ರಾಜ್ಯದ ಸಾರಿಗೆ ವ್ಯವಸ್ಥೆ ದೇಶಕ್ಕೆ ಮಾದರಿ: ಸಚಿವ ತಮ್ಮಣ್ಣ

Update: 2018-06-18 16:47 GMT

ಬೆಂಗಳೂರು, ಜೂ.18: ನಮ್ಮ ರಾಜ್ಯದ ಸಾರಿಗೆ ವ್ಯವಸ್ಥೆ ತನ್ನ ಕಾರ್ಯಕ್ಷಮತೆ ಹಾಗೂ ಸೇವಾ ದಕ್ಷತೆಯಿಂದ ರಾಷ್ಟ್ರದಲ್ಲಿಯೇ ಮಾದರಿಯಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿಂದು ಆಯೋಜಿಸಿದ್ದ ಹೊಸದಾಗಿ ನೇಮಕಗೊಂಡಿರುವ ದರ್ಜೆ-2 ಅಧಿಕಾರಿ ವರ್ಗದವರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವಿಂದು ಯಾವ ಪ್ರಶಂಸನೀಯ ಮಟ್ಟ ತಲುಪಿದ್ದೇವೆಯೋ, ಅದನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಹಾಗೂ ಮತ್ತಷ್ಟು ಮೇಲುಗೈ ಸಾಧಿಸುವ ಸಂಕಲ್ಪವನ್ನು ಸಮರ್ಥವಾಗಿ ಕಾಪಾಡಿಕೊಳ್ಳುವುದು ನಮ್ಮ ಎದುರುಗಿರುವ ಅತಿದೊಡ್ಡ ಸವಾಲಾಗಿದೆ ಎಂದರು.

ಖಾಸಗಿ ಒಡೆತನದ ವಾಹನಗಳ ಜೊತೆ ನಮ್ಮ ಇಲಾಖೆಯ ವಾಹನಗಳ ಗುಣಮಟ್ಟ, ಕಾರ್ಯ ದಕ್ಷತೆ, ಕ್ಷಿಪ್ರ ಸೇವೆ, ಸಮಯದ ಬದ್ಧತೆಯನ್ನು ಕಾಪಾಡಿಕೊಳ್ಳಬೇಕಾದ ಎಚ್ಚರಿಕೆಯಿರಬೇಕು. ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಮತ್ತು ನೌಕರರಲ್ಲಿ ಸಾರಿಗೆ ಇಲಾಖೆಯ ಸೇವೆಯನ್ನು ಸಮಾಜಮುಖಿಯನ್ನಾಗಿ ಮಾಡುವ ಆಶಯವಿರಬೇಕು ಎಂದು ಅವರು ಸಲಹೆ ನೀಡಿದರು.

ಸಾರ್ವಜನಿಕರಿಂದ ಸೇವೆ ಕುರಿತು ಬರುವ ದೂರುಗಳನ್ನು ಸಹಾನುಭೂತಿಯಿಂದ ಪರಿಗಣಿಸಿ ಆದ್ಯತೆಯ ಮೇರೆಗೆ ಕಾಲಮಿತಿಯೊಳಗೆ ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರೂ ಶೇ.100 ರಷ್ಟು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ನಿರ್ದೇಶಕ (ಸಿಬ್ಬಂದಿ ಮತ್ತು ಪರಿಸರ) ಕೆ.ಶ್ರೀನಿವಾಸ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News