ದಾಖಲೆಗಳನ್ನು ಪಡೆದು ಹೈಕೋರ್ಟ್‌ಗೆ ಒದಗಿಸಲು ಸರಕಾರಿ ವಕೀಲರಿಗೆ ಸೂಚನೆ

Update: 2018-06-18 16:39 GMT

ಬೆಂಗಳೂರು, ಜೂ.18: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳಿಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಕೆಳ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿರುವ ದಾಖಲೆಗಳನ್ನು ಪರಿಶೀಲಿಸಲು ಹೈಕೋರ್ಟ್ ಬಯಸಿದೆ.

ತನಿಖೆ ಸಂದರ್ಭದಲ್ಲಿ ಪೊಲೀಸರು ತಮಗೆ ಚಿತ್ರಹಿಂಸೆ ನೀಡಿದ್ದು, ಆ ಕುರಿತು ವಿಶೇಷ ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಾದ ಸುಜಿತ್ ಕುಮಾರ್, ಮನೋಹರ್ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದೇಗ್ವೆಕರ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ ಈ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿದರು. ಅರ್ಜಿದಾರರಿಗೆ ಪೊಲೀಸರು ನೀಡಿದ್ದಾರೆ ಎನ್ನಲಾದ ಚಿತ್ರಹಿಂಸೆಯ ಕುರಿತು ವಿವರಗಳನ್ನು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಹಾಗೆಯೇ, ಈ ಕುರಿತು 1ನೆ ಹಾಗೂ 3ನೆ ಎಸಿಎಂಎಂ ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದರೂ ನ್ಯಾಯಾಲಯಗಳು ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಆದೇಶಿಸಲಿಲ್ಲ ಎಂದು ದೂರಿದರು.

ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಅರ್ಜಿದಾರರ ಪರ ವಕೀಲರು ಮಾಡಿರುವ ಆರೋಪಗಳ ಕುರಿತು ಹೈಕೋರ್ಟ್ ಪರಿಶೀಲನೆ ನಡೆಸಬೇಕಿದೆ. ತದನಂತರವಷ್ಟೇ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದಕೊಳ್ಳಲು ಸಾಧ್ಯ. ಹೀಗಾಗಿ, ಅರ್ಜಿದಾರರ ಪರ ವಕೀಲರು ಸಲ್ಲಿಸಿರುವ ಪ್ರತಿಯನ್ನು 1ನೆ ಹಾಗೂ 3ನೆ ಎಸಿಎಂಎಂ ನ್ಯಾಯಾಲಯಕ್ಕೆ ಕಳುಹಿಸಬೇಕು. ಅದಕ್ಕೆ ಪ್ರತಿಯಾಗಿ ವಕೀಲರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನ್ನಲ್ಲಿರುವ ದಾಖಲಾತಿಗಳು ಹಾಗೂ ವರದಿಯನ್ನು 1ನೆ ಮತ್ತು 3ನೆ ಎಸಿಎಂಎಂ ನ್ಯಾಯಾಲಯಗಳು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.

ಇದಕ್ಕೂ ಮುನ್ನ ವಕೀಲ ಎನ್.ಪಿ. ಅಮೃತೇಶ್ ವಾದ ಮಂಡಿಸಿ, ಪೊಲೀಸರು ತನಿಖೆ ವೇಳೆ ಅರ್ಜಿದಾರರಿಗೆ ದೇಹದ ಹಲವು ಭಾಗಗಳಿಗೆ ಬಲವಾಗಿ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಮುಖವೆಲ್ಲಾ ಊದಿಕೊಂಡಿದೆ. ತನಿಖೆಯ ಹೆಸರಿನಲ್ಲಿ ಆರೋಪಿಗಳಿಗೆ ಚಿತ್ರಹಿಂಸೆ ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆ. ಈ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ಹೊರಡಿಸಿದೆ. ಇತ್ತೀಚೆಗೆ ಪ್ರಕರಣದ ವಿಚಾರಣೆಯು 1ನೆ ಎಸಿಎಂಎಂ ನ್ಯಾಯಾಲಯದಲ್ಲಿ ನಡೆದಿತ್ತು. ಆ ವೇಳೆ ಅರ್ಜಿದಾರರಿಗೆ ಪೊಲೀಸರು ನೀಡಿರುವ ಕಿರುಕುಳದ ಕುರಿತು ನ್ಯಾಯಾಧೀಶರ ಗಮನಕ್ಕೆ ತಂದರೂ ಅರ್ಜಿದಾರರನ್ನು ವೈದ್ಯಕೀಯ ತಪಾಸಣೆಗೆ ಆದೇಶಿಸಲಿಲ್ಲ ಎಂದು ದೂರಿದರು.

ಇದನ್ನು ಆಕ್ಷೇಪಿಸಿದ ಸರಕಾರಿ ಅಭಿಯೋಜಕ ರಾಚಯ್ಯ, ಅರ್ಜಿದಾರರಿಗೆ ಪೊಲೀಸರು ಯಾವುದೇ ರೀತಿ ಚಿತ್ರಹಿಂಸೆ ಅಥವಾ ಕಿರುಕುಳ ನೀಡಿಲ್ಲ. ಅರ್ಜಿದಾರರ ಪರ ವಕೀಲರು ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಈವರೆಗೂ ನಾಲ್ಕು ಬಾರಿ ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಒಂದು ಬಾರಿಯೂ ಆರೋಪಿಗಳು ತಮಗಾಗಿರುವ ಚಿತ್ರಹಿಂಸೆಯ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿಲ್ಲ. ಚಿತ್ರಹಿಂಸೆ ನೀಡಿದ್ದೇ ಆದಲ್ಲಿ ಆರೋಪಿಗಳು ನ್ಯಾಯಾಧೀಶರಿಗೆ ತಿಳಿಸಬಹುದಾಗಿತ್ತು ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಈ ಮೇಲಿನಂತೆ ಸೂಚಿಸಿದರು. ಹಾಗೆಯೇ, ಅಧೀನ ನ್ಯಾಯಾಲಯಗಳಿಂದ ವರದಿ ಬಂದ ಮೇಲೆ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸುವಂತೆ ಕೋರ್ಟ್ ಅಧಿಕಾರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News