ನೀವು ಕೊಡುವ ಗೌರವಧನ ಗೌರವಯುತವಾಗಿಲ್ಲದಿದ್ದರೆ ಹೇಗೆ?

Update: 2018-06-18 17:05 GMT

ಬೆಂಗಳೂರು, ಜೂ.18: ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರು ಮಾಡುವ ನೌಕರರಿಗೆ ಕನಿಷ್ಠ ಗೌರವ ಧನ ನೀಡಲು ಮೀನಾಮೇಷ ಎಣಿಸುತ್ತಿರುವ ಸರಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಕನಿಷ್ಠ ಗೌರವಧನ ಕೋರಿ ನೌಹೀರಾ ಶೇಖ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ ಸರಕಾರ ಬಿಸಿಯೂಟ ತಯಾರು ಮಾಡುವ ನೌಕರರಿಗೆ ಕೇವಲ ಎರಡು ಸಾವಿರ ರೂ. ನೀಡುತ್ತಿದೆ. ಕನಿಷ್ಠ ಪ್ರಮಾಣದ ಗೌರವ ಧನ ನೀಡಲು ನಿರಾಕರಿಸುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬಿಸಿಯೂಟ ನೌಕರರು ಇಡೀ ದಿನ ಮೀಸಲಿರಿಸಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡುತ್ತಾರೆ. ಅವರ ಊಟಕ್ಕೇ ನೀವು ಹಣ ಕೊಡದಿದ್ದರೆ ಹೇಗೆ? ಎಂದು ಸರಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿತು. ಮುಂದುವರೆದು ನೀವು ದನಿಯಿಲ್ಲದ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ. ನೀವು ಕೊಡುವ ಗೌರವಧನ ಗೌರವಯುತವಾಗಿಲ್ಲದಿದ್ದರೆ ಹೇಗೆ? ಬಿಸಿಯೂಟ ತಯಾರು ಮಾಡುವುದೆಂದರೆ ಕೇವಲ ಕುಕ್ಕರ್ ಕೂಗಿಸಿದಂತೆಯೇ?’ ಎಂದು ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅಂತಿಮವಾಗಿ ನ್ಯಾಯಯುತ ಗೌರವಧನ ನೀಡುವ ಕುರಿತು ಸರಕಾರದ ನಿಲುವು ಏನೆಂಬುದನ್ನು 6 ವಾರಗಳಲ್ಲಿ ತಿಳಿಸುವಂತೆ ಸರಕಾರದ ಪರ ವಕೀಲರಿಗೆ ಸೂಚಿಸಿದ ಪೀಠ, ವಿಚಾರಣೆ ಮುಂದೂಡಿತು.

ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ಬಿಸಿಯೂಟ ತಯಾರಕರಿದ್ದು, ಅವರಲ್ಲಿ ಅಡುಗೆ ತಯಾರಿಸುವ 48,565 ನೌಕರರಿಗೆ 2,200 ರೂ. ಹಾಗೂ 69,634 ಅಡುಗೆ ಸಹಾಯಕರಿಗೆ 2,100 ರೂ. ಗೌರವ ಧನ ನೀಡಲಾಗುತ್ತಿದೆ. ನೌಕರರು ದಿನದಲ್ಲಿ 4ರಿಂದ 5 ಗಂಟೆ ಅಡುಗೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಕನಿಷ್ಠ 5,200 ರೂ. ಗೌರವಧನವನ್ನಾದರೂ ನಿಗದಿಪಡಿಸುವಂತೆ ಬೇಡಿಕೆ ಇಟ್ಟು, ಕಳೆದ ಫೆಬ್ರವರಿಯ ಮೊದಲ ವಾರದಲ್ಲಿ ಫ್ರೀಡಂಪಾರ್ಕ್‌ನಲ್ಲಿ 4 ದಿನಗಳ ಕಾಲ ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News