ಮಹಾರಾಣಾ ಪ್ರತಾಪ ಜನ್ಮ ದಿನಾಚರಣೆ ಮೆರವಣಿಗೆ ಸಂದರ್ಭ ಘರ್ಷಣೆ; ಲಾಠಿ ಚಾರ್ಜ್

Update: 2018-06-17 16:35 GMT

 ವಡೋದರಾ, ಜೂ. 17: ರಜಪೂತ ದೊರೆ ಮಹಾರಾಣಾ ಪ್ರತಾಪ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ವಾಡಿ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಮೆರವಣಿಗೆಯ ಸಂದರ್ಭ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು ಹಾಗೂ ಲಾಠಿ ಪ್ರಹಾರ ನಡೆಸಿದರು. ಹಿಂಸಾಚಾರದಲ್ಲಿ ಕೆಲವು ಜನರು ಗಾಯಗೊಂಡಿದ್ದಾರೆ. ಆದರೆ, ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಸಮುದಾಯಗಳ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಧಾರ್ಮಿಕ ಕೇಂದ್ರಗಳು ಹಾಗೂ ನಿಲ್ಲಿಸಿದ್ದ ವಾಹನಗಳ ಕಿಟಕಿ ಗಾಜುಗಳನ್ನು ಪುಡಿಗೈದರು ಎಂದು ಅವರು ತಿಳಿಸಿದ್ದಾರೆ. ವಾಡಿ ಪ್ರದೇಶದ ದೂಧ್‌ವಾಲಾ ಮೊಹಲ್ಲಾದ ಮೂಲಕ ಸಾಗುತ್ತಿದ್ದ ಮೆರವಣಿಗೆ ಮೇಲೆ ಕಲ್ಲೆಸೆಯುತ್ತಿದ್ದ ಗುಂಪಿನ ಮೇಲೆ ಪೊಲೀಸರು 7 ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು ಹಾಗೂ ಲಾಠಿ ಚಾರ್ಜ್ ನಡೆಸಿದರು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಕೆ.ಜಿ. ಭಟ್ ತಿಳಿಸಿದ್ದಾರೆ. ರಜಪೂತ ಸಮುದಾಯದ ಸಂಘಟನೆ ಕರ್ಣಿ ಸೇನಾ ಈ ಮೆರವಣಿಗೆ ಆಯೋಜಿಸಿತ್ತು ಎಂದು ಅವರು ತಿಳಿಸಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡವರು ನಿರ್ದಿಷ್ಟ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎಂದು ವಾಡಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಿವಾಸಿಯೋರ್ವ ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News