಂಬುದು ತಿಳಿದುಕೊಳ್ಳುವುದೊಳಿತು. ಆದರೆ ಕೆಲವು ದುಷ್ಟ ಛಾಯಾಗ್ರಾಹಕರು ಪಕ್ಷಿಸಂಕುಲಕ್ಕೆ ಮಾರಕವಾಗಿದ್ದಾರೆ. ಪಕ್ಷಿಗಳ ವಾತಾವರಣವನ್ನು ಕೆಡಿಸಿ ತಮ್ಮ ದುರ್ವರ್ತನೆಗಳಿಂದ ಚಿತ್ರ ತೆಗೆದು ಪ್ರಶಸ್ತಿ ಗಿಟ್ಟಿಸುವುದು ಒಂದು ಗೀಳಾಗಿದೆ. ಹಿರಿಯ ವನ್ಯಜೀವಿ ಛಾಯಾಗ್ರಾಹಕರಾದ ಲೋಕೇಶ್ ಮೊಸಳೆ ಯವರು ಇತ್ತೀಚೆಗೆ ಈ ಕುರಿತು ಸುದೀರ್ಘ ಲೇಖನವೊಂದನ್ನು ಮೈಸೂರಿನ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರ ಪ್ರಕಾರ ಕೆಲವು ಛಾಯಾಗ್ರಾಹಕರು ಗೂಡಿನಲ್ಲಿರುವ ಮರಿಗಳನ್ನು ಎತ್ತಿತಂದು ಟೊಂಗೆಗಳ ಮೇಲೆ ಕೂರಿಸಿ ತಾಯಿ ಆಹಾರ ತಂದು ಉಣಿಸುವಾಗ ಹತ್ತಿರದಿಂದ ಚಿತ್ರ ತೆಗೆಯುವುದು, ಬಲವಂತವಾಗಿ ಪಕ್ಷಿಗಳನ್ನು ಹಿಂಸೆ ಮಾಡಿ ಹಾರುವಂತೆ ಮಾಡಿ ಚಿತ್ರ ತೆಗೆಯುವುದು, ಅವುಗಳ ವಲಯದೊಳಗೆ ಅತಿಕ್ರಮ ಪ್ರವೇಶ ಮಾಡಿ ಗಾಬರಿಪಡಿಸುವುದು, ಶಿಬಿರಗಳನ್ನು ಆಯೋಜಿಸಿ ಕಾಡಿನಲ್ಲಿ ದಾಂಧಲೆ ನಡೆಸುವುದು ಇತ್ಯಾದಿ ವಿದ್ಯಮಾನಗಳು ಜರುಗುತ್ತಿರುವ ಬಗ್ಗೆ ಮೊಸಳೆಯವರು ವಿಷಾದ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಸಮೀಪದಲ್ಲಿ ಬೀಡುಬಿಡುವ ವಿಶೇಷ ಪ್ರಭೇದದ ಪಕ್ಷಿ (fly catcher)ಯನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ತಮಗೆ ಬಲ್ಲ ಮಿತ್ರರು ಮತ್ತು ಅರಣ್ಯಾಧಿಕಾರಿಗಳ ಸಂಪರ್ಕ ಬೆಳೆಸಿ ಅವುಗಳು ಅಲ್ಲೇ ನೆಲೆಸುವಂತೆ ನೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ವಲಸಿತ ಪಕ್ಷಿಗಳ ಕಾಳಜಿ ಮಾಡುವ ಮನಸ್ಸು ಮಾನವನಿಗೆ ಮೂಲತಃ ಇರಬೇಕೆಂಬುದು ಅವರ ಆಶಯ. ಕಾಯ್ದೆ ಕಾನೂನುಗಳು ಬಿಗಿಯಾದ ಕ್ರಮ ಕೈಗೊಂಡರೆ ಮಾತ್ರ ಒಂದಷ್ಟು ಹಿತಕಾಯುವ ಕೆಲಸ ನೆರವೇರಬಹುದಷ್ಟೇ. ನೂರರ ಸಂಭ್ರಮದಲ್ಲಿರುವ ಇಂತಹ ಕಾಯ್ದೆಯೊಂದು ಜಗತ್ತಿ ನಾದ್ಯಂತ ವನ್ಯಸಂಕುಲವನ್ನು ತಕ್ಕಮಟ್ಟಿಗಾದರೂ ಸಂರಕ್ಷಿಸುತ್ತಿದೆ ಎಂಬುದೇ ಸದ್ಯದ ಸಮಾಧಾನದ ಸಂಗತಿ.

ಪಕ್ಷಿ ವಲಸೆ ಕಾಯ್ದೆ 1918ರ ನಿಬಂಧನೆಗಳಡಿ ಬರುವ ಪ್ರಮುಖ ಅಂಶಗಳು

►ವಲಸಿತ ಪಕ್ಷಿಗಳನ್ನು ಸೆರೆಹಿಡಿದು ವ್ಯಾಪಾರ ಮಾಡುವುದು. ಸಾಗಾಟ ಮಾಡುವುದು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈ ಕಾನೂನಿನ ಉಲ್ಲಂಘನೆಯಾಗುವುದು.

►ಒಪ್ಪಂದ ಮಾಡಿಕೊಂಡ ನಾಲ್ಕು ಉಭಯ ರಾಷ್ಟ್ರಗಳಲ್ಲಿ ಕಾಯ್ದೆಯ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರನ್ನು ಈ ಕಾನೂನಿನ ಚೌಕಟ್ಟಿಗೆ ಒಳಪಡಿಸಲಾಗುವುದು.

►ಪಂಜರಗಳಲ್ಲಿ ಸಾಕಲು, ಪಂದ್ಯಗಳಿಗಾಗಿ ಪಕ್ಷಿಗಳನ್ನು ಸೆರೆಹಿಡಿದು ಪಳಗಿಸುವುದು, ಬಳಸುವುದು ಮತ್ತು ಬಂಧಿಸುವುದು ಮಾಡುವಂತಿಲ್ಲ.

►ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಲಸಿತ ಪಕ್ಷಿಗಳನ್ನು ಆಮದು ಮತ್ತು ರಫ್ತು ಮಾಡುವಂತಿಲ್ಲ.

►ವಲಸಿ ಪಕ್ಷಿಗಳಿಂದ ಕೃಷಿ ಮತ್ತು ತೋಟಗಾರಿಕೆಗೆ ಅಡ್ಡಿಯುಂಟಾದರೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡತಕ್ಕದ್ದು.

►ಈ ಕಾಯ್ದೆಯ ಉಲ್ಲಂಘನೆ ಸಾಬೀತಾದರೆ ಕನಿಷ್ಠ 500 ಡಾಲರ್ ಜುಲ್ಮಾನೆ ಮತ್ತು 6 ತಿಂಗಳ ಸೆರೆವಾಸದಿಂದ ಗರಿಷ್ಠ 2000 ಡಾಲರ್ ಜುಲ್ಮಾನೆ ಮತ್ತು 2 ವರ್ಷದವರೆಗೆ ಸೆರೆವಾಸ ವಿಸ್ತರಿಸಬಹುದಾಗಿದೆ.

ಜಗತ್ತಿನ ಬಹುತೇಕ ರಾಷ್ಟ್ರಗಳು ಈ ಕಾಯ್ದೆಯನ್ನು ತಮ್ಮ ಸಂವಿಧಾನಗಳಲ್ಲಿ ಅಳವಡಿಸಿಕೊಂಡಿವೆ. ಇಷ್ಟೆಲ್ಲ ಆದರೂ ಸಹ ದುರುಳ ಮನುಜರು ಅಭಿವೃದ್ಧಿಯ ಹಾದಿಹಿಡಿದು ಎಷ್ಟು ವೇಗವಾಗಿ ಮುಂದಕ್ಕೆ ಸಾಗುತ್ತಾರೋ ಅಷ್ಟೇ ಸಂಕಷ್ಟಗಳು ಪ್ರಕೃತಿಗೂ ಅಲ್ಲಿನ ಜೀವವೈವಿಧ್ಯಕ್ಕೂ ಎದುರಾಗುತ್ತಲೇ ಇದೆ. ಇಂಥ ಪ್ರಗತಿಪಥ ಪರಿಸರಕ್ಕಷ್ಟೇ ಅಲ್ಲದೆ ಮನುಕುಲಕ್ಕೂ ಮಾರಕ ಎಂಬುದನ್ನು ಬೇಗ ಅರಿಯಬೇಕಿದೆ. ಬೆಳೆಗಳಿಗೆ ತಾನು ಬಳಸುತ್ತಿರುವ ರಾಸಾಯನಿಕಗಳಿಂದ ಹಿಡಿದು ಆಧುನಿಕ ಯಂತ್ರೋಪಕರಣ, ವಾಯುಜಲ ಅನಿಲ ಮಾಲಿನ್ಯ ತಡೆಯಬೇಕೆಂಬ ಕನಿಷ್ಠ ತಿಳುವಳಿಕೆಯಿಲ್ಲದವರಂತೆ ವರ್ತಿಸುತ್ತಿದ್ದಾರೆ. ಗಾಂಧೀಜಿಯವರ ‘‘ಪ್ರಕೃತಿ ಮಾನವನ ಎಲ್ಲ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ದುರಾಸೆಯನ್ನಲ್ಲ’’ ಎಂಬ ಮಾತು ಇಲ್ಲಿ ಉಲ್ಲೇಖನೀಯ.

ಚಿತ್ರಗಳು: ಲೋಕೇಶ್ ಮೊಸಳೆ

Writer - ನೂರ್ ಅಹಮ್ಮದ್ ಎ.ಎಸ್

contributor

Editor - ನೂರ್ ಅಹಮ್ಮದ್ ಎ.ಎಸ್

contributor

Similar News