ಉತ್ತರ ಪ್ರದೇಶ ಮಾದರಿಯಲ್ಲೇ ರೈತರ ಸಾಲಮನ್ನಾ ಘೋಷಿಸಿ: ಬಿಎಸ್‌ವೈ ಒತ್ತಾಯ
ಬೆಂಗಳೂರು, ಜೂ.18: ಉತ್ತರ ಪ್ರದೇಶ ಮಾದರಿಯಲ್ಲೆ ಕೇಂದ್ರದ ಯಾವುದೇ ಸಹಕಾರ ಪಡೆಯದೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿ. ಅಲ್ಲಿವರೆಗೂ ಕಾಯುತ್ತೇವೆ. ಭರವಸೆ ಈಡೇರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕಾರ ಮಾಡಿ ಒಂದು ತಿಂಗಳು ಕಳೆದಿದೆ. ಅವರು ಹಲವು ಭರವಸೆಗಳನ್ನು ನೀಡಿ ಅಧಿಕಾರದ ಗದ್ದುಗೆ ಏರಿದ್ದಾರೆ. ಇದೀಗ ನಮ್ಮದು ಮೈತ್ರಿಕೂಟ ಸರಕಾರ, ಜನ ಬೆಂಬಲವಿಲ್ಲ, ಕಾಂಗ್ರೆಸ್ ಪಕ್ಷದವರನ್ನು ಕೇಳಬೇಕೆಂದು ಸಬೂಬು ಹೇಳುತ್ತಿದ್ದಾರೆಂದು ಟೀಕಿಸಿದರು.
ರೈತರ ಸಾಲಮನ್ನಾ ಸೇರಿದಂತೆ ರಾಜ್ಯದ ಜನತೆಗೆ ನೀಡಿದ ಆಶ್ವಾಸನೆ ಈಡೇರಿಸಲು ಮೀನಾಮೇಷ ಎಣಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ ಬಿಎಸ್‌ವೈ, ಸಿದ್ದರಾಮಯ್ಯ ಪೂರ್ಣ ಬಜೆಟ್ ಮಂಡನೆ ಬೇಡ, ಬದಲಿಗೆ ಪೂರಕ ಬಜೆಟ್ ಮಂಡಿಸಲಿ ಎಂದು ಹೇಳುತ್ತಿದ್ದಾರೆ. ಅತ್ತ ಡಿಸಿಎಂ ಡಾ.ಪರಮೇಶ್ವರ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮೈತ್ರಿಕೂಟ ಸರಕಾರದ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲವೂ ಗೊಂದಲದ ಗೂಡಾಗಿದೆ. ಕೊಟ್ಟ ಭರವಸೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆಂದು ಜನತೆ ನಿರೀಕ್ಷೆಯಲ್ಲಿದ್ದಾರೆ. ರೈತರ ಸಾಲಮನ್ನಾಕ್ಕೆ 15 ದಿನ ಕಾಲಾವಕಾಶ ಕೋರಿದ್ದರು. ಆ ಮಿತಿಯೂ ಮೀರಿದೆ. ಮುಂಗಾರು ಆರಂಭವಾಗಿದ್ದು ರೈತರಿಗೆ ಹೊಸ ಸಾಲವೂ ಸಿಗುತ್ತಿಲ್ಲ ಎಂದು ಹೇಳಿದರು.
ಕೇಂದ್ರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಉತ್ತರ ಪ್ರದೇಶ ಮಾದರಿಯಲ್ಲಿ ಕೇಂದ್ರ ಸರಕಾರದ ನೆರವಿಗೆ ಕಾಯದೆ ಕೂಡಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಎಲ್ಲ ಸಾಲಮನ್ನಾ ಮಾಡಬೇಕು ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದರು.