ಕಿಮ್ ಮಾಡಿದ ತಪ್ಪು ದ.ಕೊರಿಯಾಕ್ಕೆ ಪೆಟ್ಟು

Update: 2018-06-18 18:53 GMT

ನಿಝ್ನಿ ನೊವ್ಗೊರ್ಡ್, ಜೂ. 18: ಫಿಫಾ ವಿಶ್ವಕಪ್‌ನ ‘ಎಫ್’ ಗುಂಪಿನ ಪಂದ್ಯದಲ್ಲಿ ಸೋಮವಾರ ದಕ್ಷಿಣ ಕೊರಿಯಾ ವಿರುದ್ಧ ಸ್ವೀಡನ್ 1-0 ಅಂತರದಲ್ಲಿ ಜಯ ಗಳಿಸಿದೆ.

ಸ್ವೀಡನ್‌ನ ಆ್ಯಂಡ್ರಿಯಾಸ್ ಗ್ರಾನ್‌ಕ್ವಿಸ್ಟ್ 65ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಗೋಲು ಜಮೆ ಮಾಡಿ ಸ್ವೀಡನ್‌ಗೆ ಜಯ ದೊರಕಿಸಿಕೊಟ್ಟರು.

ಇದರೊಂದಿಗೆ ಸ್ವೀಡನ್1958ರ ಬಳಿಕ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳಿಂದಲೂ ಗೋಲು ಬರಲಿಲ್ಲ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಸಾಗಿದ್ದಾಗ 65ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಆಟಗಾರ ಕಿಮ್ ಮಿನ್ ವೋ ಮಾಡಿದ ತಪ್ಪಿನಿಂದಾಗಿ ಸ್ವೀಡನ್‌ಗೆ ಗೋಲು ದೊರೆಯಿತು. ಕಿಮ್ ಮಿನ್ ವೋ ಅವರು ಸ್ವೀಡನ್ ಆಟಗಾರ ವಿಕ್ಟರ್ ಕ್ಲಾಸನ್‌ರನ್ನು ಬೀಳಿಸಿದ್ದರಿಂದಾಗಿ ಸ್ವೀಡನ್‌ಗೆ ಪೆನಾಲ್ಟಿ ಕಿಕ್ ಅವಕಾಶ ದಕ್ಕಿತು.

ವೀಡಿಯೊ ಅಸಿಸ್ಟೆಂಟ್ ರೆಫರಿ ಸಿಸ್ಟಮ್ ಮೂಲಕ ಸ್ವೀಡನ್‌ಗೆ ಪೆನಾಲ್ಟಿ ಅವಕಾಶ ದೃಢಪಟ್ಟಿತು. ಸ್ವೀಡನ್ ತಂಡದ ನಾಯಕ 33ರ ಹರೆಯದ ಆ್ಯಂಡ್ರೆಸ್ ಗ್ರಾನ್‌ಕ್ವಿಸ್ಟ್ ಅವರು ಸ್ಪಾಟ್ ಕಿಕ್ ಮೂಲಕ ಚೆಂಡನ್ನು ಗುರಿಯತ್ತ ಕಳುಹಿಸಿದರು. ಆದರೆ ದಕ್ಷಿಣ ಕೊರಿಯಾದ ಗೋಲು ಕೀಪರ್ ಚೋ ಹ್ಯೂನ್ ವೋ ಅವರಿಗೆ ಗ್ರಾನ್‌ಕ್ವಿಸ್ಟ್‌ಗೆ ಗೋಲು ನಿರಾಕರಿಸಲು ಸಾಧ್ಯವಾಗಲಿಲ್ಲ.

 1-0 ಮುನ್ನಡೆಯನ್ನು ಕೊನೆಯ ತನಕ ಕಾಪಾಡಿಕೊಂಡ ಬಂದ ಸ್ವೀಡನ್‌ಗೆ ಅರ್ಹವಾಗಿ ಜಯದ ಮಾಲೆ ಸಿಕ್ಕಿತು. ದಕ್ಷಿಣ ಕೊರಿಯಾ ಮೊದಲ ಪಂದ್ಯದಲ್ಲೇ ಕೈ ಸುಟ್ಟುಕೊಂಡಿದೆ.

ಸುಮಾರು 42,300 ಪ್ರೇಕ್ಷಕರು ಸ್ವೀಡನ್ ಮತ್ತು ಕೊರಿಯಾ ಹಣಾಹಣಿಯನ್ನು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News