ರಾಣಿ ಸಾಹಸ: ಸ್ಪೇನ್ ವಿರುದ್ಧ ಭಾರತಕ್ಕೆ ರೋಚಕ ಜಯ

Update: 2018-06-17 04:34 GMT

ಮ್ಯಾಡ್ರಿಡ್,ಜೂ.16: ನಾಯಕಿ ರಾಣಿ ರಾಂಪಾಲ್ ಕೊನೆಯ ಕ್ಷಣದಲ್ಲಿ ಬಾರಿಸಿದ ಗೋಲು ನೆರವಿನಿಂದ ಭಾರತದ ಮಹಿಳಾ ಹಾಕಿ ತಂಡ ಸ್ಪೇನ್ ವಿರುದ್ಧ ಮೂರನೇ ಪಂದ್ಯವನ್ನು 3-2 ಅಂತರದಿಂದ ಗೆದ್ದುಕೊಂಡಿದೆ.

 ಭಾರತ 5 ಪಂದ್ಯಗಳ ಸರಣಿಯಲ್ಲಿ ಮೊದಲ ಜಯ ದಾಖಲಿಸಿತು. ಸರಣಿಯು 1-1 ರಿಂದ ಸಮಬಲಗೊಂಡಿತು. ಮೊದಲ ಪಂದ್ಯದಲ್ಲಿ ಸ್ಪೇನ್ ತಂಡ 3-0 ಅಂತರದಿಂದ ಜಯ ಸಾಧಿಸಿತ್ತು. ಎರಡನೇ ಪಂದ್ಯ 1-1 ರಿಂದ ಡ್ರಾಗೊಂಡಿತ್ತು. ಸರಣಿಯ ನಾಲ್ಕನೇ ಪಂದ್ಯ ಶನಿವಾರ ತಡರಾತ್ರಿ ನಡೆಯಲಿದೆ.

  3ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಮರಿಯಾ ಲೊಪೆಝ್ ಸ್ಪೇನ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 28ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್ ಕೌರ್ 1-1 ರಿಂದ ಸಮಬಲ ಸಾಧಿಸಿದರು. 32ನೇ ನಿಮಿಷದಲ್ಲಿ ಯುವ ಸ್ಟ್ರೈಕರ್ ಲಾಲ್‌ರೆಂಸಿಯಾಮಿ ಭಾರತಕ್ಕೆ 2-1 ಲೀಡ್ ತಂದುಕೊಟ್ಟರು.

200ನೇ ಅಂತರ್‌ರಾಷ್ಟ್ರೀಯ ಪಂದ್ಯ ಆಡಿದ ವಂದನಾ ಕಟಾರಿಯಾ 42ನೇ ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶ ಕೈಚೆಲ್ಲಿದರು. ಸ್ಪೇನ್‌ನ ಲೊಲಾ ರೇರಾ ಉತ್ತಮ ಫಾರ್ಮ್‌ನ್ನು ಮುಂದುವರಿಸಿದ್ದು 58ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು ಸಮಬಲಗೊಳಿಸಿದರು.

ಪಂದ್ಯ ಕೊನೆಗೊಳ್ಳಲು ಕೇವಲ ಒಂದು ನಿಮಿಷ ಬಾಕಿ ಇರುವಾಗ ನಾಯಕಿ ರಾಣಿ ಅದ್ಭುತ ಫೀಲ್ಡ್ ಗೋಲು ದಾಖಲಿಸಿದರು. ಈ ಮೂಲಕ ಪ್ರವಾಸಿ ಭಾರತ ತಂಡ ಅರ್ಹ ಗೆಲುವು ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News