ರುಚಿಯಲ್ಲಿ ಕಹಿಯಾದರೇನು...? ನೆನೆಸಿದ ಮೆಂತ್ಯದ ಬೀಜಗಳು ನೀಡುವ ಆರೋಗ್ಯಲಾಭಗಳು ಕಡಿಮೆಯೇನಲ್ಲ

Update: 2018-06-18 11:34 GMT

ಮೆಂತ್ಯ ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿರುವ ಸಂಬಾರ ಪದಾರ್ಥವಾಗಿದೆ. ಇತರ ಸಂಬಾರ ಪದಾರ್ಥಗಳಿಗೆ ಹೋಲಿಸಿದರೆ ಅಷ್ಟೇನೂ ರುಚಿಕರವಲ್ಲದ ಮೆಂತ್ಯವನ್ನು ಹೆಚ್ಚಿನವರು ತಮ್ಮ ಆಹಾರದಲ್ಲಿ ಬಯಸುವುದಿಲ್ಲ. ಆದರೆ ನೀರಿನಲ್ಲಿ ನೆನೆಸಿದ ಮೆಂತ್ಯ ಮಾನವನ ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದು ನಿಮಗೆ ಗೊತ್ತೇ....?

ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...ರಾತ್ರಿ 2-3 ಚಮಚ ಮೆಂತ್ಯವನ್ನು ಅರ್ಧ ಕಪ್ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅವುಗಳನ್ನು ಅಗಿದು ತಿನ್ನಿರಿ ಅಥವಾ ಮಾತ್ರೆಗಳಂತೆ ನೀರಿನೊಂದಿಗೆ ನುಂಗಿ. ಉಳಿದಿರುವ ನೀರನ್ನು ಚೆಲ್ಲದೆ ಕುಡಿಯಿರಿ. ಅದೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು,ಮೆಂತ್ಯದ ಬೀಜಗಳನ್ನು ಅಗಿಯಲು ಇಷ್ಟ ಪಡದವರು ಈ ನೀರನ್ನು ಸೇವಿಸಿದರೂ ಸಾಕು.

ರಾತ್ರಿ ಮೆಂತ್ಯವನ್ನು ನೀರಿನಲ್ಲಿ ನೆನೆಸಿಡಲು ಮರೆತರೆ ಅದಕ್ಕಾಗಿ ಚಿಂತೆ ಮಾಡಬೇಕಿಲ್ಲ. ಸ್ವಲ್ಪ ನೀರಿಗೆ 1-2 ಚಮಚ ಮೆಂತ್ಯದ ಬೀಜಗಳನ್ನು ಹಾಕಿ 10 ನಿಮಿಷಗಳ ಕಾಲ ಕುದಿಸಿದರೂ ಆಗುತ್ತದೆ. ಬೀಜಗಳನ್ನು ನೀರಿನಲ್ಲಿ ನೆನೆಸುವುದರಿಂದ ಅವು ಮೃದುವಾಗುತ್ತವೆ ಮತ್ತು ಸುಲಭವಾಗಿ ಪಚನಗೊಳ್ಳುತ್ತವೆ ಹಾಗೂ ಅವುಗಳಲ್ಲಿಯ ಎಲ್ಲ ಪೋಷಕಾಂಶಗಳು ಶರೀರಕ್ಕೆ ದೊರೆಯುತ್ತವೆ.

ಮೆಂತ್ಯದ ಆರೋಗ್ಯಲಾಭಗಳು ಹೀಗಿವೆ......

► ಪಚನ ಕ್ರಿಯೆ

ಜೀರ್ಣ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೆಂತ್ಯ ಹಸಿವೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಅದರಲ್ಲಿ ನಾರಿನಂಶ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಅದರ ಹೊಟ್ಟು ಮಲದಲ್ಲಿಯ ಹೆಚ್ಚುವರಿ ನೀರನ್ನು ಹೀರಿಕೊಳ್ಳುವ ಮೂಲಕ ಅತಿಸಾರಕ್ಕೂ ಉತ್ತಮ ಮದ್ದಾಗಿದೆ. ಅದರಲ್ಲಿಯ ನಾರು ಕರುಳಿನ ಒಳಭಿತ್ತಿಗಳಿಗೆ ರಕ್ಷಣಾ ಪದರದಂತೆ ಕಾರ್ಯ ನಿರ್ವಹಿಸಿ ಅಲ್ಸರ್,ಉರಿಯೂತ ಮತ್ತು ಎದೆಯುರಿಯಿಂದ ಉಪಶಮನ ನೀಡುತ್ತದೆ.

► ಮಧುಮೇಹ ಮತ್ತು ಕೊಲೆಸ್ಟ್ರಾಲ್

ಮೆಂತ್ಯದ ಬೀಜಗಳನ್ನು,ವಿಶೇಷವಾಗಿ ಸೌಮ್ಯ ಪ್ರಮಾಣದಲ್ಲಿ ಮಧುಮೇಹ ಇರುವವರಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ಬಳಸಬಹುದಾಗಿದೆ. ಅದು ಇನ್ಸುಲಿನ್ ಪ್ರತಿರೋಧವನ್ನು ತಡೆಯುತ್ತದೆ. ಎಷ್ಟು ಪ್ರಮಾಣದಲ್ಲಿ ಮೆಂತ್ಯದ ಬೀಜಗಳನ್ನು ಸೇವಿಸಬೇಕು ಎನ್ನುವುದನ್ನು ವೈದ್ಯರಿಂದ ತಿಳಿದುಕೊಳ್ಳುವುದು ಒಳ್ಳೆಯದು. ಅದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಮೂಲಕ ಲಿಪಿಡ್ ಪ್ರೊಫೈಲ್‌ನ್ನೂ ಉತ್ತಮಗೊಳಿಸುತ್ತದೆ. ಮೆಂತ್ಯದಲ್ಲಿರುವ ಕೋಲಿನ್ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ.

► ತೂಕ ಇಳಿಕೆ

ಮೆಂತ್ಯವು ಜೀರ್ಣಶಕ್ತಿಯನ್ನು ಹೆಚ್ಚಿಸುವ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಶರೀರದ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.

► ವಯಸ್ಸಾಗುವಿಕೆ

ಮೆಂತ್ಯದಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳು ಮತ್ತು ಅಂಗಾಂಶಗಳಿಗೆ ಹಾನಿಯನ್ನು ತಡೆದು ವಯಸ್ಸಾಗುವುದನ್ನು ವಿಳಂಬಿಸುತ್ತದೆ.

► ಸಂತಾನ ಶಕ್ತಿ

ಮೆಂತ್ಯವು ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಎದೆಹಾಲುಣಿಸುವ ಮಹಿಳೆಯರಲ್ಲಿ ಹಾಲಿನ ಪ್ರಮಾಣವನ್ನೂ ಅದು ಹೆಚ್ಚಿಸುತ್ತದೆ. ಮಹಿಳೆಯರು ನೀರಿನಲ್ಲಿ ನೆನೆಸಿದ ಮೆಂತ್ಯ ಬೀಜಗಳನ್ನು ಸಕ್ಕರೆ ಮತ್ತು ಹಾಲಿನೊಂದಿಗೆ ಸೇವಿಸಿದರೆ ಮುಟ್ಟಿಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ಅದು ಮುಟ್ಟಿನ ಸಮಯದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವಲ್ಲಿ ಮತ್ತು ಗರ್ಭಕೋಶವನ್ನು ಸಂಕುಚಿತಗೊಳಿಸುವಲ್ಲಿಯೂ ನೆರವಾಗುತ್ತದೆ.

► ಚರ್ಮ ಮತ್ತು ತಲೆಗೂದಲು

ಮೆಂತ್ಯದಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ನೀರಿನಲ್ಲಿ ನೆನೆಸಿದ ಬೀಜಗಳನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವು ಸ್ವಚ್ಛಗೊಳ್ಳುತ್ತದೆ ಮತ್ತು ಮೃದುವಾಗುತ್ತದೆ. ಊತ, ಸುಟ್ಟಗಾಯಗಳ ಕಲೆಗಳು, ಗುಳ್ಳೆಗಳು, ಚರ್ಮದ ಹುಣ್ಣು ಇತ್ಯಾದಿಗಳಿದ್ದರೆ ಮೆಂತ್ಯದ ಪೇಸ್ಟ್‌ನ್ನು ಮುಲಾಮಿನಂತೆ ಲೇಪಿಸಿ ಹತ್ತಿಯ ಬ್ಯಾಂಡೇಜ್ ಹಾಕಿಕೊಂಡರೆ ಪರಿಣಾಮಕಾರಿಯಾಗುತ್ತದೆ. ಮೆಂತ್ಯವು ಸ್ಯಾಲಿಸಿಲಿಕ್ ಆ್ಯಸಿಡ್‌ನ್ನು ಒಳಗೊಂಡಿರುವುದರಿಂದ ಮೊಡವೆಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಮೆಂತ್ಯದ ಪೇಸ್ಟ್‌ನ್ನು ಸೇವಿಸುವದರಿಂದ ತಲೆಗೂದಲ ಬೆಳವಣಿಗೆಗೆ ನೆರವಾಗುತ್ತದೆ. ಶಿಕಾಕಾಯಿ ಪುಡಿಯೊಂದಿಗೆ ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಬುರುಡೆಯ ಚರ್ಮ ಸ್ವಚ್ಛವಾಗುತ್ತದೆ. ಅದು ಹೊಟ್ಟನ್ನು ನಿವಾರಿಸುವಲ್ಲಿ ಮತ್ತು ತಲೆಗೂದಲು ಉದುರುವುದನ್ನು ತಡೆಯುವುದರಲ್ಲಿಯೂ ನೆರವಾಗುತ್ತದೆ.

► ಇತರ ಆರೋಗ್ಯಲಾಭಗಳು

ವಯಸ್ಸಾಗುವುದನ್ನು ವಿಳಂಬಿಸುವ ಗುಣಗಳನ್ನು ಹೊಂದಿರುವುದರಿಂದ ಮೆಂತ್ಯವು ಜ್ಞಾಪಕ ಶಕ್ತಿಯು ಕುಂದುವುದನ್ನೂ ತಡೆಯುತ್ತದೆ. ಜೇನು,ಪುದೀನಾ,ತುಳಸಿ ಮತ್ತು ಲಿಂಬೆರಸದೊಂದಿಗೆ ಮೆಂತ್ಯವನ್ನು ಸೇರಿಸಿ ತಯಾರಿಸಿದ ಚಹಾ ಸೇವಿಸುವುದರಿಂದ ಮಾನಸಿಕ ಒತ್ತಡ ಮತ್ತು ಉದ್ವೇಗಳಿಂದ ಮುಕ್ತಿ ನೀಡುತ್ತದೆ. ಈ ಚಹಾ ಗಂಟಲು ಕೆರೆತ ಮತ್ತು ಶೀತದ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಆದರೆ ಮೆಂತ್ಯದ ಬೀಜಗಳು ಕೆಲವು ಅಡ್ಡ ಪರಿಣಾಮಗಳನ್ನೂ ಹೊಂದಿವೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವು ನೀರನ್ನು ಹೀರಿಕೊಳ್ಳುವ ಗುಣವನ್ನು ಹೊಂದಿರುವುದರಿಂದ ಅವುಗಳನ್ನು ತಿಂದ ಬಳಿಕ ಆಗಾಗ್ಗೆ ನೀರನ್ನು ಸೇವಿಸುತ್ತಿರಬೇಕು. ಮೆಂತ್ಯವು ಕಬ್ಬಿಣವನ್ನೂ ಹೀರಿಕೊಳ್ಳುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಸೂಕ್ತವಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News