ಶತಮಾನದ ವಿಸ್ಮಯ ಡಾಪುರಿ ಡ್ರಾಯಿಂಗ್ಸ್

Update: 2018-06-17 07:23 GMT

ಭಾಗ-2

ಡಾಪುರಿ ಮತ್ತು ಹೀವ್ರಾ ತೋಟಗಳಿಗೆ ಸಸ್ಯಗಳನ್ನು ಗಿಬ್ಸನ್ ಉಡುಗೊರೆಯಾಗಿಯೂ ವಿನಿಮಯವಾಗಿಯೂ ಪಡೆಯುತ್ತಿದ್ದ. ಆದರೂ ಅವುಗಳ ಸಾಗಾಟ ವೆಚ್ಚವನ್ನು ಅವನು ಭರಿಸಬೇಕಿತ್ತು. ಸರಕಾರ ತೋಟಗಳ ನಿರ್ವಹಣೆಗೆ ಕೊಡುತ್ತಿದ್ದ ಅಲ್ಪಪ್ರಮಾಣದ ಹಣದಲ್ಲೇ ಗಿಬ್ಸನ್ ಈ ಕೆಲಸ ಮಾಡುತ್ತಿದ್ದ.

ಡಾಪುರಿ ತೋಟವನ್ನು ನಿರ್ವಹಿಸಲು ಕಂಪೆನಿ ಸರಕಾರ ತಿಂಗಳಿಗೆ 300 ರೂ. ಕೊಡುತ್ತಿತ್ತು. ಡಾಪುರಿ ತೋಟದ ಮುಖ್ಯಸ್ಥ ವಿಲಿಯಮ್ಸನ್ ತೋಟದಲ್ಲಿ ಬೆಳೆದ ಹಣ್ಣು, ತರಕಾರಿಗಳನ್ನು ಪೂನಾದಲ್ಲಿದ್ದ ಸೈನ್ಯಕ್ಕೆ ಮಾರಿ ತೋಟವನ್ನು ನಿರ್ವಹಿಸುತ್ತಿದ್ದ. ಅನಂತರ ಬಂದ ಚಾರ್ಲ್ಸ್ ಲಷ್ ಪ್ರಪಂಚದ ಅನೇಕ ಕಡೆಗಳಿಂದ ಬೀಜಗಳನ್ನೇ ತರಿಸಿ ಪ್ರಯೋಗ ನಿರತನಾದ. ವಿಲಿಯಮ್ಸನ್ ಕೊಟ್ಟಿರುವ ಡಾಪುರಿ ತೋಟದ ಹಣ್ಣಿನ ಮರಗಳ ಪಟ್ಟಿಯನ್ನು ನೋಡಿದಾಗ 70 ಎಕರೆ ವಿಶಾಲವಾದ ಆ ಸಮೃದ್ಧ ತೋಟದಲ್ಲಿದ್ದ ಸೇಬು, ರಾಸ್ಬೆರಿ, ಮಾವು, ಸೀತಾಫಲ, ಚಕ್ಕೋತ, ಹುಣಿಸೆ, ನಿಂಬೆ ಮುಂತಾದ ಮರಗಳ ಚಿತ್ರ ಕಣ್ಣ ಮುಂದೆ ಬಂದೀತು. ಡಾಪುರಿ ತೋಟದ ಸುತ್ತಲೂ ಪೌನ ನದಿ ಹರಿಯುತ್ತಿದ್ದರೂ ತೋಟ ನದಿಗಿಂತ 20 ಅಡಿ ಮೇಲಿದ್ದುದರಿಂದ ನದಿ ನೀರಿನಿಂದ ತೋಟಕ್ಕೇನೂ ಪ್ರಯೋಜನವಿರಲಿಲ್ಲ. ತೋಟದ ಮರಗಳಿಗೆ ಕಪಿಲೆ ಬಾವಿಯಿಂದ ನೀರು ಹಾಯಿಸುತ್ತಿದ್ದರು.

ಕೇವ್ ಗಾರ್ಡನ್ ಇಂಗ್ಲೆಂಡ್

ಗಿಬ್ಸನ್‌ನ ವರದಿಗಳಿಂದ ಅಂದಿನ ಡಾಪುರಿ ತೋಟದ ಒಂದು ಚಿತ್ರ ಸಿಗುತ್ತದೆ. ಇಲ್ಲಿ ಮೇಲ್ಚಿಚಾರಕ ಗಿಬ್ಸನ್‌ನ ಕೈಕೆಳಗೆ ಒಬ್ಬ ಯುರೋಪಿಯನ್ ತೋಟಗಾರ, ಅವನ ಕೈಕೆಳಗೆ ಸ್ಥಳೀಯ ತೋಟಗಾರರು, ಕಳೆಕೀಳುವ ಕೆಲಸಕ್ಕೆ ಹೆಂಗಸರು ಇದ್ದರು. ಗಿಬ್ಸನ್ ಈ ತೋಟದಲ್ಲಿ ಮುಖ್ಯವಾಗಿ ಮರಗಳನ್ನು ಬೆಳೆಸಿದ. ಆದರೆ ಅವನ ಮೇಲಿನವರಿಗೆ ಡಾಪುರಿ ತೋಟವನ್ನು ಒಂದು ಆಲಂಕಾರಿಕ ಉದ್ಯಾನವನ್ನಾಗಿ ಮಾಡುವ ಆಸೆಯಿದ್ದುದರಿಂದ ತೋಟವನ್ನು ಸುಂದರಗೊಳಿಸಲು ಹೆಚ್ಚಿನ ಹಣ ಬಿಡುಗಡೆ ಮಾಡಿದರು. ಆಗ ಬಾಂಬೆ ಗವರ್ನರ್ ಆಗಿದ್ದ ಪಾಕ್‌ಲೆಂಡ್‌ನ ಪತ್ನಿ ತನ್ನ ಆತ್ಮಕಥೆಯಲ್ಲಿ ‘‘ಇದೊಂದು ವಿಶಾಲವಾದ ತೋಟ. ಮಳೆಗಾಲ ಆರಂಭವಾದೊಡನೆ ಇಲ್ಲಿನ ಗಿಡಗಳ ಸೌಂದರ್ಯ ಹೆಚ್ಚುತ್ತದೆ. ಬಳ್ಳಿಗಳು ಹೂಗಳಿಂದ ತುಂಬಿಕೊಂಡು ಅವು ಹಬ್ಬಿಕೊಂಡಿರುವ ಮರಗಳ ದಟ್ಟವಾದ ಎಲೆಗಳ ಮಧ್ಯದಿಂದ ಹಾರಗಳಂತೆ ಇಳಿಬಿದ್ದಿರುತ್ತವೆ. ಯುರೋಪಿನ ಗ್ರೀನ್‌ಹೌಸ್‌ನಲ್ಲಿ ಮುದ್ದು ಮಾಡಿ ಬೆಳೆಸಬೇಕಾದ ಇಲ್ಲಿನ ಹೂವುಗಳು ಇಲ್ಲಿ ಕಳೆಗಳೋಪಾದಿಯಲ್ಲಿ ಸಾಮಾನ್ಯವಾಗಿಬಿಟ್ಟಿವೆ’’ ಎಂದು ಹೊಗಳಿದ್ದಾಳೆ. ಇಷ್ಟಾದರೂ ಗವರ್ನರ್‌ಗೆ ಬೇಕಾದ ಕಾಯಿಪಲ್ಲೆ, ಅವನ ಹೂದಾನಿ ಸಿಂಗರಿಸಲು ಬೇಕಾದ ಹೂಗಳ ಸರಬರಾಜು ಸರಿಯಾಗಿ ಆಗುತ್ತಿಲ್ಲ ಎಂಬ ದೂರೂ; ಅದಕ್ಕೆ ನೀರಿನ ಕೊರತೆ, 10 ವರ್ಷಗಳ ಕಾಲ ಮುಂಗಾರು ಮಳೆ ಸರಿಯಾಗಿ ಬೀಳದಿರುವ ಕಾರಣಗಳನ್ನು ಸಮಜಾಯಿಷಿಯಾಗಿ ಗಿಬ್ಸನ್ ಕೊಡುವುದು ನಡೆದೇ ಇತ್ತು.

ಡಾಪುರಿ, ಹೀವ್ರಾ ತೋಟಗಳಲ್ಲಿ ಗಿಬ್ಸನ್ ಬೆಳೆಸಿದ ಸಸ್ಯಗಳ ಬಗ್ಗೆ ಎರಡು ವಿಧಗಳಿಂದ ತಿಳಿಯಬಹುದು. 1) ಸಸ್ಯ ಚಿತ್ರ ಕಲಾಕಾರರಿಂದ ಚಿತ್ರಿಸಲ್ಪಟ್ಟ ಸಸ್ಯಚಿತ್ರಗಳು. 2) ತೋಟದಲ್ಲಿ ಬೆಳೆದ ಸಸ್ಯಗಳ ಪಟ್ಟಿ. ಡಾಪುರಿ ತೋಟದಲ್ಲಿ ಗಿಬ್ಸನ್ ಸುಮಾರು 1000 ಬಗೆಯ ಸಸ್ಯಗಳನ್ನು ಬೆಳೆಸಿದ್ದ. ಸಸ್ಯಚಿತ್ರಗಳಿಂದ ಡಾಪುರಿ ತೋಟದಲ್ಲಿ ಬೆಳೆಸಿದ ಸಸ್ಯಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಪಶ್ಚಿಮ ಇಂಡಿಯಾದ ಸ್ಥಳೀಯ ಸಸ್ಯಗಳು ಮತ್ತು ಇಂಡಿಯಾದ ಬೇರೆ ಭಾಗಗಳ ಮತ್ತು ವಿದೇಶದ ಸಸ್ಯಗಳು 150 ವರ್ಷಗಳ ಹಿಂದೆಯೇ ನಮ್ಮಲ್ಲಿಗೆ ಕಾಲಿರಿಸಿದ್ದು ಅಚ್ಚರಿಯ ಸಂಗತಿ. ಇದು ಸಾಧ್ಯವಾಗಿದ್ದು ಇಂಗ್ಲೆಂಡಿನ ಕ್ಯೂಗಾರ್ಡನ್ ಒಂದು ಕೇಂದ್ರವಾಗಿ ಪ್ರಪಂಚದ ಅನೇಕ ಭಾಗಗಳ ಸಸ್ಯೋದ್ಯಾನಗಳಲ್ಲಿ ಕೆಲಸ ಮಾಡುತ್ತಿದ್ದ ಯುರೋಪಿಯನ್ನರು ಕ್ಯೂಗಾರ್ಡನ್‌ನೊಡನೆ ಸಸ್ಯ ವಿನಿಮಯ ಮಾಡಿಕೊಳ್ಳುತ್ತಿದ್ದುದರಿಂದ.

ಡಾಪುರಿ ಮತ್ತು ಹೀವ್ರಾ ತೋಟಗಳಿಗೆ ಸಸ್ಯಗಳನ್ನು ಗಿಬ್ಸನ್ ಉಡುಗೊರೆಯಾಗಿಯೂ ವಿನಿಮಯವಾಗಿಯೂ ಪಡೆಯುತ್ತಿದ್ದ. ಆದರೂ ಅವುಗಳ ಸಾಗಾಟಕೆ ವೆಚ್ಚವನ್ನು ಅವನು ಭರಿಸಬೇಕಿತ್ತು. ಸರಕಾರ ತೋಟಗಳ ನಿರ್ವಹಣೆಗೆ ಕೊಡುತ್ತಿದ್ದ ಅಲ್ಪಪ್ರಮಾಣದ ಹಣದಲ್ಲೇ ಗಿಬ್ಸನ್ ಈ ಕೆಲಸ ಮಾಡುತ್ತಿದ್ದ. ಕೆಲವು ವೇಳೆ ಸಂಗ್ರಹಕಾರರಿಂದ ನಾಸಿಕ್, ಕೊಂಕಣ, ಮಹಾಬಲೇಶ್ವರಗಳಲ್ಲಿ ಸಸ್ಯ, ಬೀಜಗಳ ಸಂಗ್ರಹಣೆ ಮಾಡಿಸುತ್ತಿದ್ದ. ಬೇರೆ ದೇಶಗಳ ಬೊಟಾನಿಕ್ ಗಾರ್ಡನ್‌ಗಳಿಂದ ಡಾಪುರಿ, ಹೀವ್ರಾ ತೋಟಗಳಿಗೆ ಗಿಬ್ಸನ್ ಕುತೂಹಲಕರ ಸಸ್ಯಗಳನ್ನು ಪಡೆಯುತ್ತಿದ್ದ. 1852ರಲ್ಲಿ ಹೀವ್ರಾ ತೋಟದ ಮೇಲ್ವಿಚಾರಣೆಯನ್ನು ವಹಿಸಿಕೊಂಡ ಸ್ಟಾಕ್ಸ್, ಗಿಬ್ಸನ್‌ನಿಂದ ತೋಟದ ಸಸ್ಯಗಳ ಪಟ್ಟಿ ಮಾಡಿಸಿದ.

1857ರಲ್ಲಿ ಗಿಬ್ಸನ್ ರಜೆಯ ಮೇಲೆ ಸ್ವದೇಶಕ್ಕೆ ಹೊರಟಾಗ ಕಂಪೆನಿ ಸರಕಾರ ಗಿಬ್ಸನ್ ಕಷ್ಟಪಟ್ಟು ಬೆಳೆಸಿದ್ದ ಡಾಪುರಿ ತೋಟವನ್ನು ಕೇವಲ ಒಂದು ಕೈತೋಟವಾಗಿ ಪರಿಗಣಿಸಲೆತ್ನಿಸಿತು. ಆದರೆ ಡಾಪುರಿಯಲ್ಲಿ ಬೆಳೆಸಿದ್ದ ಮರಗಳಿಂದ ದೊರೆಯುತ್ತಿದ್ದ ಔಷಧಗಳ ಪ್ರಾಮುಖ್ಯತೆಗಾಗಿ ತೋಟಕ್ಕೆ ಕೈಹಚ್ಚಬಾರದೆಂದು ಗಿಬ್ಸನ್ ಬಲವಾಗಿ ವಾದಿಸಿ. ಅನಂತರ ಸರಕಾರ ಸಿಪಾಯಿ ದಂಗೆಯನ್ನು ಎದುರಿಸಬೇಕಾಗಿ ಬಂದದ್ದರಿಂದ ಡಾಪುರಿ ತೋಟ ತಾತ್ಕಾಲಿಕವಾಗಿ ಉಳಿದುಕೊಂಡಿತು. ಕೆಲವು ವರ್ಷಗಳ ನಂತರ ಡಾಪುರಿ ತೋಟದ ಮಧ್ಯದಲ್ಲಿರುವ ಗವರ್ನರ್ ಬಂಗಲೆಯ ವಾತಾಯನ ವ್ಯವಸ್ಥೆ ಕಿರಿದಾಗಿದೆ, ಸುತ್ತಲಿನ ಮರಗಳು, ತೋಟವನ್ನು ಸುತ್ತುವರಿದಿರುವ ನದಿ ಇವುಗಳಿಂದ ಗವರ್ನರ್ ವಾಸಿಸಲು ಹಿತಕರವಾದ ವಾತಾವರಣವಿಲ್ಲ ಎಂಬ ನೆಪವನ್ನು ಮುಂದಿಟ್ಟು ಸರಕಾರ ಡಾಪುರಿ ತೋಟವನ್ನು ಇಬ್ಬರು ಬಿಳಿಯರಿಗೆ ಮಾರಿಬಿಟ್ಟಿತು. ಡಾಪುರಿ ತೋಟ ಮುಂದೆ ಅನೇಕ ಕೈ ಬದಲಾಯಿಸಿ, ಕೊನೆಯ ಮಾಲಕ ಗಿಬ್ಸನ್ ಅಷ್ಟು ವರ್ಷಗಳು ಶ್ರಮ, ಶ್ರದ್ಧೆಗಳಿಂದ ಬೆಳೆಸಿದ್ದ ತೋಟದ ಮರಗಳನ್ನು ಕಡಿದು ಕೇವಲ ಎರಡು ಸಾವಿರ ರೂಪಾಯಿಗಳಿಗೆ ಮಾರಿಕೊಂಡ. ಕೊನೆಗೆ ಪುನಃ ಇಪ್ಪತ್ತನೆ ಶತಮಾನದ ಆದಿಭಾಗದಲ್ಲಿ ಸರಕಾರದ ವಶಕ್ಕೆ ಬಂದ ಡಾಪುರಿ ತೋಟದ ಜಾಗ ಗವರ್ನರ್ ನಿವಾಸದೊಂದಿಗೆ ನೀರಾವರಿ ಇಲಾಖೆಯ ವರ್ಕ್ ಶಾಪ್ ಆಗಿದೆ.

ಡಾಪುರಿ ತೋಟದ ನಿರ್ಮಾಣದ ಹತ್ತು ವರ್ಷಗಳ ನಂತರ ಬಾಂಬೆ ಸರಕಾರ ಹಲವು ಡಿಸ್ಟಿಕ್ಟ್ ತೋಟಗಳನ್ನು ನಿರ್ಮಿಸಿದಾಗ ಗಿಬ್ಸನ್ ಅವುಗಳ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕಾಯ್ತು. 1837ರಲ್ಲಿ ಮೀನಾ ನದಿಯ ಪಕ್ಕದಲ್ಲಿ ನೀರ್‌ಗೂರಿ ತೋಟ ನಿರ್ಮಾಣವಾಗಿ ಅಲ್ಲಿ ಹಿಪ್ಪುನೇರಳೆ ಕಬ್ಬು, ಆಲೂಗಡ್ಡೆ, ಭತ್ತ ಇತ್ಯಾದಿ ಬೆಳೆಯಲಾರಂಭಿಸಿದರು. ಇಲ್ಲಿ ಸ್ಥಳೀಯ ಕೃಷಿಕನೊಬ್ಬ ಸರಕಾರದೊಡನೆ ಪಾಲುಗಾರಿಕೆಯಲ್ಲಿ ಬೆಳೆಗಳನ್ನು ಬೆಳೆದದ್ದನ್ನು ಗಿಬ್ಸನ್ ದಾಖಲಿಸಿದ್ದಾನೆ. ನಂತರ ಶಿವನೇರ್ ಕೋಟೆ ಎಂಬಲ್ಲಿನ ತೋಟದ ನಿರ್ವಹಣೆ ಗಿಬ್ಸನ್‌ಗೇ ವಹಿಸಲಾಯ್ತು. ಡಿಸ್ಟ್ರಿಕ್ಟ್ ಗಾರ್ಡನ್‌ಗಳಲ್ಲಿ ಮುಖ್ಯವಾದದ್ದು ಹೀವ್ರಾ ತೋಟ. ಗಿಬ್ಸನ್ ಈ ತೋಟವನ್ನೇ ತನ್ನ ಮುಖ್ಯ ನೆಲೆಯನ್ನಾಗಿ ಮಾಡಿಕೊಂಡು ಸಸ್ಯಗಳ ಪ್ರಯೋಗದಲ್ಲಿ ನಿರತನಾದ. ಕುಕುಡಿ ನದಿಯಿಂದ ಸುತ್ತುವರಿಯಲ್ಪಟ್ಟ ಹೀವ್ರಾ ತೋಟದ ಭೂಗುಣ ಉತ್ತಮ ದರ್ಜೆಯದಾಗಿದ್ದರಿಂದ ಗಿಬ್ಸನ್ ಇಲ್ಲಿ ಉತ್ಸಾಹದಿಂದ ಹಿಪ್ಪುನೇರಳೆ, ಮಾರಿಷಸ್ ಕಬ್ಬು, ಹತ್ತಿ, ಸೂರ್ಯಕಾಂತಿ, ಆಲೂಗಡ್ಡೆ ಟಾಪಿಯೋಕ ಅನೇಕ ಬಗೆಯ ಹುಲ್ಲುಗಳು, ಸೆನ್ನಾ (ಸೋನಾಮುಖಿ) ಬೆಳೆಗಳನ್ನು ಬೆಳೆಯುವುದರಲ್ಲಿ ಮಗ್ನನಾದ. ಡಿಸ್ಟ್ರಿಕ್ಟ್ ಗಾರ್ಡನ್‌ಗಳ ಸ್ಥಾಪನೆಯ ಉದ್ದೇಶ ಹೊಸ ಬೆಳೆಗಳನ್ನು ತೋಟಗಳಲ್ಲಿ ಬೆಳೆದು ಪ್ರಯೋಗಮಾಡಿ, ರೈತರು ಆ ಬೆಳೆಗಳನ್ನು ಬೆಳೆಯುವಂತೆ ಹುರಿದುಂಬಿಸುವುದು. ಈ ವಿಷಯದಲ್ಲಿ ಗಿಬ್ಸನ್ ತನ್ನ ಶ್ರಮಕ್ಕೆ ಮಿಶ್ರ ಪರಿಣಾಮಗಳನ್ನು ಕಾಣಬೇಕಾಯಿತು ಮತ್ತು ಟೀಕೆಗಳನ್ನು ಎದುರಿಸಬೇಕಾಯಿತು. ಹತ್ತಿ ಬೆಳೆಯುವುದರಲ್ಲಿ ಗಿಬ್ಸನ್ ಅನೇಕ ನಿರರ್ಥಕ ಪ್ರಯತ್ನಗಳನ್ನು ಮಾಡಿ ಹತ್ತಿ ಬೆಳೆಯುವುದನ್ನು ನಿಲ್ಲಿಸಬೇಕಾಯ್ತು. ಆದರೆ ಕಾಲಕ್ರಮೇಣ ಹತ್ತಿ ದಖ್ಖನ್ನಿನ ಪ್ರಮುಖ ಬೆಳೆಯಾಯ್ತು. ಆದರೆ ರೈತರು ಹೊಸ ಬೆಳೆ ಆಲೂಗಡ್ಡೆಯನ್ನು ಬೆಳೆಯುವುದರಲ್ಲಿ ಯಶಸ್ವಿಯಾದರು. ಗಿಬ್ಸನ್ ನೀರ್‌ಗೂರಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳೆದ ಆಲೂಗಡ್ಡೆ ಬಾಂಬೆ, ಪೂನಾ ಅಹಮದ್ ನಗರಗಳಿಗೆ ರವಾನಿಸಲ್ಪಟ್ಟಿತು ಎಂದು ದಾಖಲಿಸಿದ್ದಾನೆ.

ಒಂದು ಸಸ್ಯಶಾಸ್ತ್ರೀಯ ತೋಟವನ್ನು ನಿರ್ಮಿಸಿ ಅಲ್ಲಿ ಸ್ಥಳೀಯ ಮರಗಳನ್ನು ಬೆಳೆಸಿ, ಸ್ಥಳೀಯರನ್ನು ಮರಗಳನ್ನು ಬೆಳೆಯಲು ಪ್ರೇರೇಪಿಸುವುದರ ಮಹತ್ವವನ್ನು ಗಿಬ್ಸನ್ ತಿಳಿದಿದ್ದ. ಅಂದಿನ ಕಾಲದಲ್ಲಿ ಸ್ಥಳೀಯರು ಒಂದು ಮರ ಕಡಿಯುವುದರ ಬಗ್ಗೆ ಎಷ್ಟು ಉತ್ಸುಕರೋ ಮರ ನೆಡುವುದರ ಬಗ್ಗೆ ಅಷ್ಟೇ ಆಲಸಿಗಳು ಎಂದು ಗಿಬ್ಸನ್ ವ್ಯಥೆಪಟ್ಟಿದ್ದಾನೆ. ಜನ ತೇಗ, ಕಿತ್ತಲೆ, ಸೀಬೆ, ಗುಲಾಬಿ ಸಸಿಗಳನ್ನು ತಮ್ಮ ಬಾವಿಗಳ ಹತ್ತಿರ ನೆಡಲು ಗಿಬ್ಸನ್‌ನಿಂದ ಪಡೆಯುತ್ತಿದ್ದರು. ಕಾಲಕ್ರಮೇಣ ಅವರು ಬಾವಿಗಳ ಹತ್ತಿರ ನೆಡಲು ಮನೋರಂಜನಿ, ಮಾವು, ನಿಂಬೆ ಇಂತಹ ಗಿಡಗಳನ್ನು ಕೇಳುತ್ತಿದ್ದರೇ ಹೊರತು ಬೇರೆ ಮರಗಳ ಬಗ್ಗೆ ಅವರೇನೂ ಅಂತಹ ಉತ್ಸಾಹ ತೋರುತ್ತಿರಲಿಲ್ಲ ಎಂದು ಗಿಬ್ಸನ್ ವರದಿ ಮಾಡಿದ್ದಾನೆ.

ಡಿಸ್ಟ್ರಿಕ್ಟ್ ತೋಟಗಳಲ್ಲಿ ಗಿಬ್ಸನ್ ಔಷಧೀಯ ಸಸ್ಯಗಳನ್ನು ಬೆಳೆದು ಮಾರುವುದರಲ್ಲಿ ಯಶಸ್ವಿಯಾದ. ತಿನ್ನವೆಲ್ಲಿ ಸೆನ್ನಾ (ವಿರೇಚಕ) ಎಂಬ ಔಷಧೀಯ ಸಸ್ಯದ ಬೀಜಗಳನ್ನು ಸುತ್ತಲಿನ ರೈತರಿಗೆ ವಿತರಿಸಿ, ಅವರು ಬೆಳೆದ ಸೆನ್ನಾಸಸ್ಯದ ಎಲೆಗಳನ್ನು ಖರೀದಿಸಿ, ಪುನಃ ಸೆನ್ನಾವನ್ನು ಔಷಧವಾಗಿ ಮಾರಿ ಸರಕಾರಕ್ಕೆ ಉತ್ಪತ್ತಿ ದೊರಕುವಂತೆ ಮಾಡಿದ. ಇದೇ ರೀತಿ ಹೆನ್‌ಬೇನ್, ಕೋಲೋಸಿಂಥ್, ಡ್ಯಾಂಡೆಲಿಯಾನ್ ಎಂಬ ಔಷಧೀಯ ಸಸ್ಯಗಳನ್ನು ಬೆಳೆದು ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯದ ಮೆಡಿಕಲ್ ಸ್ಟೋರ್‌ಗೆ ಮಾರಿ ಸರಕಾರದ ಆದಾಯ ಹೆಚ್ಚಿಸಿದ.

ಗಿಬ್ಸನ್ ಕಾಲದಲ್ಲಿ ಏಳಿಗೆ ಹೊಂದಿದ್ದ ಹೀವ್ರಾ ತೋಟ ಎಲ್ಲ ಬಗೆಯ ಸಸ್ಯಗಳನ್ನು ಹೊಂದಿದ್ದರೂ ಅವನು ನಿವೃತ್ತನಾದ ಮೇಲೆ ತೋಟ ಒಂದು ಕಾಡಿನಂತಾಯ್ತು. ಗಿಬ್ಸನ್‌ನ ಕಾಲದಲ್ಲೇ ಡಾಪುರಿ, ಹೀವ್ರಾ, ತೋಟಗಳ ಮುಂದುವರಿಕೆ ನಿಲ್ಲಿಸಬೇಕೆಂಬ ಕೂಗೆದ್ದಿತು. ಕ್ರಮೇಣ ಈ ತೋಟಗಳನ್ನು ಸಂರಕ್ಷಿತ ಅರಣ್ಯಗಳಂತೆ ಕಾಣಲಾರಂಭವಾಯ್ತು. ದೀರ್ಘಕಾಲದ ನಂತರ 1976ರಲ್ಲಿ ಕುಕಡಿ ಮತ್ತು ಪುಷ್ಪಾವತಿ ನದಿಗಳ ಸಂಗಮದ ಕೆಳಗೆ ಯಡಗಾಂವ್ ಅಣೆಕಟ್ಟು ಕಟ್ಟಿದಾಗ ಉಂಟಾದ ಸರೋವರದಲ್ಲಿ ಗಿಬ್ಸನ್ ಅವಿರತ ಪರಿಶ್ರಮದಿಂದ ಬೆಳೆಸಿದ ಹೀವ್ರಾ ತೋಟ ಮುಳುಗಿಹೋಯಿತು.

 1860ರಲ್ಲಿ ವೃತ್ತಿಜೀವನದಿಂದ ನಿವೃತ್ತನಾದ ಗಿಬ್ಸನ್ 1864ರಲ್ಲಿ ಸ್ವದೇಶಕ್ಕೆ ಮರಳಿದ. ಮಾಂಟರೋಸ್‌ನಲ್ಲಿ ಸಹೋದರನ ಎಸ್ಟೇಟಿಗೆ ಗಿಬ್ಸನ್ ವಾರಸುದಾರನಾಗಿ ವಿಶ್ರಾಂತ ಜೀವನ ನಡೆಸಲಾರಂಭಿಸಿದ. ಎಸ್ಟೇಟಿನ ಪಕ್ಕದ ಜಮೀನನ್ನು ಕೊಂಡು ಅಲ್ಲಿಯೂ ಸಹ ಮರಗಿಡಗಳನ್ನು ಬೆಳೆಸಿದ. ಅವನ ವಿಲ್‌ನಲ್ಲಿ ಸಹೋದರಿ ಮತ್ತು ಅಣ್ಣನ ಮಕ್ಕಳಿಗೆ ಆಸ್ತಿ ಬರೆದು ತಾನು ನೆಟ್ಟಿರುವ ಮರಗಳನ್ನು ಕಡಿದರೆ ಅವರಿಗೆ ಆಸ್ತಿಯ ವಾರಸುತನ ರದ್ದಾಗಿ ಮುಂದಿನ ಉತ್ತರಾಧಿಕಾರಿಗೆ ಆಸ್ತಿ ಸಲ್ಲುತ್ತದೆ ಎಂದು ಬರೆದಿದ್ದ! ಇದೇ ರೀತಿ ಅವನಲ್ಲಿದ್ದ ಅನೇಕ ವಸ್ತುಗಳನ್ನು ಸ್ನೇಹಿತರಿಗೆ, ಸಹೋದರಿಯ ಮಕ್ಕಳಿಗೆ ಕೊಟ್ಟ. ಆದರೂ ಅವನ ಹೃದಯ ತನ್ನ ಜೀವಿತದ ಬಹುಪಾಲು ಸಮಯ ಕಳೆದ ಇಂಡಿಯಾಕ್ಕಾಗಿ ಮಿಡಿಯುತ್ತಿತ್ತು. ಇಂಡಿಯಾದ ಬ್ಯಾಂಕ್‌ನಲ್ಲಿದ್ದ ಹಣವನ್ನು ಅವನು ಕೆಲಸ ಮಾಡಿದ ಜನ್ನರ್‌ನಿಂದ ಪುಣೆಯ ರಸ್ತೆಯಲ್ಲಿರುವ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲು ಉಪಯೋಗಿಸಬೇಕೆಂದು ತಿಳಿಸಿದ್ದ. ನಾಯಿಗಳನ್ನು ಪ್ರೀತಿಸುತ್ತಿದ್ದ ಗಿಬ್ಸನ್ ಅವನ ವಿಲ್‌ನಲ್ಲಿ ನಾಯಿಗಳ ಆಶ್ರಯಧಾಮಕ್ಕೂ ದೇಣಿಗೆ ಕೊಟ್ಟಿದ್ದನು!

ವ್ಯಾಕ್ಸಿನೇಟರ್ ಆಗಿ ವೃತ್ತಿಜೀವನ ಪ್ರಾರಂಭಿಸಿ ಗಿಬ್ಸನ್ ಎಲ್ಲ ಬಗೆಯ ಜನರ ಸಂಪರ್ಕಕ್ಕೆ ಬಂದ. ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ ಅವನು ಗುಜರಾತಿ, ಮರಾಠಿ, ಹಿಂದಿ ಅಷ್ಟೇ ಏಕೆ ಉತ್ತರ ಕನ್ನಡ, ಧಾರವಾಡಗಳ ಸಂಪರ್ಕಕ್ಕೆ ಬಂದು ಗಿಬ್ಸನ್ ಕನ್ನಡ ಭಾಷೆಯನ್ನೂ ಕಲಿತ. ಇವನ ಬಹುಭಾಷಾ ಪ್ರಾವೀಣ್ಯತೆ ಸ್ಥಳೀಯ ಜನರೊಡನೆ ಬೆರೆತು, ರೈತರೊಡನೆ ಅವರ ಭಾಷೆಯಲ್ಲಿ ಮಾತಾಡಿ ಅವರು ಹೊಸ ಬೆಳೆಯಾದ ಆಲೂಗಡ್ಡೆ, ಹಿಪ್ಪುನೇರಳೆ ಇತ್ಯಾದಿಗಳನ್ನು ಬೆಳೆಯುವಂತೆ ಮಾಡುವಲ್ಲಿ ಬಹಳ ಸಹಕಾರಿ ಆಯ್ತು. ಗಿಬ್ಸನ್ ಈ ಸರಳ ಸಹಜತೆಯನ್ನು ಅವನ ನಂತರ ಡಾಪುರಿ ತೋಟದ ಮೇಲ್ವಿಚಾರಕನಾದ ಡಾಲ್‌ಜೆಲ್ ತಿರಸ್ಕಾರದಿಂದ ನೋಡಿ ‘‘ಗಿಬ್ಸನ್ ಹುಟ್ಟು ಮತ್ತು ವಿದ್ಯಾಭ್ಯಾಸದಿಂದ ಮಾತ್ರ ಬ್ರಿಟಿಷ್ ಆಗಿದ್ದು ಅವನ ಉಳಿದ ಗುಣಗಳೆಲ್ಲಾ ಸ್ಥಳೀಯರಂತೆ ಇವೆ ಎಂದು ಟೀಕಿಸುತ್ತಿದ್ದ. ಸ್ಥಳೀಯರೊಡನೆ ಗಿಬ್ಸನ್‌ನ ಒಡನಾಟವಿಟ್ಟುಕೊಂಡಿದ್ದಕ್ಕೆ ಒಂದು ಉದಾಹರಣೆ ಕೊಡಬಹುದು. ಪರ್ದೋನ್‌ಜಿ ಮುರ್ಜುಬನ್‌ಜಿ ವೈದ್ಯ ಎನ್ನುವ ಸ್ಥಳೀಯ ವೈದ್ಯನೊಡನೆ ಗಿಬ್ಸನ್‌ಗೆ ಸ್ನೇಹವಿತ್ತು. ಈ ಪಾರ್ಸಿ ವೈದ್ಯ ಗಿಬ್ಸನ್‌ಗಾಗಿ ಆಫ್ರಿಕಾದ ಮೊಸಾಂಬಿಕ್‌ನಿಂದ ಜಟಿಯೊರೈಜಾ ಪಾಮೇಟ ಎನ್ನುವ ಔಷಧೀಯ ಸಸ್ಯದ ಬೇರನ್ನು ಬಹಳ ಕಷ್ಟದಿಂದ ತರಿಸಿಕೊಟ್ಟ. ಇದಕ್ಕಾಗಿ ಆ ವೈದ್ಯನಿಗೆ ಗಿಬ್ಸನ್‌ನ ಸಲಹೆಯಂತೆ ಅಗ್ರಿ-ಹಾರ್ಟಿಕಲ್ಚರಲ್ ಸೊಸೈಟಿಯಿಂದ ಬೆಳ್ಳಿ ಪದಕವೂ ಸಿಕ್ಕಿತು! ಜಟಿಯೊರೈಜಾ ಪಾಮೇಟ ಒಂದು ಏಕಲಿಂಗಿ ಬಳ್ಳಿ ಇದರ ಬೇರಿಗೆ ಆ್ಯಂಟಿಸೆಪ್ಟಿಕ್ ಗುಣವಿದ್ದುದರಿಂದಲೂ, ಟಾನಿಕ್‌ನಂತೆಯೂ ಉಪಯೋಗಿಸಬಹುದಾಗಿದ್ದ ಈ ಮ ವೌಲ್ಯಯುತ ಬಳ್ಳಿಯನ್ನು ಗಿಬ್ಸನ್ ಹೀವ್ರಾ ತೋಟದಲ್ಲಿ ಬೆಳೆಸಿದ. ಗಿಬ್ಸನ್ ಬರೆಸಿದ ಸಸ್ಯಚಿತ್ರಗಳಲ್ಲಿ ಜಟಿಯೊರೈಜಾ ಚಿತ್ರವೂ ಇದೆ. ಭಾರತೀಯರೊಡನೆ ಗಿಬ್ಸನ್ ಸೌಹಾರ್ದಯುತನಾಗಿದ್ದರೂ ಅವನ ಹಿನ್ನೆಲೆ, ಕಾಲಮಾನಗಳ ಪ್ರಭಾವದಿಂದಲೂ ಭಾರತೀಯರ ಗುಣಾವಗುಣಗಳನ್ನು ಅವನು ಟೀಕಿಸುತ್ತಿದ್ದ. ಅವನು ಭಾರತೀಯ ರೈತರು ಮೂಢನಂಬಿಕೆಗಳನ್ನು ಆಚರಿಸುವವರು ಇವರಿಗೆ ಬಾಳಸಂಗಾತಿಯೊಡನೆ ನಿಷ್ಠೆಯಿಂದಿರುವುದು ಗೊತ್ತಿಲ್ಲ’’ ಎಂದು ಹೇಳುತ್ತಿದ್ದ.

ಅರಣ್ಯಗಳು, ತೋಟಗಾರಿಕೆ ಇವೆಲ್ಲ ಅಲ್ಲದೆ ಸಣ್ಣಪುಟ್ಟ ಸಂಗತಿಗಳಲ್ಲಿ ಗಿಬ್ಸನ್‌ಗಿದ್ದ ಪರಿಣತಿ ಆಶ್ಚರ್ಯಕರ. ಆ ಕಾಲದಲ್ಲಿ ಇಂಡಿಯಾದಲ್ಲಿ ಉಪಯೋಗಿಸುತ್ತಿದ್ದ ವ್ಯವಸಾಯದ ಉಪಕರಣಗಳ ಚಿಕ್ಕಮಾದರಿಗಳನ್ನು ಮಾಡಿಸಿ ಸ್ಕಾಟ್ಲೆಂಡಿನ ನ್ಯಾಷನಲ್ ಮ್ಯೂಸಿಯಂಗೆ ಕಳಿಸಿದ್ದು ಅಲ್ಲಿ ಇವತ್ತಿಗೂ ಇವೆ. ಸರ್ ವಿಲಿಯಂ ಹುಕರ್ ಕ್ಯೂಗಾರ್ಡನ್ನಿನ ಆರ್ಥಿಕ ಸಸ್ಯೋತ್ಪನ್ನಗಳ ಮ್ಯೂಸಿಯಂಗಾಗಿ ವಸ್ತುಗಳನ್ನು ಕೇಳಿದಾಗ ನಮ್ಮ ಕೊಡಗಿನ ಒಂದು ಜಾತಿಯ ಮರದ ತೊಗಟೆಯಿಂದ ಮಾಡಿದ ಚೀಲ, ಮಲಬಾರಿನ ಹಾರುವ ಹಲ್ಲಿಯ ಮಾದರಿಗಳು ಮತ್ತು ಗೋಕಾಕದ ಒಂದು ವಿಧದ ಮರದಿಂದ ತಯಾರಿಸಿದ ವಿವಿಧ ಹಣ್ಣುಗಳ ಮಾದರಿಗಳನ್ನು ಗಿಬ್ಸನ್ ಕ್ಯೂಗಾರ್ಡನ್‌ಗೆ ಕಳಿಸಿದ್ದ. ಆಶ್ಚರ್ಯವೆಂದರೆ ಗೋಕಾಕದ ಈ ಮರದಿಂದ ತಯಾರಿ ಸುವ ವರ್ಣರಂಜಿತ ಫಲಗಳು ಇಂದಿಗೂ ಲಭ್ಯ!

ಈಸ್ಟ್ ಇಂಡಿಯಾ ಕಂಪೆನಿಯ ವೈದ್ಯರಾಗಿ ಬಂದವರ ಪರಂಪರೆ ಹೇಗಿತ್ತೆಂದರೆ ಇಂಗ್ಲೆಂಡಿನ ವಿದ್ಯಾಭ್ಯಾಸ ಪದ್ಧತಿಯಂತೆ ಅವರು ವೈದ್ಯಕೀಯದೊಡನೆ ಸಸ್ಯಶಾಸ್ತ್ರವನ್ನೇ ಕಡ್ಡಾಯವಾಗಿ ಅಭ್ಯಾಸ ಮಾಡಬೇಕಿತ್ತು.

ಸಸ್ಯಶಾಸ್ತ್ರದ ಗಂಭೀರ ವಿದ್ಯಾರ್ಥಿಗಳಾಗಿದ್ದ ಈ ವೈದ್ಯರು ತಮಗೆ ದೊರೆತ ತರಬೇತಿಗೆ ತಕ್ಕಂತೆ ತಾವು ಕಾಲಿಟ್ಟ ದೇಶದ ಸಸ್ಯ ಸಾಮ್ರಾಜ್ಯದ ಕೂಲಂಕಷ ಪರಿಶೀಲನೆ, ಸಂಗ್ರಹಣೆ ಮಾಡುವುದಲ್ಲದೆ ಅವುಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಕಲಾವಿದರಿಂದ ಸಸ್ಯಗಳ ವರ್ಣಚಿತ್ರಗಳು ಜೊತೆಗೆ ನಿರ್ದಿಷ್ಟ ಸಸ್ಯದ ಹೂವಿನ ವಿವಿಧ ಭಾಗಗಳ ಚಿತ್ರಣ ಮಾಡಿಸುತ್ತಿದ್ದರು. ಚಿತ್ರಗಳು, ಸಸ್ಯಗಳ ಒಣ ಮಾದರಿಗಳನ್ನು ವಿಚಾರ ವಿನಿಮಯಕ್ಕಾಗಿ ಲಂಡನ್ನಿನ ಕ್ಯೂಗಾರ್ಡನ್‌ಗೆ ಕಳಿಸುತ್ತಿದ್ದರು. ಹೀಗೆ ಕಳಿಸಿದ ಅನೇಕ ಸಸ್ಯಚಿತ್ರಗಳ ಅಮೂಲ್ಯ ದಾಖಲೆ ಕ್ಯೂಗಾರ್ಡನ್ ಹಾಗೂ ಎಡನ್‌ಬರಾದ ರಾಯಲ್ ಬೊಟಾನಿಕ್ ಗಾರ್ಡನ್‌ನಲ್ಲಿ ಇವೆ.

ಈ ಪರಂಪರೆಗೆ ಅನುಸಾರವಾಗಿ ಅಲೆಗ್ಸಾಂಡರ್ ಗಿಬ್ಸನ್ ಸಹ ಅವನು ಕೆಲಸ ಮಾಡಿದ ಪುಣೆಯ ಸುತ್ತಮುತ್ತಲಿನ ಅಂದರೆ ದಖ್ಖನ್ನಿನ ಸಸ್ಯಗಳ ಚಿತ್ರಗಳನ್ನು ಬರೆಸಿದ. ದುರದೃಷ್ಟದ ಸಂಗತಿಯೆಂದರೆ ಚಿತ್ರಗಳಿವೆ; ಚಿತ್ರಕಾರನ ಹೆಸರಿಲ್ಲ. ಅನಾಮಿಕ ಕಲಾವಿದರ ಈ ಸುಂದರ ಸಸ್ಯ ಕಲಾಕೃತಿಗಳನ್ನು ನೋಡಿದಾಗ ಇವು ನಮ್ಮವು ಎಂದು ಮನಸ್ಸು ಉಬ್ಬಿದರೂ ಅನಾಮಧೇಯ ಕಲಾವಿದರಿಗಾಗಿ ಹೃದಯ ಮರುಗುತ್ತದೆ.

ಗಿಬ್ಸನ್ ಬರೆಸಿದ ಸಸ್ಯಚಿತ್ರಗಳ ಕಲಾವಿದ ಯಾರೆಂದು ಗೊತ್ತಾಗದಿದ್ದರೂ ಇಂದಿಗೂ ಲಭ್ಯವಿರುವ ವರದಿಗಳಿಂದ 1847ರಿಂದ ಮಧ್ಯೆ ಕೆಲವು ತಿಂಗಳುಗಳ ಬಿಡುವನ್ನು ಬಿಟ್ಟು 1850 ಎಪ್ರಿಲ್‌ವರೆಗೆ ಒಟ್ಟು 26 ತಿಂಗಳುಗಳ ಕಾಲ ಕಲಾವಿದ ಸಸ್ಯಚಿತ್ರಗಳನ್ನು ಬರೆದದ್ದು ತಿಳಿದು ಬರುತ್ತದೆ. ವೈಜ್ಞಾನಿಕ ಆಧಾರಗಳಿಂದ ಕೂಡಿದ ಈ ಸುಂದರ ಚಿತ್ರಗಳ ಕರ್ತೃವಿಗೆ ಒಂದು ತಿಂಗಳಿಗೆ ಕೊಡುತ್ತಿದ್ದ ಸಂಬಳ 20 ರೂಪಾಯಿ ಮಾತ್ರ ಎಂದು ಕಡತಗಳಲ್ಲಿದೆ. ಇದೇ ಅವಧಿಯಲ್ಲಿ ಒಬ್ಬ ಯೂರೋಪಿಯನ್ ಮುಖ್ಯ ತೋಟಗಾರನ ಸಂಬಳ 50 ರೂ. ಹಣದ ಪ್ರಮಾಣ ಇಂದಿನ ದೃಷ್ಟಿಯಲ್ಲಿ ಅತ್ಯಂತ ಕ್ಷುಲ್ಲಕ ಮೊತ್ತವಾಗಿ ಕಂಡರೂ ಅಂದು ಆಳುವವರಿಗೂ ಅಧೀನರಿಗೂ ಇದ್ದ ತಾರತಮ್ಯವನ್ನು ಊಹಿಸಬಹುದು. ಚಿತ್ರಕಾರನಿಗೆ ಒದಗಿಸುತ್ತಿದ್ದ ಕಾಗದ, ಬಣ್ಣಗಳ ಸರಬರಾಜು ಸಹ ಲಂಡನ್‌ನಿಂದ! ಗಿಬ್ಸನ್ ಜೆ.ಎಸ್.ಲಾ ಎಂಬ ಸಮಕಾಲೀನ ಕಲೆಕ್ಟರ್‌ನಿಂದ ಚಿತ್ರಕಾರನನ್ನು ಕರೆಸಿಕೊಂಡಿದ್ದ. ಗಿಬ್ಸನ್ ನಂತರ ಹುದ್ದೆ ವಹಿಸಿಕೊಂಡ ಡಾಲ್‌ಜೆಲ್ ಕಲೆಕ್ಟರ್ ಜೆ.ಎಸ್.ಲಾ ಇವರು ಸಹ ಕ್ಯೂಗಾರ್ಡನ್‌ಗೆ ಸಸ್ಯಚಿತ್ರಗಳನ್ನು ಕಳಿಸುತ್ತಿದ್ದರು. ಇಂಥ ಒಂದು ಸಂದರ್ಭದಲ್ಲಿ ಲಾ ಬರೆಯುತ್ತಾನೆ. ‘‘ಡಾ. ರಾಬಟ್ ವೈಟ್‌ನ ಚಿತ್ರಕಾರ ಗೋವಿಂದೂ ಅಷ್ಟೇ ಚೆನ್ನಾಗಿ, ನಿಖರವಾಗಿ ಚಿತ್ರಿಸುವ ಒಬ್ಬ ಪೋರ್ಚುಗೀಸ್ ಕಲಾವಿದನನ್ನು ನಾನು ನೇಮಿಸಿಕೊಂಡಿದ್ದೇನೆ’’ ಎಂದು ಗಿಬ್ಸನ್ ಸಸ್ಯಚಿತ್ರ ಬರೆಸಲು ಎರವಲು ಪಡೆದ ಕಲಾವಿದ ಇವನೇ ಆಗಿರುತ್ತಾನೆ ಎಂಬುದು ಒಂದು ಬಲವಾದ ಊಹೆ.

ಡಾಪುರಿ ತೋಟದಲ್ಲಿ ರಚಿಸಿದ ಚಿತ್ರಗಳು ಒಟ್ಟು 173 ಇವೆ. ಈ ಚಿತ್ರಗಳೆಲ್ಲವೂ ಡಾಪುರಿ ಹಾಗೂ ಹೀವ್ರಾ ತೋಟಗಳಲ್ಲಿ ಗಿಬ್ಸನ್ ಬೆಳೆಸಿದ ಸಸ್ಯಗಳದ್ದು. ಈ ಸಸ್ಯಗಳು ಲೇಬಿಯೇಟಿ, ಆಕಾಂತೇಸಿ, ಆಸ್ಲಿಪಿಯೆಡೇಸಿ, ಲೆಗ್ಯುಮಿನೋಸಿ, ರೂಬಿಯೇಸಿ, ಪ್ಯಾಸಿಪ್ಲೋರೇಸಿ ಮುಂತಾದ ಸಸ್ಯಕುಟುಂಬಗಳಿಗೆ ಸೇರಿವೆ. ಇವು ಪಶ್ಚಿಮ ಇಂಡಿಯಾದ ಬೇರೆ ಬೇರೆ ಭಾಗಗಳ ಹಾಗೂ ಹೊರದೇಶಗಳಿಂದ ನಮ್ಮಲ್ಲಿಗೆ ಬಂದ ಸಸ್ಯಗಳ ಚಿತ್ರಗಳು. ಇಂಡಿಯಾದ ಬೇರೆ ಭಾಗಗಳ, ಉತ್ತರ ಅಮೆರಿಕ, ಚೀನಾ, ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲಿ ಆ ಕಾಲದ ಹೆಸರಾಂತ ಸಸ್ಯ ಸಂಗ್ರಹಕಾರರಾಗಿದ್ದ ಜೋನ್‌ಟ್ವೀಡಿ, ಥಾಮಸ್ ಡ್ರಮಂಡ್, ಡೇವಿಡ್ ಡೌಗ್ಲಸ್‌ರಿಂದ ಸಂಗ್ರಹಿಸಲ್ಪಟ್ಟ ಸಸ್ಯಗಳು ಡಾಪುರಿ, ಹೀವ್ರಾ ತೋಟಗಳಲ್ಲಿ ಚಿತ್ರಿತವಾದವು. ಗಿಬ್ಸನ್‌ನ ಗೌರವಾರ್ಥ ಅವನ ಹೆಸರು ಪಡೆದ ಸಸ್ಯಗಳು ಹೀಗಿವೆ- ಹೈಬಿಸ್ಕಸ್ ಗಿಬ್‌ಸೋನೈ, ಕ್ರೋಟನ್ ಗಿಬ್‌ಸೋನೈ, ಬಾರ್ಲೇರಿಯಾ ಗಿಬ್�

Writer - ಪದ್ಮಾ ಶ್ರೀರಾಮ್

contributor

Editor - ಪದ್ಮಾ ಶ್ರೀರಾಮ್

contributor

Similar News