ಸಾಹಿತ್ಯ ಲೋಕದಲ್ಲಿ ಮುಖವಾಡಗಳ ಮೆರವಣಿಗೆ ನಡೆಯುತ್ತಿದೆ: ಎಸ್.ಜಿ.ಸಿದ್ದರಾಮಯ್ಯ

Update: 2018-06-18 16:37 GMT

ಬೆಂಗಳೂರು, ಜೂ.18: ಇಂದಿನ ಸಾಹಿತ್ಯ ಲೋಕದಲ್ಲಿ ಮುಖವಾಡದ ವ್ಯಕ್ತಿಗಳ ಮೆರವಣಿಗೆ ನಡೆಯುತ್ತಿದೆ. ಅವರ ನುಡಿ ಮತ್ತು ನಡೆಗೆ ಸಂಬಂಧವೇ ಇಲ್ಲ. ಆದರೆ, ಚಂಪಾ ಮುಖವಾಡ ಇಲ್ಲದ ಮನುಷ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಚಂಪಾ-79 ಸಂಕಿರಣ-ಕಾವ್ಯ- ಗಾಯನ-ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಂಪಾಗೆ ಕೋಪ-ಸಿಟ್ಟು ಎಲ್ಲವೂ ಇದ್ದು, ಕನ್ನಡ ಆಶಯಕ್ಕೆ ಧಕ್ಕೆಯಾದಾಗ ಜಗಳಕ್ಕೂ ಹಿಂಜರಿಯುವುದಿಲ್ಲ. ಚಂಪಾ ಯಾವುದೇ ಕಾರಣಕ್ಕೂ ವ್ಯಕ್ತಿಗತ ದ್ವೇಷ ಮಾಡಿದವರಲ್ಲ ಎಂದು ಸ್ಮರಿಸಿದರು.

ಪ್ರಸ್ತುತ ಸಂದರ್ಭದಲ್ಲಿ ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವಾತಾವರಣ ಹಾಳಾಗುತ್ತಿದ್ದು, ಸಮಾಜವನ್ನು ಎಚ್ಚರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಕನ್ನಡ, ಕರ್ನಾಟಕ, ಕನ್ನಡಿಗರಿಗೆ ಅನ್ಯಾಯವಾದಾಗ ಪ್ರೊ.ಚಂದ್ರಶೇಖರ ಪಾಟೀಲರು ಹೋರಾಟದ ಮುಂಚೂಣಿಯಲ್ಲಿರುತ್ತಾರೆ. ದಿಟ್ಟ ಹೋರಾಟಗಳ ಮೂಲಕ ನಾಡಿನ ಎಚ್ಚರದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ಎಂದರು.

ಅವರ ಹೋರಾಟ ದಾರಿಯನ್ನು ನೋಡಿದಾಗ ಅದು ಅರಿವಿಗೆ ಬರುತ್ತದೆ. ಕೆಲ ಸಂದರ್ಭದಲ್ಲಿ ಅವರು ಎಡವಿ ಬಳಿಕ ಆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಐದು ದಶಕಗಳಿಂದ ಸಂಕ್ರಮಣ ಪತ್ರಿಕೆ ಪ್ರಕಟಿಸುವ ಮುಖಾಂತರ ನಾಡಿನ ಯುವ ಸಮುದಾಯದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುತ್ತಿದ್ದಾರೆ ಎಂದು ಬಣ್ಣಿಸಿದರು.

ನನಗೆ ಜೀವ ಭಯವಿಲ್ಲ: ನನ್ನ ಬದುಕು ಹಲವು ಏರಿಳಿತ ಕಂಡಿದೆ. ಆರಂಭದಲ್ಲಿ ನನ್ನ ಮಡದಿ ಮಕ್ಕಳ ಮನಸಿಗೆ ನೋವಾಗಿತ್ತು. ತರುವಾಯ ನನ್ನ ತಾತ್ವಿಕ ನಿಲುವು ಅರ್ಥಮಾಡಿಕೊಂಡು ನನ್ನೆಲ್ಲ ಹೋರಾಟಗಳನ್ನು ಬೆಂಬಲಿಸಿದರು. ನನಗೇನು ಜೀವ ಭಯವಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ನುಡಿದರು.

ವಿವೇಕ ಮತ್ತು ಸಂಯಮದಿಂದ ಮಾತನಾಡಿದಾಗ ಯಾರಿಂದಲೂ ತೊಂದರೆಯಾಗುವುದಿಲ್ಲ. ಇಂದಿನ ವಾತಾವರಣ ತುರ್ತು ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ನಾನು ಹೇಳುವುದನ್ನು ನೇರವಾಗಿಯೇ ಹೇಳುತ್ತಾನೆ. ವಿಂಗಡನೆಯಾಗಿ ಹೋಗುವುದರ ಬದಲಿಗೆ ಎಲ್ಲರೂ ಒಟ್ಟಾಗಿ ಹೋಗಬೇಕು. ಯಾರು ಯಾರಿಗೂ ಸಂದೇಶ ಕೊಡಬೇಡಿ. ಯಾವ ಸಂದೇಶವನ್ನೂ ಪೂರ್ಣ ನಂಬಬೇಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್, ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಚಂಪಾ ಅವರ ಪತ್ನಿ ನೀಲಾ ಪಾಟೀಲ, ಬಾಲ್ಯದ ಗೆಳೆಯ ಎಸ್.ಎನ್.ಕಾತರಕಿ ಉಪಸ್ಥಿತರಿದ್ದರು.

ಚಂಪಾರನ್ನು ಭಾಷಣಕ್ಕೆ ಕರಿಬೇಡಿ....
ಮುಂದಿನ ದಿನಗಳಲ್ಲಿ ಚಂಪಾರನ್ನು ಎಲ್ಲಿಗೂ ಭಾಷಣ ಮಾಡಲಿಕ್ಕೆ ಕರಿಬೇಡಿ. ಅವರು ಭಾಷಣದಲ್ಲಿ ಬರೀ ಧರ್ಮ, ಕೋಮುವಾದದ ಬಗ್ಗೆ ಮಾತನಾಡ್ತಾರೆ. ನನಗೆ ನನ್ನ ಗಂಡನ ಜೀವ ಮುಖ್ಯ. ಗೌರಿ ಲಂಕೇಶ್ ಸ್ಥಿತಿ ಏನಾಯ್ತು? ಕೊಲೆ ಮಾಡಿದವರು ಸಿಕ್ಕಿದರು ಎನ್ನುವುದು ಸಮಾಧಾನ. ಅವರನ್ನು ಇನ್ನು ಮುಂದೆ ಮನೆಯಲ್ಲಿಕೊಂಡೇ ಕೆಲಸ ಮಾಡಲಿಕ್ಕೆ ಹೇಳಿದ್ದೇನೆ ಎಂದು ಚಂಪಾ ಅವರ ಪತ್ನಿ ನೀಲಾ ಖಾರವಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News