ಬಿನ್ನಿಪೇಟೆ ವಾರ್ಡ್ ಬಿಬಿಎಂಪಿ ಉಪ ಚುನಾವಣೆ: ಕಾರ್ಯಕರ್ತರ ನಡುವೆ ಘರ್ಷಣೆ, ದೂರು ದಾಖಲು

Update: 2018-06-18 16:57 GMT

ಬೆಂಗಳೂರು, ಜೂ.18: ಬಿನ್ನಿಪೇಟೆ ವಾರ್ಡ್ ಬಿಬಿಎಂಪಿ ಉಪಚುನಾವಣೆ ಮತದಾನ ಪ್ರಕ್ರಿಯೆ ವೇಳೆ ಮೂರು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ತಂದೆ ಬಿಟಿಎಸ್ ನಾಗರಾಜ್ ವಿರುದ್ಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಮವಾರ ನಡೆದ ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧ ವೈರಿಗಳಂತೆ ಕಾರ್ಯಕರ್ತರು ಕಿತ್ತಾಟ ನಡೆಸಿದ್ದಾರೆ. ಮತದಾನದ ಮುನ್ನಾ ದಿನವರೆಗೆ ಯಾವುದೇ ಗದ್ದಲವಿಲ್ಲದೆ ನಡೆದಿದ್ದ ಚುನಾವಣಾ ಪ್ರಕ್ರಿಯೆ, ಭಾನುವಾರ ರಾತ್ರಿ ಹಾಗೂ ಮತದಾನದ ದಿನ ಸೋಮವಾರ ಮೂರು ಪಕ್ಷದ ಕಾರ್ಯಕರ್ತರ ನಡುವೆ ಕಿತ್ತಾಟ ನಡೆದಿದೆ.

ಕಾರ್ಯಕರ್ತರ ಕಿತ್ತಾಟದಿಂದ ಘಟನೆ ನಡೆದ ತರುವಾಯ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವಾರ್ಡ್ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವಂತಾಗಿತ್ತು. ಹೀಗಾಗಿ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದನ್ನು ಲೆಕ್ಕಿಸದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಕಾರ್ಯಕರ್ತರ ಮಾರಾಮಾರಿ: ಭಾನುವಾರ ರಾತ್ರಿ ಕೆ.ಪಿ.ಅಗ್ರಹಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಮತದಾರರ ಸೆಳೆಯುವ ಪ್ರಯತ್ನದಲ್ಲಿದ್ದ ಎರಡೂ ಪಕ್ಷದ ಕಾರ್ಯಕರ್ತರು ಎದುರುಗೊಂಡಾಗ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಜೆಡಿಎಸ್‌ನ ಬಿಟಿಎಸ್ ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ಸೇರಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಿಂದಾಗಿಂದ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಹಣೆ ಭಾಗಕ್ಕೆ ಗಾಯವಾಗಿದ್ದು, ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಬಿಟಿಎಸ್ ನಾಗರಾಜ್ ಮತ್ತು ಬೆಂಬಲಿಗರ ವಿರುದ್ಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮತದಾನ ಪ್ರಕ್ರಿಯೆ ಜರುಗುತ್ತಿದ್ದ ವೇಳೆ, ಬಿನ್ನಿಪೇಟೆಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತ ಸುಧಾಕರ್ ಮೇಲೂ ಬಿಟಿಎಸ್ ನಾಗರಾಜ್ ಹಾಗೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಕಾರ್ಯಕರ್ತರಿಂದ ಪ್ರತಿಭಟನೆ: ಬಿಟಿಎಸ್ ನಾಗರಾಜ್ ವಿರುದ್ಧ ದೂರು ದಾಖಲಿಸಿದರು ಅವರನ್ನು ಬಂಧಿಸದೆ ಸುಮ್ಮನಿದ್ದ ಪೊಲೀಸರ ಕ್ರಮದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕೆ.ಪಿ.ಅಗ್ರಹಾರದಲ್ಲಿ ಪ್ರತಿಭಟನೆ ನಡೆಸಿ, ಬಿಟಿಎಸ್ ನಾಗರಾಜ್‌ರನ್ನು ಬಂಧಿಸುವಂತೆ ಆಗ್ರಹಿಸಿದರು. ಕೊನೆಗೆ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಾಸ್ ಪಡೆಯಲಾಯಿತು.

ದಿನೇಶ್ ಗುಂಡೂರಾವ್ ಭೇಟಿ: ಭಾನುವಾರ ರಾತ್ರಿ ಗಲಾಟೆ ನಡೆದು ಹಲ್ಲೆಗೊಳಗಾದ ಸುರೇಶ್ ಮನೆಗೆ ದಿನೇಶ್ ಗುಂಡೂರಾವ್ ಸೋಮವಾರ ಭೇಟಿ ನೀಡಿದರು. ಕಾಂಗ್ರೆಸ್ ಮುಖಂಡರಾಗಿದ್ದ ಬಿಟಿಎಸ್ ನಾಗರಾಜ್ ನಮಗೆ ಮೋಸ ಮಾಡಿ ಜೆಡಿಎಸ್ ಸೇರ್ಪಡೆಗೊಂಡರು. ಇದೀಗ ಗೂಂಡಾವರ್ತನೆ ಮೂಲಕ ತಮ್ಮ ಮಗಳನ್ನು ಗೆಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರು ಹೇಳಿದರು ಎನ್ನಲಾಗಿದೆ.

ಮತದಾನ ಮಾಡಲು ಹಿಂದೇಟು
‘ಉಪಚುನಾವಣೆ ಭದ್ರತೆಗಾಗಿ 200ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದ್ದರೂ, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಘರ್ಷಣೆ ನಿಯಂತ್ರಿಸುವಲ್ಲಿ ವಿಫಲವಾದರು. ಹೀಗಾಗಿ, ಮತದಾರರು ಮತ ಚಲಾಯಿಸಲು ಹಿಂದೇಟು ಹಾಕಿದ್ದರು’

ಶೇ. 43 ಮತದಾನ
ವಾರ್ಡ್‌ನಲ್ಲಿ ಒಟ್ಟು 34,582 ಮತದಾರರಿದ್ದು, ಶೇ. 43ರಷ್ಟು ಮತಗಳು ಚಲಾವಣೆಯಾಗಿವೆ. ಇನ್ನು, ಮತದಾನ ಆರಂಭವಾದಾಗಿನಿಂದ ಮಧ್ಯಾಹ್ನ 3 ಗಂಟೆವರೆಗೆ ಶೇ.26 ಮತದಾನವಾಗಿತ್ತು. ಅಂತಿಮವಾಗಿ ಸಂಜೆ 5 ಗಂಟೆ ವೇಳೆಗೆ ಶೇ.43ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿ ಮಾಹಿತಿ ನೀಡಿದರು. ಬುಧವಾರ ಬೆಳಗ್ಗೆ 8ರಿಂದ ಹೋಂ ಸೈನ್ಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News