ಮಾಲಿನ್ಯಕಾರಿ ಎಂದಾದರೆ ಯೋಜನೆಯನ್ನೇ ಮರುಪರಿಶೀಲಿಸಬೇಕಾದೀತು: ಹೈಕೋರ್ಟ್

Update: 2018-06-18 16:43 GMT

ಬೆಂಗಳೂರು, ಜೂ.18: ಕೋರಮಂಗಲ-ಚಲ್ಲಘಟ್ಟ, ಹೆಬ್ಬಾಳ-ನಾಗವಾರ ವ್ಯಾಲಿ ಯೋಜನೆ ಪರಿಸರ ಹಾಗೂ ಸಾರ್ವಜನಿಕರಿಗೆ ಮಾಲಿನ್ಯಕಾರಿ ಎಂದಾದರೆ ಯೋಜನೆಯನ್ನೇ ಮರುಪರಿಶೀಲಿಸಬೇಕಾದೀತು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಕೋಲಾರದ ಆರ್. ಆಂಜನೇಯ ರೆಡ್ಡಿ ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಪ್ರತಿವಾದಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ವಿಚಾರಣೆ ವೇಳೆ ನ್ಯಾಯಪೀಠ, ಮಾಲಿನ್ಯ ತಜ್ಞರನ್ನು ಯೋಜನೆಯಲ್ಲಿ ಬಳಸಿಕೊಳ್ಳಲಾಗಿದೆಯೇ, ನೀರು ಹರಿಸಿದ ನಂತರ ಅಧ್ಯಯನ ನಡೆಸಿದ್ದೀರಾ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಸರಕಾರಿ ವಕೀಲರು, ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಹರಿಸಲಾಗುತ್ತಿದೆ. ಬಿಡಬ್ಲುಎಸ್‌ಎಸ್‌ಬಿ (ಬೆಂಗಳೂರು ಜಲಮಂಡಳಿ) ತಜ್ಞರೂ ಯೋಜನೆಯಲ್ಲಿದ್ದಾರೆ ಎಂದರು. ಸರಕಾರಿ ವಕೀಲರ ಉತ್ತರಕ್ಕೆ ತೃಪ್ತಿಯಾಗದ ನ್ಯಾಯಪೀಠ. ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿ ವಿಚಾರಣೆಯನ್ನು ಜುಲೈ 4ಕ್ಕೆ ನಿಗದಿಪಡಿಸಿದೆ.

ಅರ್ಜಿದಾರರ ಆಕ್ಷೇಪಣೆ ಏನು?: ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕಾರ್ಖಾನೆ ಗಳ ನೀರು ಹರಿಸಿಲ್ಲ ಎಂಬ ಆರೋಪಕ್ಕೆ ತಕ್ಕ ಉತ್ತರ ನೀಡಬೇಕು. ಯೋಜನೆ ಮರುಪರಿಶೀಲನೆ ನಡೆಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News