ಚೆಂಡು ವಿರೂಪ: ಚಾಂಡಿಮಾಲ್ ವಿರುದ್ಧ ಆರೋಪ

Update: 2018-06-17 12:15 GMT

ಹೊಸದಿಲ್ಲಿ,ಜೂ.17: ಶ್ರೀಲಂಕಾ- ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪವನ್ನು ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಾಲ್ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೊರಿಸಿದೆ.

ಐಸಿಸಿ ನಿರ್ಧಾರದಿಂದ ಕುಪಿತರಾದ ಶ್ರೀಲಂಕಾ ಆಟಗಾರರು ಶನಿವಾರ ಸೆಂಟ್ ಲೂಸಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನ ಕ್ಷೇತ್ರರಕ್ಷಣೆ ಮಾಡಲು ನಿರಾಕರಿಸಿದರು. ಇದರಿಂದಾಗಿ ಎರಡು ಗಂಟೆ ಕಾಲ ಆಟ ವಿಳಂಬವಾಯಿತು. ಇದಕ್ಕೂ ಮುನ್ನ ಅಂಪೈರ್ ಗಳಾದ ಅಲೀಂ ದರ್ ಮತ್ತು ಇಯಾನ್ ಗೌಲ್ಡ್ ಚೆಂಡನ್ನು ಬದಲಿಸಿ, ವೆಸ್ಟ್ ಇಂಡೀಸ್‍ಗೆ ಐದು ಪೆನಾಲ್ಟಿ ರನ್‍ಗಳನ್ನು ನೀಡಿದರು.

ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಾಲ್ ವಿರುದ್ಧ ಐಸಿಸಿ ನೀತಿಸಂಹಿತೆಯ ಲೆವೆಲ್ 2.2.9 ಉಲ್ಲಂಘನೆ ಆರೋಪ ಹೊರಿಸಲಾಗಿದೆ ಎಂದು ಐಸಿಸಿ ಟ್ವೀಟ್ ಮಾಡಿದೆ.

ಈ ಉಲ್ಲಂಘನೆಯು ಚೆಂಡಿನ ಸ್ಥಿತಿಯನ್ನು ಬದಲಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಇದೇ ಆರೋಪವನ್ನು ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಕೆಮರೂನ್ ಬೆನ್‍ಕ್ರಾಫ್ಟ್ ವಿರುದ್ಧ ಹೊರಿಸಲಾಗಿತ್ತು. ಕಳೆದ ಮಾರ್ಚ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೆಮರೂನ್, ಚೆಂಡನ್ನು ಸ್ಯಾಂಡ್‍ಪೇಪರ್ ತುಂಡಿನಲ್ಲಿ ಉಜ್ಜುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಆದರೆ ಶ್ರೀಲಂಕಾ ತಂಡ ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದೆ. "ಪಂದ್ಯ ಮುಂದುವರಿಯುವ ದೃಷ್ಟಿಯಿಂದ ಮತ್ತು ಕ್ರೀಡಾಸ್ಫೂರ್ತಿಯಿಂದ ಕ್ಷೇತ್ರರಕ್ಷಣೆ ಮಾಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡಕ್ಕೆ ಸಲಹೆ ಮಾಡಿದೆ. ಆದರೆ ಪ್ರತಿಭಟನೆಯನ್ನು ಮುಂದುವರಿಸುವಂತೆ ಸೂಚಿಸಿದೆ. ತಂಡ ಯಾವುದೇ ತಪ್ಪು ಮಾಡಿಲ್ಲ ಎಂದು ಮಂಡಳಿ ಸಮರ್ಥಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News