ಗೌರಿಹತ್ಯೆಗೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ: ಮುತಾಲಿಕ್

Update: 2018-06-17 17:23 GMT

ಬೆಂಗಳೂರು,ಜೂ.17: ಗೌರಿ ಹತ್ಯೆ ಪ್ರಕರಣಕ್ಕೂ ಶ್ರೀರಾಮ ಸೇನೆಗೂ ಸಂಬಂಧವಿದೆ ಎಂದು ಮಾಧ್ಯಮಗಳು ಊಹಾಪೋಹ ವರದಿ ಮಾಡುತ್ತಿವೆ. ಆದರೆ, ಹತ್ಯೆಗೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ರವಿವಾರ ರಾಜಾಜಿನಗರದ ರಾಮಮಂದಿರ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗಗೊಳಿಸಲು ಜನಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಾಧ್ಯಮಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಗೌರಿ ಹತ್ಯೆಗೂ, ಶ್ರೀರಾಮಸೇನೆಗೂ ಸಂಬಂಧವಿದೆ ಎಂದು ವರದಿ ಮಾಡುತ್ತಿವೆ. ಆದರೆ ಗೌರಿ ಪ್ರಕರಣದ ತನಿಖೆ ಮಾಡುತ್ತಿರುವ ಎಸ್‌ಐಟಿ ಮುಖ್ಯಸ್ಥ ಅನುಚೇತ್ ಹಿಂದು ಸಂಘಟನೆಗಳ ಕೈವಾಡವಿದೆ ಎಂದು ಹೇಳಿಕೆ ನೀಡಿಲ್ಲ ಎಂದರು

ಗೌರಿ ಹತ್ಯೆ ಪ್ರಕರಣದಲ್ಲಿ ಪ್ರಮೋದ್ ಮುತಾಲಿಕ್ ಹೆಡ್ ಆಫೀಸ್ ಎಂದು ಹೇಳಿರುವ ಸಿ.ಎಂ.ಇಬ್ರಾಹಿಂ ಐಎಸ್‌ಐ ಏಜೆಂಟ್ ಎಂದು ನಾನು ಹೇಳುತ್ತೇನೆ. ಮೊದಲು ಅವರನ್ನೇ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದ ಅವರು, ಸಿ.ಎಂ.ಇಬ್ರಾಹಿಂ ಬಾಯಿಗೆ ಬಂದ ಹಾಗೆ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಸಿದರು.

ಪ್ರಕಾಶ್ ರೈ ಸೇರಿದಂತೆ, ಎಲ್ಲ ಪ್ರಗತಿಪರರೂ ಕಾಂಗ್ರೆಸ್ ಏಜೆಂಟ್‌ಗಳು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಗತಿಪರರ ವಿದೇಶ ಯಾತ್ರೆಗೆ ಹಣ ಹೊಡೆಯುತ್ತಿದ್ದರು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೆ ಕಡಿವಾಣ ಹಾಕಿದ್ದರು. ಹೀಗಾಗಿ ಅವರೆಲ್ಲ ಸೇರಿ ಮೋದಿ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಎಸ್‌ಐಟಿ ಅಧಿಕಾರಿಗಳು ಅಭಿ ಮತ್ತು ಗಿರಿ ಎಂಬುವವರನ್ನ ಬಂಧಿಸಿ, ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಮೇಲೆ ನನಗೆ ನಂಬಿಕೆಯಿದೆ. ಆದರೆ, ಕಾಂಗ್ರೆಸ್‌ನವರು ಪೊಲೀಸರನ್ನ ದಾರಿ ತಪ್ಪಿಸುತ್ತಿದ್ದಾರೆ. ನವೀನ್‌ನನ್ನು ಬಂಧಿಸಿದಾಗ ಅವನ ಬಳಿ ಗುಂಡುಗಳಿವೆ ಎಂದು ಪೊಲೀಸರು ಹೇಳಿದ್ದರು. ನವೀನ್‌ಗೆ ಗುಂಡು ನೀಡಿದವನ ವಿಚಾರಣೆ ಮಾಡಿದಾಗ ಮೂರು ಬಾರಿ ಗುಂಡು ನೀಡಿದ್ದಾಗಿ ಹೇಳಿಕೆ ನೀಡಿದ್ದ. ಹೀಗಿದ್ದರೂ ಸಹ ಪೊಲೀಸರು ಗುಂಡು ಕೊಟ್ಟವನನ್ನು ಬಂದಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News